Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಯೆಹೆಜ್ಕೇಲ 18:1-4

ನೀತಿಯ ನ್ಯಾಯತೀರ್ಪು

18 ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ, “ಇಸ್ರೇಲ್ ದೇಶದ ಕುರಿತಾದ ಈ ಗಾದೆಯನ್ನು ನೀವೆಲ್ಲರೂ ಮರುನುಡಿಯುವುದೇಕೆ?

‘ಹೆತ್ತವರು ಹುಳಿ ದ್ರಾಕ್ಷಿಹಣ್ಣನ್ನು ತಿಂದಾಗ
    ಮಕ್ಕಳ ಬಾಯಿ ಹುಳಿಯಾಗುವುದು.’[a]

ಆದರೆ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲಿನ ಜನರು ಇನ್ನು ಮುಂದಕ್ಕೆ ಈ ಗಾದೆಯು ಸತ್ಯವೆಂದು ನೆನಸುವದಿಲ್ಲ. ಎಲ್ಲಾ ಪ್ರಾಣಗಳು ನನ್ನವೇ. ತಂದೆಯ ಪ್ರಾಣವೂ ಮಗನ ಪ್ರಾಣವೂ ನನ್ನವೇ. ಪಾಪಮಾಡುವವನು ಮಾತ್ರ ಸಾಯುವನು.

ಯೆಹೆಜ್ಕೇಲ 18:25-32

25 ದೇವರು ಹೇಳಿದ್ದೇನೆಂದರೆ: “ಒಂದುವೇಳೆ ನೀವು ಹೇಳಬಹುದು: ‘ನನ್ನ ಒಡೆಯನಾದ ದೇವರ ಕ್ರಮವು ದೃಢವಾಗಿಲ್ಲ.’ ಆದರೆ, ಇಸ್ರೇಲಿನ ಜನರೇ, ಕೇಳಿರಿ. ನಿಮ್ಮ ನಡತೆಯೇ ದೃಢವಾಗಿಲ್ಲ. 26 ಒಬ್ಬ ಒಳ್ಳೆಯವನು ಬದಲಾವಣೆ ಹೊಂದಿ ಕೆಟ್ಟಕಾರ್ಯಗಳನ್ನು ಮಾಡಿದರೆ, ಅವನ ದುಷ್ಟತ್ವಕ್ಕಾಗಿ ಅವನು ಸಾಯಲೇಬೇಕು. 27 ಆದರೆ ಒಬ್ಬ ಪಾಪಿ ಬದಲಾವಣೆ ಹೊಂದಿ ನೀತಿವಂತನಾಗಿ ಬಾಳಿದರೆ ಅವನು ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು. 28 ತಾನು ಎಷ್ಟು ಕೆಟ್ಟವನಾಗಿ ಜೀವಿಸಿದನೆಂದು ತಿಳಿದು ನನ್ನ ಕಡೆಗೆ ತಿರುಗಿ ದುಷ್ಟತನ ಮಾಡುವದನ್ನು ನಿಲ್ಲಿಸಿದರೆ. ಅಂಥವನು ಸಾಯದೆ, ಬಾಳುವನು.”

29 ಆದರೆ ಇಸ್ರೇಲ್ ಜನರು, “ಅದು ಸರಿಯಲ್ಲ. ನನ್ನ ಒಡೆಯನಾದ ಯೆಹೋವನ ಕ್ರಮವು ದೃಢವಲ್ಲ” ಎಂದರು.

ಆಗ ದೇವರು, “ನಾನು ದೃಢವಾಗಿದ್ದೇನೆ. ನಿಮ್ಮ ನಡತೆಯೇ ದೃಢವಾಗಿಲ್ಲ. 30 ಇಸ್ರೇಲರೇ, ನಾನು ಪ್ರತಿಯೊಬ್ಬನನ್ನು ಅವನವನ ಕಾರ್ಯಗಳ ಪ್ರಕಾರ ನ್ಯಾಯತೀರಿಸುವೆನು” ಎಂದು ಹೇಳಿದನು. ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಆದ್ದರಿಂದ ನನ್ನ ಬಳಿಗೆ ಬನ್ನಿರಿ, ದುಷ್ಟತನ ಮಾಡುವದನ್ನು ನಿಲ್ಲಿಸಿರಿ, ಪಾಪವು ನಿಮ್ಮ ನಾಶನಕ್ಕೆ ಕಾರಣವಾಗದಂತೆ ಎಚ್ಚರಿಕೆಯಾಗಿರಿ. 31 ನಿಮ್ಮ ದಂಗೆಕೋರತನದ ಮಾರ್ಗಗಳನ್ನೆಲ್ಲ ತೊರೆದುಬಿಟ್ಟು ನಿಮ್ಮ ಹೃದಯವನ್ನೂ ಸ್ವಭಾವವನ್ನೂ ನೂತನ ಮಾಡಿಕೊಳ್ಳಿರಿ. ಇಸ್ರೇಲ್ ಜನರೇ, ನೀವು ಮರಣವನ್ನು ಬರಮಾಡಿಕೊಳ್ಳುವುದೇಕೆ? 32 ನಿಮ್ಮನ್ನು ಸಾಯಿಸಲು ನನಗೆ ಇಷ್ಟವಿಲ್ಲ. ನೀವು ನನ್ನ ಕಡೆಗೆ ಹಿಂದಿರುಗಿ ಜೀವಿಸಿರಿ.” ಇದು ನನ್ನ ಒಡೆಯನಾದ ಯೆಹೋವನ ನುಡಿ.

ಕೀರ್ತನೆಗಳು 25:1-9

ರಚನೆಗಾರ: ದಾವೀದ.

25 ಯೆಹೋವನೇ, ನಿನ್ನಲ್ಲೇ ಮನಸ್ಸಿಟ್ಟಿದ್ದೇನೆ.
ನನ್ನ ದೇವರೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ.
    ನನ್ನನ್ನು ನಿರಾಶೆಗೊಳಿಸಬೇಡ.
    ವೈರಿಗಳು ನನ್ನನ್ನು ನೋಡಿ ಗೇಲಿ ಮಾಡದಂತಾಗಲಿ!
ನಿನ್ನಲ್ಲಿ ಭರವಸವಿಟ್ಟಿರುವವರು ನಿರಾಶರಾಗುವುದಿಲ್ಲ
    ದ್ರೋಹಿಗಳಾದರೋ ನಿರಾಶರಾಗುವರು.
    ಅವರಿಗೆ ಏನೂ ದೊರೆಯುವುದಿಲ್ಲ.

ಯೆಹೋವನೇ ನಿನ್ನ ಮಾರ್ಗಗಳನ್ನು ನನಗೆ ತಿಳಿಸು.
    ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು.
ನನಗೆ ಮಾರ್ಗದರ್ಶನ ನೀಡು; ನಿನ್ನ ಸತ್ಯಗಳನ್ನು ನನಗೆ ಉಪದೇಶಿಸು.
    ನೀನೇ ನನ್ನ ದೇವರು, ನೀನೇ ನನ್ನ ರಕ್ಷಕ.
    ಹಗಲೆಲ್ಲಾ ನಿನ್ನಲ್ಲಿ ಭರವಸವಿಟ್ಟಿರುವೆ.
ಯೆಹೋವನೇ, ನನಗೆ ಕರುಣೆ ತೋರಬೇಕೆಂಬುದನ್ನು ಜ್ಞಾಪಿಸಿಕೊ.
    ನಿನ್ನ ಶಾಶ್ವತವಾದ ಪ್ರೀತಿಯನ್ನು ನನಗೆ ತೋರಿಸು.
ನಾನು ಯೌವನಸ್ಥನಾಗಿದ್ದಾಗ ಮಾಡಿದ ಪಾಪಗಳನ್ನಾಗಲಿ ಕೆಟ್ಟಕಾರ್ಯಗಳನ್ನಾಗಲಿ ಜ್ಞಾಪಿಸಿಕೊಳ್ಳಬೇಡ.
    ಯೆಹೋವನೇ, ನಿನ್ನ ಒಳ್ಳೆಯ ಹೆಸರಿನ ನಿಮಿತ್ತ ನನ್ನನ್ನು ಪ್ರೀತಿಯಿಂದ ಜ್ಞಾಪಿಸಿಕೊ.

ಯೆಹೋವನು ಒಳ್ಳೆಯವನೂ ಸತ್ಯಸ್ವರೂಪನೂ ಆಗಿದ್ದಾನೆ.
    ಆತನು ಪಾಪಿಗಳಿಗೆ ಜೀವಮಾರ್ಗವನ್ನು ಬೋಧಿಸುವನು.
ಆತನು ದೀನರಿಗೆ ತನ್ನ ಮಾರ್ಗಗಳನ್ನು ಉಪದೇಶಿಸುವನು.
    ಆತನು ಅವರನ್ನು ತನ್ನ ನ್ಯಾಯಾನುಸಾರವಾಗಿ ನಡೆಸುವನು.

ಫಿಲಿಪ್ಪಿಯವರಿಗೆ 2:1-13

ಐಕ್ಯಮತದಿಂದಿದ್ದು ಒಬ್ಬರನ್ನೊಬ್ಬರು ಪರಾಂಬರಿಸಿರಿ

ನಿಮ್ಮಲ್ಲಿ ಕ್ರಿಸ್ತನಿಂದಾದ ಉತ್ತೇಜನ, ಪ್ರೀತಿಯ ಪ್ರೇರಣೆ, ಪವಿತ್ರಾತ್ಮನ ಅನ್ಯೋನ್ಯತೆ, ಕಾರುಣ್ಯ ದಯಾರಸಗಳು ಇವೆಯೋ? ನಿಮ್ಮಲ್ಲಿ ಇವುಗಳು ಇರುವುದಾದರೆ, ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ. ಆಗ ನನ್ನ ಸಂತೋಷವು ಪರಿಪೂರ್ಣವಾಗುವುದು. ಒಬ್ಬರಿಗೊಬ್ಬರು ಒಂದೇ ಪ್ರೀತಿ ಉಳ್ಳವರಾಗಿರಿ. ಅನ್ಯೋನ್ಯಭಾವವುಳ್ಳವರಾಗಿದ್ದು ಒಂದೇ ಗುರಿಯಿಂದ ಜೀವಿಸಿರಿ. ನೀವು ಯಾವುದನ್ನೇ ಮಾಡುವಾಗ, ಸ್ವಾರ್ಥವಾಗಲಿ ಅಹಂಕಾರವಾಗಲಿ ನಿಮಗೆ ಮಾರ್ಗದರ್ಶಕವಾಗದಂತೆ ನೋಡಿಕೊಳ್ಳಿರಿ. ದೀನಭಾವವುಳ್ಳವರಾಗಿದ್ದು ನಿಮಗಿಂತಲೂ ಹೆಚ್ಚಾಗಿ ಬೇರೆಯವರಿಗೆ ಗೌರವವನ್ನು ಕೊಡಿರಿ. ನಿಮ್ಮ ಅಭಿಲಾಷೆಗಳ ಬಗ್ಗೆ ಮಾತ್ರ ಚಿಂತಿಸದೆ ಇತರರ ಜೀವಿತದ ಬಗ್ಗೆಯೂ ಚಿಂತಿಸಿರಿ.

ನಿಸ್ವಾರ್ಥರಾಗಿರುವುದನ್ನು ಕ್ರಿಸ್ತನಿಂದ ಕಲಿತುಕೊಳ್ಳಿರಿ

ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ.

ಆತನು ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮನಾಗಿದ್ದರೂ
    ಆ ಪದವಿಯನ್ನು ಬಿಡಲಾರೆ ಎನ್ನಲಿಲ್ಲ.
ಆ ಪದವಿಯನ್ನು ಆತನು ಬಿಟ್ಟುಕೊಟ್ಟು
    ಸೇವಕನ ಸ್ವಭಾವವನ್ನು ಧರಿಸಿಕೊಂಡು ಮಾನವ ರೂಪದಲ್ಲಿ ಬಂದನು.
ಆತನು ಮನುಷ್ಯನಾಗಿ ಜೀವಿಸುತ್ತಿದ್ದಾಗ
    ತನ್ನನ್ನು ತಗ್ಗಿಸಿಕೊಂಡು ಮರಣವನ್ನೂ ಕಡೆಗಣಿಸಿ ದೇವರಿಗೆ ಸಂಪೂರ್ಣ ವಿಧೇಯನಾಗಿ,
    ಶಿಲುಬೆಯ ಮೇಲೆ ಪ್ರಾಣವನ್ನೇ ಕೊಟ್ಟನು.
ಆದ್ದರಿಂದ ದೇವರು ಆತನನ್ನು ಅತ್ಯುನ್ನತವಾದ ಸ್ಥಾನಕ್ಕೇರಿಸಿ
    ಉಳಿದೆಲ್ಲ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.
10 ಆದ್ದರಿಂದ ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಪಾತಾಳದಲ್ಲಿಯೂ ಇರುವ ಪ್ರತಿಯೊಬ್ಬರು
    ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು,
11 “ಯೇಸು ಕ್ರಿಸ್ತನೇ ಪ್ರಭು”ವೆಂದು ಹೇಳುವರು.
    ಇದರಿಂದ ತಂದೆಯಾದ ದೇವರಿಗೆ ಮಹಿಮೆ ಉಂಟಾಗುವುದು.

ದೇವರ ಇಷ್ಟಕ್ಕನುಸಾರವಾದ ಜನರಾಗಿರಿ

12 ನನ್ನ ಪ್ರಿಯ ಸ್ನೇಹಿತರೇ, ನಾನು ನಿಮ್ಮಲ್ಲಿದ್ದಾಗ ನೀವು ಯಾವಾಗಲೂ ನನ್ನ ಮಾತಿನಂತೆ ನಡೆದುಕೊಂಡಿರಿ. ಈಗ ನಾನು ದೂರವಿರುವಾಗಲೂ ಇನ್ನೂ ಹೆಚ್ಚಿನ ಆಸಕ್ತಿಯಿಂದ ನಡೆದುಕೊಳ್ಳಿರಿ. ನೀವು ದೇವರಿಗೆ ಭಯಭಕ್ತಿಯಿಂದಿದ್ದು ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ. 13 ಹೌದು, ಆತನಿಗೆ ಮೆಚ್ಚಿಕೆಕರವಾದ ಕಾರ್ಯಗಳನ್ನು ಮಾಡಬೇಕೆಂಬ ಅಪೇಕ್ಷೆಯನ್ನು ಆತನೇ ನಿಮ್ಮಲ್ಲಿ ಹುಟ್ಟಿಸುತ್ತಾನೆ ಅಲ್ಲದೆ ಅವುಗಳನ್ನು ಮಾಡಲು ಆತನೇ ನಿಮಗೆ ಶಕ್ತಿಯನ್ನು ಕೊಡುತ್ತಾನೆ.

ಮತ್ತಾಯ 21:23-32

ಯೇಸುವಿನ ಅಧಿಕಾರದ ಬಗ್ಗೆ ಯೆಹೂದ್ಯನಾಯಕರ ಸಂದೇಹ

(ಮಾರ್ಕ 11:27-33; ಲೂಕ 20:1-8)

23 ಯೇಸು ದೇವಾಲಯಕ್ಕೆ ಹೋದನು. ಯೇಸು ಅಲ್ಲಿ ಉಪದೇಶಿಸುತ್ತಿದ್ದಾಗ, ಮಹಾಯಾಜಕರು ಮತ್ತು ಜನರ ಹಿರಿಯ ನಾಯಕರು ಯೇಸುವಿನ ಬಳಿಗೆ ಬಂದರು. ಅವರು ಯೇಸುವಿಗೆ, “ನೀನು ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು? ನಮಗೆ ತಿಳಿಸು!” ಎಂದರು.

24 ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನಗೆ ಉತ್ತರ ಕೊಟ್ಟರೆ, ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆಂದು ನಿಮಗೆ ತಿಳಿಸುತ್ತೇನೆ. 25 ದೀಕ್ಷಾಸ್ನಾನ ಕೊಡುವ ಅಧಿಕಾರ ಯೋಹಾನನಿಗೆ ದೇವರಿಂದ ಬಂದಿತೋ ಇಲ್ಲವೆ ಮನುಷ್ಯನಿಂದ ಬಂದಿತೋ? ನನಗೆ ಹೇಳಿ!” ಎಂದು ಉತ್ತರ ಕೊಟ್ಟನು.

ಯಾಜಕರು ಮತ್ತು ಯೆಹೂದ್ಯ ನಾಯಕರು ಯೇಸುವಿನ ಪ್ರಶ್ನೆಯನ್ನು ಕುರಿತು ತಮ್ಮೊಳಗೆ, “‘ಯೋಹಾನನು ಕೊಟ್ಟ ದೀಕ್ಷಾಸ್ನಾನವು ದೇವರಿಂದ ಬಂದಿತು’ ಎಂದರೆ, ‘ಹಾಗಾದರೆ ಯೋಹಾನನನ್ನು ನೀವು ಏಕೆ ನಂಬಲಿಲ್ಲ?’ ಎಂದು ಕೇಳುವನು. 26 ‘ಅದು ಮನುಷ್ಯನಿಂದ ಬಂದಿತು’ ಎಂದರೆ ಜನರೆಲ್ಲರೂ ನಮ್ಮ ಮೇಲೆ ಕೋಪಗೊಳ್ಳುವರು. ಅವರೆಲ್ಲರೂ ಯೋಹಾನನನ್ನು ಒಬ್ಬ ಪ್ರವಾದಿ ಎಂದು ನಂಬಿರುವುದರಿಂದ ನಾವು ಅವರಿಗೆ ಹೆದರಬೇಕಾಗಿದೆ” ಎಂದು ಮಾತಾಡಿಕೊಂಡರು.

27 ಬಳಿಕ ಅವರು, “ಯೋಹಾನನಿಗೆ ಎಲ್ಲಿಂದ ಅಧಿಕಾರ ಬಂದಿತೋ ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು.

ಆಗ ಯೇಸು, “ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆ ಎಂಬುದನ್ನು ನಾನು ಸಹ ನಿಮಗೆ ಹೇಳುವುದಿಲ್ಲ” ಎಂದನು.

ಇಬ್ಬರು ಗಂಡುಮಕ್ಕಳನ್ನು ಕುರಿತು ಯೇಸು ಹೇಳಿದ ಸಾಮ್ಯ

28 “ಒಬ್ಬ ಮನುಷ್ಯನಿಗೆ ಇಬ್ಬರು ಗಂಡುಮಕ್ಕಳಿದ್ದರು. ಆ ಮನುಷ್ಯನು ಮೊದಲನೆಯ ಮಗನ ಬಳಿಗೆ ಹೋಗಿ, ‘ಮಗನೇ ಈ ದಿನ ನೀನು ಹೋಗಿ, ನನ್ನ ದ್ರಾಕ್ಷಿತೋಟದಲ್ಲಿ ಕೆಲಸ ಮಾಡು’ ಎಂದು ಹೇಳಿದನು.

29 “ಅದಕ್ಕೆ ಮಗನು, ‘ನಾನು ಹೋಗುವುದಿಲ್ಲ’ ಎಂದನು. ಆದರೆ ಆ ಬಳಿಕ ತನ್ನ ಮನಸ್ಸನ್ನು ಬದಲಾಯಿಸಿಕೊಂಡು ಕೆಲಸಕ್ಕೆ ಹೋದನು.

30 “ತಂದೆಯು ಇನ್ನೊಬ್ಬ ಮಗನ ಬಳಿಗೆ ಹೋಗಿ, ‘ಮಗನೇ, ಈ ದಿನ ನೀನು ದ್ರಾಕ್ಷಿತೋಟಕ್ಕೆ ಹೋಗಿ ಕೆಲಸ ಮಾಡು’ ಎಂದನು. ಮಗನು, ‘ಆಗಲಿಯಪ್ಪಾ, ನಾನು ಹೋಗಿ ಕೆಲಸ ಮಾಡುತ್ತೇನೆ’ ಎಂದನು. ಆದರೆ ಆ ಮಗನು ಹೋಗಲೇ ಇಲ್ಲ.

31 “ಈ ಇಬ್ಬರು ಗಂಡುಮಕ್ಕಳಲ್ಲಿ ತಂದೆಗೆ ಯಾರು ವಿಧೇಯರಾದರು?”

ಆಗ ಯೆಹೂದ್ಯ ನಾಯಕರು, “ಮೊದಲನೆಯ ಮಗ” ಎಂದು ಉತ್ತರಕೊಟ್ಟರು.

ಯೇಸು ಅವರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸುಂಕವಸೂಲಿಗಾರರನ್ನು ಮತ್ತು ವೇಶ್ಯೆಯರನ್ನು ಕೆಟ್ಟಜನರೆಂದು ನೀವು ಅಂದುಕೊಂಡಿದ್ದೀರಿ. ಆದರೆ ಅವರು ನಿಮಗಿಂತ ಮುಂಚೆಯೇ ದೇವರ ರಾಜ್ಯಕ್ಕೆ ಪ್ರವೇಶಿಸುತ್ತಾರೆ. 32 ನೀವು ಜೀವಿಸತಕ್ಕ ಸರಿಯಾದ ಮಾರ್ಗವನ್ನು ತೋರಿಸಲು ಯೋಹಾನನು ಬಂದನು. ನೀವು ಯೋಹಾನನನ್ನು ನಂಬಲಿಲ್ಲ, ಆದರೆ ಸುಂಕವಸೂಲಿಗಾರರು ಮತ್ತು ವೇಶ್ಯೆಯರು ನಂಬಿದ್ದನ್ನು ನೀವು ನೋಡಿದ್ದೀರಿ. ಆದರೆ ನೀವಿನ್ನೂ ಬದಲಾವಣೆ ಹೊಂದಲು ಮತ್ತು ಅವನನ್ನು ನಂಬಲು ಇಷ್ಟಪಡುತ್ತಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International