Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 34

ದಾವೀದನು ಹುಚ್ಚನಂತೆ ವರ್ತಿಸಿ, ಅಬೀಮೆಲೆಕನಿಂದ ಹೊರಡಿಸಲ್ಪಟ್ಟಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

[a]34 ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು.
    ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿರುವುದು.
ದೀನರೇ, ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವುದನ್ನು
    ಕೇಳಿ ಸಂತೋಷಪಡಿರಿ.
ನನ್ನೊಂದಿಗೆ ಯೆಹೋವನನ್ನು ಸ್ತುತಿಸಿರಿ.
    ನಾವು ಒಟ್ಟಾಗಿ ಆತನ ಹೆಸರನ್ನು ಸನ್ಮಾನಿಸೋಣ.
ನಾನು ಯೆಹೋವನ ಸನ್ನಿಧಿಯಲ್ಲಿ ಮೊರೆಯಿಟ್ಟಾಗ ಆತನು ನನಗೆ ಸಹಾಯಮಾಡಿದನು.
    ನನ್ನನ್ನು ಎಲ್ಲಾ ಭೀತಿಗಳಿಂದ ಬಿಡಿಸಿದನು.
ಆತನನ್ನೇ ದೃಷ್ಟಿಸುವವರು ಸಹಾಯವನ್ನು ಹೊಂದಿಕೊಳ್ಳುವರು.[b]
    ಅವರಿಗೆ ಆಶಾಭಂಗವಾಗದು.
ಕಷ್ಟದಲ್ಲಿದ್ದ ಈ ಬಡಮನುಷ್ಯನು ಮೊರೆಯಿಡಲು
    ಯೆಹೋವನು ಕೇಳಿ ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿದನು.
ಯೆಹೋವನ ಭಕ್ತರ ಸುತ್ತಲೂ ಆತನ ದೂತನು
    ದಂಡಿಳಿಸಿ ಕಾವಲಾಗಿದ್ದು ಕಾಪಾಡುವನು.
ಯೆಹೋವನು ಎಷ್ಟು ಒಳ್ಳೆಯವನೆಂಬುದನ್ನು ಅನುಭವದಿಂದಲೇ ತಿಳಿದುಕೊಳ್ಳಿರಿ.
    ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಭಾಗ್ಯವಂತರು.
ಯೆಹೋವನ ಜನರೇ, ಆತನನ್ನು ಆರಾಧಿಸಿರಿ.
    ಆತನ ಭಕ್ತರಿಗೆ ಬೇರೆ ಯಾವ ಆಶ್ರಯಸ್ಥಾನವೂ ಇಲ್ಲ.
10 ಪ್ರಾಯದ ಸಿಂಹಗಳಾದರೋ ಹೊಟ್ಟೆಗಿಲ್ಲದೆ ಹಸಿದಾವು.
    ಆದರೆ ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರು ಸುವರಗಳನ್ನು ಹೊಂದಿಕೊಳ್ಳುವರು.
11 ಮಕ್ಕಳಿರಾ, ಬನ್ನಿರಿ, ನನ್ನ ಮಾತನ್ನು ಕೇಳಿರಿ;
    ಯೆಹೋವನಲ್ಲಿ ನಿಮಗಿರಬೇಕಾದ ಭಯಭಕ್ತಿಯನ್ನು ಕಲಿಸಿಕೊಡುವೆನು.
12 ದೀರ್ಘಾಯುಷ್ಯವು ಬೇಕೋ?
    ಬಹುಕಾಲ ಸುಖವನ್ನು ಅನುಭವಿಸಬೇಕೋ?
13 ಹಾಗಾದರೆ ಕೆಟ್ಟದ್ದನ್ನು ಮಾತಾಡದಂತೆ ನಾಲಿಗೆಯನ್ನು ಕಾದುಕೊಳ್ಳಿರಿ.
    ಸುಳ್ಳಾಡದಂತೆ ತುಟಿಗಳನ್ನು ಇಟ್ಟುಕೊಳ್ಳಿರಿ.
14 ಕೆಟ್ಟದ್ದನ್ನು ಬಿಟ್ಟು ಒಳ್ಳೆಯವುಗಳನ್ನು ಮಾಡಿರಿ.
    ಸಮಾಧಾನವನ್ನು ಬಯಸಿ ಅದನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ.
15 ಯೆಹೋವನು ನೀತಿವಂತರನ್ನು ಕಾಪಾಡುವನು.
    ಆತನು ಅವರ ಪ್ರಾರ್ಥನೆಗಳಿಗೆ ಕಿವಿಗೊಡುವನು.
16 ಕೆಡುಕರಿಗಾದರೋ ಯೆಹೋವನು ವಿರೋಧವಾಗಿರುವನು.
    ಆತನು ಅವರನ್ನು ಸಂಪೂರ್ಣವಾಗಿ ನಾಶಮಾಡುವನು.

17 ಯೆಹೋವನಿಗೆ ಪ್ರಾರ್ಥಿಸಿರಿ, ಆತನು ನಿಮಗೆ ಕಿವಿಗೊಡುವನು;
    ನಿಮ್ಮನ್ನು ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸುವನು.
18 ಮನಗುಂದಿದವರಿಗೆ ಯೆಹೋವನು ಸಮೀಪವಾಗಿದ್ದಾನೆ;
    ಕುಗ್ಗಿಹೋದ ಅವರನ್ನು ಆತನು ರಕ್ಷಿಸುವನು.
19 ನೀತಿವಂತರಿಗೆ ಅನೇಕ ಕಷ್ಟಗಳು ಬಂದರೂ
    ಯೆಹೋವನು ಅವೆಲ್ಲವುಗಳಿಂದ ಬಿಡಿಸುವನು.
20 ಆತನು ಅವರ ಎಲುಬುಗಳನ್ನೆಲ್ಲ ಕಾಪಾಡುವನು.
    ಅವುಗಳಲ್ಲಿ ಒಂದಾದರೂ ಮುರಿದುಹೋಗುವುದಿಲ್ಲ.
21 ದುಷ್ಟರಾದರೋ ಆಪತ್ತುಗಳಿಂದ ಸಾಯುವರು.
    ನೀತಿವಂತರ ವೈರಿಗಳು ನಾಶವಾಗುವರು.
22 ಯೆಹೋವನು ತನ್ನ ಸೇವಕರ ಪ್ರಾಣವನ್ನು ರಕ್ಷಿಸುವನು.
    ಆತನನ್ನು ಆಶ್ರಯಿಸಿಕೊಂಡಿರುವವರಲ್ಲಿ ಒಬ್ಬರಾದರೂ ನಾಶವಾಗುವುದಿಲ್ಲ.

ಪರಮ ಗೀತ 7:10-8:4

ಪ್ರಿಯತಮೆ ಪ್ರಿಯಕರನಿಗೆ

10 ನಾನು ನನ್ನ ಪ್ರಿಯನವಳೇ.
    ಅವನಿಗೆ ನನ್ನ ಮೇಲೇ ಆಸೆ.
11 ನನ್ನ ಪ್ರಿಯನೇ, ಬಾ!
    ನಾವು ತೋಟಕ್ಕೆ ಹೋಗೋಣ,
    ನಾವು ಹಳ್ಳಿಗಳಲ್ಲಿ ಇರೋಣ.
12 ನಾವು ಹೊತ್ತಾರೆಯಲ್ಲಿ ಎದ್ದು ದ್ರಾಕ್ಷಾತೋಟಗಳಿಗೆ ಹೋಗೋಣ.
    ದ್ರಾಕ್ಷೆಯು ಚಿಗುರಿದೆಯೋ
ಅದರ ಹೂವು ಅರಳಿದೆಯೋ
    ದಾಳಿಂಬೆ ಹಣ್ಣುಗಳು ಮಾಗಿವಿಯೋ ನೋಡೋಣ.
    ನನ್ನ ಪ್ರೀತಿಯನ್ನು ನಿನಗೆ ಅಲ್ಲಿ ಸಲ್ಲಿಸುವೆನು.

13 ಕಾಮಜನಕ ಸಸಿಗಳು ಸುವಾಸನೆ ಬೀರುತ್ತವೆ.
    ನನ್ನ ಪ್ರಿಯನೇ, ನಾನು ನಿನಗೋಸ್ಕರ ಉಳಿಸಿದ
ರುಚಿಕರವಾದ ಬಗೆಬಗೆಯ ಹೊಸ ಮತ್ತು ಹಳೆ ಹಣ್ಣುಗಳು
    ನಮ್ಮ ಬಾಗಿಲ ಬಳಿಯಲ್ಲಿವೆ.

ನೀನು ನನ್ನ ಅಣ್ಣನ ಹಾಗಿದ್ದರೆ, ತಾಯಿ ಹಾಲನ್ನು ಕುಡಿಯುವ ಮಗುವಿನಂತೆ ಇದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು.
    ನಾನು ನಿನ್ನನ್ನು ಹೊರಗೆ ಕಂಡು
ನಿನಗೆ ಮುದ್ದಿಡುತ್ತಿದ್ದೆನು;
    ಆಗ ಯಾರೂ ನನ್ನ ಮೇಲೆ ದೋಷಾರೋಪಣೆ ಮಾಡುತ್ತಿರಲಿಲ್ಲ!
ನಾನು ನಿನ್ನನ್ನು ನಡೆಸಿಕೊಂಡು
    ನನ್ನ ತಾಯಿಯು ನನಗೆ ಉಪದೇಶಿಸಿದ ಕೋಣೆಗೆ ಬರುತ್ತಿದ್ದೆನು.
ನಾನು ನಿನಗೆ ಸಾಂಬಾರ ಪದಾರ್ಥಗಳನ್ನು ಸೇರಿಸಿದ ದ್ರಾಕ್ಷಾರಸವನ್ನು,
    ದಾಳಿಂಬೆ ಹಣ್ಣಿನ ರಸವನ್ನು ಕುಡಿಯಲು ಕೊಡುತ್ತಿದ್ದೆನು.

ಪ್ರಿಯತಮೆ ಸ್ತ್ರೀಯರಿಗೆ

ಆಗ ನಿನ್ನ ಎಡಗೈ ನನಗೆ ತಲೆದಿಂಬಾಗಿ
    ನಿನ್ನ ಬಲಗೈ ನನ್ನನ್ನು ಅಪ್ಪಿಕೊಳ್ಳುತ್ತಿತ್ತು.

ಜೆರುಸಲೇಮಿನ ಸ್ತ್ರೀಯರೇ,
    ತಕ್ಕಕಾಲಕ್ಕೆ ಮೊದಲೇ ಪ್ರೀತಿಯನ್ನು ಹುಟ್ಟಿಸಿ ಬೆಳೆಯಿಸುವುದಿಲ್ಲವೆಂದು
    ನನಗೆ ಪ್ರಮಾಣ ಮಾಡಿರಿ.

ಯೋಹಾನ 6:25-35

ಯೇಸುವೇ ಜೀವದ ರೊಟ್ಟಿ

25 ಜನರು ಯೇಸುವನ್ನು ಸರೋವರದ ಆಚೆಯ ದಡದಲ್ಲಿ ಕಂಡುಕೊಂಡರು. ಅವರು ಆತನಿಗೆ, “ಗುರುವೇ, ನೀನು ಇಲ್ಲಿಗೆ ಯಾವಾಗ ಬಂದೆ?” ಎಂದು ಕೇಳಿದರು.

26 ಯೇಸು, “ನೀವು ನನ್ನನ್ನು ಏಕೆ ಹುಡುಕುತ್ತಿದ್ದೀರಿ? ನನ್ನ ಅಧಿಕಾರವನ್ನು ನಿರೂಪಿಸುವ ನನ್ನ ಅದ್ಭುತಕಾರ್ಯಗಳನ್ನು ಕಂಡು ನೀವು ನನ್ನನ್ನು ಹುಡುಕುತ್ತಿದ್ದೀರೋ? ಇಲ್ಲ! ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ರೊಟ್ಟಿಯನ್ನು ತೃಪ್ತಿಯಾಗುವಷ್ಟು ತಿಂದಕಾರಣ ನನ್ನನ್ನು ಹುಡುಕುತ್ತಿದ್ದೀರಿ. 27 ಈ ಲೋಕದ ಆಹಾರವು ಕೆಟ್ಟುಹೋಗುತ್ತದೆ ಮತ್ತು ಹಾಳಾಗುತ್ತದೆ. ಆದ್ದರಿಂದ ಅಂಥ ಆಹಾರವನ್ನು ಪಡೆದುಕೊಳ್ಳಲು ದುಡಿಯಬೇಡಿರಿ. ಆದರೆ ಎಂದಿಗೂ ಕೆಟ್ಟುಹೋಗದಂಥ ಮತ್ತು ನಿಮಗೆ ನಿತ್ಯಜೀವವನ್ನು ಕೊಡುವಂಥ ಆಹಾರವನ್ನು ಪಡೆದುಕೊಳ್ಳಲು ದುಡಿಯಿರಿ. ಮನುಷ್ಯಕುಮಾರನು ಆ ಆಹಾರವನ್ನು ನಿಮಗೆ ಕೊಡುವನು. ತಂದೆಯಾದ ದೇವರು ಆತನ ಮೇಲೆ ತನ್ನ ಅಧಿಕಾರದ ಮುದ್ರೆಯನ್ನು ಒತ್ತಿದ್ದಾನೆ” ಎಂದು ಹೇಳಿದನು.

28 ಜನರು ಯೇಸುವಿಗೆ, “ನಾವು ಯಾವ ಕಾರ್ಯಗಳನ್ನು ಮಾಡಬೇಕೆಂದು ದೇವರು ಬಯಸುತ್ತಾನೆ?” ಎಂದು ಕೇಳಿದರು.

29 ಯೇಸು, “ದೇವರು ಕಳುಹಿಸಿದಾತನನ್ನು ನೀವು ನಂಬಬೇಕು. ಈ ಕಾರ್ಯವನ್ನೇ ದೇವರು ನಿಮ್ಮಿಂದ ಅಪೇಕ್ಷಿಸುತ್ತಾನೆ” ಎಂದು ಉತ್ತರಕೊಟ್ಟನು.

30 ಆದ್ದರಿಂದ ಜನರು, “ದೇವರಿಂದ ಕಳುಹಿಸಲ್ಪಟ್ಟಾತನು ನೀನೇ ಎಂಬುದನ್ನು ನಿರೂಪಿಸುವುದಕ್ಕಾಗಿ ನೀನು ಯಾವ ಸೂಚಕಕಾರ್ಯವನ್ನು ಮಾಡುವೆ? 31 ನಮ್ಮ ಪಿತೃಗಳು ತಮಗೆ ದೇವರು ಮರುಭೂಮಿಯಲ್ಲಿ ಕೊಟ್ಟ ಮನ್ನವನ್ನು (ಆಹಾರವನ್ನು) ತಿಂದರು. ‘ದೇವರು ಅವರಿಗೆ ತಿನ್ನಲು ಪರಲೋಕದಿಂದ ರೊಟ್ಟಿಯನ್ನು ಕೊಟ್ಟನು’(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಹೇಳಿದರು.

32 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮ್ಮ ಜನರಿಗೆ ಪರಲೋಕದಿಂದ ರೊಟ್ಟಿಯನ್ನು ಕೊಟ್ಟವನು ಮೋಶೆಯಲ್ಲ. ಆದರೆ ನನ್ನ ತಂದೆಯು ನಿಮಗೆ ಪರಲೋಕದಿಂದ ನಿಜವಾದ ರೊಟ್ಟಿಯನ್ನು ಕೊಡುವನು. 33 ದೇವರ ರೊಟ್ಟಿ ಯಾವುದು? ಪರಲೋಕದಿಂದ ಇಳಿದುಬಂದು ಈ ಲೋಕಕ್ಕಾಗಿ ಜೀವವನ್ನು ಕೊಡುವಾತನೇ ದೇವರು ಕೊಡುವ ರೊಟ್ಟಿ” ಎಂದು ಹೇಳಿದನು.

34 ಜನರು, “ಅಯ್ಯಾ, ಆ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು” ಎಂದು ಕೇಳಿಕೊಂಡರು.

35 ಅದಕ್ಕೆ ಯೇಸು, “ನಾನೇ ಜೀವಕೊಡುವ ರೊಟ್ಟಿ. ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗದು. ನನ್ನಲ್ಲಿ ನಂಬಿಕೆ ಇಡುವವನಿಗೆ ಎಂದಿಗೂ ಬಾಯಾರಿಕೆಯಾಗದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International