Revised Common Lectionary (Complementary)
96 ಯೆಹೋವನ ನೂತನ ಕಾರ್ಯಗಳ ಕುರಿತಾಗಿ ಹೊಸ ಹಾಡನ್ನು ಹಾಡಿರಿ!
ಭೂಲೋಕವೆಲ್ಲಾ ಯೆಹೋವನನ್ನು ಹಾಡಿಕೊಂಡಾಡಲಿ.
2 ಯೆಹೋವನಿಗೆ ಹಾಡಿರಿ! ಆತನ ಹೆಸರನ್ನು ಸ್ತುತಿಸಿರಿ!
ಶುಭವಾರ್ತೆಯನ್ನು ಹೇಳಿರಿ! ಆತನ ರಕ್ಷಣೆಯನ್ನು ಪ್ರತಿದಿನವೂ ಸಾರಿ ಹೇಳಿರಿ!
3 ಆತನ ಮಹಿಮೆಯನ್ನು ಜನಾಂಗಗಳಿಗೆ ಪ್ರಕಟಿಸಿರಿ.
ಆತನ ಅಮೋಘ ಕಾರ್ಯಗಳ ಕುರಿತು ಸಾರಿ ಹೇಳಿರಿ.
4 ಯೆಹೋವನು ದೊಡ್ಡವನೂ ಸ್ತುತಿಗೆ ಯೋಗ್ಯನೂ ಆಗಿದ್ದಾನೆ.
ಬೇರೆಲ್ಲ ದೇವರುಗಳಿಗಿಂತ ಆತನೇ ಭಯಂಕರನು.
5 ಅನ್ಯಜನಾಂಗಗಳ ದೇವರುಗಳೆಲ್ಲಾ ಕೇವಲ ಪ್ರತಿಮೆಗಳಾಗಿವೆ.
ನಮ್ಮ ಯೆಹೋವನಾದರೋ ಆಕಾಶಮಂಡಲವನ್ನು ಸೃಷ್ಟಿಸಿದಾತನು.
6 ಆತನ ಎದುರಿನಲ್ಲಿ ಮಹಿಮೆಯೂ ವೈಭವವೂ ಕಂಗೊಳಿಸುತ್ತಿವೆ.
ಆತನ ಪವಿತ್ರಾಲಯದಲ್ಲಿ ಶಕ್ತಿಯೂ ಸೌಂದರ್ಯವೂ ತುಂಬಿಕೊಂಡಿವೆ.
7 ಭೂಜನಾಂಗಗಳೇ, ಸ್ತುತಿಗೀತೆಗಳನ್ನು ಹಾಡುತ್ತಾ
ಯೆಹೋವನನ್ನು ಮಹಿಮೆಪಡಿಸಿರಿ.
8 ಯೆಹೋವನ ಹೆಸರನ್ನು ಸ್ತುತಿಸಿರಿ.
ನಿಮ್ಮ ಕಾಣಿಕೆಗಳನ್ನು ತೆಗೆದುಕೊಂಡು ದೇವಾಲಯಕ್ಕೆ ಹೋಗಿರಿ.
9 ಯೆಹೋವನನ್ನು ಆತನ ಸುಂದರವಾದ ಆಲಯದಲ್ಲಿ ಆರಾಧಿಸಿರಿ.
ಭೂನಿವಾಸಿಗಳೆಲ್ಲರೇ, ಆತನನ್ನೇ ಆರಾಧಿಸಿರಿ.
10 ಯೆಹೋವನೇ ರಾಜನೆಂದು ಜನಾಂಗಗಳಿಗೆ ಪ್ರಕಟಿಸಿರಿ.
ಭೂಮಿಯು ಸ್ಥಿರವಾಗಿರುವುದು.
ಯೆಹೋವನೇ ನೀತಿಯಿಂದ ಅದನ್ನು ಆಳುವನು.
11 ಆಕಾಶಮಂಡಲವೇ, ಸಂತೋಷಪಡು!
ಭೂಮಿಯೇ, ಉಲ್ಲಾಸಪಡು! ಸಮುದ್ರವೇ ಮತ್ತು ಸಮುದ್ರದೊಳಗಿರುವ ಸರ್ವಸ್ವವೇ, ಆನಂದಘೋಷ ಮಾಡಿರಿ!
12 ಹೊಲಗಳೇ ಮತ್ತು ಅವುಗಳ ಮೇಲೆ ಬೆಳೆದಿರುವ ಸಮಸ್ತವೇ, ಸಂತೋಷದಿಂದಿರಿ!
ಅರಣ್ಯದ ಮರಗಳೇ, ಹಾಡಿರಿ ಮತ್ತು ಸಂತೋಷಪಡಿರಿ!
13 ಯಾಕೆಂದರೆ ಲೋಕವನ್ನು ಆಳಲು ಯೆಹೋವನು ಬರುತ್ತಿದ್ದಾನೆ.
ಆತನು ಲೋಕವನ್ನು ನ್ಯಾಯ ನೀತಿಗಳಿಂದ ಆಳುವನು.
3 ಯೆಹೋವನು ನಿಮ್ಮ ಪ್ರಯಾಸವನ್ನು ನಿವಾರಿಸಿ ನಿಮ್ಮನ್ನು ಆದರಿಸುವನು. ಹಿಂದಿನ ದಿವಸಗಳಲ್ಲಿ ನೀವು ಗುಲಾಮರಾಗಿರುವಾಗ ಜನರು ನಿಮ್ಮನ್ನು ಬಹಳವಾಗಿ ಹಿಂಸಿಸಿದರು; ಬಲವಂತದಿಂದ ಕಷ್ಟಕರವಾದ ಕೆಲಸವನ್ನು ನಿಮ್ಮಿಂದ ಮಾಡಿಸಿದರು. ಆದರೆ ಯೆಹೋವನು ಆ ಸಂಕಟಗಳಿಂದ ನಿಮ್ಮನ್ನು ಪಾರುಮಾಡುವನು.
ಬಾಬಿಲೋನಿನ ಅರಸನ ಕುರಿತು ಹಾಡು
4 ಆ ಸಮಯದಲ್ಲಿ ಬಾಬಿಲೋನಿನ ಅರಸನ ಬಗ್ಗೆ ನೀವು ಹೀಗೆ ಹಾಡುವಿರಿ:
ಅರಸನು ನಮ್ಮನ್ನಾಳುವಾಗ ಬಹಳ ಕ್ರೂರವಾಗಿದ್ದನು.
ಆದರೆ ಈಗ ಅವನ ಆಳ್ವಿಕೆಯು ಅಂತ್ಯವಾಯಿತು.
5 ಯೆಹೋವನು ದುಷ್ಟರ ಕೋಲನ್ನೂ ಅರಸನ ರಾಜದಂಡವನ್ನೂ ಮುರಿದುಹಾಕಿದನು.
ಅವನ ಅಧಿಕಾರವನ್ನು ತೆಗೆದುಹಾಕಿದನು.
6 ಬಾಬಿಲೋನಿನ ಅರಸನು ತನ್ನ ದುಷ್ಟತನದಲ್ಲಿ ಜನರನ್ನು ಹೊಡೆಯಿಸಿದನು.
ಹೊಡೆಯುವದನ್ನು ಅವನು ನಿಲ್ಲಿಸಲೇ ಇಲ್ಲ.
ಆ ದುಷ್ಟ ಅರಸನು ಜನರನ್ನು ಸಿಟ್ಟಿನಿಂದಲೇ ಆಳಿದನು.
ಜನರನ್ನು ಹಿಂಸೆಪಡಿಸುವದನ್ನು ಅವನು ನಿಲ್ಲಿಸಲಿಲ್ಲ.
7 ಆದರೆ ಈಗ ಇಡೀ ರಾಜ್ಯದಲ್ಲಿ ವಿಶ್ರಾಂತಿ ಇದೆ.
ರಾಜ್ಯವು ಸಮಾಧಾನದಿಂದಿದೆ.
ಜನರು ಸಂತೋಷದಿಂದ ಇದನ್ನು ಆಚರಿಸುತ್ತಾರೆ.
8 ನೀನು ದುಷ್ಟ ಅರಸನಾಗಿದ್ದೆ,
ಈಗ ನಿನಗೆ ಅಂತ್ಯವು ಬಂತು.
ತುರಾಯಿ ಮರಗಳೂ
ಲೆಬನೋನಿನ ದೇವದಾರು ವೃಕ್ಷಗಳೂ ಹರ್ಷಗೊಂಡಿವೆ.
ಆ ಮರಗಳು ಹೀಗೆ ಹೇಳುತ್ತಿವೆ: ಅರಸನು ನಮ್ಮನ್ನು ಕಡಿದುರುಳಿಸಿದನು.
ಈಗ ಅರಸನೇ ಉರುಳಿಬಿದ್ದಿದ್ದಾನೆ.
ಅವನು ಮತ್ತೆಂದಿಗೂ ಏಳುವುದಿಲ್ಲ.
9 ನೀನು ಬರುವದರಿಂದ ಮರಣದ ಸ್ಥಳವಾಗಿರುವ ನರಕವು ಉತ್ಸಾಹಗೊಂಡಿದೆ.
ನಿನ್ನನ್ನು ಎದುರುಗೊಳ್ಳುವದಕ್ಕಾಗಿ ಪಾತಾಳವು ಲೋಕದ ಎಲ್ಲಾ ಅಧಿಪತಿಗಳ ಆತ್ಮಗಳನ್ನು ಎಬ್ಬಿಸಿದೆ.
ಅರಸರು ತಮ್ಮ ಸಿಂಹಾಸನದಲ್ಲಿ ನಿಂತುಕೊಳ್ಳುವಂತೆ ಪಾತಾಳವು ಮಾಡುತ್ತಿದೆ.
ಅವರು ನಿನ್ನ ಬರುವಿಕೆಯನ್ನು ಕಾಯುತ್ತಿದ್ದಾರೆ.
10 “ಈಗ ನೀನು ನಮ್ಮಂತೆಯೇ ಸತ್ತ ಶರೀರವಾಗಿರುವೆ.
ಈಗ ನೀನು ನಮ್ಮಂತೆಯೇ ಆಗಿರುವೆ”
ಎಂದು ಅವರು ನಿನ್ನನ್ನು ಗೇಲಿ ಮಾಡುವರು.
11 ನಿನ್ನ ಜಂಬವು ಪಾತಾಳಕ್ಕೆ ಕಳುಹಿಸಲಾಗಿದೆ.
ನಿನ್ನ ಹಾರ್ಪ್ವಾದ್ಯದ ಸ್ವರವು ನಿನ್ನ ಅಹಂಕಾರದ ಆತ್ಮವನ್ನು ಸಾರಿಹೇಳುತ್ತವೆ.
ಹುಳಗಳು ನಿನ್ನ ಶರೀರವನ್ನು ತಿಂದುಬಿಡುವವು.
ಹಾಸಿಗೆಯೋ ಎಂಬಂತೆ ನೀನು ಅವುಗಳ ಮೇಲೆ ಮಲಗಿಕೊಳ್ಳುವೆ.
ಹುಳಗಳು ನಿನ್ನ ಶರೀರವನ್ನು ಕಂಬಳಿಯಂತೆ ಮುಚ್ಚಿಕೊಳ್ಳುವವು.
ಯೇಸುವಿನ ಕುರಿತು ಹೆರೋದನ ಅಭಿಪ್ರಾಯ
(ಮಾರ್ಕ 6:14-29; ಲೂಕ 9:7-9)
14 ಆ ಕಾಲದಲ್ಲಿ ಹೆರೋದನು ಗಲಿಲಾಯದಲ್ಲಿ ಆಳುತ್ತಿದ್ದನು. ಜನರು ಯೇಸುವಿನ ಕುರಿತು ಹೇಳುತ್ತಿದ್ದ ಸಂಗತಿಗಳೆಲ್ಲ ಅವನಿಗೆ ತಿಳಿಯಿತು. 2 ಆದ್ದರಿಂದ ಹೆರೋದನು ತನ್ನ ಸೇವಕರಿಗೆ, “ನಿಜವಾಗಿಯೂ ಯೇಸುವೇ ಸ್ನಾನಿಕ ಯೋಹಾನನು. ಅವನು ಮತ್ತೆ ಜೀವಂತವಾಗಿ ಬಂದಿದ್ದಾನೆ. ಆದಕಾರಣವೇ ಅವನು ಈ ಅದ್ಭುತಕಾರ್ಯಗಳನ್ನು ಮಾಡಲು ಶಕ್ತನಾಗಿದ್ದಾನೆ” ಎಂದು ಹೇಳಿದನು.
ಸ್ನಾನಿಕ ಯೋಹಾನನು ಕೊಲ್ಲಲ್ಪಟ್ಟ ರೀತಿ
3 ಈ ಸಮಯಕ್ಕೆ ಮೊದಲೇ ಹೆರೋದ್ಯಳ ನಿಮಿತ್ತವಾಗಿ ಹೆರೋದನು ಯೋಹಾನನನ್ನು ಸರಪಣಿಗಳಿಂದ ಬಂಧಿಸಿ, ಸೆರೆಮನೆಯಲ್ಲಿ ಹಾಕಿಸಿದ್ದನು. ಹೆರೋದ್ಯಳು ಹೆರೋದನ ಸಹೋದರನಾದ ಫಿಲಿಪ್ಪನ ಹೆಂಡತಿ. 4 ಯೋಹಾನನು ಹೆರೋದನಿಗೆ, “ಹೆರೋದ್ಯಳನ್ನು ನೀನು ಇಟ್ಟುಕೊಂಡಿರುವುದು ಸರಿಯಲ್ಲ” ಎಂದು ಹೇಳುತ್ತಿದ್ದುದೇ ಈ ಸೆರೆವಾಸಕ್ಕೆ ಕಾರಣ. 5 ಹೆರೋದನು ಯೋಹಾನನನ್ನು ಕೊಲ್ಲಿಸಬೇಕೆಂದಿದ್ದರೂ ಜನರಿಗೆ ಭಯಪಟ್ಟು ಕೊಲ್ಲಿಸಿರಲಿಲ್ಲ. ಜನರು ಯೋಹಾನನನ್ನು ಒಬ್ಬ ಪ್ರವಾದಿಯೆಂದು ನಂಬಿದ್ದರು.
6 ಹೆರೋದನ ಹುಟ್ಟುಹಬ್ಬದ ದಿನದಂದು ಹೆರೋದ್ಯಳ ಮಗಳು ಹೆರೋದನ ಮತ್ತು ಅವನ ಅತಿಥಿಗಳ ಮುಂದೆ ನರ್ತಿಸಿದಳು. ಹೆರೋದನು ಅವಳನ್ನು ಬಹಳ ಮೆಚ್ಚಿಕೊಂಡನು. 7 ಆದ್ದರಿಂದ ಅವನು, “ನಿನಗೆ ಏನು ಬೇಕಾದರೂ ನಾನು ಕೊಡುತ್ತೇನೆ” ಎಂದು ಅವಳಿಗೆ ವಾಗ್ದಾನ ಮಾಡಿದನು. 8 ಏನು ಕೇಳಿಕೊಳ್ಳಬೇಕೆಂದು ಹೆರೋದ್ಯಳು ತನ್ನ ಮಗಳಿಗೆ ಹೇಳಿಕೊಟ್ಟಳು. ಆದ್ದರಿಂದ ಅವಳು ಹೆರೋದನಿಗೆ, “ಸ್ನಾನಿಕ ಯೋಹಾನನ ತಲೆಯನ್ನು ಇಲ್ಲಿಯೇ ಈ ತಟ್ಟೆಯ ಮೇಲೆಯೇ ನನಗೆ ಕೊಡು” ಎಂದು ಹೇಳಿದಳು.
9 ರಾಜ ಹೆರೋದನು ಬಹಳವಾಗಿ ದುಃಖಪಟ್ಟನು. ಆದರೆ ಏನು ಕೇಳಿದರೂ ಕೊಡುತ್ತೇನೆಂದು ಅವನು ಅವಳಿಗೆ ವಾಗ್ದಾನ ಮಾಡಿದ್ದನು. ಹೆರೋದನ ಪಂಕ್ತಿಯಲ್ಲಿ ಊಟ ಮಾಡುತ್ತಿದ್ದವರು ಸಹ ಆ ವಾಗ್ದಾನವನ್ನು ಕೇಳಿಸಿಕೊಂಡಿದ್ದರು. ಆದ್ದರಿಂದ ಅವಳು ಕೇಳಿದ್ದನ್ನು ಕೊಡುವುದಕ್ಕೆ ಹೆರೋದನು ಅಪ್ಪಣೆಕೊಟ್ಟನು. 10 ಸೆರೆಮನೆಗೆ ಹೋಗಿ ಯೋಹಾನನ ತಲೆಯನ್ನು ಕತ್ತರಿಸಿಕೊಂಡು ಬರಲು ಅವನು ಸೈನಿಕರನ್ನು ಕಳುಹಿಸಿಕೊಟ್ಟನು. 11 ಅವರು ಯೋಹಾನನ ತಲೆಯನ್ನು ತಟ್ಟೆಯ ಮೇಲೆ ತಂದು ಅವಳಿಗೆ ಕೊಟ್ಟರು. ಅವಳು ಅದನ್ನು ತನ್ನ ತಾಯಿಯಾದ ಹೆರೋದ್ಯಳ ಬಳಿಗೆ ತೆಗೆದುಕೊಂಡು ಹೋದಳು. 12 ಯೋಹಾನನ ಶಿಷ್ಯರು ಬಂದು ಅವನ ದೇಹವನ್ನು ತೆಗೆದುಕೊಂಡು ಹೋಗಿ ಸಮಾಧಿ ಮಾಡಿದರು. ಬಳಿಕ ಅವರು ಯೇಸುವಿನ ಬಳಿಗೆ ಹೋಗಿ ಸಂಭವಿಸಿದ್ದನ್ನೆಲ್ಲ ತಿಳಿಸಿದರು.
Kannada Holy Bible: Easy-to-Read Version. All rights reserved. © 1997 Bible League International