Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 1

ಮೊದಲನೆ ಭಾಗ

(ಕೀರ್ತನೆಗಳು 1–41)

ಯಾವನು ದುಷ್ಟರ ಮಾರ್ಗವನ್ನು ಅನುಸರಿಸದೆ,
    ಪಾಪಿಗಳಂತೆ ಜೀವಿಸದೆ,
ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ
    ಅವನೇ ಭಾಗ್ಯವಂತನು.
ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ
    ಅದನ್ನೇ ಹಗಲಿರುಳು ಧ್ಯಾನಿಸುವನು.
ಅವನು ನೀರಿನ ಕಾಲುವೆಗಳ ಬಳಿಯಲ್ಲಿ
    ಹುಲುಸಾಗಿ ಬೆಳೆದಿರುವ ಮರದಂತಿರುವನು.
ಆ ಮರವು ತಕ್ಕಕಾಲದಲ್ಲಿ ಫಲಿಸುವುದು;
    ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು;
ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.

ದುಷ್ಟರಾದರೋ ಹಾಗಲ್ಲ!
    ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತಿರುವರು.
ನ್ಯಾಯತೀರ್ಪಿನ ಕಾಲ ಬಂದಾಗ ದುಷ್ಟರಿಗೆ ಅಪರಾಧಿಗಳೆಂದು ತೀರ್ಪಾಗುವುದು.
    ಪಾಪಿಗಳಿಗೆ ನೀತಿವಂತರ ಮಧ್ಯದಲ್ಲಿ ಸ್ಥಳವಿರುವುದಿಲ್ಲ.
ಯೆಹೋವನು ನೀತಿವಂತರನ್ನು ಸಂರಕ್ಷಿಸುವನು;
    ದುಷ್ಟರನ್ನಾದರೋ ನಾಶಪಡಿಸುವನು.

ಅರಣ್ಯಕಾಂಡ 5:5-10

ತಪ್ಪುಕಾರ್ಯಗಳಿಗೆ ಪ್ರಾಯಶ್ಚಿತ್ತ ವಿಧಿ

ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇದನ್ನು ಇಸ್ರೇಲರಿಗೆ ತಿಳಿಸು: ಯಾವ ಪುರುಷನಾಗಲಿ ಸ್ತ್ರೀಯಾಗಲಿ ಮತ್ತೊಬ್ಬನನ್ನು ಆಸ್ತಿಯ ವಿಷಯದಲ್ಲಿ ಮೋಸಗೊಳಿಸಿದರೆ ಅವನು ಸುಳ್ಳುಪ್ರಮಾಣ ಮಾಡುವುದರ ಮೂಲಕ ಯೆಹೋವನಿಗೆ ವಿರೋಧವಾಗಿ ಹೊಲಸಾದ ಕಾರ್ಯವನ್ನು ಮಾಡಿದಂತಾಯಿತು. ಆದ್ದರಿಂದ ಅವನು ದೋಷಿಯಾಗಿದ್ದಾನೆ. ಆದ್ದರಿಂದ ಅಂಥವನು ತನ್ನ ಪಾಪವನ್ನು ಅರಿಕೆಮಾಡಬೇಕು. ಅದಲ್ಲದೆ, ಅಪರಾಧ ಮಾಡಿದವನು ನಷ್ಟಪಟ್ಟವನಿಗೆ ಮೂಲದ್ರವ್ಯದ ಬೆಲೆಯೊಡನೆ ಐದನೆಯ ಭಾಗವನ್ನು ಹೆಚ್ಚಾಗಿ ಕೊಡಬೇಕು. ದಂಡವನ್ನು ತೆಗೆದುಕೊಳ್ಳತಕ್ಕವನು ತೀರಿಹೋಗಿ, ಹತ್ತಿರ ಸಂಬಂಧಿಯೂ ಇಲ್ಲದ ಪಕ್ಷಕ್ಕೆ, ಆ ದ್ರವ್ಯವನ್ನು ಯೆಹೋವನಿಗೆ ಕೊಡಬೇಕು. ಅವನು ಯಾಜಕನಿಗೆ ಪೂರ್ಣ ಬೆಲೆಯನ್ನು ಕೊಡಬೇಕು. ತಪ್ಪು ಮಾಡಿದವನು ಯಾಜಕನಿಗೆ ಒಂದು ಟಗರನ್ನೂ ತಂದುಕೊಡಬೇಕು. ಈ ಟಗರನ್ನು ತಪ್ಪುಮಾಡಿದವನ ಪ್ರಾಯಶ್ಚಿತ್ತಕ್ಕಾಗಿ ಯಜ್ಞಮಾಡಬೇಕು. ಆದರೆ ಉಳಿದದ್ದನ್ನು ಯಾಜಕನು ಇಟ್ಟುಕೊಳ್ಳಬಹುದು.

9-10 “ಒಬ್ಬನು ದೇವರಿಗೆ ವಿಶೇಷ ಕಾಣಿಕೆಯನ್ನು ಅರ್ಪಿಸಿದರೆ, ಅದನ್ನು ಸ್ವೀಕರಿಸುವ ಯಾಜಕನು ತನಗಾಗಿ ಅದನ್ನು ಇಟ್ಟುಕೊಳ್ಳಬಹುದು. ಅದು ಅವನದಾಗಿರುತ್ತದೆ. ಒಬ್ಬನು ಈ ವಿಶೇಷ ಕಾಣಿಕೆಗಳನ್ನು ಕೊಡಬೇಕಾಗಿಲ್ಲ. ಆದರೆ ಅವನು ಅವುಗಳನ್ನು ಕೊಟ್ಟರೆ ಅವು ಯಾಜಕನಿಗೆ ಸೇರುತ್ತವೆ.”

ತೀತನಿಗೆ 1:5-16

ಕ್ರೇತದಲ್ಲಿ ತೀತನ ಕಾರ್ಯ

ಇನ್ನೂ ಪೂರ್ಣವಾಗಿಲ್ಲದ ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕಾಗಿಯೂ ಪ್ರತಿಯೊಂದು ಪಟ್ಟಣದಲ್ಲಿ ಸಭಾಹಿರಿಯರನ್ನು ಆರಿಸುವುದಕ್ಕಾಗಿಯೂ ನಾನು ನಿನ್ನನ್ನು ಕ್ರೇತದಲ್ಲಿ ಬಿಟ್ಟು ಬಂದೆನು. ಸಭೆಯ ಹಿರಿಯನಾಗುವವನು ಅಪರಾಧಿಯೆಂಬ ನಿಂದನೆಗೆ ಗುರಿಯಾಗಿರಬಾರದು. ಅವನಿಗೆ ಒಬ್ಬಳೇ ಪತ್ನಿಯಿರಬೇಕು. ಅವನ ಮಕ್ಕಳು ವಿಶ್ವಾಸಿಗಳಾಗಿರಬೇಕು; ಅವರು ದುಷ್ಟರೆಂದಾಗಲಿ ಅವಿಧೇಯರೆಂದಾಗಲಿ ಹೇಳಿಸಿಕೊಂಡಿರಬಾರದು. ಸಭಾಹಿರಿಯನು ದೇವರ ಸೇವೆಯ ಜವಾಬ್ದಾರಿಯನ್ನು ಹೊತ್ತು ಕೊಂಡವನಾಗಿದ್ದಾನೆ. ಆದ್ದರಿಂದ ಅವನು ಅಪರಾಧಿಯೆಂಬ ನಿಂದನೆಗೆ ಒಳಗಾಗಿರಬಾರದು; ಗರ್ವಿಷ್ಠನಾಗಿರಬಾರದು; ಸ್ವಾರ್ಥಿಯಾಗಿರಬಾರದು ಮತ್ತು ಮುಂಗೋಪಿಯಾಗಿರಬಾರದು; ದ್ರಾಕ್ಷಾರಸವನ್ನು ಅತಿಯಾಗಿ ಕುಡಿಯುವವನಾಗಿರಬಾರದು; ಜಗಳಗಂಟನಾಗಿರಬಾರದು; ಜನರನ್ನು ವಂಚಿಸಿ ಶ್ರೀಮಂತನಾಗಲು ಪ್ರಯತ್ನಿಸುವವನಾಗಿರಬಾರದು. ಸಭಾಹಿರಿಯನು ಜನರನ್ನು ತನ್ನ ಮನೆಗೆ ಆಹ್ವಾನಿಸಿ ಅತಿಥಿಸತ್ಕಾರ ಮಾಡಲು ಸಿದ್ಧನಾಗಿರಬೇಕು. ಅವನು ಒಳ್ಳೆಯದನ್ನು ಪ್ರೀತಿಸಬೇಕು; ಜ್ಞಾನಿಯಾಗಿರಬೇಕು; ನ್ಯಾಯವಂತನಾಗಿರಬೇಕು; ಪವಿತ್ರನಾಗಿರಬೇಕು. ಅವನು ತನ್ನನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. ನಾವು ಬೋಧಿಸುವ ಸತ್ಯವಾಕ್ಯವನ್ನು ಅವನು ನಂಬಿಗಸ್ತಿಕೆಯಿಂದ ಅನುಸರಿಸಬೇಕು. ಸತ್ಯವಾದ ಮತ್ತು ಯೋಗ್ಯವಾದ ಬೋಧನೆಯಿಂದ ಅವನು ಜನರಿಗೆ ಸಹಾಯ ಮಾಡುವವನಾಗಿರಬೇಕು. ಅವನು ಸತ್ಯಬೋಧನೆಗೆ ವಿರುದ್ಧವಾದ ಜನರಿಗೆ ಅವರ ತಪ್ಪನ್ನು ತೋರಿಸಿಕೊಡುವ ಸಾಮರ್ಥ್ಯ ಉಳ್ಳವನಾಗಿರಬೇಕು.

10 ಅವಿಧೇಯರಾಗಿರುವ ಜನರು ಅನೇಕರಿದ್ದಾರೆ. ಅವರು ನಿರರ್ಥಕವಾದುದನ್ನು ಕುರಿತು ಮಾತನಾಡುತ್ತಲೇ ಇರುತ್ತಾರೆ ಮತ್ತು ಉಳಿದ ಜನರನ್ನು ತಪ್ಪುದಾರಿಗೆ ಎಳೆಯುತ್ತಾರೆ. ಯೆಹೂದ್ಯರಲ್ಲದ ಜನರೆಲ್ಲರೂ ಸುನ್ನತಿ ಮಾಡಿಸಿಕೊಳ್ಳಬೇಕೆಂದು ಬೋಧಿಸುವ ಜನರ ಬಗ್ಗೆಯೇ ನಾನು ಹೇಳುತ್ತಿರುವುದು. 11 ಆ ಜನರ ಬೋಧನೆ ತಪ್ಪೆಂದು ನಿರೂಪಿಸಲು ಮತ್ತು ಉಪಯೋಗವಿಲ್ಲದ ಆ ಸಂಗತಿಗಳನ್ನು ಬೋಧಿಸದಂತೆ ಮಾಡಲು ಸಭಾಹಿರಿಯನು ಸಮರ್ಥನಾಗಿರಬೇಕು. ಅವರು ಉಪದೇಶ ಮಾಡಬಾರದ ಸಂಗತಿಗಳನ್ನು ಉಪದೇಶಿಸುತ್ತಾ ಇಡೀ ಕುಟುಂಬಗಳನ್ನೇ ಸಂಪೂರ್ಣವಾಗಿ ನಾಶಗೊಳಿಸುತ್ತಿದ್ದಾರೆ. ಅವರು ಜನರನ್ನು ವಂಚಿಸಿ, ಹಣವನ್ನು ಸಂಪಾದಿಸುವುದಕ್ಕೋಸ್ಕರ ಆ ಸಂಗತಿಗಳನ್ನು ಉಪದೇಶಿಸುತ್ತಿದ್ದಾರೆ. 12 ಅವರ ಪ್ರವಾದಿಗಳಲ್ಲಿ ಒಬ್ಬನು, “ಕ್ರೇತದ ಜನರು ಯಾವಾಗಲೂ ಸುಳ್ಳು ಹೇಳುತ್ತಾರೆ. ಅವರು ದುಷ್ಟ ಮೃಗಗಳಾಗಿದ್ದಾರೆ; ಸೋಮಾರಿತನದಿಂದ ಕೆಲಸವನ್ನೇ ಮಾಡದೆ ಹೊಟ್ಟೆಬಾಕರಾಗಿದ್ದಾರೆ” ಎಂದು ಹೇಳಿದ್ದಾನೆ. 13 ಪ್ರವಾದಿಯು ಹೇಳಿದ ಮಾತುಗಳು ಸತ್ಯವಾಗಿವೆ. ಆದ್ದರಿಂದ ಅವರು ಮಾಡುತ್ತಿರುವ ತಪ್ಪುಗಳನ್ನು ಅವರಿಗೆ ತಿಳಿಸು. ನೀನು ಅವರ ವಿಷಯದಲ್ಲಿ ಕಟ್ಟುನಿಟ್ಟಾಗಿರಬೇಕು. ಆಗ ಅವರು ತಮ್ಮ ನಂಬಿಕೆಯಲ್ಲಿ ದೃಢವಾಗಿದ್ದು, 14 ಯೆಹೂದ್ಯರ ಕಟ್ಟುಕಥೆಗಳನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಸತ್ಯವನ್ನು ಒಪ್ಪಿಕೊಳ್ಳದ ಜನರ ಆಜ್ಞೆಗಳನ್ನು ಅನುಸರಿಸುವುದಿಲ್ಲ.

15 ಪರಿಶುದ್ಧರಾದ ಜನರಿಗೆ ಎಲ್ಲಾ ಸಂಗತಿಗಳು ಪರಿಶುದ್ಧವಾಗಿರುತ್ತವೆ. ಆದರೆ ಪಾಪಗಳನ್ನೇ ತುಂಬಿಕೊಂಡಿರುವ ಮತ್ತು ನಂಬಿಕೆಯಿಲ್ಲದ ಜನರಿಗೆ ಯಾವುದೂ ಪರಿಶುದ್ಧವಾಗಿರುವುದಿಲ್ಲ. ನಿಜವಾಗಿಯೂ, ಅವರ ಮನಸ್ಸುಗಳು ಮತ್ತು ಮನಸ್ಸಾಕ್ಷಿಗಳು ಮಲಿನವಾಗಿವೆ. 16 ದೇವರ ಬಗ್ಗೆ ತಮಗೆ ತಿಳಿದಿದೆಯೆಂದು ಅವರು ಹೇಳಿದರೂ ಅವರು ದೇವರನ್ನು ತಿಳಿದಿಲ್ಲವೆಂದು ಅವರ ಕೆಟ್ಟಕಾರ್ಯಗಳೇ ಸ್ಪಷ್ಟಪಡಿಸುತ್ತವೆ. ಅವರು ಭಯಂಕರವಾದ ಜನರು ಮತ್ತು ಅವಿಧೇಯರು. ಯಾವ ಸತ್ಕಾರ್ಯಗಳನ್ನು ಮಾಡುವುದಕ್ಕೂ ಅವರು ಯೋಗ್ಯರಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International