Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 18:1-3

ಯೆಹೋವನು ದಾವೀದನನ್ನು ಸೌಲನಿಂದಲೂ ಎಲ್ಲಾ ಶತ್ರು ಸೈನ್ಯಗಳಿಂದಲೂ ರಕ್ಷಿಸಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

18 ನನ್ನ ಬಲವಾಗಿರುವ ಯೆಹೋವನೇ,
    ನಿನ್ನನ್ನೇ ಪ್ರೀತಿಸುವೆನು!

ಯೆಹೋವನು ನನ್ನ ಬಂಡೆಯೂ[a] ನನ್ನ ಕೋಟೆಯೂ
    ನನ್ನ ಆಶ್ರಯಗಿರಿಯೂ ನನ್ನ ಗುರಾಣಿಯೂ
    ನನ್ನ ರಕ್ಷಣಾಬಲವೂ ನನ್ನ ದುರ್ಗವೂ ಆಗಿದ್ದಾನೆ.

ಯೆಹೋವನಿಗೆ ಸ್ತೋತ್ರವಾಗಲಿ!
    ನಾನು ಆತನಿಗೆ ಮೊರೆಯಿಟ್ಟಾಗ ನನ್ನನ್ನು ವೈರಿಗಳಿಂದ ರಕ್ಷಿಸಿದನು.

ಕೀರ್ತನೆಗಳು 18:20-32

20 ನಾನು ನಿರಪರಾಧಿಯಾಗಿದ್ದರಿಂದ ಯೆಹೋವನು ನನಗೆ ಪ್ರತಿಫಲ ನೀಡಿದನು;
    ನಾನು ತಪ್ಪನ್ನು ಮಾಡಿಲ್ಲದ ಕಾರಣ ನನಗೆ ಒಳ್ಳೆಯದನ್ನು ಮಾಡಿದನು.
21 ಯಾಕೆಂದರೆ ನಾನು ಯೆಹೋವನಿಗೆ ವಿಧೇಯನಾಗಿದ್ದೆನು;
    ನನ್ನ ದೇವರ ವಿರೋಧನಾಗಿ ನಾನು ಪಾಪಮಾಡಲಿಲ್ಲ.
22 ನಾನು ಆತನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ
    ಯಾವಾಗಲೂ ಜ್ಞಾಪಿಸಿಕೊಳ್ಳುವೆ.
23 ಆತನ ಎದುರಿನಲ್ಲಿ ನಿರ್ದೋಷಿಯಾಗಿದ್ದೆನು.
    ಪಾಪದಲ್ಲಿ ಬೀಳದಂತೆ ಎಚ್ಚರಿಕೆಯಾಗಿದ್ದೆನು.
24 ಯೆಹೋವನ ದೃಷ್ಟಿಯಲ್ಲಿ ನಾನು ನೀತಿವಂತನೂ ನಿರಪರಾಧಿಯೂ ಆಗಿರುವುದರಿಂದ
    ಆತನು ನನಗೆ ತಕ್ಕ ಪ್ರತಿಫಲವನ್ನು ಕೊಟ್ಟನು.

25 ಯೆಹೋವನೇ, ನಿನ್ನನ್ನು ನಿಜವಾಗಿಯೂ ಪ್ರೀತಿಸುವವರನ್ನು
    ನೀನು ಶಾಶ್ವತವಾದ ಪ್ರೀತಿಯಿಂದ ಪ್ರೀತಿಸುವೆ.
ನಿನಗೆ ನಂಬಿಗಸ್ತರಾಗಿರುವವರಿಗೆ
    ನೀನೂ ನಂಬಿಗಸ್ತನಾಗಿರುವೆ.
26 ನೀನು ಒಳ್ಳೆಯವರಿಗೂ ಶುದ್ಧರಿಗೂ ಒಳ್ಳೆಯವನಾಗಿಯೂ ಪರಿಶುದ್ಧನಾಗಿಯೂ ಇರುವೆ;
    ದುಷ್ಟರಿಗಾದರೋ ಶತ್ರುವಾಗಿರುವೆ.
27 ಯೆಹೋವನೇ, ನೀನು ದೀನರಿಗೆ ಸಹಾಯಮಾಡುವೆ.
    ಗರ್ವಿಷ್ಠರಿಗಾದರೋ ಅವಮಾನ ಮಾಡುವೆ.
28 ಯೆಹೋವನೇ, ನನ್ನ ದೀಪವನ್ನು ಹೊತ್ತಿಸುವವನು ನೀನೇ.
    ನನ್ನ ದೇವರು ನನ್ನ ಸುತ್ತಲೂ ಇರುವ ಕತ್ತಲೆಯನ್ನು ಬೆಳಕನ್ನಾಗಿ ಮಾಡುವನು.
29 ಯೆಹೋವನೇ, ನಿನ್ನ ಸಹಾಯದಿಂದ ನಾನು ಸೈನಿಕರೊಡನೆ ಓಡಬಲ್ಲೆ.
    ನನ್ನ ದೇವರ ಸಹಾಯದಿಂದ ನಾನು ಶತ್ರುಗಳ ಕೋಟೆಗಳನ್ನು ಹತ್ತುವೆನು.

30 ದೇವರ ಮಾರ್ಗಗಳು ನಿಷ್ಕಳಂಕವಾಗಿವೆ;
    ಯೆಹೋವನ ಮಾತುಗಳು ಸತ್ಯವಾಗಿವೆ.
    ಆತನು ತನ್ನಲ್ಲಿ ಭರವಸೆಯಿಟ್ಟಿರುವವರನ್ನು ಸಂರಕ್ಷಿಸುವನು.
31 ಯೆಹೋವನಲ್ಲದೆ ಬೇರೆ ಯಾವ ದೇವರೂ ಇಲ್ಲ.
    ನಮ್ಮ ದೇವರಲ್ಲದೆ ಬೇರೆ ಯಾವ ಬಂಡೆಯೂ ಇಲ್ಲ.
32 ಆತನೇ, ನನಗೆ ಬಲವನ್ನು ಕೊಡುವನು;
    ಶುದ್ಧ ಜೀವನವನ್ನು ನಡೆಸಲು ನನಗೆ ಸಹಾಯಮಾಡುವನು.

ಯೆಶಾಯ 28:14-22

ದೇವರ ನ್ಯಾಯತೀರ್ಪಿನಿಂದ ಯಾರೂ ತಪ್ಪಿಸಿಕೊಳ್ಳುವದಿಲ್ಲ

14 ಆದಕಾರಣ ಜೆರುಸಲೇಮಿನಲ್ಲಿರುವ ಅಧಿಪತಿಗಳೇ, ಯೆಹೋವನ ಸಂದೇಶವನ್ನು ನೀವು ಕೇಳಬೇಕು. ಆದರೆ ನೀವು ಅದನ್ನು ಕೇಳಲು ನಿರಾಕರಿಸುತ್ತಿದ್ದೀರಿ. 15 ನೀವು, “ನಾವು ಮರಣದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ನಾವು ಪಾತಾಳದೊಂದಿಗೆ ಒಪ್ಪಂದ ಮಾಡಿದ್ದೇವೆ. ಆದ್ದರಿಂದ ನಾವು ಶಿಕ್ಷಿಸಲ್ಪಡುವದಿಲ್ಲ. ಶಿಕ್ಷೆಯು ಹಾದುಹೋಗುವಾಗ ಅದು ನಮಗೇನೂ ಹಾನಿ ಮಾಡುವದಿಲ್ಲ. ನಾವು ನಮ್ಮ ಸುಳ್ಳುಮೋಸಗಳ ಹಿಂದೆ ಅವಿತುಕೊಳ್ಳುತ್ತೇವೆ” ಎಂದು ಹೇಳುತ್ತೀರಿ.

16 ಇದಕ್ಕೋಸ್ಕರವಾಗಿಯೇ, ನನ್ನ ಒಡೆಯನಾದ ಯೆಹೋವನು ಹೀಗೆನ್ನುವನು: “ಚೀಯೋನಿನಲ್ಲಿ ನಾನು ಒಂದು ಮೂಲೆಗಲ್ಲು ಇಡುವೆನು, ಇದು ಬಹು ಅಮೂಲ್ಯವಾದ ಕಲ್ಲು. ಈ ವಿಶೇಷವಾದ ಕಲ್ಲಿನ ಮೇಲೆ ಎಲ್ಲವೂ ಕಟ್ಟಲ್ಪಡುವದು. ಆ ಕಲ್ಲಿನ ಮೇಲೆ ಭರವಸವಿಡುವ ಯಾವನು ಆಶಾಭಂಗಪಡುವುದಿಲ್ಲ.

17 “ಗೋಡೆಯು ನೆಟ್ಟಗಿದೆಯೆಂದು ನೋಡಲು ಜನರು ಗುಂಡನ್ನೂ ನೂಲನ್ನೂ ಉಪಯೋಗಿಸುತ್ತಾರೆ. ಅದೇ ರೀತಿಯಲ್ಲಿ ನಾನು ನ್ಯಾಯವನ್ನು ನೂಲನ್ನಾಗಿಯೂ ಕರುಣೆಯನ್ನು ಗುಂಡನ್ನಾಗಿಯೂ ಉಪಯೋಗಿಸುವೆನು. ನೀವು ದುಷ್ಟಜನರು. ನೀವು ನಿಮ್ಮ ಸುಳ್ಳುಮೋಸಗಳ ಹಿಂದೆ ಅವಿತುಕೊಳ್ಳುತ್ತಿದ್ದೀರಿ. ಆದರೆ ನೀವು ಶಿಕ್ಷಿಸಲ್ಪಡುವಿರಿ. ನೀವು ಅಡಗಿಕೊಂಡಿರುವ ಸ್ಥಳವನ್ನು ನಾಶಮಾಡುವ ಬಿರುಗಾಳಿಯಂತೆಯೂ ಪ್ರವಾಹದಂತೆಯೂ ಅದಿರುವುದು. 18 ಮರಣದೊಂದಿಗೆ ನೀವು ಮಾಡಿದ ಒಪ್ಪಂದವು ಮುರಿಯಲ್ಪಡುವದು. ಪಾತಾಳದೊಂದಿಗೆ ನೀವು ಮಾಡಿದ ಒಪ್ಪಂದವು ನಿಮ್ಮ ಸಹಾಯಕ್ಕೆ ಬಾರದು.

“ನಿಮ್ಮನ್ನು ಶಿಕ್ಷಿಸಲು ಒಬ್ಬನು ಬರುವನು. ಆತನು ನೀವು ಧೂಳೋ ಎಂಬಂತೆ ನಿಮ್ಮ ಮೇಲೆ ತುಳಿದಾಡುವನು. 19 ಆತನು ಬಂದು ನಿಮ್ಮನ್ನು ತೆಗೆದುಕೊಂಡು ಹೋಗುವನು. ನಿಮಗೆ ದೊರಕುವ ಶಿಕ್ಷೆ ಬಹು ಭಯಂಕರವಾದದ್ದು. ಅದರ ಬಗ್ಗೆ ನೀವು ಕೇಳಿದ ಕೂಡಲೇ ಚಿಂತಿಸಲಾರಂಭಿಸುವಿರಿ. ಅದು ಮುಂಜಾನೆ ಬಂದು ರಾತ್ರಿ ಬಹು ಹೊತ್ತಿನ ತನಕ ಇರುವದು.

“ಆಗ ನೀವು ಈ ಕಥೆಯನ್ನು ಅರ್ಥಮಾಡಿಕೊಳ್ಳುವಿರಿ: 20 ಒಬ್ಬ ಮನುಷ್ಯನು ತನಗೆ ಚಿಕ್ಕದಾಗಿರುವ ಹಾಸಿಗೆಯ ಮೇಲೆ ಮಲಗಲು ಪ್ರಯತ್ನಿಸುವನು. ಅವನಲ್ಲಿರುವ ಕಂಬಳಿಯು ಅವನನ್ನು ಪೂರ್ಣವಾಗಿ ಮುಚ್ಚುತ್ತಿರಲಿಲ್ಲ. ಆ ಹಾಸಿಗೆಯೂ, ಆ ಕಂಬಳಿಯೂ ಹೇಗೆ ನಿಷ್ಪ್ರಯೋಜಕವೋ ಹಾಗೆಯೇ ನಿಮ್ಮ ಒಪ್ಪಂದವೂ ನಿಷ್ಪ್ರಯೋಜಕವಾಗಿದೆ.”

21 ಪೆರಾಚೀಮ್ ಬೆಟ್ಟದ ಮೇಲೆ ಯೆಹೋವನು ಯುದ್ಧ ಮಾಡಿದಂತೆಯೇ ಆತನು ಯುದ್ಧಮಾಡುವನು. ಗಿಬ್ಯೋನ್ ಕಣಿವೆಯಲ್ಲಿ ಯೆಹೋವನು ಕೋಪಗೊಂಡಿದ್ದಂತೆಯೇ ಕೋಪಗೊಳ್ಳುವನು. ಆಗ ಆತನು ಮಾಡಬೇಕಾದ ಕಾರ್ಯಗಳನ್ನು ಮಾಡುವನು. ಯೆಹೋವನು ಕೆಲವು ಅಪರಿಚಿತವಾದ ಸಂಗತಿಗಳನ್ನು ಮಾಡುವನು. ಆದರೆ ಆತನು ತನ್ನ ಕಾರ್ಯವನ್ನು ಮಾಡಿಮುಗಿಸುವನು. ಆ ಕೆಲಸವು ಒಬ್ಬ ಪರಿಚಯವಿಲ್ಲದವನ ಕೆಲಸವಾಗಿದೆ. 22 ಈಗ ನೀವು ಆ ವಿಷಯಗಳೊಂದಿಗೆ ಯುದ್ಧ ಮಾಡಬಾರದು. ನೀವು ಹಾಗೆ ಮಾಡಿದ್ದಲ್ಲಿ ನಿಮ್ಮ ಸುತ್ತಲಿರುವ ಹಗ್ಗವು ಇನ್ನೂ ಬಿಗಿಯಾಗುವದು.

ನಾನು ಕೇಳಿರುವ ಮಾತುಗಳು ಬದಲಾಗವು. ಯಾಕೆಂದರೆ ಅವು ಸರ್ವಶಕ್ತನಾದ ಯೆಹೋವನ ಮಾತುಗಳು. ಆತನು ಪ್ರಪಂಚವನ್ನು ಆಳುವಾತನು. ಆ ಸಂಗತಿಗಳೆಲ್ಲವೂ ಸಂಭವಿಸುವವು.

ಮತ್ತಾಯ 26:6-13

ಸ್ತ್ರೀಯೊಬ್ಬಳು ಮಾಡಿದ ವಿಶೇಷ ಕಾರ್ಯ

(ಮಾರ್ಕ 14:9; ಯೋಹಾನ 12:1-8)

ಯೇಸು ಬೆಥಾನಿಯಲ್ಲಿದ್ದಾಗ ಸಿಮೋನ ಎಂಬ ಕುಷ್ಠರೋಗಿಯ ಮನೆಯಲ್ಲಿದ್ದನು. ಆಗ ಸ್ತ್ರೀಯೊಬ್ಬಳು ಬಹು ಬೆಲೆಬಾಳುವ ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಬಂದು ಊಟಕ್ಕೆ ಕುಳಿತ್ತಿದ್ದ ಯೇಸುವಿನ ತಲೆಯ ಮೇಲೆ ಆ ಸುಗಂಧ ತೈಲವನ್ನು ಸುರಿದಳು.

ಇದನ್ನು ನೋಡಿದ ಶಿಷ್ಯರು ಆ ಸ್ತ್ರೀಯ ಮೇಲೆ ಕೋಪಗೊಂಡು, “ಆ ಸುಗಂಧತೈಲವನ್ನು ಏಕೆ ಹಾಳು ಮಾಡಿದೆ? ಅದನ್ನು ಬಹಳ ಹಣಕ್ಕೆ ಮಾರಿ ಬಡ ಜನರಿಗೆ ಕೊಡಬಹುದಾಗಿತ್ತಲ್ಲಾ” ಎಂದರು.

10 ಆದರೆ ಈ ಘಟನೆಗೆ ಕಾರಣವನ್ನು ತಿಳಿದಿದ್ದ ಯೇಸು ತನ್ನ ಶಿಷ್ಯರಿಗೆ, “ಈ ಸ್ತ್ರೀಗೆ ಏಕೆ ತೊಂದರೆ ಕೊಡುತ್ತೀರಿ? ಆಕೆಯು ನನಗೆ ಬಹಳ ಒಳ್ಳೆಯ ಕಾರ್ಯವನ್ನು ಮಾಡಿದಳು. 11 ಬಡಜನರು ನಿಮ್ಮೊಂದಿಗೆ ಯಾವಾಗಲೂ ಇರುತ್ತಾರೆ. ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ. 12 ನಾನು ಸತ್ತನಂತರ ನನ್ನನ್ನು ಸಮಾಧಿಗೆ ಸಿದ್ಧಪಡಿಸುವುದಕ್ಕಾಗಿ ಈ ಸ್ತ್ರೀಯು ನನ್ನ ದೇಹದ ಮೇಲೆ ಸುಗಂಧತೈಲವನ್ನು ಸುರಿದಳು. 13 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪ್ರಪಂಚದಾದ್ಯಂತ ಎಲ್ಲೆಲ್ಲಿ ಸುವಾರ್ತೆಯನ್ನು ತಿಳಿಸಲಾಗುವುದೋ ಅಲ್ಲೆಲ್ಲಾ ಈ ಕಾರ್ಯವನ್ನು ಈಕೆಯ ನೆನಪಿಗಾಗಿ ತಿಳಿಸಲಾಗುವುದು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International