Revised Common Lectionary (Complementary)
8 ದೇವರಾದ ಯೆಹೋವನು ಹೇಳಿದ್ದು ನನಗೆ ಕೇಳಿಸಿತು.
ತನ್ನ ಜನರಿಗೂ ತನ್ನ ಸದ್ಭಕ್ತರಿಗೂ ಶಾಂತಿ ಇರುವುದೆಂದು ಆತನು ಹೇಳಿದನು.
ಆದ್ದರಿಂದ ಅವರು ತಮ್ಮ ಮೂಢಜೀವನಕ್ಕೆ ಹೋಗಕೂಡದು.
9 ದೇವರು ತನ್ನ ಭಕ್ತರನ್ನು ರಕ್ಷಿಸುವ ಕಾಲ ಸಮೀಪವಾಗಿದೆ.
ನಾವು ಸ್ವದೇಶದಲ್ಲಿ ಗೌರವದೊಂದಿಗೆ ನೆಲೆಸುವ ಸಮಯ ಹತ್ತಿರವಾಗಿದೆ.
10 ದೇವರ ನಿಜಪ್ರೀತಿಯು ಆತನ ಭಕ್ತರನ್ನು ಸಂಧಿಸುತ್ತದೆ.
ನೀತಿಯೂ ಸಮಾಧಾನವೂ ಅವರಿಗೆ ಮುದ್ದಿಡುತ್ತವೆ.
11 ನಿವಾಸಿಗಳೆಲ್ಲರೂ ದೇವರಿಗೆ ನಂಬಿಗಸ್ತರಾಗಿರುವರು.
ಪರಲೋಕದ ದೇವರು ಅವರಿಗೆ ಒಳ್ಳೆಯವನಾಗಿರುವನು.[a]
12 ಯೆಹೋವನು ನಮಗೆ ಒಳ್ಳೆಯವುಗಳನ್ನು ಹೇರಳವಾಗಿ ಒದಗಿಸುವನು.
ಭೂಮಿಯು ಒಳ್ಳೆಯ ಬೆಳೆಗಳನ್ನು ಬೆಳೆಯಿಸುವುದು.
13 ನೀತಿಯು ಆತನ ಮುಂದೆ ಹೋಗುತ್ತಾ
ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದು.
ಎಲೀಯನು ಮತ್ತು ಬಾಳನ ಪ್ರವಾದಿಗಳು
18 ಬರಗಾಲದ ಮೂರನೆ ವರ್ಷದಲ್ಲಿ ಯೆಹೋವನು ಎಲೀಯನಿಗೆ, “ಹೋಗಿ, ರಾಜನಾದ ಅಹಾಬನನ್ನು ಭೇಟಿಮಾಡು. ನಾನು ಬೇಗ ಮಳೆಯನ್ನು ಸುರಿಸುತ್ತೇನೆ” ಎಂದು ಹೇಳಿದನು. 2 ಎಲೀಯನು ಅಹಾಬನನ್ನು ಭೇಟಿಮಾಡಲು ಹೋದನು.
ಆಗ ಸಮಾರ್ಯದಲ್ಲಿ ಆಹಾರವಿರಲಿಲ್ಲ. 3 ರಾಜನಾದ ಅಹಾಬನು ಓಬದ್ಯನನ್ನು ತನ್ನ ಬಳಿಗೆ ಕರೆಯಿಸಿದನು. ಓಬದ್ಯನು ರಾಜನ ಅರಮನೆಯ ಮೇಲ್ವಿಚಾರಕನಾಗಿದ್ದನು. (ಓಬದ್ಯನು ಯೆಹೋವನ ನಿಜವಾದ ಹಿಂಬಾಲಕರಲ್ಲಿ ಒಬ್ಬನಾಗಿದ್ದನು. 4 ಒಂದು ಕಾಲದಲ್ಲಿ ಈಜೆಬೆಲಳು ಯೆಹೋವನ ಪ್ರವಾದಿಗಳನ್ನೆಲ್ಲ ಕೊಲ್ಲುತ್ತಿದ್ದಳು. ಓಬದ್ಯನು ನೂರು ಮಂದಿ ಪ್ರವಾದಿಗಳನ್ನು ಕರೆದೊಯ್ದು, ಅವರನ್ನು ಗುಹೆಗಳಲ್ಲಿ ಅಡಗಿಸಿಟ್ಟನು. ಓಬದ್ಯನು ಐವತ್ತು ಮಂದಿ ಪ್ರವಾದಿಗಳನ್ನು ಒಂದು ಗುಹೆಯಲ್ಲಿಯೂ ಉಳಿದ ಐವತ್ತು ಮಂದಿ ಪ್ರವಾದಿಗಳನ್ನು ಮತ್ತೊಂದು ಗುಹೆಯಲ್ಲಿಯೂ ಇಟ್ಟನು. ಓಬದ್ಯನು ಅವರಿಗೆ ಆಹಾರವನ್ನೂ ನೀರನ್ನೂ ಒದಗಿಸುತ್ತಿದ್ದನು.) 5 ರಾಜನಾದ ಅಹಾಬನು ಓಬದ್ಯನಿಗೆ, “ನನ್ನ ಜೊತೆಯಲ್ಲಿ ಬಾ. ನಾವು ದೇಶದಲ್ಲಿರುವ ಪ್ರತಿಯೊಂದು ನೀರಿನ ಬುಗ್ಗೆಗಳಿಗೂ ತೊರೆಗಳಿಗೂ ಹೋಗಿ ನಮ್ಮ ಕುದುರೆಗಳಿಗೂ ಹೇಸರಕತ್ತೆಗಳಿಗೂ ಸಾಕಷ್ಟು ಹುಲ್ಲು ಸಿಕ್ಕುತ್ತದೆಯೋ ನೋಡಿಕೊಂಡು ಬರೋಣ. ಸಿಕ್ಕುವುದಾದರೆ, ನಮ್ಮ ಪಶುಗಳು ಸಾಯುವುದಿಲ್ಲ” ಎಂದು ಹೇಳಿದನು. 6 ಅಂತೆಯೇ ನೀರನ್ನು ಕಂಡುಕೊಳ್ಳಲು ದೇಶದ ಒಂದು ಕಡೆಗೆ ಅಹಾಬನು, ಮತ್ತೊಂದು ಕಡೆಗೆ ಓಬದ್ಯನು ಹೊರಟರು. ಅವರಿಬ್ಬರೂ ದೇಶವನ್ನೆಲ್ಲಾ ಸಂಚರಿಸಿದರು. 7 ಓಬದ್ಯನು ಸಂಚರಿಸುತ್ತಿರುವಾಗ ಎಲೀಯನನ್ನು ಭೇಟಿಯಾದನು. ಓಬದ್ಯನು ಎಲೀಯನನ್ನು ಕಂಡ ಕೂಡಲೇ ಅವನನ್ನು ಗುರುತಿಸಿ ಎಲೀಯನಿಗೆ ಸಾಷ್ಟಾಂಗನಮಸ್ಕಾರ ಮಾಡಿ, “ನನ್ನ ಒಡೆಯನಾದ ಎಲೀಯನು ನೀನೋ?” ಎಂದು ಕೇಳಿದನು.
8 ಎಲೀಯನು, “ಹೌದು, ನಾನೇ. ಹೋಗಿ, ನಿನ್ನ ಒಡೆಯನಾದ ರಾಜನಿಗೆ ನಾನಿಲ್ಲಿದ್ದೇನೆಂದು ಹೇಳು” ಎಂದು ಉತ್ತರಿಸಿದನು.
9 ಆಗ ಓಬದ್ಯನು, “ನೀನು ಎಲ್ಲಿರುವೆ ಎಂಬುದು ನನಗೆ ತಿಳಿದಿದೆಯೆಂದು ನಾನು ರಾಜನಿಗೆ ಹೇಳಿದರೆ, ಅವನು ನನ್ನನ್ನು ಕೊಂದುಬಿಡುತ್ತಾನೆ! ನಾನು ನಿನಗೆ ಯಾವ ತಪ್ಪನ್ನೂ ಮಾಡಿಲ್ಲ! ನೀನೇಕೆ ನನ್ನನ್ನು ಸಾಯಿಸಬೇಕೆಂದಿರುವೆ? 10 ನಿನ್ನ ದೇವರಾದ ಯೆಹೋವನಾಣೆ, ರಾಜನು ನಿನಗಾಗಿ ಎಲ್ಲಾ ಕಡೆಯೂ ಹುಡುಕುತ್ತಿದ್ದಾನೆ! ಅವನು ನಿನ್ನನ್ನು ಕಂಡುಹಿಡಿಯಲು ಎಲ್ಲಾ ದೇಶಗಳಿಗೂ ಜನರನ್ನು ಕಳುಹಿಸಿದ್ದಾನೆ. ಒಂದು ದೇಶದ ಅಧಿಪತಿಯು ನಮ್ಮ ದೇಶದಲ್ಲಿ ಎಲೀಯನು ಇಲ್ಲವೆಂದು ಹೇಳಿದರೆ ಆ ಮಾತು ಸತ್ಯವೊ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಅಹಾಬನು ಆ ಅಧಿಪತಿಯಿಂದ ಪ್ರಮಾಣ ಮಾಡಿಸುತ್ತಾನೆ. 11 ಈಗ ನೀನು ಇಲ್ಲಿರುವೆಯೆಂಬುದನ್ನು ನಾನು ಹೋಗಿ ಅವನಿಗೆ ತಿಳಿಸುವಂತೆ, ನೀನು ಇಚ್ಛಿಸಿರುವೆಯಲ್ಲವೇ? 12 ನಾನು ಹೋಗಿ ರಾಜನಾದ ಅಹಾಬನಿಗೆ ನೀನು ಇಲ್ಲಿರುವೆಯೆಂಬುದನ್ನು ತಿಳಿಸಿದರೆ, ನಂತರ ಯೆಹೋವನು ನಿನ್ನನ್ನು ಬೇರೊಂದು ಸ್ಥಳಕ್ಕೆ ಕರೆದೊಯ್ಯುವನು. ರಾಜನಾದ ಅಹಾಬನು ಇಲ್ಲಿಗೆ ಬಂದಾಗ, ನಿನ್ನನ್ನು ಕಂಡುಹಿಡಿಯಲು ಸಮರ್ಥನಾಗುವುದಿಲ್ಲ. ಆಗ ಅವನು ನನ್ನನ್ನು ಕೊಂದುಬಿಡುತ್ತಾನೆ! ನನ್ನ ಬಾಲ್ಯದಿಂದಲೂ ನಾನು ಯೆಹೋವನನ್ನೇ ಅನುಸರಿಸುತ್ತಿದ್ದೇನೆ. 13 ನಾನು ಏನು ಮಾಡಿದೆನೆಂಬುದು ನಿನಗೆ ತಿಳಿಯಲಿಲ್ಲವೇ? ಯೆಹೋವನ ಪ್ರವಾದಿಗಳನ್ನು ಈಜೆಬೆಲಳು ಕೊಲ್ಲುತ್ತಿದ್ದಾಗ ನೂರು ಮಂದಿ ಪ್ರವಾದಿಗಳನ್ನು ನಾನು ಗುಹೆಗಳಲ್ಲಿ ಅಡಗಿಸಿಟ್ಟೆನು. ಐವತ್ತು ಮಂದಿ ಪ್ರವಾದಿಗಳನ್ನು ಒಂದು ಗುಹೆಯಲ್ಲಿಯೂ ಉಳಿದ ಐವತ್ತು ಮಂದಿಯನ್ನು ಮತ್ತೊಂದು ಗುಹೆಯಲ್ಲಿಯೂ ನಾನು ಅಡಗಿಸಿಟ್ಟೆನು. ಅವರಿಗೆ ಆಹಾರವನ್ನೂ ನೀರನ್ನೂ ನಾನು ತಂದುಕೊಡುತ್ತಿದ್ದೆನು. 14 ಈಗ ನಿನ್ನ ಅಪೇಕ್ಷೆಯಂತೆ ನಾನು ಹೋಗಿ, ನೀನು ಇಲ್ಲಿರುವೆ ಎಂಬುದನ್ನು ರಾಜನಿಗೆ ತಿಳಿಸಿದರೆ, ರಾಜನು ನನ್ನನ್ನು ಕೊಂದು ಹಾಕುತ್ತಾನೆ” ಎಂದು ಹೇಳಿದನು.
15 ಎಲೀಯನು, “ನಾನು ಸೇವೆ ಮಾಡುತ್ತಿರುವ ಸೇನಾಧೀಶ್ವರನಾದ ಯೆಹೋವನಾಣೆ, ಈ ದಿನ ನಾನು ರಾಜನ ಎದುರಿನಲ್ಲಿ ಹಾಜರಾಗುತ್ತೇನೆ ಎಂಬುದಾಗಿ ಪ್ರಮಾಣ ಮಾಡುತ್ತೇನೆ” ಎಂದನು.
16 ಓಬದ್ಯನು ರಾಜನಾದ ಅಹಾಬನ ಬಳಿಗೆ ಹೋಗಿ ಎಲೀಯನು ಇರುವ ಸ್ಥಳವನ್ನು ತಿಳಿಸಿದನು. ರಾಜನಾದ ಅಹಾಬನು ಎಲೀಯನನ್ನು ಭೇಟಿಮಾಡಲು ಹೋದನು.
ಪೌಲ ಸೀಲರ ಪ್ರಯಾಣ
10 ಅದೇ ರಾತ್ರಿಯಲ್ಲಿ ವಿಶ್ವಾಸಿಗಳು ಪೌಲ ಸೀಲರನ್ನು ಬೆರೋಯ ಎಂಬ ಮತ್ತೊಂದು ಪಟ್ಟಣಕ್ಕೆ ಕಳುಹಿಸಿದರು. ಬೆರೋಯದಲ್ಲಿ ಪೌಲ ಸೀಲರು ಯೆಹೂದ್ಯರ ಸಭಾಮಂದಿರಕ್ಕೆ ಹೋದರು. 11 ಈ ಯೆಹೂದ್ಯರು ಥೆಸಲೋನಿಕದ ಯೆಹೂದ್ಯರಿಗಿಂತಲೂ ಉತ್ತಮರಾಗಿದ್ದರು. ಪೌಲ ಸೀಲರು ಹೇಳಿದ ಸಂಗತಿಗಳನ್ನು ಇವರು ಬಹಳ ಸಂತೋಷದಿಂದ ಕೇಳಿದರು. ಮತ್ತು ಈ ಸಂಗತಿಗಳು ನಿಜವೇ ಎಂಬುದನ್ನು ತಿಳಿದುಕೊಳ್ಳಲು ಪವಿತ್ರ ಗ್ರಂಥವನ್ನು ಪ್ರತಿದಿನವೂ ಅಧ್ಯಯನ ಮಾಡಿದರು. 12 ಈ ಯೆಹೂದ್ಯರಲ್ಲಿ ಅನೇಕರು ನಂಬಿದರು. ಅತಿ ಪ್ರಮುಖರಾದ ಗ್ರೀಕ್ ಸ್ತ್ರೀಯರು ಮತ್ತು ಪುರುಷರು ನಂಬಿಕೊಂಡರು.
13 ಆದರೆ ಪೌಲನು ಬೆರೋಯದಲ್ಲಿ ದೇವರ ವಾಕ್ಯವನ್ನು ಹೇಳುತ್ತಿದ್ದಾನೆ ಎಂಬ ವಾರ್ತೆಯನ್ನು ಕೇಳಿದ ಥೆಸಲೋನಿಕದ ಯೆಹೂದ್ಯರು ಬೆರೋಯಕ್ಕೂ ಬಂದು ಅಲ್ಲಿಯ ಜನರನ್ನು ಗಲಿಬಿಲಿಗೊಳಿಸಿ ಗಲಭೆ ಮಾಡಿದರು. 14 ಆದ್ದರಿಂದ ವಿಶ್ವಾಸಿಗಳು ಪೌಲನನ್ನು ಸಮುದ್ರತೀರಕ್ಕೆ ಆ ಕೂಡಲೇ ಕಳುಹಿಸಿದರು. ಆದರೆ ಸೀಲ ತಿಮೊಥೆಯರು ಬೆರೋಯದಲ್ಲಿ ಉಳಿದುಕೊಂಡರು. 15 ಪೌಲನೊಂದಿಗೆ ಹೋದ ವಿಶ್ವಾಸಿಗಳು ಅವನನ್ನು ಅಥೆನ್ಸ್ ಪಟ್ಟಣಕ್ಕೆ ಕರೆದುಕೊಂಡು ಹೋದರು. ಈ ಸಹೋದರರು ಪೌಲನಿಂದ ಸೀಲ ತಿಮೊಥೆಯರಿಗೆ ಒಂದು ಸಂದೇಶವನ್ನು ತೆಗೆದುಕೊಂಡು ಹಿಂತಿರುಗಿ ಬಂದರು. “ಸಾಧ್ಯವಾದಷ್ಟು ಬೇಗನೆ ನನ್ನ ಬಳಿಗೆ ಬನ್ನಿರಿ” ಎಂಬುದೇ ಆ ಸಂದೇಶ.
Kannada Holy Bible: Easy-to-Read Version. All rights reserved. © 1997 Bible League International