Revised Common Lectionary (Complementary)
ರಚನೆಗಾರ: ದಾವೀದ.
144 ಯೆಹೋವನು ನನಗೆ ಬಂಡೆಯಾಗಿದ್ದಾನೆ.
ಆತನಿಗೆ ಸ್ತೋತ್ರವಾಗಲಿ.
ಆತನು ನನ್ನನ್ನು ಯುದ್ಧಕ್ಕೂ
ಕದನಕ್ಕೂ ತರಬೇತು ಮಾಡುವನು.
2 ಆತನು ನನ್ನನ್ನು ಪ್ರೀತಿಸುವ ದೇವರೂ
ನನ್ನ ಕೋಟೆಯೂ ನನ್ನ ದುರ್ಗವೂ ನನ್ನ ರಕ್ಷಕನೂ ನನ್ನ ಗುರಾಣಿಯೂ ನನ್ನ ಆಶ್ರಯವೂ ಆಗಿದ್ದಾನೆ.
3 ಯೆಹೋವನೇ, ಮನುಷ್ಯರು ಎಷ್ಟು ಮಾತ್ರದವರು?
ನೀನು ಅವರನ್ನು ಯಾಕೆ ನೆನಸಬೇಕು?
ಮನುಷ್ಯರು ಎಷ್ಟರವರು?
ನೀನು ಅವರನ್ನು ಯಾಕೆ ಗಮನಿಸಬೇಕು?
4 ಮನುಷ್ಯರು ಕೇವಲ ಉಸಿರೇ.
ಅವರ ಜೀವಮಾನವು ಬೇಗನೆ ಗತಿಸಿಹೋಗುವ ನೆರಳಿನಂತಿದೆ.
5 ಯೆಹೋವನೇ, ಆಕಾಶವನ್ನು ಹರಿದು ಇಳಿದು ಬಾ.
ಪರ್ವತಗಳನ್ನು ಮುಟ್ಟು.
ಆಗ ಅವುಗಳಿಂದ ಹೊಗೆಯು ಮೇಲೇರುವುದು.
6 ಸಿಡಿಲಿನಿಂದ ಶತ್ರುಗಳನ್ನು ಚದರಿಸಿಬಿಡು.
ನಿನ್ನ ಬಾಣಗಳಿಂದ ಅವರನ್ನು ಓಡಿಸಿಬಿಡು.
7 ಮೇಲಿನ ಲೋಕದಿಂದ ಕೈಚಾಚಿ ಮಹಾ ಜಲರಾಶಿಯಂತಿರುವ
ನನ್ನ ಶತ್ರುಗಳಿಂದ ನನ್ನನ್ನು ಎಳೆದುಕೋ.
ಅನ್ಯಜನರ ಕೈಯಿಂದ ನನ್ನನ್ನು ಬಿಡಿಸು.
8 ಅವರ ಬಾಯಿ ಸುಳ್ಳುಗಳಿಂದ ತುಂಬಿವೆ.
ಅವರ ಬಲಗೈ ಮೋಸದಿಂದ ತುಂಬಿವೆ.
9 ಯೆಹೋವನೇ, ನಿನಗೆ ನೂತನ ಕೀರ್ತನೆಯನ್ನು ಹಾಡುವೆನು.
ನಾನು ಹತ್ತು ತಂತಿಗಳ ಹಾರ್ಪ್‌ವಾದ್ಯವನ್ನು ನುಡಿಸುತ್ತಾ ನಿನ್ನನ್ನು ಸ್ತುತಿಸುವೆನು.
10 ರಾಜರುಗಳಿಗೆ ಸಹಾಯಮಾಡಿ ಯುದ್ಧಗಳಲ್ಲಿ ಗೆಲ್ಲಿಸುವವನೂ ನೀನೇ.
ನಿನ್ನ ಸೇವಕನಾದ ದಾವೀದನನ್ನು ಅವನ ಶತ್ರುಗಳ ಖಡ್ಗಗಳಿಂದ ರಕ್ಷಿಸಿದವನೂ ನೀನೇ.
11 ಈ ಅನ್ಯಜನರಿಂದ ನನ್ನನ್ನು ರಕ್ಷಿಸು.
ಅವರ ಬಾಯಿಗಳು ಸುಳ್ಳುಗಳಿಂದ ತುಂಬಿವೆ.
ಅವರ ಬಲಗೈಗಳು ಮೋಸದಿಂದ ತುಂಬಿವೆ.
12 ನಮ್ಮ ಯುವಕರು ಮಹಾವೃಕ್ಷಗಳಂತಿದ್ದಾರೆ.
ನಮ್ಮ ಯುವತಿಯರು ಅರಮನೆಯಲ್ಲಿ ಸುಂದರವಾಗಿ ಕೆತ್ತಲ್ಪಟ್ಟ ಕಂಬಗಳಂತಿರುವರು.
13 ನಮ್ಮ ಕಣಜಗಳು ಸಕಲ ಬಗೆಯ ದವಸಧಾನ್ಯಗಳಿಂದ ತುಂಬಿರುತ್ತವೆ.
ನಮ್ಮ ಹೊಲಗಳಲ್ಲಿರುವ ಕುರಿಗಳು ಸಾವಿರಾರು ಮರಿಗಳನ್ನು ಈಯುತ್ತವೆ.
14 ನಮ್ಮ ಸೈನಿಕರು ಸುರಕ್ಷಿತವಾಗಿದ್ದಾರೆ.
ಯಾವ ಶತ್ರುಗಳೂ ನುಗ್ಗಿಬರಲು ಪ್ರಯತ್ನಿಸುತ್ತಿಲ್ಲ.
ನಾವು ಯುದ್ಧಕ್ಕೆ ಹೋಗುವುದೂ ಇಲ್ಲ;
ನಮ್ಮ ಬೀದಿಗಳಲ್ಲಿ ಗೋಳಾಟವೂ ಇರುವುದಿಲ್ಲ.
15 ಇಂಥ ಸುಸ್ಥಿತಿಯಲ್ಲಿರುವ ಜನರೇ ಧನ್ಯರು.
ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರೇ ಭಾಗ್ಯವಂತರು.
10 “‘ನಿನ್ನ ತಾಯಿಯು ನೀರಾವರಿಯಲ್ಲಿ ನೆಟ್ಟ
ದ್ರಾಕ್ಷಾಲತೆಯಂತಿದ್ದಳು.
ಬೇಕಾದಷ್ಟು ನೀರು ಇದ್ದುದರಿಂದ
ಅದು ಫಲಭರಿತವಾಗಿದ್ದು ಅನೇಕ ಕೊಂಬೆಗಳನ್ನು ಹೊಂದಿತ್ತು.
11 ಅದು ಬಲವಾದ ಕಾಂಡಗಳನ್ನು ಬೆಳೆಸಿತು.
ಅದರ ಕಾಂಡಗಳು ಅಧಿಪತಿಗಳ ರಾಜದಂಡದಂತಿದ್ದವು.
ಅವುಗಳಲ್ಲಿ ಒಂದು ಮೋಡಗಳ ಮಧ್ಯದಲ್ಲಿ ಎತ್ತರವಾಗಿ ಬೆಳೆಯಿತು.
ಅದು ತನ್ನ ಎತ್ತರದಿಂದ ಮತ್ತು ತನ್ನ ಅನೇಕ ಕೊಂಬೆಗಳಿಂದ ಎದ್ದುಕಾಣುತ್ತಿತ್ತು.
12 ಆದರೆ ದ್ರಾಕ್ಷಾಲತೆಯು ಬೇರು ಸಮೇತ ಕಿತ್ತುಹಾಕಲ್ಪಟ್ಟಿತು.
ಅದು ನೆಲದ ಮೇಲೆ ಬಿಸಾಡಲ್ಪಟ್ಟಿತು.
ಪೂರ್ವದ ಬಿಸಿಗಾಳಿಯು ಅದರ ಹಣ್ಣುಗಳನ್ನು ಒಣಗಿಸಿತು.
ಅದರ ಬಲವಾದ ಕೊಂಬೆಗಳು ಮುರಿಯಲ್ಪಟ್ಟವು.
ಅವುಗಳನ್ನು ಬೆಂಕಿಯು ಸುಟ್ಟುಹಾಕಿತು.
13 “‘ಈಗ ಆ ದ್ರಾಕ್ಷಾಬಳ್ಳಿಯನ್ನು ಮರುಭೂಮಿಯಲ್ಲಿ ನೆಡಲ್ಪಟ್ಟಿರುತ್ತದೆ.
ಅದು ನೀರಿಲ್ಲದ ಬಂಜರು ಭೂಮಿ.
14 ಅದರ ಸ್ವಂತ ಕಾಂಡದಿಂದಲೇ ಬೆಂಕಿಯು ಹೊರಟುಬಂದು
ಅದರ ಚಿಕ್ಕ ಕೊಂಬೆಗಳನ್ನು ಮತ್ತು ಫಲಗಳನ್ನು ನಾಶಮಾಡಿತು.
ಈಗ ಬಲವಾದ ಕಾಂಡ ಅದರಲ್ಲಿಲ್ಲ.
ಆಳುವದಕ್ಕೆ ರಾಜದಂಡವೂ ಅದರಲ್ಲಿಲ್ಲ.’
ಇದು ಮರಣದ ಶೋಕಗೀತೆ. ಇದನ್ನು ಶೋಕಗೀತೆಯನ್ನಾಗಿಯೇ ಬಳಸಲಾಗುತ್ತಿದೆ.”
4 ಪ್ರಭುವಾದ ಯೇಸುವೇ ಜೀವವುಳ್ಳ “ಕಲ್ಲು.” ಈ ಲೋಕದ ಜನರು ತಮಗೆ ಆ “ಕಲ್ಲು” (ಯೇಸು) ಬೇಡವೆಂದು ತೀರ್ಮಾನಿಸಿದರು. ಆದರೆ ಆತನು ದೇವರಿಂದ ಆರಿಸಲ್ಪಟ್ಟ “ಕಲ್ಲು.” ಆತನು ದೇವರಿಗೆ ಅಮೂಲ್ಯನಾಗಿದ್ದಾನೆ. ಆದ್ದರಿಂದ ಆತನ ಹತ್ತಿರಕ್ಕೆ ಬನ್ನಿರಿ. 5 ನೀವೂ ಸಹ ಜೀವವುಳ್ಳ ಕಲ್ಲುಗಳಾಗಿದ್ದೀರಿ. ಆತ್ಮಸಂಬಂಧವಾದ ದೇವಾಲಯವಾಗುವದಕ್ಕಾಗಿ ನೀವೇ ಕಟ್ಟಲ್ಪಡುತ್ತಿದ್ದೀರಿ; ದೇವರಿಂದ ಸ್ವೀಕೃತವಾಗುವಂಥ ಆತ್ಮಿಕ ಯಜ್ಞಗಳನ್ನು ಯೇಸು ಕ್ರಿಸ್ತನ ಮೂಲಕ ದೇವರಿಗೆ ಅರ್ಪಿಸುವ ಪವಿತ್ರ ಯಾಜಕರಾಗಿದ್ದೀರಿ. 6 ಪವಿತ್ರ ಗ್ರಂಥವು ಹೇಳುವುದೇನೆಂದರೆ,
“ನಾನು ಅಮೂಲ್ಯವಾದ ಮೂಲೆಗಲ್ಲನ್ನು ಆರಿಸಿದ್ದೇನೆ.
ನಾನು ಆ ಕಲ್ಲನ್ನು ಚಿಯೋನಿನಲ್ಲಿ ಇಟ್ಟಿರುವೆನು;
ಆತನನ್ನು ನಂಬುವವನು ಎಂದಿಗೂ ಆಶಾಭಂಗಪಡುವುದಿಲ್ಲ”(A)
7 ನಂಬಿಕೆಯುಳ್ಳ ಜನರಾದ ನಿಮಗೆ ಆ ಕಲ್ಲು (ಯೇಸು) ಹೆಚ್ಚು ಬೆಲೆಯುಳ್ಳದ್ದು. ಆದರೆ ನಂಬದ ಜನರಿಗೆ ಆತನು ಇಂತೆಂದಿದ್ದಾನೆ:
“ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ
ಮೂಲೆಗಲ್ಲಾಯಿತು.”(B)
8 ನಂಬದಿರುವ ಜನರಿಗೆ ಆತನು:
“ಜನರನ್ನು ಮುಗ್ಗರಿಸುವ ಕಲ್ಲೂ
ಜನರನ್ನು ಬೀಳಿಸುವ ಕಲ್ಲೂ ಆಗಿದ್ದಾನೆ.”(C)
ದೇವರ ಮಾತಿಗೆ ಅವಿಧೇಯರಾಗುವುದರಿಂದಲೇ ಜನರು ಮುಗ್ಗರಿಸಿ ಬೀಳುವರು. ಆ ಜನರಿಗೆ ಹೀಗಾಗಬೇಕೆಂಬುದು ದೇವರ ಯೋಜನೆಯಾಗಿತ್ತು.
9 ನೀವಾದರೋ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನರೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ. ದೇವರು ತಾನು ಮಾಡಿದ ಅತ್ಯಾಶ್ಚರ್ಯ ಸಂಗತಿಗಳನ್ನು ತಿಳಿಸಲು ನಿಮ್ಮನ್ನು ಅಂಧಕಾರದಿಂದ (ಪಾಪಗಳಿಂದ) ತನ್ನ ಅದ್ಭುತವಾದ ಬೆಳಕಿಗೆ ಕರೆತಂದನು.
10 ಒಂದು ಕಾಲದಲ್ಲಿ, ನೀವು ದೇವರ ಜನರಾಗಿರಲಿಲ್ಲ.
ಆದರೆ ಈಗ ನೀವು ದೇವರ ಜನರಾಗಿದ್ದೀರಿ.
ಮೊದಲು ನೀವು ಕರುಣೆಯನ್ನು ಹೊಂದಿರಲಿಲ್ಲ.
ಆದರೆ ಈಗ ನೀವು ದೇವರ ಕರುಣೆಯನ್ನು ಹೊಂದಿಕೊಂಡಿದ್ದೀರಿ.[a]
Kannada Holy Bible: Easy-to-Read Version. All rights reserved. © 1997 Bible League International