Add parallel Print Page Options

ಯೇಸುವನ್ನು ಹಿಂಬಾಲಿಸಲು ಹಿಂಜರಿದ ಶ್ರೀಮಂತ

(ಮತ್ತಾಯ 19:16-30; ಲೂಕ 18:18-30)

17 ಯೇಸು ಅಲ್ಲಿಂದ ಹೊರಡಬೇಕೆಂದಿದ್ದಾಗ ಒಬ್ಬನು ಓಡಿಬಂದು, ಆತನ ಮುಂದೆ ತನ್ನ ಮೊಣಕಾಲೂರಿ, “ಒಳ್ಳೆಯ ಉಪದೇಶಕನೇ, ನಿತ್ಯಜೀವವನ್ನು ಪಡೆಯಲು ನಾನು ಏನು ಮಾಡಬೇಕು?” ಎಂದು ಕೇಳಿದನು.

18 ಯೇಸು ಅದಕ್ಕೆ, “ನೀನು ನನ್ನನ್ನು ಒಳ್ಳೆಯವನೆಂದು ಕರೆಯುವುದೇಕೆ? ಯಾವ ಮನುಷ್ಯನೂ ಒಳ್ಳೆಯವನಲ್ಲ. ದೇವರು ಮಾತ್ರ ಒಳ್ಳೆಯವನು. 19 ನೀನು ನಿತ್ಯಜೀವ ಹೊಂದಬೇಕಾದರೆ ನಿನಗೆ ತಿಳಿದೇ ಇರುವ ಈ ಆಜ್ಞೆಗಳನ್ನು ಪಾಲಿಸು: ‘ಕೊಲೆ ಮಾಡಬೇಡ, ವ್ಯಭಿಚಾರ ಮಾಡಬೇಡ, ಕದಿಯಬೇಡ, ಸುಳ್ಳು ಹೇಳಬೇಡ, ಮೋಸ ಮಾಡಬೇಡ, ಅಲ್ಲದೆ ನಿನ್ನ ತಂದೆತಾಯಿಯರನ್ನು ಸನ್ಮಾನಿಸು’” ಎಂದು ಉತ್ತರಿಸಿದನು.

20 ಅವನು, “ಉಪದೇಶಕನೇ, ನಾನು ಬಾಲ್ಯದಿಂದಲೂ ಈ ಆಜ್ಞೆಗಳಿಗೆಲ್ಲಾ ವಿಧೇಯನಾಗಿದ್ದೇನೆ” ಎಂದನು.

21 ಯೇಸು ಆ ಮನುಷ್ಯನನ್ನು ಪ್ರೀತಿಯಿಂದ ದೃಷ್ಟಿಸಿನೋಡಿ, “ನೀನು ಮಾಡಬೇಕಾದ ಕಾರ್ಯವೊಂದಿದೆ. ಹೋಗಿ, ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ಬಡವರಿಗೆ ಕೊಡು. ನಿನಗೆ ಪರಲೋಕದಲ್ಲಿ ಪ್ರತಿಫಲ ಇರುವುದು. ನಂತರ ಬಂದು, ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.

22 ಯೇಸುವಿನ ಈ ಮಾತನ್ನು ಕೇಳಿ ಅವನು ನಿರಾಶೆಯಿಂದ ದುಃಖಗೊಂಡು ಹೊರಟುಹೋದನು. ಬಹಳ ಧನವಂತನಾಗಿದ್ದ ಅವನು ತನ್ನ ಅಪಾರ ಆಸ್ತಿಯನ್ನು ಮಾರಲು ಇಷ್ಟಪಡಲಿಲ್ಲ.

23 ಬಳಿಕ ಯೇಸು ತನ್ನ ಶಿಷ್ಯರ ಕಡೆಗೆ ನೋಡಿ, “ಧನವಂತನು ದೇವರ ರಾಜ್ಯವನ್ನು ಪ್ರವೇಶಿಸುವುದು ಬಹಳ ಕಷ್ಟ” ಎಂದನು.

24 ಯೇಸುವಿನ ಈ ಮಾತನ್ನು ಕೇಳಿ ಶಿಷ್ಯರು ಬೆರಗಾದರು. ಆದರೆ ಯೇಸು ಮತ್ತೆ, “ನನ್ನ ಮಕ್ಕಳೇ, ದೇವರ ರಾಜ್ಯವನ್ನು ಪ್ರವೇಶಿಸುವುದು ಬಹಳ ಕಷ್ಟ! 25 ಶ್ರೀಮಂತರು ದೇವರ ರಾಜ್ಯವನ್ನು ಪ್ರವೇಶಿಸುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನ ಮೂಲಕ ನುಸುಳಿ ಹೋಗುವುದು ಸುಲಭ!” ಎಂದನು.

26 ಶಿಷ್ಯರು ಇನ್ನೂ ಬೆರಗಾಗಿ, ಒಬ್ಬರಿಗೊಬ್ಬರು, “ಹಾಗಾದರೆ ರಕ್ಷಣೆಹೊಂದಲು ಯಾರಿಗೆ ಸಾಧ್ಯ?” ಎಂದು ಮಾತಾಡಿಕೊಂಡರು.

27 ಯೇಸು ಶಿಷ್ಯರ ಕಡೆಗೆ ನೋಡಿ, “ಇದು ಮನುಷ್ಯರಿಗಷ್ಟೇ ಅಸಾಧ್ಯ, ದೇವರಿಗಲ್ಲ” ಎಂದನು.

28 ಪೇತ್ರನು ಯೇಸುವಿಗೆ, “ನಿನ್ನನ್ನು ಹಿಂಬಾಲಿಸಲು ನಾವು ಎಲ್ಲವನ್ನೂ ತ್ಯಜಿಸಿದೆವು!” ಎಂದನು.

29 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನಗಾಗಿ ಮತ್ತು ಸುವಾರ್ತೆಗಾಗಿ ತನ್ನ ಮನೆಯನ್ನಾಗಲಿ ಸಹೋದರರನ್ನಾಗಲಿ ಸಹೋದರಿಯರನ್ನಾಗಲಿ ತಾಯಿಯನ್ನಾಗಲಿ ತಂದೆಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ತ್ಯಜಿಸಿದ ಪ್ರತಿಯೊಬ್ಬ ವ್ಯಕ್ತಿಯೂ 30 ನೂರರಷ್ಟು ಹೆಚ್ಚಾಗಿ ಪಡೆಯುತ್ತಾನೆ. ಈ ಪ್ರಪಂಚದಲ್ಲಿ ಅವನು ಅನೇಕ ಮನೆಗಳನ್ನು, ಸಹೋದರರನ್ನು, ಸಹೋದರಿಯರನ್ನು, ತಾಯಂದಿರನ್ನು, ಮಕ್ಕಳನ್ನು ಮತ್ತು ಭೂಮಿಯನ್ನು ಹಿಂಸೆಗಳೊಂದಿಗೆ ಪಡೆದುಕೊಳ್ಳುವನು. ಅಲ್ಲದೆ ಬರಲಿರುವ ಲೋಕದಲ್ಲಿ ಅವನು ನಿತ್ಯಜೀವವನ್ನೂ ಹೊಂದಿಕೊಳ್ಳುವನು. 31 ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು” ಎಂದು ಹೇಳಿದನು.

Read full chapter