Revised Common Lectionary (Complementary)
ರಚನೆಗಾರ: ಆಸಾಫ.
78 ನನ್ನ ಜನರೇ, ನನ್ನ ಉಪದೇಶಗಳಿಗೆ ಕಿವಿಗೊಡಿರಿ;
ನನ್ನ ನುಡಿಗಳನ್ನು ಲಾಲಿಸಿರಿ.
2 ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು;
ಪೂರ್ವಕಾಲದ ಗೂಡಾರ್ಥಗಳನ್ನು ಹೊರಪಡಿಸುವೆನು.
3 ನಾವು ಅವುಗಳನ್ನು ಕಿವಿಯಾರೆ ಕೇಳಿದ್ದೇವೆ.
ನಮ್ಮ ಪೂರ್ವಿಕರೇ ಅವುಗಳನ್ನು ನಮಗೆ ಹೇಳಿದರು.
4 ನಾವು ಅವುಗಳನ್ನು ಮರೆಯುವುದೇ ಇಲ್ಲ.
ನಮ್ಮ ಜನರು ಕೊನೆಯ ತಲೆಮಾರಿನವರೆಗೂ ಅವುಗಳನ್ನು ಹೇಳುತ್ತಲೇ ಇರುವರು.
ನಾವೆಲ್ಲರೂ ಯೆಹೋವನ ಪರಾಕ್ರಮವನ್ನೂ
ಅದ್ಭುತಕಾರ್ಯಗಳನ್ನೂ ಹೇಳುತ್ತಾ ಕೊಂಡಾಡುವೆವು.
5 ಆತನು ಯಾಕೋಬನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡನು.
ಆತನು ಇಸ್ರೇಲರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು.
ಆತನು ನಮ್ಮ ಪೂರ್ವಿಕರಿಗೆ ಆಜ್ಞೆಗಳನ್ನು ಕೊಟ್ಟನು.
ನಿಮ್ಮ ಸಂತತಿಗಳವರಿಗೆ ಧರ್ಮಶಾಸ್ತ್ರವನ್ನು ಉಪದೇಶಿಸಿರಿ ಎಂದು ಆತನು ನಮ್ಮ ಪೂರ್ವಿಕರಿಗೆ ಹೇಳಿದನು.
6 ಹೊಸ ತಲೆಮಾರುಗಳವರು ಬೆಳೆದು ದೊಡ್ಡವರಾದಾಗ ತಮ್ಮ ಮಕ್ಕಳಿಗೆ ಅವುಗಳನ್ನು ಹೇಳಿಕೊಡುವರು.
ಹೀಗೆ ಜನರು ಕೊನೆಯ ತಲೆಮಾರಿನವರೆಗೂ ಧರ್ಮಶಾಸ್ತ್ರವನ್ನು ತಿಳಿದಿರುವರು.
7 ಆಗ ಅವರೆಲ್ಲರೂ ದೇವರಲ್ಲಿ ಭರವಸೆ ಇಡುವರು.
ದೇವರ ಮಹತ್ಕಾರ್ಯಗಳನ್ನು ಅವರು ಮರೆಯುವುದೇ ಇಲ್ಲ.
ಅವರು ಜಾಗ್ರತೆಯಿಂದ ದೇವರ ಆಜ್ಞೆಗಳಿಗೆ ವಿಧೇಯರಾಗುವರು.
8 ಜನರು ತಮ್ಮ ಮಕ್ಕಳಿಗೆ ದೇವರ ಆಜ್ಞೆಗಳನ್ನು ಉಪದೇಶಿಸಿದರೆ,
ಮಕ್ಕಳು ತಮ್ಮ ಪೂರ್ವಿಕರಂತಾಗುವುದಿಲ್ಲ.
ಅವರ ಪೂರ್ವಿಕರು ದೇವರಿಗೆ ವಿಮುಖರಾಗಿ ಆತನಿಗೆ ವಿಧೇಯರಾಗಲಿಲ್ಲ.
ಅವರು ಮೊಂಡರಾಗಿದ್ದರು.
ಅವರು ದೇವರಿಗೆ ನಂಬಿಗಸ್ತರಾಗಿರಲಿಲ್ಲ.
17 ಆದರೂ ಅವರು ಅರಣ್ಯದಲ್ಲಿ
ಮಹೋನ್ನತನಾದ ಆತನ ವಿರೋಧವಾಗಿ ಪಾಪಮಾಡುತ್ತಾ ಬಂದರು.
18 ಬಳಿಕ ಅವರು ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲು
ಇಷ್ಟಪದಾರ್ಥವನ್ನು ಕೇಳಿ ದೇವರನ್ನೇ ಪರೀಕ್ಷೆಗೊಡ್ಡಿದರು.
19 ಅವರು ಆತನಿಗೆ ವಿರೋಧವಾಗಿ ಮಾತಾಡಿ,
“ದೇವರು ನಮಗೆ ಅರಣ್ಯದಲ್ಲಿ ಆಹಾರವನ್ನು ಕೊಡಬಲ್ಲನೇ?
20 ಆತನು ಬಂಡೆಯನ್ನು ಹೊಡೆದಾಗ ನೀರು ಪ್ರವಾಹದಂತೆ ಹೊರಬಂದದ್ದೇನೊ ನಿಜ!
ಆದರೆ ಆತನು ನಮಗೆ ರೊಟ್ಟಿಯನ್ನೂ ಮಾಂಸವನ್ನೂ ಕೊಡಬಲ್ಲನೇ!” ಎಂದು ಹೇಳಿದರು.
21 ಆ ಜನರು ಹೇಳಿದ್ದನ್ನು ಕೇಳಿ
ಯೆಹೋವನು ಕೋಪಗೊಂಡನು.
ಆತನು ಯಾಕೋಬ್ಯರ ಮೇಲೆಯೂ
ಇಸ್ರೇಲರ ಮೇಲೆಯೂ ಕೋಪಗೊಂಡನು.
22 ಯಾಕೆಂದರೆ ಜನರು ಆತನಲ್ಲಿ ಭರವಸೆ ಇಡಲಿಲ್ಲ.
ದೇವರು ತಮ್ಮನ್ನು ರಕ್ಷಿಸಬಲ್ಲನೆಂದು ಅವರು ನಂಬಲಿಲ್ಲ.
23 ಆಗ ಆತನು ಉನ್ನತದಲ್ಲಿರುವ ಮೇಘಗಳನ್ನು ತೆರೆದನು,
ಅವರ ಆಹಾರಕ್ಕಾಗಿ ಮನ್ನವನ್ನು ಮಳೆಗರೆಸಿದನು.
24 ಆಕಾಶದ ದ್ವಾರಗಳು ತೆರೆದು
ಆಕಾಶದ ಉಗ್ರಾಣದಿಂದ ಧಾನ್ಯವು ಸುರಿದಂತೆ ಮನ್ನವು ಸುರಿಯಿತು.
25 ಜನರು ದೇವದೂತರ ಆಹಾರವನ್ನು ತಿಂದರು.
ಅವರನ್ನು ತೃಪ್ತಿಗೊಳಿಸುವುದಕ್ಕಾಗಿ ಆತನು ಆಹಾರವನ್ನು ಹೇರಳವಾಗಿ ಒದಗಿಸಿದನು.
26 ಬಳಿಕ ಯೆಹೋವನು ಪೂರ್ವದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು.
ಆಗ ಲಾವಕ್ಕಿಗಳು ಮಳೆಯಂತೆ ಅವರಿದ್ದಲ್ಲಿಗೆ ಬಂದು ಬಿದ್ದವು.
27 ಆತನು ತೇಮಾನಿನಿಂದ ಗಾಳಿಬೀಸುವಂತೆ ಮಾಡಿದಾಗ
ಪಕ್ಷಿಗಳು ಸಮುದ್ರದ ಮರಳಿನಷ್ಟು ಅವರಿದ್ದಲ್ಲಿ ಬಂದು ಬಿದ್ದವು.
28 ಪಕ್ಷಿಗಳು ಪಾಳೆಯದ ಮಧ್ಯಭಾಗದಲ್ಲಿ,
ಆ ಜನರ ಗುಡಾರಗಳ ಸುತ್ತಲೆಲ್ಲಾ ಬಿದ್ದವು.
29 ಅವರಿಗೆ ತಿನ್ನಲು ಹೇರಳವಾಗಿತ್ತು.
ಆದರೆ ತಮ್ಮ ಆಸೆಗಳೇ ತಮ್ಮನ್ನು ಪಾಪಕ್ಕೆ ನಡೆಸುವಂತೆ ಅವರು ಮಾಡಿದರು.
2 ಆಗ ಇಸ್ರೇಲರು ಮತ್ತೆ ಮರುಭೂಮಿಯಲ್ಲಿ ಮೋಶೆ ಆರೋನರ ಮೇಲೆ ಗುಣುಗುಟ್ಟಿದರು. 3 ಅವರು, “ಯೆಹೋವನು ನಮ್ಮನ್ನು ಈಜಿಪ್ಟಿನಲ್ಲಿ ಕೊಂದಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು. ನಮಗೆ ಈಜಿಪ್ಟಿನಲ್ಲಿ ಮಾಂಸವೂ ರೊಟ್ಟಿಯೂ ಇತ್ತು. ನಮಗೆ ಬೇಕಿದ್ದ ಆಹಾರವೆಲ್ಲಾ ನಮ್ಮಲ್ಲಿತ್ತು. ಆದರೆ ಈಗ ನೀವು ನಮ್ಮನ್ನು ಈ ಅರಣ್ಯಕ್ಕೆ ಕರೆದುಕೊಂಡು ಬಂದಿರಿ. ನಾವೆಲ್ಲರೂ ಇಲ್ಲಿ ಹಸಿವೆಯಿಂದ ಸಾಯುವೆವು” ಎಂದು ಹೇಳಿದರು.
4 ಆಗ ಯೆಹೋವನು ಮೋಶೆಗೆ, “ಆಕಾಶದಿಂದ ನಿಮಗೋಸ್ಕರ ರೊಟ್ಟಿ ಸುರಿಯುವಂತೆ ಮಾಡುವೆನು. ಪ್ರತಿದಿನ ಅವರು ಹೊರಗೆ ಹೋಗಿ, ತಮಗೆ ಆ ದಿನದಲ್ಲಿ ತಿನ್ನಲು ಬೇಕಾದ ಆಹಾರವನ್ನು ಕೂಡಿಸಿಕೊಳ್ಳಬೇಕು. ನಾನು ಹೇಳುವುದನ್ನು ಅವರು ಮಾಡುತ್ತಾರೊ ಇಲ್ಲವೊ ಎಂದು ನೋಡಲು ನಾನು ಇದನ್ನು ಮಾಡುವೆನು. 5 ಪ್ರತಿದಿನವು ಅವರು ಒಂದು ದಿನಕ್ಕೆ ಬೇಕಾದಷ್ಟು ಆಹಾರವನ್ನು ಕೂಡಿಸಿಕೊಳ್ಳಬೇಕು. ಆದರೆ ಶುಕ್ರವಾರ ಅವರು ತಮ್ಮ ಆಹಾರವನ್ನು ಸಿದ್ಧಪಡಿಸುವಾಗ ಎರಡು ದಿನಗಳಿಗೆ ಬೇಕಾದಷ್ಟು ಆಹಾರವಿರುವುದನ್ನು ಅವರು ನೋಡುವರು” ಎಂದು ಹೇಳಿದನು.
6 ಆದ್ದರಿಂದ ಮೋಶೆಯು ಮತ್ತು ಆರೋನನು ಇಸ್ರೇಲರಿಗೆ, “ಈ ರಾತ್ರಿ ನೀವು ಯೆಹೋವನ ಶಕ್ತಿಯನ್ನು ನೋಡುವಿರಿ. ನಿಮ್ಮನ್ನು ಈಜಿಪ್ಟಿನಿಂದ ರಕ್ಷಿಸಿದವನು ಆತನೇ ಎಂದು ತಿಳಿದುಕೊಳ್ಳುವಿರಿ. 7 ನಾಳೆ ಬೆಳಿಗ್ಗೆ ನೀವು ಯೆಹೋವನ ಮಹಿಮೆಯನ್ನು ನೋಡುವಿರಿ. ನೀವು ಯೆಹೋವನ ಮೇಲೆ ಗುಣುಗುಟ್ಟಿದ್ದೀರಿ. ಆತನು ನಿಮ್ಮ ಗುಣುಗುಟ್ಟುವಿಕೆಯನ್ನು ಕೇಳಿದ್ದಾನೆ; ಆತನೇ ನಿಮಗೆ ಸಹಾಯ ಮಾಡುವನು. ನಮ್ಮ ಮೇಲೆ ನೀವು ಗುಣುಗುಟ್ಟುತ್ತಾ ಬರಲು ನಾವೆಷ್ಟರವರು? ನಿಮ್ಮನ್ನು ಈಜಿಪ್ಟಿನಿಂದ ಕರೆತಂದವನು ಯೆಹೋವನೇ. ಆತನೇ ನಿಮ್ಮ ಅಗತ್ಯತೆಗಳನ್ನು ಪೂರೈಸುವನು” ಎಂದು ಹೇಳಿದರು.
8 ಅಲ್ಲದೆ ಮೋಶೆಯು, “ನೀವು ಗೊಣಗುಟ್ಟುತ್ತಿರುವುದನ್ನು ಯೆಹೋವನು ಕೇಳಿದ್ದಾನೆ. ಆದ್ದರಿಂದ ರಾತ್ರಿಯಲ್ಲಿ ಆತನು ನಿಮಗೆ ಮಾಂಸವನ್ನು ಕೊಡುವನು. ಪ್ರತಿ ಮುಂಜಾನೆ ನಿಮಗೆ ಬೇಕಾದಷ್ಟು ರೊಟ್ಟಿಯು ದೊರಕುವುದು. ನೀವು (ಆರೋನನ ಮೇಲೂ ನನ್ನ ಮೇಲೂ) ಗೊಣಗುಟ್ಟುತ್ತಿದ್ದೀರಿ? ಆದರೆ ನಮಗೆ ದೂರು ಹೇಳಲು ನಾವೆಷ್ಟರವರು? ನೀವು ಯೆಹೋವನ ವಿರುದ್ಧವಾಗಿ ದೂರು ಹೇಳುತ್ತಿದ್ದೀರೆಂಬುದು ನಿಮ್ಮ ಜ್ಞಾಪಕದಲ್ಲಿರಲಿ” ಎಂದು ಹೇಳಿದನು.
9 ಬಳಿಕ ಮೋಶೆ ಆರೋನನಿಗೆ, “ಇಸ್ರೇಲರೊಂದಿಗೆ ಮಾತಾಡು. ಅವರಿಗೆ, ‘ಯೆಹೋವನ ಮುಂದೆ ಒಟ್ಟಾಗಿ ನೆರೆದು ಬನ್ನಿ: ಯಾಕೆಂದರೆ ಆತನು ನಿಮ್ಮ ಗೊಣಗುಟ್ಟುವಿಕೆಯನ್ನು ಕೇಳಿದ್ದಾನೆ’ ಎಂದು ಹೇಳು” ಅಂದನು.
10 ಅರೋನನು ಇಸ್ರೇಲರೆಲ್ಲರೊಂದಿಗೆ ಮಾತಾಡಿದನು. ಅವರೆಲ್ಲರೂ ಒಂದು ಸ್ಥಳದಲ್ಲಿ ಕೂಡಿಬಂದರು. ಆರೋನನು ಅವರೊಂದಿಗೆ ಮಾತಾಡುತ್ತಿದ್ದಾಗ ಅವರೆಲ್ಲರೂ ಅರಣ್ಯದ ಕಡೆಗೆ ತಿರುಗಿನೋಡಿದರು. ಮೇಘದಲ್ಲಿ ಯೆಹೋವನ ಮಹಿಮೆಯು ಪ್ರತ್ಯಕ್ಷವಾದದ್ದನ್ನು ಅವರೆಲ್ಲರೂ ಕಂಡರು.
11 ಯೆಹೋವನು ಮೋಶೆಗೆ, 12 “ನಾನು ಇಸ್ರೇಲರ ಗೊಣಗುಟ್ಟುವಿಕೆಯನ್ನು ಕೇಳಿದ್ದೇನೆ. ಆದ್ದರಿಂದ ಅವರಿಗೆ ಹೀಗೆ ಹೇಳು: ‘ಸೂರ್ಯಾಸ್ತಮಕ್ಕಿಂತ ಮೊದಲು ನೀವು ಮಾಂಸವನ್ನು ತಿನ್ನುವಿರಿ; ಪ್ರತಿ ಮುಂಜಾನೆ ಸೂರ್ಯೋದಯಕ್ಕಿಂತ ಮೊದಲು ನಿಮಗೆ ಬೇಕಾದಷ್ಟು ರೊಟ್ಟಿಯನ್ನು ತಿನ್ನುವಿರಿ. ಆಗ ನಾನೇ ದೇವರಾದ ಯೆಹೋವನೆಂಬುದನ್ನು ನೀವು ತಿಳಿದುಕೊಳ್ಳುವಿರಿ; ನನ್ನಲ್ಲಿ ಭರವಸೆ ಇಡುವಿರಿ’” ಎಂದು ಹೇಳಿದನು.
13 ಸಾಯಂಕಾಲ ಲಾವಕ್ಕಿಗಳು ಪಾಳೆಯದ ಸುತ್ತಲೂ ಬಂದವು. ಜನರು ಮಾಂಸಕ್ಕಾಗಿ ಈ ಪಕ್ಷಿಗಳನ್ನು ಹಿಡಿದರು ಮತ್ತು ಪ್ರತಿ ಮುಂಜಾನೆ ಅವರ ಪಾಳೆಯದ ಸುತ್ತಲೂ ಮಂಜು ನೆಲದ ಮೇಲೆ ಬಿದ್ದಿತ್ತು. 14 ಸೂರ್ಯನು ಮೇಲಕ್ಕೇರಿದ ನಂತರ ಮಂಜು ಕರಗಿ ಇಲ್ಲವಾಯಿತು. ಆದರೆ ಮಂಜು ಕರಗಿ ಹೋದನಂತರ ನೆಲದ ಮೇಲೆ ಮಂಜಿನ ಹನಿಗಳಂತಿದ್ದ ತೆಳುವಾದ ಕಾಳುಗಳು ಬಿದ್ದಿದ್ದವು. 15 ಇಸ್ರೇಲರು ಅದನ್ನು ನೋಡಿ “ಏನದು” ಎಂಬುದಾಗಿ ಒಬ್ಬರನ್ನೊಬ್ಬರು ಕೇಳಿದರು. ಅದು ಏನೆಂದು ಅವರಿಗೆ ಗೊತ್ತಿಲ್ಲದ ಕಾರಣ ಅವರು ಈ ಪ್ರಶ್ನೆಯನ್ನು ಕೇಳಿದರು. ಆದ್ದರಿಂದ ಮೋಶೆ ಅವರಿಗೆ, “ಇದು ಯೆಹೋವನು ನಿಮಗೆ ಕೊಟ್ಟಿರುವ ಆಹಾರ.
31 ಜನರು ಈ ವಿಶೇಷ ಆಹಾರವನ್ನು ಮನ್ನ ಎಂದು ಕರೆಯತೊಡಗಿದರು. ಮನ್ನವು ಚಿಕ್ಕದಾದ ಬಿಳಿ ಕೊತ್ತಂಬರಿ ಬೀಜಗಳಂತಿದ್ದವು ಮತ್ತು ಜೇನುತುಪ್ಪದಿಂದ ಮಾಡಿದ ತೆಳುವಾದ ರೊಟ್ಟಿಯಂತೆ ರುಚಿಯಾಗಿತ್ತು. 32 ಮೋಶೆಯು, “ಯೆಹೋವನು ಆಜ್ಞಾಪಿಸಿದ್ದೇನೆಂದರೆ, ‘ಮೂರು ಸೇರಿನಷ್ಟು ಮನ್ನವನ್ನು ನಿಮ್ಮ ಮುಂದಿನ ಸಂತತಿಯವರಿಗಾಗಿ ಉಳಿಸಿರಿ. ನಾನು ನಿಮ್ಮನ್ನು ಈಜಿಪ್ಟಿನಿಂದ ಹೊರಗೆ ನಡೆಸಿದಾಗ ಅರಣ್ಯದಲ್ಲಿ ನಾನು ನಿಮಗೆ ಕೊಟ್ಟ ಈ ಆಹಾರವನ್ನು ನೋಡುವರು’” ಎಂದು ಹೇಳಿದನು.
33 ಆದ್ದರಿಂದ ಮೋಶೆಯು ಆರೋನನಿಗೆ, “ಒಂದು ಭರಣಿಯನ್ನು ತೆಗೆದುಕೊಂಡು ಅದರಲ್ಲಿ ಮೂರು ಸೇರಿನಷ್ಟು ಮನ್ನವನ್ನು ತುಂಬಿಸು. ನಿಮ್ಮ ಮುಂದಿನ ಸಂತತಿಯವರು ನೋಡುವುದಕೋಸ್ಕರ ಇದನ್ನು ಉಳಿಸಿ ಯೆಹೋವನ ಮುಂದೆ ಇಡು” ಎಂದು ಹೇಳಿದನು. 34 (ನಂತರ ಆರೋನನು, ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಮಾಡಿದನು. ಆರೋನನು ಮನ್ನದ ಭರಣಿಯನ್ನು ಒಡಂಬಡಿಕೆಯ ಮುಂದುಗಡೆಯಲ್ಲಿ ಇಟ್ಟನು.) 35 ನಲವತ್ತು ವರ್ಷಗಳವರೆಗೆ ಜನರು ಮನ್ನವನ್ನು ತಿಂದರು. ಅವರು ವಿಶ್ರಾಂತಿಯ ದೇಶಕ್ಕೆ ಬರುವ ತನಕ, ಅಂದರೆ ಕಾನಾನಿನ ಗಡಿಗೆ ಬರುವವರೆಗೆ ಮನ್ನವನ್ನು ತಿಂದರು.
ನಾಲ್ಕು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ
(ಮಾರ್ಕ 8:1-10)
32 ಯೇಸು ತನ್ನ ಶಿಷ್ಯರನ್ನು ಕರೆದು, “ನಾನು ಈ ಜನರಿಗಾಗಿ ದುಃಖಪಡುತ್ತೇನೆ. ಇವರು ಮೂರು ದಿನಗಳಿಂದ ನನ್ನ ಜೊತೆಯಲ್ಲಿದ್ದಾರೆ. ಈಗ ಇವರಿಗೆ ಊಟಕ್ಕೆ ಏನೂ ಇಲ್ಲ. ಇವರನ್ನು ಹಸಿವಿನಿಂದ ಕಳುಹಿಸಿಬಿಡುವುದಕ್ಕೆ ನನಗೆ ಮನಸ್ಸಿಲ್ಲ. ಇವರು ಮನೆಗೆ ಹೋಗುತ್ತಿರುವಾಗ ಬಳಲಿಹೋಗಬಹುದು” ಎಂದು ಹೇಳಿದನು.
33 ಶಿಷ್ಯರು ಯೇಸುವಿಗೆ, “ಈ ಜನರೆಲ್ಲರಿಗೂ ಊಟಕ್ಕೆ ಬೇಕಾಗುವಷ್ಟು ರೊಟ್ಟಿ ನಮಗೆ ಎಲ್ಲಿ ಸಿಕ್ಕುತ್ತದೆ? ಇಲ್ಲಿಗೆ ಯಾವ ಊರೂ ಸಮೀಪವಾಗಿಲ್ಲ” ಎಂದು ಹೇಳಿದರು.
34 ಆತನು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದನು.
ಶಿಷ್ಯರು, “ನಮ್ಮಲ್ಲಿ ಏಳು ರೊಟ್ಟಿಗಳಿವೆ ಮತ್ತು ಕೆಲವು ಸಣ್ಣ ಮೀನುಗಳಿವೆ” ಎಂದರು.
35 ಆಗ ಜನರಿಗೆ ನೆಲದ ಮೇಲೆ ಕುಳಿತುಕೊಳ್ಳುವುದಕ್ಕೆ ಆತನು ಆಜ್ಞಾಪಿಸಿ, 36 ಆ ಏಳು ರೊಟ್ಟಿಗಳನ್ನು ಮತ್ತು ಮೀನುಗಳನ್ನು ತೆಗೆದುಕೊಂಡು ಅವುಗಳಿಗಾಗಿ ದೇವರಿಗೆ ಸ್ತೋತ್ರ ಸಲ್ಲಿಸಿದನು. ಬಳಿಕ ಅವುಗಳನ್ನು ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಅವುಗಳನ್ನು ಜನರಿಗೆ ಹಂಚಿದರು. 37 ಜನರೆಲ್ಲರೂ ತಿಂದು ತೃಪ್ತರಾದರು. ಬಳಿಕ ತಿನ್ನಲಾರದೆ ಉಳಿದುಹೋದ ಆಹಾರದ ಚೂರುಗಳನ್ನು ಶಿಷ್ಯರು ಶೇಖರಿಸಿದಾಗ ಏಳು ಬುಟ್ಟಿಗಳು ತುಂಬಿಹೋದವು. 38 ಅಂದು ಊಟ ಮಾಡಿದ್ದವರಲ್ಲಿ ಗಂಡಸರೇ ಸುಮಾರು ನಾಲ್ಕುಸಾವಿರ ಮಂದಿಯಿದ್ದರು. ಇವರಲ್ಲದೆ ಹೆಂಗಸರು ಮತ್ತು ಮಕ್ಕಳು ಸಹ ಊಟಮಾಡಿದರು. 39 ಬಳಿಕ ಯೇಸು ತಮ್ಮತಮ್ಮ ಮನೆಗಳಿಗೆ ಹೋಗುವಂತೆ ಅವರಿಗೆ ಹೇಳಿ ಕಳುಹಿಸಿದನು. ಅನಂತರ ದೋಣಿಯನ್ನು ಹತ್ತಿ ಮಗದಾನ್ ಎಂಬ ಪ್ರಾಂತ್ಯಕ್ಕೆ ಹೋದನು.
Kannada Holy Bible: Easy-to-Read Version. All rights reserved. © 1997 Bible League International