Revised Common Lectionary (Complementary)
ಮೊದಲನೆ ಭಾಗ
(ಕೀರ್ತನೆಗಳು 1–41)
1 ಯಾವನು ದುಷ್ಟರ ಮಾರ್ಗವನ್ನು ಅನುಸರಿಸದೆ,
ಪಾಪಿಗಳಂತೆ ಜೀವಿಸದೆ,
ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ
ಅವನೇ ಭಾಗ್ಯವಂತನು.
2 ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ
ಅದನ್ನೇ ಹಗಲಿರುಳು ಧ್ಯಾನಿಸುವನು.
3 ಅವನು ನೀರಿನ ಕಾಲುವೆಗಳ ಬಳಿಯಲ್ಲಿ
ಹುಲುಸಾಗಿ ಬೆಳೆದಿರುವ ಮರದಂತಿರುವನು.
ಆ ಮರವು ತಕ್ಕಕಾಲದಲ್ಲಿ ಫಲಿಸುವುದು;
ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು;
ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.
4 ದುಷ್ಟರಾದರೋ ಹಾಗಲ್ಲ!
ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತಿರುವರು.
5 ನ್ಯಾಯತೀರ್ಪಿನ ಕಾಲ ಬಂದಾಗ ದುಷ್ಟರಿಗೆ ಅಪರಾಧಿಗಳೆಂದು ತೀರ್ಪಾಗುವುದು.
ಪಾಪಿಗಳಿಗೆ ನೀತಿವಂತರ ಮಧ್ಯದಲ್ಲಿ ಸ್ಥಳವಿರುವುದಿಲ್ಲ.
6 ಯೆಹೋವನು ನೀತಿವಂತರನ್ನು ಸಂರಕ್ಷಿಸುವನು;
ದುಷ್ಟರನ್ನಾದರೋ ನಾಶಪಡಿಸುವನು.
25 “ನಾನು ಯೆಹೋವನ ಮುಂದೆ ನಲವತ್ತು ದಿನ ಹಗಲಿರುಳು ಬೋರಲಬಿದ್ದು ಆತನು ನಾಶಮಾಡಬೇಕೆಂದಿದ್ದ ನಿಮಗಾಗಿ ಪ್ರಾರ್ಥಿಸಿದೆನು. 26 ‘ನನ್ನ ಒಡೆಯನೇ, ಯೆಹೋವನೇ, ನಿನ್ನ ಜನರನ್ನು ನೀನು ನಾಶಮಾಡಬೇಡ. ಅವರು ನಿನ್ನ ಜನಾಂಗ. ನಿನ್ನ ಪರಾಕ್ರಮದಿಂದ ನೀನು ಈಜಿಪ್ಟಿನಿಂದ ಅವರನ್ನು ಬಿಡಿಸಿ ಹೊರತಂದಿರುವೆ. 27 ಯೆಹೋವನೇ, ನೀನು ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಮಾಡಿದ ವಾಗ್ದಾನವನ್ನು ನಿನ್ನ ನೆನಪಿಗೆ ತಂದುಕೋ. ಇವರು ಎಷ್ಟು ಹಠಮಾರಿಗಳೆಂಬುದನ್ನು ಮರೆತುಬಿಡು. ಅವರ ಪಾಪಮಾರ್ಗವನ್ನಾಗಲಿ ಪಾಪಗಳನ್ನಾಗಲಿ ನೋಡಬೇಡ. 28 ನೀನು ಇವರಿಗೆ ಶಿಕ್ಷೆಕೊಟ್ಟರೆ ಈಜಿಪ್ಟಿನವರು, “ದೇವರು ತನ್ನ ಜನರನ್ನು ತಾನು ವಾಗ್ದಾನ ಮಾಡಿದ ದೇಶಕ್ಕೆ ನಡೆಸಲು ಅಸಮರ್ಥನಾದನು. ಆತನು ಅವರನ್ನು ದ್ವೇಷಿಸುತ್ತಾನೆ; ಆದ್ದರಿಂದ ಅವರನ್ನು ಮರುಭೂಮಿಯಲ್ಲಿ ಹತಮಾಡಲು ಕೊಂಡೊಯ್ದಿದ್ದಾನೆ” ಎಂದು ಹೇಳುವರು. 29 ಆದರೆ ಅವರು ನಿನ್ನ ಜನರಾಗಿದ್ದಾರೆ. ಅವರು ನಿನಗೆ ಸಂಬಂಧಪಟ್ಟವರಾಗಿದ್ದಾರೆ; ನಿನ್ನ ಬಲಪರಾಕ್ರಮದಿಂದ ಅವರನ್ನು ದಾಸತ್ವದಿಂದ ಬಿಡುಗಡೆ ಮಾಡಿರುವೆ.’
ಹೊಸ ಕಲ್ಲಿನ ಹಲಗೆಗಳು
10 “ಆಗ ಯೆಹೋವನು ನನಗೆ, ‘ಮೊದಲಿನ ಎರಡು ಕಲ್ಲಿನ ಹಲಗೆಗಳಂತೆಯೇ ಎರಡು ಕಲ್ಲಿನ ಹಲಗೆಗಳನ್ನು ಮಾಡು. ಆಮೇಲೆ ಬೆಟ್ಟದ ಮೇಲೆ ನನ್ನ ಬಳಿಗೆ ಬಾ. ಅಲ್ಲದೆ ಒಂದು ಮರದ ಪೆಟ್ಟಿಗೆಯನ್ನೂ ತಯಾರು ಮಾಡು. 2 ನೀನು ಒಡೆದುಹಾಕಿದ ಮೊದಲಿನ ಕಲ್ಲು ಹಲಗೆಗಳ ಮೇಲೆ ಯಾವ ಪದಗಳನ್ನು ಬರೆದಿದ್ದೆನೋ ಅದೇ ಪದಗಳನ್ನು ಈ ಕಲ್ಲಿನ ಹಲಗೆಗಳ ಮೇಲೆ ಬರೆಯುತ್ತೇನೆ. ಈ ಹೊಸ ಕಲ್ಲಿನ ಹಲಗೆಗಳನ್ನು ನೀನು ಮರದ ಪೆಟ್ಟಿಗೆಯಲ್ಲಿಡಬೇಕು’ ಎಂದು ಹೇಳಿದನು.
3 “ನಾನು ಜಾಲೀಮರದಿಂದ ಪೆಟ್ಟಿಗೆಯನ್ನು ಮಾಡಿದೆನು. ಎರಡು ಕಲ್ಲಿನ ಹಲಗೆಗಳನ್ನು ತಯಾರಿಸಿ ಬೆಟ್ಟವನ್ನೇರಿದೆನು. 4 ಆಗ ಯೆಹೋವನು ಮುಂಚಿನಂತೆಯೇ ಇದರಲ್ಲೂ ದಶಾಜ್ಞೆಗಳನ್ನು ಬರೆದು ನನಗೆ ಕೊಟ್ಟನು. ನೀವು ಬೆಟ್ಟದ ಬಳಿ ಒಟ್ಟಾಗಿ ಸೇರಿ ಬಂದಿದ್ದಾಗ ಆತನು ಬೆಂಕಿಯೊಳಗಿಂದ ಹೇಳಿದ್ದ ದಶಾಜ್ಞೆಗಳೇ ಇವು. 5 ನಾನು ಬೆಟ್ಟದಿಂದಿಳಿದು ಆ ಕಲ್ಲಿನ ಹಲಗೆಗಳನ್ನು ಯೆಹೋವನ ಅಪ್ಪಣೆಯಂತೆ ನಾನು ಮಾಡಿದ ಪೆಟ್ಟಿಗೆಯೊಳಗಿಟ್ಟೆನು. ಆ ಕಲ್ಲಿನ ಹಲಗೆಗಳು ಈಗಲೂ ಇವೆ.”
7 ನೀನು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಯುವಕರಿಗೆ ಸರ್ವವಿಧದಲ್ಲಿಯೂ ಮಾದರಿಯಾಗಿರಬೇಕು. ನಿನ್ನ ಉಪದೇಶದಲ್ಲಿ ಯಥಾರ್ಥತೆಯನ್ನು ಮತ್ತು ಗಂಭೀರತೆಯನ್ನು ತೋರಿಸಿಕೊಡು. 8 ನೀನು ಸತ್ಯವನ್ನೇ ಮಾತನಾಡು. ಆಗ ನಿನ್ನನ್ನು ಟೀಕಿಸಲು ಸಾಧ್ಯವಿಲ್ಲದೆ ನಿನ್ನ ವಿರೋಧಿಗಳು ಅಪಮಾನಕ್ಕೆ ಗುರಿಯಾಗುವರು.
11 ಎಲ್ಲರಿಗೂ ರಕ್ಷಣೆಯನ್ನು ಕೊಡುವ ದೇವರ ಕೃಪೆಯು ಪ್ರತ್ಯಕ್ಷವಾಗಿದೆ. 12 ನಾವು ದೇವರಿಗೆ ವಿರುದ್ಧವಾಗಿ ಜೀವಿಸದಂತೆಯೂ ಲೋಕದ ಜನರು ಮಾಡಲಪೇಕ್ಷಿಸುವ ಕೆಟ್ಟಕಾರ್ಯಗಳನ್ನು ಮಾಡದಂತೆಯೂ ಅದು ತಡೆಯುತ್ತದೆ. ನಾವು ದೇವರ ಸೇವೆಯನ್ನು ಮಾಡುತ್ತಿದ್ದೇವೆ ಎಂಬುದನ್ನು ತೋರಿಸುವುದಕ್ಕಾಗಿ ನೀತಿವಂತರಾಗಿಯೂ ಜ್ಞಾನಿಗಳಾಗಿಯೂ ಲೋಕದಲ್ಲಿ ಈಗ ಬಾಳಬೇಕೆಂದು ಅದು ಬೋಧಿಸುತ್ತದೆ. 13 ನಮ್ಮ ಮಹಾದೇವರು ಮತ್ತು ರಕ್ಷಕನಾದ ಯೇಸುಕ್ರಿಸ್ತನ ಪ್ರತ್ಯಕ್ಷತೆಯನ್ನು ಎದುರುನೋಡುತ್ತಿರುವ ನಾವು ಆ ರೀತಿಯಲ್ಲಿಯೇ ಬಾಳಬೇಕು. ಆತನೇ ನಮ್ಮ ಮಹಾ ನಿರೀಕ್ಷೆಯಾಗಿದ್ದಾನೆ. ಆತನು ತನ್ನ ಮಹಿಮೆಯೊಂದಿಗೆ ಬರುತ್ತಾನೆ. 14 ಆತನು ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು. ನಮ್ಮನ್ನು ಪಾಪದಿಂದ ಬಿಡುಗಡೆ ಮಾಡಲು ಮತ್ತು ಯಾವಾಗಲೂ ಒಳ್ಳೆಯ ಕಾರ್ಯಗಳನ್ನೇ ಮಾಡ ಬಯಸುವ ತನ್ನ ಪರಿಶುದ್ಧ ಜನರನ್ನಾಗಿ ಮಾಡಲು ಆತನು ಮರಣ ಹೊಂದಿದನು.
15 ಈ ಸಂಗತಿಗಳನ್ನು ಜನರಿಗೆ ತಿಳಿಸಲು ನಿನಗೆ ಸಂಪೂರ್ಣ ಅಧಿಕಾರವಿದೆ. ಜನರನ್ನು ಬಲಗೊಳಿಸಲು ಈ ಅಧಿಕಾರವನ್ನು ಬಳಸಿಕೊಂಡು, ಅವರು ಮಾಡಬೇಕಾದುದನ್ನು ತಿಳಿಸು. ನೀನು ಮುಖ್ಯನಾದವನಲ್ಲವೆಂದು ಯಾರೂ ನಿನ್ನನ್ನು ಪರಿಗಣಿಸದಂತೆ ನೋಡಿಕೊ.
Kannada Holy Bible: Easy-to-Read Version. All rights reserved. © 1997 Bible League International