Revised Common Lectionary (Complementary)
ರಚನೆಗಾರ: ದಾವೀದ.
103 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
ನನ್ನ ಸರ್ವಾಂಗಗಳೇ, ಆತನ ಪವಿತ್ರ ಹೆಸರನ್ನು ಕೊಂಡಾಡಿರಿ!
2 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ.
3 ಆತನು ನಮ್ಮ ಪಾಪಗಳನ್ನೆಲ್ಲಾ ಕ್ಷಮಿಸುವನು;
ನಮ್ಮ ಕಾಯಿಲೆಗಳನ್ನೆಲ್ಲಾ ವಾಸಿಮಾಡುವನು.
4 ಆತನು ನಮ್ಮ ಜೀವವನ್ನು ನಾಶನದಿಂದ ರಕ್ಷಿಸಿ
ನಮಗೆ ಪ್ರೀತಿಯನ್ನೂ ಕನಿಕರವನ್ನೂ ತೋರುವನು.
5 ಆತನು ನಮಗೆ ಸುವರಗಳನ್ನು ಹೇರಳವಾಗಿ ದಯಪಾಲಿಸುವನು.
ಹದ್ದಿಗೆ ಬರುವಂತೆಯೇ ನಮಗೆ ಯೌವನವನ್ನು ಬರಮಾಡುತ್ತಾನೆ.
6 ಯೆಹೋವನು ನೀತಿವಂತನಾಗಿದ್ದಾನೆ.
ಕುಗ್ಗಿಹೋದವರಿಗೆ ಆತನು ನ್ಯಾಯ ದೊರಕಿಸುವನು.
7 ಆತನು ತನ್ನ ಕಟ್ಟಳೆಗಳನ್ನು ಮೋಶೆಗೆ ಉಪದೇಶಿಸಿದನು;
ತನ್ನ ಮಹತ್ಕಾರ್ಯಗಳನ್ನು ಇಸ್ರೇಲರಿಗೆ ತೋರಿಸಿದನು.
8 ಯೆಹೋವನು ಕನಿಕರವುಳ್ಳವನೂ ಕೃಪಾಪೂರ್ಣನೂ
ತಾಳ್ಮೆಯುಳ್ಳವನೂ ಪ್ರೀತಿಪೂರ್ಣನೂ ಆಗಿದ್ದಾನೆ.
9 ಆತನು ಯಾವಾಗಲೂ ಟೀಕಿಸುವವನಲ್ಲ.
ಆತನು ನಮ್ಮ ಮೇಲೆ ನಿತ್ಯವೂ ಕೋಪವಾಗಿರುವವನಲ್ಲ.
10 ನಾವು ದೇವರಿಗೆ ವಿರೋಧವಾಗಿ ಪಾಪಮಾಡಿದೆವು.
ಆದರೂ ತಕ್ಕ ದಂಡನೆಯನ್ನು ಆತನು ನಮಗೆ ಕೊಡಲಿಲ್ಲ.
11 ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವಾಗಿದೆಯೋ
ಆತನ ಮಹಾಪ್ರೀತಿಯು ಆತನ ಭಕ್ತರ ಮೇಲೆ ಅಷ್ಟೇ ಅಪಾರವಾಗಿದೆ.
12 ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟೋ ದೂರವಿರುವಂತೆ
ನಮ್ಮ ಪಾಪಗಳನ್ನು ನಮ್ಮಿಂದ ತೆಗೆದು ದೂರ ಮಾಡಿದ್ದಾನೆ.
13 ತಂದೆಯು ಮಕ್ಕಳನ್ನು ಕನಿಕರಿಸುವಂತೆ
ಯೆಹೋವನು ತನ್ನ ಭಕ್ತರನ್ನು ಕನಿಕರಿಸುವನು.
ಯೋಸೇಫನು ತಾನು ಯಾರೆಂದು ಹೇಳುವನು
45 ಯೋಸೇಫನು ಇದನ್ನು ಕೇಳಿ ತನ್ನ ಎದುರಿನಲ್ಲಿದ್ದವರ ಮುಂದೆ ತಾಳಿಕೊಳ್ಳಲಾರದೆ, “ಇಲ್ಲಿರುವ ಎಲ್ಲರನ್ನೂ ಹೊರಗೆ ಕಳುಹಿಸಿರಿ” ಎಂದು ಅಪ್ಪಣೆಕೊಟ್ಟನು. ಅಲ್ಲಿದ್ದವರು ಹೊರಗೆ ಹೋದರು; ಸಹೋದರರು ಮಾತ್ರ ಯೋಸೇಫನೊಡನೆ ಇದ್ದರು. 2 ಆಮೇಲೆ ಯೋಸೇಫನು ಗಟ್ಟಿಯಾಗಿ ಅತ್ತನು. ಫರೋಹನ ಮನೆಯಲ್ಲಿದ್ದ ಈಜಿಪ್ಟಿನವರೆಲ್ಲ ಅದನ್ನು ಕೇಳಿಸಿಕೊಂಡರು. 3 ಯೋಸೇಫನು ತನ್ನ ಸಹೋದರರಿಗೆ, “ನಾನು ನಿಮ್ಮ ತಮ್ಮನಾದ ಯೋಸೇಫ. ನನ್ನ ತಂದೆ ಚೆನ್ನಾಗಿದ್ದಾನೆಯೇ?” ಎಂದು ಕೇಳಿದನು. ಆದರೆ ಸಹೋದರರು ಅವನಿಗೆ ಉತ್ತರಿಸಲಿಲ್ಲ. ಅವರಿಗೆ ಭಯವಾಗಿತ್ತು ಮತ್ತು ಗಲಿಬಿಲಿಗೊಂಡಿದ್ದರು.
4 ಯೋಸೇಫನು ಮತ್ತೆ ತನ್ನ ಸಹೋದರರಿಗೆ, “ನನ್ನ ಬಳಿಗೆ ಬನ್ನಿ. ನನ್ನ ಹತ್ತಿರ ಬನ್ನಿ ಎಂದು ಬೇಡಿಕೊಳ್ಳುತ್ತೇನೆ” ಎಂದು ಹೇಳಿದನು. ಆದ್ದರಿಂದ ಸಹೋದರರು ಯೋಸೇಫನ ಹತ್ತಿರ ಹೋದರು. ಯೋಸೇಫನು ಅವರಿಗೆ, “ನಾನು ನಿಮ್ಮ ತಮ್ಮನಾದ ಯೋಸೇಫ. ನೀವು ಈಜಿಪ್ಟಿನವರಿಗೆ ಯಾವನನ್ನು ಗುಲಾಮನನ್ನಾಗಿ ಮಾರಿದಿರೋ ಅವನೇ ನಾನು. 5 ಈಗ ಚಿಂತಿಸಬೇಡಿ, ನೀವು ಮಾಡಿದ್ದಕ್ಕೆ ದುಃಖವನ್ನೂ ಪಡಬೇಡಿ. ನಾನು ಇಲ್ಲಿಗೆ ಬರಬೇಕೆಂಬುದು ದೇವರ ಯೋಜನೆಯಾಗಿತ್ತು. ನಾನು ನಿಮ್ಮನ್ನು ರಕ್ಷಿಸಲು ಇಲ್ಲಿಗೆ ಬಂದಿದ್ದೇನೆ. 6 ಈ ಭೀಕರವಾದ ಬರಗಾಲವು ಆರಂಭವಾಗಿ ಈಗಾಗಲೇ ಎರಡು ವರ್ಷಗಳಾಯಿತು. ಇನ್ನೂ ಐದು ವರ್ಷಗಳವರೆಗೆ ಬಿತ್ತನೆ ಇರುವುದಿಲ್ಲ; ಸುಗ್ಗಿಯೂ ಇರುವುದಿಲ್ಲ. 7 ಆದ್ದರಿಂದ ಈ ದೇಶದಲ್ಲಿ ತನ್ನ ಜನರನ್ನು ಕಾಪಾಡಲು ದೇವರು ನನ್ನನ್ನು ನಿಮಗಿಂತ ಮೊದಲೇ ಇಲ್ಲಿಗೆ ಕಳುಹಿಸಿದ್ದಾನೆ. 8 ನನ್ನನ್ನು ಇಲ್ಲಿಗೆ ಕಳುಹಿಸಿದ್ದು ನಿಮ್ಮ ತಪ್ಪಲ್ಲ. ಅದು ದೇವರ ಯೋಜನೆ. ದೇವರು ನನ್ನನ್ನು ಫರೋಹನ ಅತ್ಯುನ್ನತವಾದ ಅಧಿಕಾರಿಯನ್ನಾಗಿ ಮಾಡಿದ್ದಾನೆ. ನಾನು ಅವನ ಮನೆಗೆಲ್ಲಾ ಮತ್ತು ಈಜಿಪ್ಟಿಗೆಲ್ಲಾ ರಾಜ್ಯಪಾಲನಾಗಿದ್ದೇನೆ” ಎಂದು ಹೇಳಿದನು.
ಇಸ್ರೇಲರನ್ನು ಈಜಿಪ್ಟಿಗೆ ಆಮಂತ್ರಿಸಿದ್ದು
9 ಬಳಿಕ ಯೋಸೇಫನು, “ನನ್ನ ತಂದೆಯ ಬಳಿಗೆ ಬೇಗನೆ ಹೋಗಿ ಅವನಿಗೆ, ನಿನ್ನ ಮಗನಾದ ಯೋಸೇಫನು ಈ ಸಂದೇಶವನ್ನು ಕಳುಹಿಸಿದ್ದಾನೆ: ‘ದೇವರು ನನ್ನನ್ನು ಈಜಿಪ್ಟ್ ದೇಶಕ್ಕೆಲ್ಲಾ ರಾಜ್ಯಪಾಲನನ್ನಾಗಿ ಮಾಡಿದ್ದಾನೆ. ತಡಮಾಡದೆ ನನ್ನ ಬಳಿಗೆ ಬಾ. 10 ನೀನು ಗೋಷೆನ್ ಪ್ರಾಂತ್ಯದಲ್ಲಿ ನನ್ನೊಂದಿಗೆ ವಾಸಿಸುವೆ. ನೀನೂ ನಿನ್ನ ಮಕ್ಕಳೂ ನಿನ್ನ ಮೊಮ್ಮಕ್ಕಳೂ ನಿಮ್ಮ ಎಲ್ಲಾ ಪಶುಗಳೊಡನೆ ಇಲ್ಲಿ ನೆಲೆಸಬಹುದು. 11 ಮುಂದಿನ ಐದು ವರ್ಷಗಳ ಬರಗಾಲದಲ್ಲಿ ನಾನು ನಿಮ್ಮನ್ನು ಪೋಷಿಸುವೆನು. ಆಗ ನಿನಗಾಗಲಿ ನಿನ್ನ ಕುಟುಂಬದವರಿಗಾಗಲಿ ಬಡತನವಿರುವುದಿಲ್ಲ’ ಎಂಬುದಾಗಿ ತಿಳಿಸಿರಿ” ಎಂದು ಹೇಳಿದನು.
12 ಯೋಸೇಫನು ತನ್ನ ಸಹೋದರರೊಂದಿಗೆ ಮಾತನ್ನು ಮುಂದುವರಿಸಿ, “ನಾನೇ ಯೋಸೇಫನೆಂದು ನಿಮಗೆ ಈಗ ಗೊತ್ತಾಗಿದೆ; ನಿಮ್ಮ ತಮ್ಮನಾದ ಬೆನ್ಯಾಮೀನನಿಗೂ ಗೊತ್ತಾಗಿದೆ. 13 ಆದ್ದರಿಂದ ಈಜಿಪ್ಟಿನಲ್ಲಿರುವ ಮಹಾ ಐಶ್ವರ್ಯವನ್ನೂ ನೀವು ಇಲ್ಲಿ ನೋಡಿರುವ ಪ್ರತಿಯೊಂದನ್ನೂ ನನ್ನ ತಂದೆಗೆ ತಿಳಿಸಿ ಬೇಗನೆ ಅವನನ್ನು ಕರೆದುಕೊಂಡು ಬನ್ನಿ” ಎಂದು ಹೇಳಿದನು. 14 ಆಮೇಲೆ ಯೋಸೇಫನು ತನ್ನ ತಮ್ಮನಾದ ಬೆನ್ಯಾಮೀನನನ್ನು ಅಪ್ಪಿಕೊಂಡು ಅತ್ತನು. ಬೆನ್ಯಾಮೀನನು ಸಹ ಅತ್ತನು. 15 ಆಮೇಲೆ ಯೋಸೇಫನು ತನ್ನ ಎಲ್ಲಾ ಸಹೋದರರಿಗೂ ಮುದ್ದಿಟ್ಟು ಅತ್ತನು. ಇದಾದ ಮೇಲೆ ಆ ಸಹೋದರರು ಅವನೊಂದಿಗೆ ಮಾತಾಡತೊಡಗಿದರು.
16 ಯೋಸೇಫನ ಸಹೋದರರು ಅವನ ಬಳಿಗೆ ಬಂದಿರುವುದು ತಿಳಿದಾಗ ಫರೋಹನಿಗೂ ಅವನ ಮನೆಯವರಿಗೂ ತುಂಬ ಸಂತೋಷವಾಯಿತು. 17 ಆದ್ದರಿಂದ ಫರೋಹನು ಯೋಸೇಫನಿಗೆ, “ತಮಗೆ ಬೇಕಾದ ಎಲ್ಲಾ ಆಹಾರವನ್ನು ತೆಗೆದುಕೊಂಡು ಕಾನಾನ್ ದೇಶಕ್ಕೆ ಹಿಂತಿರುಗಿ ಹೋಗಿ 18 ನಿನ್ನ ತಂದೆಯನ್ನೂ ತಮ್ಮ ಕುಟುಂಬಗಳನ್ನೂ ನನ್ನ ಬಳಿಗೆ ಕರೆದುಕೊಂಡು ಬರಲಿ. ಅವರು ಈಜಿಪ್ಟಿನ ಒಳ್ಳೆಯ ಪ್ರದೇಶದಲ್ಲಿ ವಾಸಿಸಲಿ. ಇಲ್ಲಿರುವ ಉತ್ತಮವಾದ ಆಹಾರವನ್ನು ಅವರು ಊಟಮಾಡಲಿ, 19 ಅವರು ನಮ್ಮ ಶ್ರೇಷ್ಠವಾದ ರಥಗಳನ್ನು ತೆಗೆದುಕೊಂಡು ಕಾನಾನ್ ದೇಶಕ್ಕೆ ಹೋಗಿ ನಿನ್ನ ತಂದೆಯನ್ನೂ ಎಲ್ಲಾ ಸ್ತ್ರೀಯರನ್ನೂ ಮಕ್ಕಳನ್ನೂ ಕರೆದುಕೊಂಡು ಬರಲಿ. 20 ಅವರ ಸ್ವತ್ತುಗಳ ಬಗ್ಗೆ ಚಿಂತಿಸುವುದು ಬೇಡ; ಈಜಿಪ್ಟಿನಲ್ಲಿ ನಮಗಿರುವ ಉತ್ತಮವಾದವುಗಳನ್ನು ಅವರಿಗೆ ಕೊಡೋಣ” ಎಂದು ಹೇಳಿದನು.
7 “ನೀವು ಪ್ರಾರ್ಥಿಸುವಾಗ ದೇವರನ್ನು ತಿಳಿದಿಲ್ಲದ ಜನರಂತೆ ಪ್ರಾರ್ಥಿಸಬೇಡಿ. ಅವರು ಅರ್ಥವಿಲ್ಲದ ಸಂಗತಿಗಳನ್ನು ಹೇಳುತ್ತಲೇ ಇರುತ್ತಾರೆ. ಆ ರೀತಿ ಪ್ರಾರ್ಥಿಸಬೇಡಿ. ತಾವು ಅನೇಕ ವಿಷಯಗಳನ್ನು ಹೇಳುವುದರಿಂದ ದೇವರು ತಮ್ಮ ಪ್ರಾರ್ಥನೆಯನ್ನು ಕೇಳುತ್ತಾನೆಂಬುದು ಅವರ ಆಲೋಚನೆ. 8 ನೀವು ಅವರಂತಾಗಬೇಡಿ. ನೀವು ಕೇಳುವುದಕ್ಕೆ ಮೊದಲೇ ನಿಮಗೆ ಏನೇನು ಬೇಕು ಎಂಬುದು ನಿಮ್ಮ ತಂದೆಗೆ ತಿಳಿದಿದೆ. 9 ಆದ್ದರಿಂದ ನೀವು ಹೀಗೆ ಪ್ರಾರ್ಥಿಸಿರಿ:
‘ಪರಲೋಕದಲ್ಲಿರುವ ನಮ್ಮ ತಂದೆಯೇ,
ನಿನ್ನ ಹೆಸರು ಪರಿಶುದ್ಧವಾಗಿರಲಿ.
10 ನಿನ್ನ ರಾಜ್ಯ ಬರಲಿ.
ನಿನ್ನ ಚಿತ್ತ ಪರಲೋಕದಲ್ಲಿ ನೆರವೇರುವಂತೆ ಭೂಲೋಕದಲ್ಲಿಯೂ ನೆರವೇರಲಿ.
11 ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯಪಾಲಿಸು.
12 ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆಯೇ
ನಮ್ಮ ಪಾಪಗಳನ್ನು ಕ್ಷಮಿಸು.
13 ನಮ್ಮನ್ನು ಶೋಧನೆಗೆ ಒಳಪಡಿಸದೆ
ಕೆಡುಕನಿಂದ (ಸೈತಾನನಿಂದ) ನಮ್ಮನ್ನು ರಕ್ಷಿಸು.’
14 ಹೌದು, ಬೇರೆಯವರು ನಿಮಗೆ ಮಾಡಿದ ತಪ್ಪುಗಳನ್ನು ನೀವು ಕ್ಷಮಿಸಿದರೆ, ಪರಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸುತ್ತಾನೆ. 15 ಆದರೆ ಜನರು ನಿಮಗೆ ಮಾಡಿದ ತಪ್ಪುಗಳನ್ನು ನೀವು ಕ್ಷಮಿಸದಿದ್ದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ.
Kannada Holy Bible: Easy-to-Read Version. All rights reserved. © 1997 Bible League International