Add parallel Print Page Options

ಯೇಸುವಿನ ಕುರಿತು ಹೆರೋದನ ಅಭಿಪ್ರಾಯ

(ಮತ್ತಾಯ 14:1-12; ಲೂಕ 9:7-9)

14 ಯೇಸು ಪ್ರಸಿದ್ಧನಾಗಿದ್ದುದರಿಂದ ರಾಜನಾದ ಹೆರೋದನಿಗೆ ಯೇಸುವಿನ ವಿಷಯ ತಿಳಿಯಿತು. ಕೆಲವು ಜನರು, “ಇವನು (ಯೇಸು) ಸ್ನಾನಿಕನಾದ ಯೋಹಾನ. ಇವನು ಮತ್ತೆ ಬದುಕಿಬಂದಿದ್ದಾನೆ. ಆದಕಾರಣವೇ ಈ ಅದ್ಭುತಕಾರ್ಯಗಳನ್ನು ಮಾಡಲು ಶಕ್ತನಾಗಿದ್ದಾನೆ” ಎಂದು ಹೇಳಿದರು.

15 ಇನ್ನು ಕೆಲವರು, “ಇವನು ಎಲೀಯ”ನೆಂದು ಹೇಳಿದರು.

ಇತರ ಜನರು, “ಯೇಸು ಒಬ್ಬ ಪ್ರವಾದಿ. ಬಹುಕಾಲದ ಹಿಂದೆ ಜೀವಿಸಿದ್ದ ಪ್ರವಾದಿಗಳಂತೆ ಇವನೂ ಒಬ್ಬನು” ಎಂದು ಹೇಳಿದರು.

16 ಜನರು ಯೇಸುವಿನ ಬಗ್ಗೆ ಹೇಳುತ್ತಿದ್ದ ಈ ಮಾತುಗಳನ್ನೆಲ್ಲಾ ಕೇಳಿದ ಹೆರೋದನು, “ನಾನು ಶಿರಚ್ಛೇದನ ಮಾಡಿಸಿದ ಯೋಹಾನನು ಈಗ ಮತ್ತೆ ಬದುಕಿಬಂದಿದ್ದಾನೆ!” ಎಂದು ಹೇಳಿದನು.

ಸ್ನಾನಿಕ ಯೋಹಾನನು ಕೊಲ್ಲಲ್ಪಟ್ಟದ್ದರ ಬಗ್ಗೆ

17 ಯೋಹಾನನನ್ನು ಬಂಧಿಸಲು ತನ್ನ ಸೈನಿಕರಿಗೆ ಹೆರೋದನೇ ಆಜ್ಞಾಪಿಸಿದ್ದನು. ಅಂತೆಯೇ ಅವರು ಯೋಹಾನನನ್ನು ಸೆರೆಯಲ್ಲಿ ಹಾಕಿದ್ದರು. ಹೆರೋದನು ತನ್ನ ಪತ್ನಿಯಾಗಿ ಇಟ್ಟುಕೊಂಡಿದ್ದ ಹೆರೋದ್ಯಳ ನಿಮಿತ್ತ ಹೀಗೆ ಮಾಡಿದ್ದನು. ಹೆರೋದ್ಯಳು ಹೆರೋದನ ಸಹೋದರನಾದ ಫಿಲಿಪ್ಪನ ಪತ್ನಿ. 18 ಯೋಹಾನನು ಹೆರೋದನಿಗೆ, “ನೀನು ನಿನ್ನ ಅಣ್ಣನ ಪತ್ನಿಯನ್ನು ಇಟ್ಟುಕೊಂಡಿರುವುದು ಸರಿಯಲ್ಲ” ಎಂದು ಹೇಳುತ್ತಿದ್ದನು. 19 ಆದ್ದರಿಂದ ಹೆರೋದ್ಯಳು ಯೋಹಾನನನ್ನು ದ್ವೇಷಿಸಲಾರಂಭಿಸಿ ಅವನನ್ನು ಕೊಲ್ಲಿಸಬೇಕೆಂದಿದ್ದಳು. 20 ಆದರೆ ಆಕೆಗೆ ಸಾಧ್ಯವಾಗಲಿಲ್ಲ. ಹೆರೋದನು ಯೋಹಾನನನ್ನು ಕೊಲ್ಲಿಸಲು ಭಯಪಟ್ಟನು. ಯೋಹಾನನನ್ನು ಒಳ್ಳೆಯವನೆಂದೂ ಪವಿತ್ರನೆಂದೂ ಜನರೆಲ್ಲರು ನಂಬಿದ್ದಾರೆಂಬುದು ಹೆರೋದನಿಗೆ ತಿಳಿದಿತ್ತು. ಆದ್ದರಿಂದ ಹೆರೋದನು ಯೋಹಾನನನ್ನು ರಕ್ಷಿಸಿದನು. ಹೆರೋದನು ಯೋಹಾನನ ಉಪದೇಶವನ್ನು ಕೇಳಿದಾಗಲೆಲ್ಲಾ ಗಲಿಬಿಲಿಗೊಳ್ಳುತ್ತಿದ್ದನು. ಆದರೂ ಅವನ ಉಪದೇಶವನ್ನು ಸಂತೋಷದಿಂದ ಕೇಳುತ್ತಿದ್ದನು.

21 ಒಮ್ಮೆ ಯೋಹಾನನನ್ನು ಮರಣಕ್ಕೆ ಈಡುಮಾಡುವ ಸುಸಮಯ ಹೆರೋದ್ಯಳಿಗೆ ದೊರೆಯಿತು. ಅಂದು ಹೆರೋದನ ಹುಟ್ಟುಹಬ್ಬದ ದಿನವಾಗಿತ್ತು. ಹೆರೋದನು ರಾಜಾಧಿಕಾರಿಗಳಿಗೂ ಸೇನಾಧಿಪತಿಗಳಿಗೂ ಮತ್ತು ಗಲಿಲಾಯದ ಪ್ರಮುಖರಿಗೂ ಒಂದು ಔತಣಕೂಟವನ್ನು ಏರ್ಪಡಿಸಿದನು. 22 ಹೆರೋದ್ಯಳ ಮಗಳು ಈ ಔತಣಕೂಟಕ್ಕೆ ಬಂದು ನರ್ತಿಸಿದಳು. ಹೆರೋದನಿಗೂ ಮತ್ತು ಅವನ ಜೊತೆಯಲ್ಲಿ ಊಟಮಾಡುತ್ತಿದ್ದವರಿಗೂ ಬಹಳ ಸಂತೋಷವಾಯಿತು.

ಆಗ ರಾಜ ಹೆರೋದನು ಆ ಹುಡುಗಿಗೆ, “ನಿನಗೆ ಏನು ಬೇಕಾದರೂ ಕೇಳಿಕೊ, ನಾನು ನಿನಗೆ ಕೊಡುತ್ತೇನೆ. 23 ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿಕೊಂಡರೂ ಕೊಡುತ್ತೇನೆ” ಎಂದು ಪ್ರಮಾಣಮಾಡಿದನು.

24 ಆ ಹುಡುಗಿಯು ತನ್ನ ತಾಯಿಯ ಬಳಿಗೆ ಹೋಗಿ, “ನಾನು ಏನ್ನನ್ನು ಕೇಳಿಕೊಳ್ಳಲಿ?” ಎಂದು ಕೇಳಿದಳು.

ಅವಳ ತಾಯಿ, “ಸ್ನಾನಿಕ ಯೋಹಾನನ ತಲೆಯನ್ನು ಕೇಳಿಕೊ” ಎಂದು ಹೇಳಿಕೊಟ್ಟಳು.

25 ಆ ಹುಡುಗಿ ಬೇಗನೆ ರಾಜನ ಬಳಿಗೆ ಬಂದು, “ಸ್ನಾನಿಕ ಯೋಹಾನನ ತಲೆಯನ್ನು ಒಂದು ತಟ್ಟೆಯಲ್ಲಿ ಈಗಲೇ ತರಿಸಿಕೊಡಿ, ಇದೇ ನನ್ನ ಬೇಡಿಕೆ” ಎಂದು ಹೇಳಿದಳು.

26 ರಾಜ ಹೆರೋದನು ಬಹಳ ವ್ಯಸನಗೊಂಡನು. ಆದರೆ ಅವನು ಆ ಹುಡುಗಿಗೆ ಏನು ಬೇಕಾದರೂ ಕೊಡುವೆನೆಂದು ಪ್ರಮಾಣ ಮಾಡಿದ್ದನು. ಅಲ್ಲಿ ಹೆರೋದನ ಸಂಗಡ ಊಟಮಾಡುತ್ತಿದ್ದ ಜನರು ಆ ಪ್ರಮಾಣವನ್ನು ಕೇಳಿಸಿಕೊಂಡಿದ್ದರು. ಆದ್ದರಿಂದ ಅವಳು ಕೇಳಿದ್ದನ್ನು ನಿರಾಕರಿಸಲು ಹೆರೋದನು ಇಚ್ಛಿಸಲಿಲ್ಲ. 27 ಆದ್ದರಿಂದ ರಾಜನು ಯೋಹಾನನ ತಲೆಯನ್ನು ಕತ್ತರಿಸಿ ತರಲು ಒಬ್ಬ ಸೈನಿಕನನ್ನು ಕಳುಹಿಸಿದನು. ಸೈನಿಕನು ಸೆರೆಮನೆಗೆ ಹೋಗಿ ಯೋಹಾನನ ತಲೆಯನ್ನು ಕತ್ತರಿಸಿ, 28 ಅದನ್ನು ಒಂದು ತಟ್ಟೆಯ ಮೇಲಿಟ್ಟು ತಂದು ಆ ಹುಡುಗಿಗೆ ಕೊಟ್ಟನು. ಅವಳು ಆ ತಲೆಯನ್ನು ತನ್ನ ತಾಯಿಗೆ ಕೊಟ್ಟಳು. 29 ನಡೆದ ಈ ಸಂಗತಿಯು ಯೋಹಾನನ ಶಿಷ್ಯರಿಗೆ ತಿಳಿಯಿತು. ಅವರು ಬಂದು, ಯೋಹಾನನ ದೇಹವನ್ನು ತೆಗೆದುಕೊಂಡು ಹೋಗಿ ಒಂದು ಸಮಾಧಿಯಲ್ಲಿಟ್ಟರು.

Read full chapter