Revised Common Lectionary (Complementary)
ರಚನೆಗಾರ: ದಾವೀದ.
26 ಯೆಹೋವನೇ, ನನಗೆ ನ್ಯಾಯವನ್ನು ನಿರ್ಣಯಿಸು; ನನ್ನ ಜೀವಿತ ಶುದ್ಧವಾಗಿತ್ತೆಂದು ನಿರೂಪಿಸು.
ನಾನು ಯೆಹೋವನಲ್ಲಿಯೇ ಭರವಸವಿಟ್ಟಿದ್ದೆನು.
2 ಯೆಹೋವನೇ, ನನ್ನನ್ನು ಪರೀಕ್ಷಿಸಿ ತಿಳಿದುಕೊ.
ನನ್ನ ಹೃದಯವನ್ನೂ ಮನಸ್ಸನ್ನೂ ಸೂಕ್ಷ್ಮವಾಗಿ ಪರಿಶೋಧಿಸು.
3 ನಿನ್ನ ಶಾಶ್ವತ ಪ್ರೀತಿಯನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದೇನೆ.
ನಿನ್ನ ಸತ್ಯಕ್ಕನುಸಾರವಾಗಿ ಜೀವಿಸುವೆನು.
4 ಅಯೋಗ್ಯರಾದ ಅವರಲ್ಲಿ ನಾನೂ ಒಬ್ಬನಲ್ಲ.
ನಾನು ಕಪಟಿಗಳ ಜೊತೆ ಸೇರುವವನಲ್ಲ.
5 ಆ ದುಷ್ಟ ತಂಡಗಳನ್ನು ನಾನು ದ್ವೇಷಿಸುತ್ತೇನೆ.
ಮೋಸಗಾರರ ಆ ತಂಡಗಳಿಗೆ ನಾನು ಸೇರುವುದಿಲ್ಲ.
6 ಯೆಹೋವನೇ, ನಾನು ನಿನ್ನ ಯಜ್ಞವೇದಿಕೆಯ[a] ಸುತ್ತಲೂ ನಡೆಯಲು
ನನ್ನ ಕೈಗಳನ್ನು ತೊಳೆದುಕೊಳ್ಳುತ್ತೇನೆ.
7 ನಾನು ನಿನಗೆ ಸ್ತುತಿಗೀತೆಗಳನ್ನು ಹಾಡುವೆನು.
ನಿನ್ನ ಅದ್ಭುತಕಾರ್ಯಗಳ ಕುರಿತು ಹಾಡುವೆನು.
8 ಯೆಹೋವನೇ, ನಿನ್ನ ಆಲಯವೂ ನಿನ್ನ ಮಹಿಮಾಗುಡಾರವೂ
ನನಗೆ ಎಷ್ಟೋ ಪ್ರಿಯವಾಗಿವೆ.
13 ಆಗ ನಾನು ಯೆಹೋವನಿಗೆ, “ನನ್ನ ಒಡೆಯನಾದ ಯೆಹೋವನೇ, ಪ್ರವಾದಿಗಳು ಜನರಿಗೆ ಬೇರೆಯದನ್ನೇ ಹೇಳಿದರು. ಅವರು ಯೆಹೂದದ ಜನರಿಗೆ, ‘ನೀವು ಶತ್ರುವಿನ ಖಡ್ಗಕ್ಕೆ ತುತ್ತಾಗುವದಿಲ್ಲ. ನೀವೆಂದಿಗೂ ಹಸಿವಿನಿಂದ ಬಳಲುವದಿಲ್ಲ, ಯೆಹೋವನು ಈ ದೇಶದಲ್ಲಿ ನಿಮಗೆ ನೆಮ್ಮದಿಯನ್ನು ದಯಪಾಲಿಸುವನು’ ಎಂದು ಹೇಳುತ್ತಿದ್ದರು” ಎಂದೆನು.
14 ಆಗ ಯೆಹೋವನು ನನಗೆ, “ಯೆರೆಮೀಯನೇ, ಆ ಪ್ರವಾದಿಗಳು ನನ್ನ ಹೆಸರಿನಿಂದ ಸುಳ್ಳುಬೋಧನೆ ಮಾಡುತ್ತಾರೆ. ನಾನು ಆ ಪ್ರವಾದಿಗಳನ್ನು ಕಳುಹಿಸಲಿಲ್ಲ. ಅವರಿಗೆ ನಾನು ಯಾವ ಅಪ್ಪಣೆಯನ್ನೂ ಕೊಟ್ಟಿಲ್ಲ, ಅವರೊಂದಿಗೆ ನಾನು ಮಾತನ್ನೂ ಆಡಿಲ್ಲ. ಆ ಪ್ರವಾದಿಗಳು ಸುಳ್ಳುದರ್ಶನಗಳನ್ನು ನಿಷ್ಪ್ರಯೋಜಕವಾದ ಮಾಟಮಂತ್ರಗಳನ್ನು ಸ್ವಕಲ್ಪಿತ ವಿಚಾರಗಳನ್ನೂ ಬೋಧಿಸುತ್ತಿದ್ದಾರೆ. 15 ನನ್ನ ಹೆಸರಿನಲ್ಲಿ ಬೋಧನೆ ಮಾಡುತ್ತಿರುವ ಈ ಪ್ರವಾದಿಗಳ ಬಗ್ಗೆ ನಾನು ಹೇಳುವದು ಇಷ್ಟೇ. ನಾನು ಆ ಪ್ರವಾದಿಗಳನ್ನು ಕಳುಹಿಸಿಲ್ಲ. ಆ ಪ್ರವಾದಿಗಳು ‘ಶತ್ರುಗಳು ಖಡ್ಗಧಾರಿಗಳಾಗಿ ಎಂದಿಗೂ ಈ ದೇಶದ ಮೇಲೆ ಧಾಳಿ ಮಾಡುವದಿಲ್ಲ. ಈ ದೇಶದಲ್ಲಿ ಎಂದೂ ಕ್ಷಾಮ ಕಾಣಿಸಿಕೊಳ್ಳುವದಿಲ್ಲ’ ಎಂದು ಹೇಳಿದ್ದಾರೆ. ಆದರೆ ಆ ಪ್ರವಾದಿಗಳು ಹಸಿವಿನ ತಾಪದಿಂದ ಸಾಯುತ್ತಾರೆ ಮತ್ತು ಶತ್ರುವಿನ ಖಡ್ಗ ಅವರನ್ನು ಕೊಲ್ಲುತ್ತದೆ. 16 ಯಾರಿಗೆ ಪ್ರವಾದಿಗಳು ಬೋಧನೆ ಮಾಡಿದ್ದರೋ ಅವರನ್ನು ಬೀದಿಗಳಲ್ಲಿ ಎಸೆಯಲಾಗುವದು. ಆ ಜನರು ಹಸಿವಿನಿಂದ ಮತ್ತು ಶತ್ರುಗಳ ಖಡ್ಗಗಳಿಂದ ಮಡಿಯುವರು. ಆ ಜನರನ್ನೂ ಅವರ ಹೆಂಡತಿಯರನ್ನೂ ಮಕ್ಕಳನ್ನೂ ಹೂಣಿಡುವದಕ್ಕೆ ಯಾರೂ ಇರುವದಿಲ್ಲ. ನಾನು ಅವರನ್ನು ದಂಡಿಸುತ್ತೇನೆ.
17 “ಯೆರೆಮೀಯನೇ, ಯೆಹೂದದ ಜನರಿಗೆ
ಈ ಸಂದೇಶವನ್ನು ಹೇಳು:
‘ನನ್ನ ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡಿದೆ. ನಾನು ನಿರಂತರವಾಗಿ ಹಗಲಿರುಳು ಅಳುವೆನು.
ನಾನು ನನ್ನ ಕನ್ಯೆಯಾದ ಮಗಳಿಗಾಗಿ[a] ಅಳುವೆನು. ನಾನು ನನ್ನ ಜನರಿಗಾಗಿ ಅಳುವೆನು.
ಏಕೆಂದರೆ ಯಾರೋ ಒಬ್ಬರು ಅವರನ್ನು ಹೊಡೆದು ಸದೆಬಡಿದಿದ್ದಾರೆ,
ಅವರಿಗೆ ಬಹಳ ಗಾಯಗಳಾಗಿವೆ.
18 ನಾನು ನಗರಗಳ ಹೊರಗಡೆ ಹೋದರೆ
ಖಡ್ಗಗಳಿಗೆ ಆಹುತಿಯಾಗಿ ಸತ್ತವರು ನನ್ನ ಕಣ್ಣಿಗೆ ಬೀಳುತ್ತಾರೆ.
ನಾನು ನಗರಗಳಿಗೆ ಹೋದರೆ ಕ್ಷಾಮದಿಂದ ಬಳಲುವ ಜನರು ನನ್ನ ಕಣ್ಣಿಗೆ ಬೀಳುತ್ತಾರೆ.
ಅವರಿಗೆ ತಿನ್ನಲು ಅನ್ನವಿಲ್ಲ.
ಯಾಜಕರನ್ನು ಮತ್ತು ಪ್ರವಾದಿಗಳನ್ನು
ಪರದೇಶಕ್ಕೆ ತೆಗೆದುಕೊಂಡು ಹೋಗಲಾಗಿದೆ.’”
5 ನೀವು ದೇವರ ಪ್ರಿಯ ಮಕ್ಕಳಾಗಿದ್ದೀರಿ; ಆದ್ದರಿಂದ ನೀವು ಆತನನ್ನು ಅನುಸರಿಸಬೇಕು. 2 ಪ್ರೀತಿಯಿಂದ ಬಾಳಿರಿ. ಕ್ರಿಸ್ತನು ನಮ್ಮನ್ನು ಪ್ರೀತಿಸಿದಂತೆ ನೀವೂ ಇತರರನ್ನು ಪ್ರೀತಿಸಿರಿ. ಕ್ರಿಸ್ತನು ನಮಗೋಸ್ಕರವಾಗಿ ತನ್ನನ್ನೇ ಪರಿಮಳದ ಕಾಣಿಕೆಯಾಗಿಯೂ ಯಜ್ಞವಾಗಿಯೂ ದೇವರಿಗೆ ಸಮರ್ಪಿಸಿಕೊಂಡನು.
3 ಆದರೆ ನಿಮ್ಮ ಮಧ್ಯದಲ್ಲಿ ಲೈಂಗಿಕ ಪಾಪವಿರಕೂಡದು. ಯಾವ ಬಗೆಯ ದುಷ್ಟತ್ವವಾಗಲಿ ಸ್ವಾರ್ಥತೆಯಾಗಲಿ ಇರಕೂಡದು. ಏಕೆಂದರೆ ಅವುಗಳು ದೇವರ ಪರಿಶುದ್ಧ ಜನರಿಗೆ ಯೋಗ್ಯವಾದವುಗಳಲ್ಲ. 4 ಅಲ್ಲದೆ ನಿಮ್ಮ ಮಧ್ಯದಲ್ಲಿ ಕೆಟ್ಟಮಾತುಗಳು ಇರಕೂಡದು. ನೀವು ಮೂರ್ಖತನದಿಂದ ಮಾತಾಡಕೂಡದು ಮತ್ತು ಹೊಲಸಾದ ಹಾಸ್ಯನುಡಿಗಳನ್ನು ಹೇಳಕೂಡದು. ಇವುಗಳು ನಿಮಗೆ ಯೋಗ್ಯವಾದವುಗಳಲ್ಲ. ಆದರೆ ನೀವು ದೇವರಿಗೆ ಸ್ತೋತ್ರ ಸಲ್ಲಿಸುವವರಾಗಿರಬೇಕು. 5 ಇದು ನಿಮಗೆ ಚೆನ್ನಾಗಿ ತಿಳಿದಿರಲಿ: ಲೈಂಗಿಕ ಪಾಪಮಾಡುವವರಿಗೆ, ದುಷ್ಕೃತ್ಯಗಳನ್ನು ಮಾಡುವವರಿಗೆ, ಸ್ವಾರ್ಥಿಗಳಿಗೆ, ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಸ್ಥಳವೇ ಇಲ್ಲ. ಸ್ವಾರ್ಥತೆಯು ವಿಗ್ರಹಾರಾಧನೆಗೆ ಸಮಾನವಾಗಿದೆ.
6 ಅಸತ್ಯವಾದ ಸಂಗತಿಗಳನ್ನು ಹೇಳಿ ನಿಮ್ಮನ್ನು ಮೋಸಪಡಿಸಲು ಯಾರಿಗೂ ಅವಕಾಶ ಕೊಡಬೇಡಿ. ಆ ಕೆಟ್ಟಸಂಗತಿಗಳ ನಿಮಿತ್ತ ದೇವರ ಕೋಪವು ಆತನಿಗೆ ವಿಧೇಯರಾಗದ ಜನರ ಮೇಲೆ ಬರುತ್ತದೆ.
Kannada Holy Bible: Easy-to-Read Version. All rights reserved. © 1997 Bible League International