Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 85:8-13

ದೇವರಾದ ಯೆಹೋವನು ಹೇಳಿದ್ದು ನನಗೆ ಕೇಳಿಸಿತು.
    ತನ್ನ ಜನರಿಗೂ ತನ್ನ ಸದ್ಭಕ್ತರಿಗೂ ಶಾಂತಿ ಇರುವುದೆಂದು ಆತನು ಹೇಳಿದನು.
    ಆದ್ದರಿಂದ ಅವರು ತಮ್ಮ ಮೂಢಜೀವನಕ್ಕೆ ಹೋಗಕೂಡದು.
ದೇವರು ತನ್ನ ಭಕ್ತರನ್ನು ರಕ್ಷಿಸುವ ಕಾಲ ಸಮೀಪವಾಗಿದೆ.
    ನಾವು ಸ್ವದೇಶದಲ್ಲಿ ಗೌರವದೊಂದಿಗೆ ನೆಲೆಸುವ ಸಮಯ ಹತ್ತಿರವಾಗಿದೆ.
10 ದೇವರ ನಿಜಪ್ರೀತಿಯು ಆತನ ಭಕ್ತರನ್ನು ಸಂಧಿಸುತ್ತದೆ.
    ನೀತಿಯೂ ಸಮಾಧಾನವೂ ಅವರಿಗೆ ಮುದ್ದಿಡುತ್ತವೆ.
11 ನಿವಾಸಿಗಳೆಲ್ಲರೂ ದೇವರಿಗೆ ನಂಬಿಗಸ್ತರಾಗಿರುವರು.
    ಪರಲೋಕದ ದೇವರು ಅವರಿಗೆ ಒಳ್ಳೆಯವನಾಗಿರುವನು.[a]
12 ಯೆಹೋವನು ನಮಗೆ ಒಳ್ಳೆಯವುಗಳನ್ನು ಹೇರಳವಾಗಿ ಒದಗಿಸುವನು.
    ಭೂಮಿಯು ಒಳ್ಳೆಯ ಬೆಳೆಗಳನ್ನು ಬೆಳೆಯಿಸುವುದು.
13 ನೀತಿಯು ಆತನ ಮುಂದೆ ಹೋಗುತ್ತಾ
    ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದು.

1 ರಾಜರುಗಳು 18:41-46

ಮಳೆಯು ಮತ್ತೆ ಸುರಿಯಿತು

41 ನಂತರ ಎಲೀಯನು ರಾಜನಾದ ಅಹಾಬನಿಗೆ, “ಈಗ ಹೋಗಿ, ಅನ್ನಪಾನಗಳನ್ನು ತೆಗೆದುಕೋ. ಬಿರುಸಾದ ಮಳೆಯು ಸುರಿಯುವುದು” ಎಂದು ಹೇಳಿದನು. 42 ರಾಜನಾದ ಅಹಾಬನು ಅನ್ನಪಾನಗಳನ್ನು ತೆಗೆದುಕೊಳ್ಳಲು ಹೋದನು. ಅದೇ ಸಮಯದಲ್ಲಿ ಎಲೀಯನು ಕರ್ಮೆಲ್ ಬೆಟ್ಟದ ತುದಿಗೆ ಹತ್ತಿದನು. ಎಲೀಯನು ಬೆಟ್ಟದ ತುದಿಯಲ್ಲಿ ಸಾಷ್ಟಾಂಗವೆರಗಿದನು. ಅವನು ತನ್ನ ಮೊಣಕಾಲುಗಳ ನಡುವೆ ತಲೆಯನ್ನು ಇಟ್ಟುಕೊಂಡನು. 43 ಎಲೀಯನು ತನ್ನ ಸೇವಕನಿಗೆ, “ಸಮುದ್ರದ ಕಡೆಗೆ ನೋಡು” ಎಂದು ಹೇಳಿದನು.

ಸಮುದ್ರವು ಕಾಣುವ ಸ್ಥಳಕ್ಕೆ ಆ ಸೇವಕನು ಹೋದನು. ನಂತರ ಸೇವಕನು ಹಿಂದಿರುಗಿ ಬಂದು, “ನನಗೆ ಏನೂ ಕಾಣುತ್ತಿಲ್ಲ” ಎಂದನು. ಎಲೀಯನು ಆ ಸೇವಕನಿಗೆ, “ಹೋಗಿ ಮತ್ತೆ ನೋಡು” ಎಂದನು. ಹೀಗೆ ಆ ಸೇವಕನು ಏಳು ಸಲ ಹೋದನು. 44 ಏಳನೆಯ ಸಲ, ಸೇವಕನು ಹಿಂದಿರುಗಿ ಬಂದು, “ಒಬ್ಬ ಮನುಷ್ಯನ ಮುಷ್ಟಿ ಗಾತ್ರದ ಚಿಕ್ಕ ಮೋಡವನ್ನು ನಾನು ನೋಡಿದೆನು. ಆ ಮೋಡವು ಸಮುದ್ರದಿಂದ ಬರುತ್ತಿದೆ” ಎಂದನು.

ಎಲೀಯನು ಸೇವಕನಿಗೆ, “ರಾಜನಾದ ಅಹಾಬನ ಬಳಿಗೆ ಹೋಗಿ, ತನ್ನ ರಥವನ್ನು ಸಿದ್ಧಗೊಳಿಸಿ ಈಗಲೇ ಮನೆಗೆ ಹೋಗುವಂತೆ ಅವನಿಗೆ ಹೇಳು, ಅವನೀಗ ಬಿಟ್ಟುಹೋಗದಿದ್ದರೆ, ಮಳೆಯು ಅವನನ್ನು ತಡೆಯುತ್ತದೆ” ಎಂದು ಹೇಳಿದನು.

45 ಸ್ವಲ್ಪ ಹೊತ್ತಿನಲ್ಲಿಯೇ, ಆಕಾಶವು ಕಪ್ಪಾದ ಮೋಡಗಳಿಂದ ಕವಿದುಕೊಂಡಿತು. ಗಾಳಿಯು ಬೀಸಲಾರಂಭಿಸಿತು ಮತ್ತು ಬಿರುಸಾದ ಮಳೆಯು ಸುರಿಯಲಾರಂಭಿಸಿತು. ಅಹಾಬನು ತನ್ನ ರಥವನ್ನೇರಿ, ಇಜ್ರೇಲಿಗೆ ಪ್ರಯಾಣ ಮಾಡಲಾರಂಭಿಸಿದನು. 46 ಯೆಹೋವನ ಶಕ್ತಿಯು ಎಲೀಯನ ಮೇಲೆ ಬಂದಿತು. ಎಲೀಯನು ಓಡುವುದಕ್ಕಾಗಿ ತನ್ನ ಬಟ್ಟೆಗಳನ್ನು ತನ್ನ ಸುತ್ತಲೂ ಬಿಗಿದುಕೊಂಡನು. ನಂತರ ಎಲೀಯನು ರಾಜನಾದ ಅಹಾಬನಿಗಿಂತ ಮುಂಚೆ ಇಜ್ರೇಲಿನ ದಾರಿಯುದ್ದಕ್ಕೂ ಓಡುತ್ತಲೇ ಹೋದನು.

ಮತ್ತಾಯ 16:1-4

ಯೇಸುವನ್ನು ಪರೀಕ್ಷಿಸಲು ಯೆಹೂದ್ಯ ನಾಯಕರ ಪ್ರಯತ್ನ

(ಮಾರ್ಕ 8:11-13; ಲೂಕ 12:54-56)

16 ಫರಿಸಾಯರು ಮತ್ತು ಸದ್ದುಕಾಯರು ಯೇಸುವಿನ ಬಳಿಗೆ ಬಂದರು. ಅವರು ಯೇಸುವನ್ನು ಪರೀಕ್ಷಿಸಲು, “ನೀನು ದೇವರಿಂದ ಬಂದವನೆಂಬುದನ್ನು ನಿರೂಪಿಸಲು ಒಂದು ಅದ್ಭುತಕಾರ್ಯವನ್ನು ಮಾಡಿ ತೋರಿಸು” ಎಂದು ಕೇಳಿದರು.

ಯೇಸು, “ಸೂರ್ಯನು ಮುಳುಗುವಾಗ ಹವಾಮಾನ ಹೇಗಿರುತ್ತದೆ ಎಂಬುದು ನಿಮಗೆ ತಿಳಿದಿದೆ. ಆಕಾಶವು ಕೆಂಪಾಗಿದ್ದರೆ, ನಮಗೆ ಒಳ್ಳೆಯ ಹವಾಮಾನವಿರುತ್ತದೆ ಎಂದು ಹೇಳುತ್ತೀರಿ. ಬೆಳಿಗ್ಗೆ ಸೂರ್ಯೋದಯವನ್ನು ಗಮನಿಸುತ್ತೀರಿ. ಆಕಾಶವು ಕಪ್ಪಾಗಿದ್ದರೆ ಅಥವಾ ಕೆಂಪಾಗಿದ್ದರೆ, ಈ ದಿನ ಮಳೆ ಬರುತ್ತದೆ ಎಂದು ಹೇಳುತ್ತೀರಿ. ಇವುಗಳು ಹವಾಮಾನದ ಗುರುತುಗಳಾಗಿವೆ. ನೀವು ಈ ಗುರುತುಗಳನ್ನು ಕಂಡು ಅವುಗಳ ಅರ್ಥವನ್ನು ತಿಳಿದುಕೊಳ್ಳುತ್ತೀರಿ. ಅದೇ ರೀತಿಯಲ್ಲಿ ಈಗ ನೀವು ನೋಡುತ್ತಿರುವ ಇಂದಿನ ಸಂಗತಿಗಳು ಸಹ ಗುರುತುಗಳಾಗಿವೆ. ಆದರೆ ನಿಮಗೆ ಈ ಗುರುತುಗಳ ಅರ್ಥವು ಗೊತ್ತಿಲ್ಲ. ಕೆಟ್ಟವರಾದ ಮತ್ತು ಪಾಪಿಗಳಾದ ಜನರು ಸೂಚನೆಗಾಗಿ ಒಂದು ಅದ್ಭುತಕಾರ್ಯವನ್ನು ಅಪೇಕ್ಷಿಸುತ್ತಾರೆ. ಅವರಿಗೆ ಯೋನನಲ್ಲಾದ ಸೂಚಕಕಾರ್ಯವೊಂದೇ[a] ಹೊರತು ಬೇರೆ ಯಾವ ಸೂಚಕಕಾರ್ಯವೂ ದೊರೆಯುವುದಿಲ್ಲ” ಎಂದು ಉತ್ತರಕೊಟ್ಟನು. ಬಳಿಕ ಯೇಸು ಆ ಸ್ಥಳವನ್ನು ಬಿಟ್ಟು ಹೊರಟುಹೋದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International