Revised Common Lectionary (Complementary)
8 ಯೆಹೋವನು ದಯೆಯುಳ್ಳವನೂ ಕನಿಕರವುಳ್ಳವನೂ
ದೀರ್ಘಶಾಂತನೂ ಪ್ರೀತಿಪೂರ್ಣನೂ ಆಗಿದ್ದಾನೆ.
9 ಯೆಹೋವನು ಪ್ರತಿಯೊಬ್ಬನಿಗೂ ಒಳ್ಳೆಯವನಾಗಿದ್ದಾನೆ.
ಆತನು ತಾನು ನಿರ್ಮಿಸಿದವುಗಳಿಗೆಲ್ಲಾ ಕನಿಕರ ತೋರಿಸುವನು.
14 ಯೆಹೋವನು ಬಿದ್ದುಹೋಗಿರುವವರನ್ನು ಮೇಲೆತ್ತುವವನೂ
ಕುಗ್ಗಿಹೋದವರನ್ನು ಉದ್ಧರಿಸುವವನೂ ಆಗಿದ್ದಾನೆ.
15 ಎಲ್ಲಾ ಜೀವಿಗಳು ತಮ್ಮ ಆಹಾರಕ್ಕಾಗಿ ನಿನ್ನನ್ನೇ ನೋಡುತ್ತವೆ.
ನೀನು ಸಮಯಕ್ಕೆ ಸರಿಯಾಗಿ ಅವುಗಳಿಗೆ ಆಹಾರವನ್ನು ಕೊಡುವೆ.
16 ನೀನು ಕೈಯನ್ನು ತೆರೆದು
ಜೀವಿಗಳ ಅವಶ್ಯಕತೆಗಳನ್ನೆಲ್ಲಾ ಪೂರೈಸುವೆ.
17 ಯೆಹೋವನ ಕಾರ್ಯಗಳೆಲ್ಲ ನೀತಿಯುಳ್ಳವುಗಳಾಗಿವೆ.
ಆತನ ಪ್ರತಿಯೊಂದು ಕಾರ್ಯದಲ್ಲೂ ಆತನ ಶಾಶ್ವತ ಪ್ರೀತಿ ತೋರಿಬರುವುದು.
18 ಯೆಹೋವನು ತನ್ನ ಭಕ್ತರಿಗೆ ಸಮೀಪವಾಗಿದ್ದಾನೆ.
ಆತನು ತನ್ನನ್ನು ಯಥಾರ್ಥವಾಗಿ ಕರೆಯುವ ಪ್ರತಿಯೊಬ್ಬರಿಗೂ ಸಮೀಪವಾಗಿದ್ದಾನೆ.
19 ಆತನು ತನ್ನ ಭಕ್ತರ ಇಷ್ಟವನ್ನು ನೆರವೇರಿಸುವನು.
ಆತನು ಅವರ ಮೊರೆಗೆ ಕಿವಿಗೊಟ್ಟು ಅವರನ್ನು ರಕ್ಷಿಸುವನು.
20 ಯೆಹೋವನು ತನ್ನನ್ನು ಪ್ರೀತಿಸುವ ಪ್ರತಿಯೊಬ್ಬರನ್ನೂ ಸಂರಕ್ಷಿಸುವನು,
ದುಷ್ಟರನ್ನಾದರೋ ಆತನು ನಾಶಮಾಡುವನು.
21 ನಾನು ಯೆಹೋವನನ್ನು ಕೊಂಡಾಡುತ್ತೇನೆ!
ಎಲ್ಲಾ ಜೀವಿಗಳು ಆತನ ಪವಿತ್ರ ಹೆಸರನ್ನು ಸದಾಕಾಲ ಕೊಂಡಾಡಲಿ!
ದೇವರು ಇಸ್ರೇಲರನ್ನು ಶಿಕ್ಷಿಸಿದನು
17 ಜೆರುಸಲೇಮೇ, ಎಚ್ಚರಗೊಳ್ಳು; ಎದ್ದೇಳು;
ಯೆಹೋವನು ನಿನ್ನ ಮೇಲೆ ಬಹಳವಾಗಿ ಕೋಪಗೊಂಡು
ನಿನ್ನನ್ನು ಶಿಕ್ಷಿಸಿದ್ದಾನೆ.
ಆ ಶಿಕ್ಷೆಯು ವಿಷತುಂಬಿದ ಪಾತ್ರೆಯಂತಿದೆ. ನೀನು ಅದನ್ನು ಕುಡಿಯಲೇಬೇಕಿತ್ತು.
ಈಗ ನೀನು ಅದನ್ನು ಕುಡಿದಿರುವೆ.
18 ಜೆರುಸಲೇಮಿನಲ್ಲಿ ಅನೇಕ ಜನರಿದ್ದರೂ ಅವರಲ್ಲಿ ಯಾರೂ ಅವಳಿಗಾಗಿ ನಾಯಕರಾಗಲಿಲ್ಲ. ಆಕೆಯು ಅನೇಕ ಮಕ್ಕಳನ್ನು ಪಡೆದವಳಾಗಿದ್ದರೂ ಆಕೆಯನ್ನು ನಡೆಸಲು ಮಾರ್ಗದರ್ಶಕರು ಯಾರೂ ಆಗಲಿಲ್ಲ. 19 ಜೆರುಸಲೇಮಿಗೆ ತೊಂದರೆಗಳು ಎರಡು ಗುಂಪುಗಳಾಗಿ ಬಂದವು: ಲೂಟಿ ಮತ್ತು ಕೊರತೆ; ಕ್ಷಾಮ ಮತ್ತು ಖಡ್ಗ.
ನೀನು ಸಂಕಟ ಅನುಭವಿಸುವಾಗ ಯಾರೂ ನಿನಗೆ ಸಹಾಯ ಮಾಡಲಿಲ್ಲ. ಯಾರೂ ನಿನಗೆ ಕರುಣೆ ತೋರಿಸಲಿಲ್ಲ. 20 ನಿನ್ನ ಜನರು ಬಲಹೀನರಾದರು. ಅವರು ನೆಲದ ಮೇಲೆ ಬಿದ್ದು ಅಲ್ಲಿಯೇ ಮಲಗಿದರು. ಆ ಜನರು ರಸ್ತೆಯ ಮೂಲೆಮೂಲೆಗಳಲ್ಲಿ ಬಿದ್ದುಕೊಂಡಿರುತ್ತಾರೆ. ಅವರು ಬಲೆಯೊಳಗೆ ಸಿಕ್ಕಿಬಿದ್ದ ಜಿಂಕೆಯಂತಿರುವರು. ಯೆಹೋವನ ಕೋಪದಿಂದ ಇನ್ನೂ ಹೆಚ್ಚಿನ ಶಿಕ್ಷೆಯನ್ನು, ತಾಳಲಾರದಷ್ಟು ಶಿಕ್ಷೆಯನ್ನು ಅನುಭವಿಸಿದರು. ದೇವರು ಇನ್ನೂ ಹೆಚ್ಚಾಗಿ ಶಿಕ್ಷೆಕೊಡುವುದಾಗಿ ಹೇಳಿದಾಗ ಅವರು ಕಂಗಾಲಾದರು.
21 ಜೆರುಸಲೇಮೇ, ನನಗೆ ಕಿವಿಗೊಡು. ನೀನು ಅಮಲೇರಿದವಳಂತೆ ಶಕ್ತಿಹೀನಳಾಗಿರುವೆ. ನೀನು ಕುಡಿದು ಅಮಲೇರುವುದು ದ್ರಾಕ್ಷಾರಸದಿಂದಲ್ಲ, “ವಿಷದಿಂದಷ್ಟೇ.”
22 ನಿನ್ನ ದೇವರೂ ಒಡೆಯನೂ ಆಗಿರುವ ಯೆಹೋವನು ತನ್ನ ಜನರಿಗಾಗಿ ಯುದ್ಧ ಮಾಡುವನು. ಅವನು ನಿನಗೆ ಹೇಳುವುದೇನೆಂದರೆ, “ಇಗೋ, ನಾನು ನಿನ್ನಿಂದ ವಿಷದ ಪಾತ್ರೆಯನ್ನು (ಶಿಕ್ಷೆ) ತೆಗೆದುಬಿಡುತ್ತೇನೆ. ಇನ್ನು ಮುಂದೆ ನನ್ನ ಸಿಟ್ಟಿನಿಂದ ನೀನು ಶಿಕ್ಷಿಸಲ್ಪಡುವದಿಲ್ಲ. 23 ಈಗ ನನ್ನ ಕೋಪದ ದೆಸೆಯಿಂದ ನಿನಗೆ ಹಾನಿ ಮಾಡಿದವರನ್ನು ಶಿಕ್ಷಿಸುವೆನು. ಅವರು ನಿನ್ನನ್ನು ಕೊಲ್ಲಲು ಪ್ರಯತ್ನಿಸಿದರು. ‘ನಮ್ಮ ಮುಂದೆ ಸಾಷ್ಟಾಂಗಬೀಳು. ಆಗ ನಿನ್ನ ಮೇಲೆ ನಾವು ನಡೆಯುವೆವು’ ಎಂದು ಹೇಳಿದರು. ಅವರಿಗೆ ಅಡ್ಡಬೀಳಲು ನಿನ್ನನ್ನು ಬಲಾತ್ಕರಿಸಿದರು. ಆ ಬಳಿಕ ಅವರು ನೀನು ಮಣ್ಣಿನ ಧೂಳೋ ಎಂಬಂತೆ ನಿನ್ನ ಬೆನ್ನಿನ ಮೇಲೆ ನಡೆದಾಡಿದರು. ನೀನು ಅವರಿಗೆ ನಡೆಯಲು ಬೀದಿಯಾದಿ.”
6 ಹೌದು, ನಾನು ಯೆಹೂದ್ಯರ ವಿಷಯದಲ್ಲಿ ದುಃಖಿಸುತ್ತೇನೆ. ದೇವರು ತನ್ನ ವಾಗ್ದಾನವನ್ನು ನೆರವೇರಿಸುವುದರಲ್ಲಿ ವಿಫಲನಾದನೆಂದು ನಾನು ಹೇಳುತ್ತಿಲ್ಲ. ಏಕೆಂದರೆ ಇಸ್ರೇಲ್ ವಂಶದಲ್ಲಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. 7 ಅಬ್ರಹಾಮನ ಸಂತತಿಗಳವರಲ್ಲಿ ಕೆಲವರು ಮಾತ್ರ ಅಬ್ರಹಾಮನ ನಿಜವಾದ ಮಕ್ಕಳಾಗಿದ್ದಾರೆ. ದೇವರು ಅವನಿಗೆ, “ಇಸಾಕನು ಮಾತ್ರ ನಿಮಗೆ ನ್ಯಾಯಬದ್ಧವಾದ ಮಗನು”(A) ಎಂದು ಹೇಳಿದನು. 8 ಇದರರ್ಥವೇನೆಂದರೆ, ಶರೀರ ಸಂಬಂಧವಾಗಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. ವಾಗ್ದಾನ ಸಂಬಂಧವಾಗಿ ಹುಟ್ಟಿದವರೇ ದೇವರ (ನಿಜ) ಮಕ್ಕಳಾಗಿದ್ದಾರೆ. 9 ದೇವರು ಅವನಿಗೆ, “ನೇಮಿತ ಕಾಲದಲ್ಲಿ ನಾನು ಹಿಂತಿರುಗಿಬರುವೆನು, ಆಗ ಸಾರಳಿಗೆ ಒಬ್ಬ ಮಗನಿರುವನು”(B) ಎಂಬ ವಾಗ್ದಾನ ಮಾಡಿದ್ದನು.
10 ಅದಷ್ಟೇ ಅಲ್ಲ, ರೆಬೆಕ್ಕಳಿಗೂ ಇಬ್ಬರು ಗಂಡುಮಕ್ಕಳಿದ್ದರು. ಅವರಿಬ್ಬರಿಗೂ ಒಬ್ಬನೇ ತಂದೆ. ಅವನೇ ನಮ್ಮ ಪಿತೃವಾದ ಇಸಾಕನು. 11-12 ಆದರೆ ಆ ಇಬ್ಬರು ಗಂಡುಮಕ್ಕಳು ಹುಟ್ಟುವ ಮೊದಲೇ, ದೇವರು ರೆಬೆಕ್ಕಳಿಗೆ, “ಹಿರಿಯವನು ಕಿರಿಯವನ ಸೇವೆ ಮಾಡುವನು”(C) ಎಂದು ಹೇಳಿದನು. ಆ ಬಾಲಕರು ಯಾವ ಒಳ್ಳೆಯದಾಗಲಿ ಕೆಟ್ಟದ್ದಾಗಲಿ ಮಾಡುವ ಮೊದಲೇ ಇದಾಯಿತು. ದೇವರು ಆ ಬಾಲಕನನ್ನು ತನ್ನ ಸ್ವಂತ ಯೋಜನೆಗನುಸಾರವಾಗಿ ಆರಿಸಿಕೊಂಡಿದ್ದರಿಂದ ಆ ಬಾಲಕರು ಹುಟ್ಟುವದಕ್ಕಿಂತ ಮೊದಲೇ ಹೀಗೆ ಹೇಳಿದನು. ದೇವರು ಅವನನ್ನು ಆರಿಸಿಕೊಂಡಿದ್ದರಿಂದ ಅವನನ್ನೇ ಕರೆಯಬೇಕೆಂದಿದ್ದನು. ಆದರೆ ಅದು ಆ ಬಾಲಕರ ಯಾವುದೇ ಕಾರ್ಯಗಳ ಮೇಲೆ ಆಧಾರಗೊಂಡಿರಲಿಲ್ಲ. 13 ಅಂತೆಯೇ, “ನಾನು ಯಾಕೋಬನನ್ನು ಪ್ರೀತಿಸಿದೆನು, ಆದರೆ ಏಸಾವನನ್ನು ದ್ವೇಷಿಸಿದೆನು”(D) ಎಂದು ಪವಿತ್ರ ಗ್ರಂಥವು ಹೇಳುತ್ತದೆ.
Kannada Holy Bible: Easy-to-Read Version. All rights reserved. © 1997 Bible League International