Revised Common Lectionary (Complementary)
ರಚನೆಗಾರ: ದಾವೀದ.
23 ಯೆಹೋವನೇ ನನಗೆ ಕುರುಬನು.
ನನಗೆ ಕೊರತೆಯೇ ಇಲ್ಲ.
2 ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುವನು.
ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.
3 ಆತನು ತನ್ನ ಹೆಸರಿಗೆ ತಕ್ಕಂತೆ ನನ್ನ ಪ್ರಾಣಕ್ಕೆ ಚೈತನ್ಯ ನೀಡಿ
ನೀತಿಮಾರ್ಗದಲ್ಲಿ ನನ್ನನ್ನು ನಡೆಸುವನು.
4 ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ
ನೀನು ನನ್ನೊಂದಿಗಿರುವುದರಿಂದ ಭಯಪಡುವುದಿಲ್ಲ.
ನಿನ್ನ ದೊಣ್ಣೆಯೂ ಊರುಗೋಲೂ ನನ್ನನ್ನು ಸಂತೈಸುತ್ತವೆ.
5 ವೈರಿಗಳ ಎದುರಿನಲ್ಲಿ ನೀನು ನನಗೆ ಔತಣವನ್ನು ಸಿದ್ಧಪಡಿಸಿರುವೆ;
ನನ್ನ ತಲೆಗೆ ಎಣ್ಣೆಯನ್ನು ಹಚ್ಚಿರುವೆ.
ನನ್ನ ಪಾತ್ರೆಯು ತುಂಬಿ ಹೊರಸೂಸುತ್ತಿದೆ.
6 ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನೊಂದಿಗಿರುತ್ತವೆ.
ನನ್ನ ಜೀವಮಾನವೆಲ್ಲಾ ಯೆಹೋವನ ಆಲಯದಲ್ಲೇ ವಾಸಿಸುವೆನು.
ಜೆರುಸಲೇಮಿಗೆ ದೇವರ ಸಂದೇಶ
22 ದಿವ್ಯದರ್ಶನದ ಕಣಿವೆಯ ವಿಷಯವಾಗಿ ದುಃಖದ ಸಂದೇಶ:
ಜನಗಳೇ, ನಿಮಗೆ ಏನಾಯಿತು?
ನಿಮ್ಮ ಮನೆ ಮಾಳಿಗೆಯ ಮೇಲೆ ಯಾಕೆ ಅಡಗಿರುತ್ತೀರಿ?
2 ಹಿಂದಿನ ಕಾಲದಲ್ಲಿ ಈ ನಗರವು ಅತ್ಯಂತ ಜನಸಂದಣಿಯಿಂದ ಕೂಡಿತ್ತು.
ಈ ನಗರದಲ್ಲಿ ಗದ್ದಲವೂ ಜನರ ಸಂತಸದ ಧ್ವನಿಯೂ ತುಂಬಿತ್ತು.
ಆದರೆ ಈಗ ಎಲ್ಲವೂ ಬದಲಾಯಿತು.
ನಿಮ್ಮ ಜನರು ಸತ್ತದ್ದು ಖಡ್ಗದಿಂದಲ್ಲ.
ಯುದ್ಧದಲ್ಲಿ ಸಾಯದೆ ಬೇರೆ ರೀತಿಯಲ್ಲಿ ಸತ್ತರು.
3 ಅಧಿಪತಿಗಳೆಲ್ಲಾ ಒಟ್ಟಾಗಿ ಪಲಾಯನಗೈದರು.
ಆದರೆ ಅವರೆಲ್ಲಾ ಬಿಲ್ಲುಗಳಿಲ್ಲದೆ ಹಿಡಿಯಲ್ಪಟ್ಟರು.
ನಿಮ್ಮ ಎಲ್ಲಾ ಅಧಿಕಾರಿಗಳು ಒಟ್ಟಾಗಿ ಬಹು ದೂರಪ್ರದೇಶಗಳಿಗೆ ಓಡಿದರು.
ಆದರೆ ಅವರೆಲ್ಲಾ ಹಿಡಿಯಲ್ಪಟ್ಟರು.
4 ಆದ್ದರಿಂದ ನಾನು ಹೇಳುವುದೇನೆಂದರೆ: “ನೀವು ನನ್ನ ಕಡೆಗೆ ನೋಡಬೇಡಿ!
ನನ್ನನ್ನು ಅಳಲು ಬಿಡಿರಿ!
ಜೆರುಸಲೇಮಿನ ನಾಶನದ ಕುರಿತಾಗಿ ನನ್ನನ್ನು ಕೂಡಲೇ ಸಂತೈಸಬೇಡಿರಿ.”
5 ಯೆಹೋವನು ಒಂದು ವಿಶೇಷ ದಿನವನ್ನು ಆರಿಸಿರುತ್ತಾನೆ. ಆ ದಿನದಲ್ಲಿ ಗಲಭೆ ಮತ್ತು ಗಲಿಬಿಲಿಯು ಇರುವದು. ದಿವ್ಯದರ್ಶನದ ಕಣಿವೆಯಲ್ಲಿ ಜನರು ಒಬ್ಬರನ್ನೊಬ್ಬರು ತುಳಿದುಕೊಂಡು ಅವರ ಮೇಲೆಯೇ ನಡೆದುಕೊಂಡು ಹೋಗುವರು. ನಗರದ ಕೋಟೆಗೋಡೆಗಳು ಕೆಡವಲ್ಪಡುವವು. ಕಣಿವೆಯಲ್ಲಿ ವಾಸಿಸುವ ಜನರು ಬೆಟ್ಟದ ಮೇಲಿನ ನಗರದ ಜನರಿಗೆ ಚೀರಾಡುವರು. 6 ಏಲಾಮಿನ ಅಶ್ವಸೈನಿಕರು ತಮ್ಮ ಬತ್ತಳಿಕೆಯನ್ನು ತೆಗೆದುಕೊಂಡು ರಣರಂಗಕ್ಕೆ ಹೊರಡುವರು. ಕೀರ್ ಸ್ಥಳದ ಜನರು ತಮ್ಮ ಗುರಾಣಿಗಳಿಂದ ಶಬ್ದಮಾಡುವರು. 7 ಸೈನ್ಯಗಳು ನಿಮ್ಮ ವಿಶೇಷವಾದ ಕಣಿವೆಯಲ್ಲಿ ಎದುರುಬದುರಾಗಿ ಭೇಟಿಯಾಗುವರು. ಕಣಿವೆಯು ರಥಗಳಿಂದ ತುಂಬಿಹೋಗುವದು. ಅಶ್ವದಳದವರನ್ನು ದ್ವಾರದ ಮುಂದೆ ನಿಲ್ಲಿಸಲಾಗುವದು. 8 ಆ ಸಮಯದಲ್ಲಿ ಯೆಹೂದದ ಜನರು ತಾವು ಕಾಡಿನ ಅರಮನೆಯಲ್ಲಿಟ್ಟಿದ್ದ ಆಯುಧಗಳನ್ನು ಉಪಯೋಗಿಸುವುದಕ್ಕೆ ಮನಸ್ಸು ಮಾಡುವರು. ಯೆಹೂದವನ್ನು ರಕ್ಷಿಸುವ ಗೋಡೆಗಳನ್ನು ಶತ್ರುಗಳು ಕೆಡವಿಹಾಕುವರು.
ದೇವರ ಮಂದೆ
5 ನಿಮ್ಮ ಸಭಾಹಿರಿಯರಿಗೆ ನಾನು ಈಗ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನಾನೂ ಒಬ್ಬ ಹಿರಿಯನಾಗಿದ್ದೇನೆ. ನಾನು ಕ್ರಿಸ್ತನ ಬಾಧೆಗಳನ್ನು ಕಣ್ಣಾರೆ ನೋಡಿದ್ದೇನೆ. ನಮಗೆ ಪ್ರತ್ಯಕ್ಷವಾಗುವ ಪ್ರಭಾವದಲ್ಲಿ ನಾನೂ ಪಾಲುಗಾರನಾಗಿದ್ದೇನೆ. 2 ನೀವು ಜವಾಬ್ದಾರಿ ವಹಿಸಿಕೊಂಡಿರುವ ಸಭೆಯನ್ನು ಪರಿಪಾಲಿಸಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಅವರು ದೇವರ ಮಂದೆ. ನೀವು ಆ ಮಂದೆಯನ್ನು ಕಾಯಿರಿ, ಏಕೆಂದರೆ ಅದು ನಿಮ್ಮ ಬಯಕೆಯಾಗಿದೆ; ಅದು ಬಲವಂತದಿಂದ ಹೊರಿಸಿದ ಹೊರೆಯಲ್ಲ. ದೇವರು ಅದನ್ನೇ ಇಷ್ಟಪಡುತ್ತಾನೆ. ನೀವು ಆ ಮಂದೆಯನ್ನು ಕಾಯುವುದು ಹಣದ ನಿಮಿತ್ತವಲ್ಲ, ದೇವರ ಸೇವೆ ಮಾಡಲು ನಿಮಗಿರುವ ಸಂತಸದ ನಿಮಿತ್ತವಾಗಿಯೇ. 3 ನೀವು ಜವಾಬ್ದಾರರಾಗಿರುವ ಆ ಮಂದೆಯ ಮೇಲೆ ದಬ್ಬಾಳಿಕೆ ಮಾಡಬೇಡಿ. ನೀವು ಅವರಿಗೆ ಉತ್ತಮ ಮಾದರಿಯಾಗಿರಿ. 4 ಪ್ರಧಾನ ಕುರುಬನು (ಕ್ರಿಸ್ತನು) ಪ್ರತ್ಯಕ್ಷನಾದಾಗ, ನಿಮಗೆ ಕಿರೀಟವು ಲಭಿಸುವುದು. ಮಹಾ ಪ್ರಭಾವವನ್ನು ಹೊಂದಿರುವ ಆ ಕಿರೀಟವು ತನ್ನ ಸೌಂದರ್ಯವನ್ನು ಕಳೆದುಕೊಳ್ಳುವುದೇ ಇಲ್ಲ.
5 ಯುವಕರೇ, ನಾನು ನಿಮಗೂ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನೀವು ಹಿರಿಯರಿಗೆ ಅಧೀನರಾಗಿರಬೇಕು. ನೀವೆಲ್ಲರೂ ಒಬ್ಬರಿಗೊಬ್ಬರು ನಮ್ರತೆಯಿಂದ ನಡೆದುಕೊಳ್ಳಬೇಕು.
“ದೇವರು ಅಹಂಕಾರಿಗಳಿಗೆ ವಿರುದ್ಧನಾಗಿದ್ದಾನೆ.
ಆದರೆ ಆತನು ನಮ್ರತೆಯಿಂದ ಇರುವ ಜನರಿಗೆ ಕೃಪೆಯನ್ನು ದಯಪಾಲಿಸುವನು.”(A)
ಅಂತಿಮ ಶುಭಾಶಯಗಳು
12 ನಾನು ಈ ಕಿರುಪತ್ರವನ್ನು ಸಿಲ್ವಾನನ ನೆರವಿನಿಂದ ಬರೆದೆನು. ಅವನು ಕ್ರಿಸ್ತನಲ್ಲಿ ನಂಬಿಗಸ್ತನಾದ ಸಹೋದರನೆಂಬುದು ನನಗೆ ತಿಳಿದಿದೆ. ನಾನು ನಿಮ್ಮನ್ನು ಸಂತೈಸಲು ಮತ್ತು ಪ್ರೋತ್ಸಾಹಿಸಲು ಈ ಪತ್ರವನ್ನು ಬರೆದೆನು. ಇದುವೇ ದೇವರ ನಿಜವಾದ ಕೃಪೆ ಎಂಬುದನ್ನು ನಿಮಗೆ ತಿಳಿಸಬೇಕೆಂಬುದೇ ನನ್ನ ಅಪೇಕ್ಷೆಯಾಗಿತ್ತು. ಆ ಕೃಪೆಯಲ್ಲಿ ಸ್ಥಿರತೆಯಿಂದಿರಿ.
13 ಬಾಬಿಲೋನಿನಲ್ಲಿರುವ ಸಭೆಯವರು ನಿಮಗೆ ವಂದನೆಗಳನ್ನು ತಿಳಿಸಿದ್ದಾರೆ. ನಿಮ್ಮನ್ನು ಆರಿಸಿಕೊಂಡಂತೆಯೇ ಆ ಜನರನ್ನೂ ಆರಿಸಿಕೊಳ್ಳಲಾಗಿದೆ. ಕ್ರಿಸ್ತನಲ್ಲಿ ನನ್ನ ಮಗನಾದ ಮಾರ್ಕನೂ ನಿಮಗೆ ವಂದನೆಗಳನ್ನು ತಿಳಿಸಿದ್ದಾನೆ. 14 ನೀವು ಭೇಟಿ ಮಾಡಿದಾಗ ಒಬ್ಬರಿಗೊಬ್ಬರು ಪ್ರೀತಿಯ ಮುದ್ದನ್ನು ನೀಡಿರಿ.
ಕ್ರಿಸ್ತನಲ್ಲಿರುವ ನಿಮಗೆಲ್ಲರಿಗೂ ಶಾಂತಿಯಿರಲಿ.
Kannada Holy Bible: Easy-to-Read Version. All rights reserved. © 1997 Bible League International