Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 19:1-2

ಇಸ್ರೇಲರು ದೇವಜನರಾಗಿದ್ದಾರೆ

19 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರಿಗೆ ಹೀಗೆ ಹೇಳು: ನಾನೇ ನಿಮ್ಮ ದೇವರಾದ ಯೆಹೋವನು ನಾನು ಪರಿಶುದ್ಧನಾಗಿರುವಂತೆಯೇ ನೀವೂ ಪರಿಶುದ್ಧರಾಗಿರಬೇಕು!

ಯಾಜಕಕಾಂಡ 19:15-18

15 “ನೀವು ಕೊಡುವ ತೀರ್ಪು ನ್ಯಾಯವಾಗಿರಬೇಕು. ಬಡವರ ಬಡತನವನ್ನಾಗಲಿ ಪ್ರಾಮುಖ್ಯರ ದೊಡ್ಡಸ್ತಿಕೆಯನ್ನಾಗಲಿ ಗಮನಿಸದೆ ಪಕ್ಷಪಾತವಿಲ್ಲದೆ ತೀರ್ಪುಕೊಡಬೇಕು. ನೀವು ನಿಮ್ಮ ನೆರೆಯವನಿಗೆ ತೀರ್ಪುಮಾಡುವಾಗ ನ್ಯಾಯದ ತೀರ್ಪುಕೊಡಿರಿ. 16 ಬೇರೆ ಜನರ ವಿರುದ್ಧ ಚಾಡಿ ಹೇಳಬಾರದು. ನಿಮ್ಮ ನೆರೆಯವನ ಪ್ರಾಣವನ್ನು ಅಪಾಯಕ್ಕೆ ಈಡುಮಾಡುವ ಯಾವ ಕಾರ್ಯವನ್ನೂ ನೀವು ಮಾಡಬಾರದು. ನಾನೇ ಯೆಹೋವನು!

17 “ನೀವು ನಿಮ್ಮ ಸಹೋದರನನ್ನು ಮನಸ್ಸಿನಲ್ಲಿ ದ್ವೇಷಿಸಬಾರದು. ನಿಮ್ಮ ಸಹೋದರನು ಏನಾದರೂ ತಪ್ಪುಮಾಡಿದರೆ, ಅವನೊಡನೆ ಅದರ ಕುರಿತು ಮಾತಾಡು. ಅವನ ಅಪರಾಧದಲ್ಲಿ ನೀವು ಪಾಲುಹೊಂದದಂತೆ ನೇರವಾಗಿ ಗದರಿಸಿ. ಆಗ ನೀವು ಅವನನ್ನು ಕ್ಷಮಿಸಬಹುದು. 18 ಜನರು ನಿಮಗೆ ಮಾಡುವ ಕೆಟ್ಟಕಾರ್ಯಗಳನ್ನು ಮರೆತುಬಿಡಿರಿ. ನಿಮ್ಮ ಜನರಲ್ಲಿ ಒಬ್ಬನಾಗಿರುವವನ ಮೇಲೆ ಸೇಡನ್ನು ತೀರಿಸಿಕೊಳ್ಳಲು ಪ್ರಯತ್ನಿಸಬೇಡಿರಿ; ದ್ವೇಷವನ್ನೂ ಇಟ್ಟುಕೊಳ್ಳಬೇಡಿ. ನಿಮ್ಮ ನೆರೆಯವನನ್ನು ನಿಮ್ಮಂತೆಯೇ ಪ್ರೀತಿಸಿರಿ. ನಾನೇ ಯೆಹೋವನು!

ಕೀರ್ತನೆಗಳು 1

ಮೊದಲನೆ ಭಾಗ

(ಕೀರ್ತನೆಗಳು 1–41)

ಯಾವನು ದುಷ್ಟರ ಮಾರ್ಗವನ್ನು ಅನುಸರಿಸದೆ,
    ಪಾಪಿಗಳಂತೆ ಜೀವಿಸದೆ,
ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ
    ಅವನೇ ಭಾಗ್ಯವಂತನು.
ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ
    ಅದನ್ನೇ ಹಗಲಿರುಳು ಧ್ಯಾನಿಸುವನು.
ಅವನು ನೀರಿನ ಕಾಲುವೆಗಳ ಬಳಿಯಲ್ಲಿ
    ಹುಲುಸಾಗಿ ಬೆಳೆದಿರುವ ಮರದಂತಿರುವನು.
ಆ ಮರವು ತಕ್ಕಕಾಲದಲ್ಲಿ ಫಲಿಸುವುದು;
    ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು;
ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.

ದುಷ್ಟರಾದರೋ ಹಾಗಲ್ಲ!
    ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತಿರುವರು.
ನ್ಯಾಯತೀರ್ಪಿನ ಕಾಲ ಬಂದಾಗ ದುಷ್ಟರಿಗೆ ಅಪರಾಧಿಗಳೆಂದು ತೀರ್ಪಾಗುವುದು.
    ಪಾಪಿಗಳಿಗೆ ನೀತಿವಂತರ ಮಧ್ಯದಲ್ಲಿ ಸ್ಥಳವಿರುವುದಿಲ್ಲ.
ಯೆಹೋವನು ನೀತಿವಂತರನ್ನು ಸಂರಕ್ಷಿಸುವನು;
    ದುಷ್ಟರನ್ನಾದರೋ ನಾಶಪಡಿಸುವನು.

1 ಥೆಸಲೋನಿಕದವರಿಗೆ 2:1-8

ಥೆಸಲೋನಿಕದಲ್ಲಿ ಪೌಲನ ಕಾರ್ಯ

ಸಹೋದರ ಸಹೋದರಿಯರೇ, ನಾವು ನಿಮ್ಮಲ್ಲಿಗೆ ಬಂದದ್ದು ವ್ಯರ್ಥವಾಗಲಿಲ್ಲ ಎಂಬುದು ನಿಮಗೆ ತಿಳಿದಿದೆ. ನಿಮ್ಮಲ್ಲಿಗೆ ಬರುವುದಕ್ಕೆ ಮೊದಲೇ ಫಿಲಿಪ್ಪಿಯಲ್ಲಿ ಹಿಂಸೆಯನ್ನು ಅನುಭವಿಸಿದೆವು. ಅಲ್ಲಿಯ ಜನರು ನಮ್ಮ ವಿರುದ್ಧವಾಗಿ ಕೆಟ್ಟದ್ದನ್ನು ಹೇಳಿದರು. ಅದೆಲ್ಲವೂ ನಿಮಗೆ ತಿಳಿದಿದೆ. ನಿಮ್ಮ ಬಳಿಗೆ ಬಂದಾಗ, ಅನೇಕ ಜನರು ನಮಗೆ ವಿರುದ್ಧವಾಗಿದ್ದರು. ಆದರೆ ಧೈರ್ಯದಿಂದ ಇರಲು ಮತ್ತು ನಿಮಗೆ ಸುವಾರ್ತೆಯನ್ನು ತಿಳಿಸಲು ದೇವರು ನಮಗೆ ಸಹಾಯ ಮಾಡಿದನು. ನಮ್ಮ ಬೋಧನೆಯು ತಪ್ಪೂ ಅಲ್ಲ ಮತ್ತು ಅಶುದ್ಧವಾದ ಉದ್ದೇಶವನ್ನು ಹೊಂದಿಯೂ ಇಲ್ಲ ಮತ್ತು ನಿಮ್ಮನ್ನು ಮೋಸಗೊಳಿಸುವ ಪ್ರಯತ್ನವೂ ಅಲ್ಲ. ನಾವು ಸುವಾರ್ತೆಯನ್ನು ತಿಳಿಸುತ್ತೇವೆ. ಏಕೆಂದರೆ ದೇವರು ನಮ್ಮನ್ನು ಪರಿಶೋಧಿಸಿದ್ದಾನೆ ಮತ್ತು ಸುವಾರ್ತೆಯನ್ನು ತಿಳಿಸಲು ನಮ್ಮನ್ನು ನೇಮಿಸಿದ್ದಾನೆ. ಆದುದರಿಂದ ಜನರನ್ನು ಮೆಚ್ಚಿಸಲು ಪ್ರಯತ್ನಿಸದೆ ನಮ್ಮ ಹೃದಯಗಳನ್ನು ಪರೀಕ್ಷಿಸುವಾತನಾದ ದೇವರನ್ನೇ ಮೆಚ್ಚಿಸಲು ಪ್ರಯತ್ನಿಸುತ್ತೇವೆ.

ನಿಮ್ಮ ಬಗ್ಗೆ ಒಳ್ಳೆಯದನ್ನು ಹೇಳಿ ನಿಮ್ಮನ್ನು ಮರುಳು ಮಾಡಬೇಕೆಂದು ನಾವೆಂದೂ ಪ್ರಯತ್ನಿಸಿಲ್ಲವೆಂಬುದು ನಿಮಗೆ ತಿಳಿದಿದೆ. ನಾವು ನಿಮ್ಮ ಹಣವನ್ನು ಕಸಿದುಕೊಳ್ಳಲು ಪ್ರಯತ್ನಿಸಿಲ್ಲ; ನಮ್ಮ ಸ್ವಾರ್ಥವನ್ನು ಮರೆಮಾಡಿಕೊಂಡು ವೇಶಧಾರಿಗಳಾಗಿರಲಿಲ್ಲ. ಇದು ನಿಜವೆಂಬುದು ದೇವರಿಗೆ ತಿಳಿದಿದೆ. ಜನರಿಂದ ಬರುವ ಮಾನಮರ್ಯಾದೆಗಳನ್ನು ನಿಮ್ಮಿಂದಾಗಲಿ ಇತರ ಜನರಿಂದಾಗಲಿ ನಾವೆಂದೂ ಬಯಸಲಿಲ್ಲ.

ನಾವು ಕ್ರಿಸ್ತನ ಅಪೊಸ್ತಲರಾಗಿ ನಿಮ್ಮೊಡಗಿದ್ದಾಗ, ನಿಮ್ಮಿಂದ ದುಡಿಸಿಕೊಳ್ಳಲು ನಮ್ಮ ಅಧಿಕಾರವನ್ನು ಬಳಸಬಹುದಾಗಿತ್ತು. ಆದರೆ ನಿಮ್ಮೊಡನೆ ಬಹಳ ಸಾತ್ವಿಕರಾಗಿದ್ದೆವು. ತಾಯಿಯು ತನ್ನ ಸ್ವಂತ ಚಿಕ್ಕ ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ನಾವು ನಡೆದುಕೊಂಡೆವು. ನಿಮ್ಮನ್ನು ಬಹಳವಾಗಿ ಪ್ರೀತಿಸಿದೆವು. ಆದುದರಿಂದ ದೇವರ ಸುವಾರ್ತೆಯನ್ನು ನಿಮ್ಮೊಡನೆ ಹಂಚಿಕೊಳ್ಳಲು, ಮಾತ್ರವೇ ಅಲ್ಲ, ನಿಮಗೋಸ್ಕರ ಸ್ವಂತ ಪ್ರಾಣವನ್ನೇ ಕೊಡಲು ಸಿದ್ಧರಾಗಿದ್ದೆವು.

ಮತ್ತಾಯ 22:34-46

ಅತ್ಯಂತ ಪ್ರಮುಖ ಆಜ್ಞೆ ಯಾವುದು?

(ಮಾರ್ಕ 12:28-34; ಲೂಕ 10:25-28)

34 ಸದ್ದುಕಾಯರು ಪ್ರತಿವಾದ ಮಾಡಲಾಗದ ರೀತಿಯಲ್ಲಿ ಯೇಸು ಉತ್ತರಕೊಟ್ಟನೆಂಬುದು ಫರಿಸಾಯರಿಗೆ ತಿಳಿದು ಅವರು ಒಟ್ಟಾಗಿ ಯೇಸುವಿನ ಬಳಿಗೆ ಬಂದರು. 35 ಮೋಶೆಯ ಧರ್ಮಶಾಸ್ತ್ರದಲ್ಲಿ ಪ್ರವೀಣನಾಗಿದ್ದ ಫರಿಸಾಯನೊಬ್ಬನು ಯೇಸುವನ್ನು ಪರೀಕ್ಷಿಸಲು, 36 “ಬೋಧಕನೇ, ಧರ್ಮಶಾಸ್ತ್ರದಲ್ಲಿ ಅತ್ಯಂತ ಪ್ರಮುಖ ಆಜ್ಞೆ ಯಾವುದು?” ಎಂದು ಕೇಳಿದನು.

37 ಯೇಸು, “‘ನಿನ್ನ ದೇವರಾಗಿರುವ ಪ್ರಭುವನ್ನು ಪ್ರೀತಿಸಬೇಕು. ನೀನು ಆತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು.’(A) 38 ಇದೇ ಮೊದಲನೆಯ ಮತ್ತು ಅತ್ಯಂತ ಪ್ರಮುಖವಾದ ಆಜ್ಞೆ. 39 ಎರಡನೆಯ ಆಜ್ಞೆಯು ಮೊದಲನೆಯ ಆಜ್ಞೆಯಷ್ಟೇ ಪ್ರಮುಖವಾಗಿದೆ. ‘ನೀನು ನಿನ್ನನ್ನು ಪ್ರೀತಿಸುವಂತೆಯೇ ನೆರೆಯವರನ್ನು ಪ್ರೀತಿಸಬೇಕು’(B) ಎಂಬುದೇ ಆ ಆಜ್ಞೆ. 40 ಇಡೀ ಧರ್ಮಶಾಸ್ತ್ರವು ಮತ್ತು ಪ್ರವಾದಿಗಳ ಎಲ್ಲಾ ಗ್ರಂಥಗಳು ಈ ಎರಡು ಆಜ್ಞೆಗಳ ಅರ್ಥವನ್ನೇ ಒಳಗೊಂಡಿವೆ” ಎಂದು ಉತ್ತರಕೊಟ್ಟನು.

ಯೇಸು ಫರಿಸಾಯರಿಗೆ ಕೇಳಿದ ಪ್ರಶ್ನೆ

(ಮಾರ್ಕ 12:35-37; ಲೂಕ 20:41-44)

41 ಫರಿಸಾಯರು ಒಟ್ಟಿಗೆ ಬಂದಿದ್ದಾಗ ಯೇಸು ಅವರಿಗೆ, 42 “ಕ್ರಿಸ್ತನ ವಿಷಯವಾಗಿ ನಿಮ್ಮ ಆಲೋಚನೆಯೇನು? ಆತನು ಯಾರ ಮಗನು?” ಎಂದು ಅವರನ್ನು ಕೇಳಿದನು.

ಫರಿಸಾಯರು, “ಕ್ರಿಸ್ತನು ದಾವೀದನ ಮಗನಾಗಿದ್ದಾನೆ” ಎಂದು ಉತ್ತರಕೊಟ್ಟರು.

43 ಆಗ ಯೇಸುವು ಫರಿಸಾಯರಿಗೆ, “ಹಾಗಾದರೆ ದಾವೀದನು ಆತನನ್ನು ‘ಪ್ರಭು’ ಎಂದು ಏಕೆ ಕರೆದನು? ದಾವೀದನು ಪರಿಶುದ್ಧಾತ್ಮನ ಶಕ್ತಿಯಿಂದ ಮಾತನಾಡಿದ್ದನು. ದಾವೀದನು ಹೇಳಿದ್ದೇನೆಂದರೆ:

44 ‘ಪ್ರಭು (ದೇವರು) ನನ್ನ ಪ್ರಭುವಿಗೆ (ಕ್ರಿಸ್ತನಿಗೆ),
ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ
    ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು’(C)

ಎಂದು ಹೇಳಿದ್ದಾನೆ. 45 ದಾವೀದನು ಕ್ರಿಸ್ತನನ್ನು ‘ಪ್ರಭು’ ಎಂದು ಕರೆದಿದ್ದಾನೆ. ಹೀಗಿರಲು ಆತನು ದಾವೀದನಿಗೆ ಮಗನಾಗಲು ಹೇಗೆ ಸಾಧ್ಯ?” ಅಂದನು.

46 ಯೇಸುವಿನ ಪ್ರಶ್ನೆಗೆ ಉತ್ತರಕೊಡಲು ಫರಿಸಾಯರಲ್ಲಿ ಯಾರಿಗೂ ಸಾಧ್ಯವಾಗಲಿಲ್ಲ. ಅಂದಿನಿಂದ ಯೇಸುವನ್ನು ವಂಚಿಸುವುದಕ್ಕಾಗಿ ಪ್ರಶ್ನೆ ಕೇಳಲು ಯಾರೂ ಧೈರ್ಯಪಡಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International