Revised Common Lectionary (Complementary)
ತುತಿಗೀತೆ. ರಚನೆಗಾರರು: ಕೋರಹೀಯರು.
87 ದೇವರು ತನ್ನ ಆಲಯವನ್ನು ಜೆರುಸಲೇಮಿನ ಪವಿತ್ರ ಪರ್ವತಗಳ ಮೇಲೆ ಕಟ್ಟಿದ್ದಾನೆ.
2 ಯೆಹೋವನು ಚೀಯೋನಿನ ಬಾಗಿಲುಗಳನ್ನು ಇಸ್ರೇಲಿನ ಇತರ ಸ್ಥಳಗಳಿಗಿಂತಲೂ ಹೆಚ್ಚಾಗಿ ಪ್ರೀತಿಸುವನು.
3 ದೇವರ ಪಟ್ಟಣವೇ, ಜನರು ನಿನ್ನ ಬಗ್ಗೆ ಆಶ್ಚರ್ಯಕರವಾದ ಸಂಗತಿಗಳನ್ನು ಹೇಳುವರು.
4 ದೇವಜನರು ಪ್ರಪಂಚದ ಅನೇಕ ಕಡೆಗಳಲ್ಲಿ ಈಗ ವಾಸವಾಗಿದ್ದಾರೆ.
ಅವರಲ್ಲಿ ಕೆಲವರು ಈಜಿಪ್ಟಿನಲ್ಲಿಯೂ ಬಾಬಿಲೋನಿನಲ್ಲಿಯೂ ನೆಲೆಸಿದ್ದಾರೆ.
ಇನ್ನು ಕೆಲವರು ಫಿಲಿಷ್ಟಿಯದಲ್ಲಿಯೂ ತೂರಿನಲ್ಲಿಯೂ ಇಥಿಯೋಪಿಯದಲ್ಲಿಯೂ ನೆಲೆಸಿದ್ದಾರೆ.
5 ಚೀಯೋನಿನಲ್ಲಿ ಜನಿಸಿದ ಪ್ರತಿಯೊಬ್ಬರೂ ದೇವರಿಗೆ ಗೊತ್ತು.
ಮಹೋನ್ನತನಾದ ದೇವರೇ ಆ ಪಟ್ಟಣವನ್ನು ಕಟ್ಟಿದನು.
6 ದೇವರು ತನ್ನ ಜನರೆಲ್ಲರ ಬಗ್ಗೆ ಪಟ್ಟಿಮಾಡಿದ್ದಾನೆ.
ಪ್ರತಿಯೊಬ್ಬನ ಹುಟ್ಟಿದ ಸ್ಥಳವು ದೇವರಿಗೆ ತಿಳಿದಿದೆ.
7 ದೇವರ ಮಕ್ಕಳು ಹಬ್ಬಗಳನ್ನು ಆಚರಿಸಲು ಜೆರುಸಲೇಮಿಗೆ ಹೋಗುವರು.
ಅವರು ಸಂತೋಷದಿಂದ ಹಾಡುತ್ತಾ ಕುಣಿದಾಡುವರು.
“ಒಳ್ಳೆಯವುಗಳೆಲ್ಲ ಬರುವುದು ಜೆರುಸಲೇಮಿನಿಂದಲೇ” ಎಂದು ಅವರು ಹೇಳುವರು.
8 “ಕಣ್ಣಿದ್ದೂ ಕುರುಡರಂತಿರುವ ಜನರನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ. ಕಿವಿಯಿದ್ದೂ ಕಿವುಡರಂತಿರುವ ಜನರನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ. 9 ಎಲ್ಲಾ ಜನಾಂಗದವರೂ ಎಲ್ಲಾ ಜನರೂ ಒಟ್ಟುಗೂಡಬೇಕು. ಅವರ ಸುಳ್ಳುದೇವರಲ್ಲಿ ಒಬ್ಬನು ಆದಿಯಲ್ಲಿ ಸಂಭವಿಸಿದ್ದನ್ನು ಹೇಳುವದಾಗಿದ್ದರೆ ತನ್ನ ಸಾಕ್ಷಿಗಳನ್ನು ಕರೆದು ತರಲಿ. ಆ ಸಾಕ್ಷಿಗಳು ಸತ್ಯವನ್ನಾಡಲಿ. ಆಗ ಅವರು ಸತ್ಯವಂತರೋ ಇಲ್ಲವೋ ಎಂದು ಗೊತ್ತಾಗುವದು.”
10 ಯೆಹೋವನು ಹೇಳುವುದೇನೆಂದರೆ: “ನೀವು ನನ್ನ ಸಾಕ್ಷಿಗಳಾಗಿದ್ದೀರಿ. ನಾನು ಆರಿಸಿಕೊಂಡ ಸೇವಕನು ನೀನೇ. ಜನರು ನನ್ನನ್ನು ನಂಬುವಂತೆ ನಾನು ನಿಮ್ಮನ್ನು ಆರಿಸಿಕೊಂಡೆನು. ನಾನು ನಿಜ ದೇವರು ಎಂದು ನೀವು ತಿಳಿಯಬೇಕೆಂದು ನಿಮ್ಮನ್ನು ಆರಿಸಿಕೊಂಡೆನು. ನಾನೇ ನಿಜವಾದ ದೇವರು. ನನಗಿಂತ ಮೊದಲು ಯಾರೂ ಇರಲಿಲ್ಲ, ಇನ್ನು ಮುಂದೆಯೂ ನನ್ನ ಹೊರತು ಯಾವ ದೇವರೂ ಇರುವದಿಲ್ಲ. 11 ನಾನೇ, ನಾನೇ ಯೆಹೋವನು! ನನ್ನ ಹೊರತು ಬೇರೆ ರಕ್ಷಕನಿಲ್ಲ! 12 ನಾನೇ ನಿಮ್ಮೊಂದಿಗೆ ಮಾತನಾಡಿದೆನು. ನಾನೇ ನಿಮ್ಮನ್ನು ರಕ್ಷಿಸಿದೆನು. ನಾನು ಆ ವಿಷಯಗಳನ್ನು ನಿಮಗೆ ತಿಳಿಸಿದೆನು. ನಿಮ್ಮೊಂದಿಗೆ ಇದ್ದಾತನು ಅಪರಿಚಿತನಾಗಿರಲಿಲ್ಲ. ನೀವು ನನ್ನ ಸಾಕ್ಷಿಗಳಾಗಿದ್ದೀರಿ. ನಾನೇ ನಿಮ್ಮ ದೇವರು.” (ಯೆಹೋವನು ತಾನೇ ಈ ವಿಷಯಗಳನ್ನು ಹೇಳಿದ್ದಾನೆ.) 13 “ನಾನು ಯಾವಾಗಲೂ ದೇವರಾಗಿದ್ದೇನೆ. ನನ್ನ ಕಾರ್ಯವನ್ನು ತಡೆಯಲು ಯಾರಿಗೆ ಸಾಧ್ಯ? ನನ್ನ ಬಲವಾದ ಹಸ್ತದಿಂದ ಯಾರು ಬಿಡಿಸಬಲ್ಲರು?”
13 ಈಗ ನಾನು ಯೆಹೂದ್ಯರಲ್ಲದ ಜನರೊಂದಿಗೆ ಮಾತಾಡುತ್ತಿದ್ದೇನೆ. ನಾನು ಅವರಿಗೆ ಅಪೊಸ್ತಲನಾಗಿದ್ದೇನೆ. ಆದ್ದರಿಂದ ನಾನು ಈ ಕೆಲಸವನ್ನು ನನ್ನಿಂದ ಸಾಧ್ಯವಾದಷ್ಟು ಉತ್ತಮವಾಗಿಯೇ ಮಾಡುತ್ತೇನೆ. 14 ನಾನು ನನ್ನ ಸ್ವಂತ ಜನರಲ್ಲಿ (ಯೆಹೂದ್ಯರಲ್ಲಿ) ಅಸೂಯೆಯನ್ನು ಉಂಟುಮಾಡಿ ಅವರಲ್ಲಿ ಕೆಲವರಾದರೂ ರಕ್ಷಣೆ ಹೊಂದುವಂತೆ ಮಾಡಬಲ್ಲೆನೆಂಬ ನಿರೀಕ್ಷೆ ನನಗಿದೆ. 15 ಇಸ್ರೇಲರು ತಿರಸ್ಕೃತರಾದ್ದರಿಂದ ಜಗತ್ತು ದೇವರೊಡನೆ ಸಂಧಾನವಾಗಲು ಸಾಧ್ಯವಾಯಿತಾದರೆ ಅವರು ಸ್ವೀಕೃತರಾದಾಗ ಇನ್ನೇನು ತಾನೆ ಸಂಭವಿಸದು! ಸತ್ತವರು ಜೀವ ಪಡೆದುಕೊಂಡಂತಾಗುವುದಿಲ್ಲವೇ? 16 ರೊಟ್ಟಿಯ ಮೊದಲನೇ ತುಂಡನ್ನು ದೇವರಿಗೆ ಅರ್ಪಿಸಿದಾಗ, ಇಡೀ ರೊಟ್ಟಿಯೇ ಪವಿತ್ರವಾಯಿತು. ಮರದ ಬೇರುಗಳು ಪವಿತ್ರವಾಗಿದ್ದರೆ, ಆ ಮರದ ಕೊಂಬೆಗಳು ಸಹ ಪವಿತ್ರವಾಗಿವೆ.
17 ಇದು, ಆಲಿವ್ ಮರದ ಕೆಲವು ಕೊಂಬೆಗಳು ಮುರಿಯಲ್ಪಟ್ಟಾಗ, ಕಾಡುಆಲಿವ್ ಮರದ ಕೊಂಬೆಯೊಂದು ಮೊದಲಿನ ಆಲಿವ್ ಮರಕ್ಕೆ ಸೇರಿಕೊಂಡಂತಿದೆ. ಯೆಹೂದ್ಯರಲ್ಲದ ನೀವು ಕಾಡುಕೊಂಬೆಗೆ ಸಮಾನವಾಗಿದ್ದೀರಿ. ಆದರೆ ಈಗ ನೀವು ಮೊದಲನೆ ಮರದ (ಯೆಹೂದ್ಯರ) ಶಕ್ತಿಯಲ್ಲಿಯೂ ಜೀವದಲ್ಲಿಯೂ ಪಾಲುಗಾರರಾಗಿದ್ದೀರಿ. 18 ಆದ್ದರಿಂದ ಮುರಿಯಲ್ಪಟ್ಟ ಆ ಕೊಂಬೆಗಳನ್ನು ಕಡೆಗಣಿಸಬೇಡಿ. ಅವುಗಳನ್ನು ಕಡೆಗಣಿಸಲು ನಿಮಗೆ ಯಾವ ಕಾರಣವೂ ಇಲ್ಲ. ಏಕೆಂದರೆ, ನೀವು ಬೇರಿಗೆ ಜೀವವನ್ನು ಕೊಡುವುದಿಲ್ಲ. ಬೇರು ನಿಮಗೆ ಜೀವವನ್ನು ಕೊಡುತ್ತದೆ. 19 “ನಾವು ಆ ಮರದ ಕೊಂಬೆಗಳಿಗೆ ಸೇರಿಕೊಳ್ಳಬೇಕೆಂದು ಆ ಕೊಂಬೆಗಳು ಮುರಿಯಲ್ಪಟ್ಟವು” ಎಂದು ನೀವು ಹೇಳಬಹುದು. 20 ಅದು ಸತ್ಯ. ಆ ಕೊಂಬೆಗಳು ಮುರಿಯಲ್ಪಟ್ಟವು. ಅದಕ್ಕೆ ಅಪನಂಬಿಕೆಯೇ ಕಾರಣ. ನೀವು ಆ ಮರದ ಒಂದು ಭಾಗವಾದದ್ದು ನಿಮ್ಮ ನಂಬಿಕೆಯಿಂದಲೇ. ಆದ್ದರಿಂದ ಗರ್ವಪಡಬೇಡ, ಭಯದಿಂದಿರು. 21 ದೇವರು ಸಹಜವಾದ ಕೊಂಬೆಗಳನ್ನೇ ಉಳಿಸಿಲ್ಲದಿರುವುದರಿಂದ ನೀವು ನಂಬದಿದ್ದರೆ ಆತನು ನಿನ್ನನ್ನು ಉಳಿಸುವುದಿಲ್ಲ.
22 ಆದ್ದರಿಂದ ದೇವರು ದಯೆ ಉಳ್ಳವನಾಗಿದ್ದರೂ ಬಹುಕಠಿಣನೂ ಆಗಿದ್ದಾನೆ ಎಂಬುದನ್ನು ಗಮನಿಸು. ದೇವರು ತನ್ನನ್ನು ಹಿಂಬಾಲಿಸದಿರುವ ಜನರನ್ನು ದಂಡಿಸುತ್ತಾನೆ. ಆದರೆ ನೀನು ದೇವರ ದಯೆಯನ್ನು ಆಶ್ರಯಿಸಿಕೊಂಡಿದ್ದರೆ, ದೇವರು ನಿನಗೆ ದಯಾಳುವಾಗಿರುತ್ತಾನೆ. ಇಲ್ಲವಾದರೆ, ನಿನ್ನನ್ನು ಮರದಿಂದ ಕಡಿದುಹಾಕಲಾಗುವುದು. 23 ಯೆಹೂದ್ಯರು ತಮ್ಮ ಅಪನಂಬಿಕೆಯನ್ನು ಬಿಡುವುದಾದರೆ, ದೇವರು ಅವರನ್ನು ಮತ್ತೆ ಸ್ವೀಕರಿಸಿಕೊಳ್ಳುವನು. ಅವರ ಮೊದಲಿನ ಸ್ಥಾನವನ್ನು ಅವರಿಗೆ ಕೊಡಲು ದೇವರು ಶಕ್ತನಾಗಿದ್ದಾನೆ. 24 ಕಾಡುಕೊಂಬೆಯೊಂದು ಒಳ್ಳೆಯ ಮರದ ಕೊಂಬೆಯಾಗುವುದು ಸಹಜವಾದದ್ದಲ್ಲ. ಆದರೆ ಯೆಹೂದ್ಯರಲ್ಲದ ನೀವು ಕಾಡು ಆಲಿವ್ ಮರದಿಂದ ಕತ್ತರಿಸಲ್ಪಟ್ಟ ಕೊಂಬೆಯಾಗಿದ್ದು ಒಳ್ಳೆಯ ಆಲಿವ್ ಮರಕ್ಕೆ ಕಸಿಕಟ್ಟಲ್ಪಟ್ಟಿದ್ದೀರಿ. ಯೆಹೂದ್ಯರಾದರೋ ಒಳ್ಳೆಯ ಆಲಿವ್ ಮರದಲ್ಲಿ ಬೆಳೆದ ರೆಂಬೆಗಳು. ಆದ್ದರಿಂದ ಅವರು ತಮ್ಮ ಸ್ವಂತ ಮರಕ್ಕೆ ಮತ್ತೆ ಸೇರಿಸಲ್ಪಡಲು ಖಂಡಿತವಾಗಿಯೂ ಸಾಧ್ಯ.
25 ಸಹೋದರ ಸಹೋದರಿಯರೇ, ನಿಮ್ಮನ್ನು ನೀವೇ ಬುದ್ಧಿವಂತರೆಂದು ಎಣಿಸಿಕೊಳ್ಳದಂತೆ ಇದುವರೆಗೆ ರಹಸ್ಯವಾಗಿದ್ದ ಸತ್ಯವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ: ಇಸ್ರೇಲಿನ ಜನರಲ್ಲಿ ಒಂದು ಪಾಲು ಮಂದಿ ಮೊಂಡರಾದರು. ಆದರೆ ಯೆಹೂದ್ಯರಲ್ಲದ ಜನರೆಲ್ಲರೂ ದೇವರ ಬಳಿಗೆ ಬಂದಾಗ ಅವರ ಮೊಂಡತನವು ಇಲ್ಲವಾಗುವುದು. 26 ಹೀಗೆ ಎಲ್ಲಾ ಇಸ್ರೇಲರು ರಕ್ಷಣೆ ಹೊಂದುವರು. ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:
“ಸಿಯೋನಿನಿಂದ ರಕ್ಷಕನು ಬರುವನು:
ಆತನು ಯಾಕೋಬನ ಕುಟುಂಬದಿಂದ ಎಲ್ಲಾ ದುಷ್ಟತನವನ್ನು ನಿವಾರಣೆ ಮಾಡುವನು.
27 ನಾನು ಆ ಜನರ ಪಾಪಗಳನ್ನು ಪರಿಹರಿಸುವಾಗ
ಅವರೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು.”(A)
28 ಯೆಹೂದ್ಯರು ಸುವಾರ್ತೆಯನ್ನು ಸ್ವೀಕರಿಸಿಕೊಳ್ಳಲಿಲ್ಲ. ಆದ್ದರಿಂದ ಅವರು ದೇವರ ಶತ್ರುಗಳಾಗಿದ್ದಾರೆ. ಯೆಹೂದ್ಯರಲ್ಲದ ಜನರಿಗೆ ಸಹಾಯವಾಗಲೆಂದೇ ಇದಾಯಿತು. ಆದರೆ ಯೆಹೂದ್ಯರು ಇನ್ನೂ ದೇವರಿಂದ ಆರಿಸಲ್ಪಟ್ಟ ಜನರಾಗಿದ್ದಾರೆ. ಆದ್ದರಿಂದ ಆತನು ಪಿತೃಗಳೊಂದಿಗೆ ತಾನು ಮಾಡಿಕೊಂಡ ಒಡಂಬಡಿಕೆಯ ನಿಮಿತ್ತ ಅವರನ್ನು ಪ್ರೀತಿಸುತ್ತಾನೆ. 29 ಆತನು, ತಾನು ಕರೆಯುವ ಜನರ ವಿಷಯವಾಗಿಯೂ ತಾನು ಅವರಿಗೆ ಕೊಡುವ ವರಗಳ ವಿಷಯವಾಗಿಯೂ ತನ್ನ ಮನಸ್ಸನ್ನು ಬದಲಾಯಿಸುವುದೇ ಇಲ್ಲ; ತಾನು ಜನರಿಗೆ ನೀಡಿದ ಕರೆಯನ್ನು ಹಿಂತೆಗೆದುಕೊಳ್ಳುವುದೇ ಇಲ್ಲ.
Kannada Holy Bible: Easy-to-Read Version. All rights reserved. © 1997 Bible League International