Revised Common Lectionary (Complementary)
ಸ್ತುತಿಗೀತೆ.
67 ದೇವರೇ, ನನ್ನನ್ನು ಕರುಣಿಸಿ ಆಶೀರ್ವದಿಸು.
ಪ್ರಸನ್ನಮುಖದಿಂದ ನಮ್ಮನ್ನು ನೋಡು.
2 ದೇವರೇ, ಸರ್ವಭೂನಿವಾಸಿಗಳು ನಿನ್ನನ್ನು ತಿಳಿದುಕೊಳ್ಳಲಿ.
ಜನರಿಗೆ ನಿನ್ನಿಂದಾಗುವ ರಕ್ಷಣೆಯನ್ನು ಸರ್ವಜನಾಂಗಗಳೂ ಕಾಣಲಿ.
3 ದೇವರೇ, ಜನಾಂಗಗಳು ನಿನ್ನನ್ನು ಕೊಂಡಾಡಲಿ!
ಸರ್ವಜನರೆಲ್ಲರೂ ನಿನ್ನನ್ನು ಸ್ತುತಿಸಲಿ!
4 ಎಲ್ಲಾ ಜನಾಂಗಗಳು ಸಂತೋಷದಿಂದ ಉಲ್ಲಾಸಿಸಲಿ.
ಯಾಕೆಂದರೆ ಜನರಿಗೆ ನ್ಯಾಯವಾದ ತೀರ್ಪುಮಾಡುವಾತನು ನೀನೇ;
ಪ್ರತಿಯೊಂದು ಜನಾಂಗವನ್ನು ಆಳುವಾತನು ನೀನೇ.
5 ದೇವರೇ, ಜನಾಂಗಗಳು ನಿನ್ನನ್ನು ಕೊಂಡಾಡಲಿ!
ಸರ್ವಜನರೆಲ್ಲರೂ ನಿನ್ನನ್ನು ಸ್ತುತಿಸಲಿ!
6 ದೇವರೇ, ನಮ್ಮ ದೇವರೇ, ನಮ್ಮನ್ನು ಆಶೀರ್ವದಿಸು.
ನಮ್ಮ ಭೂಮಿಯು ಮಹಾಸುಗ್ಗಿಯನ್ನು ಕೊಡಲಿ.
7 ಆತನು ನಮ್ಮನ್ನು ಆಶೀರ್ವದಿಸಲಿ.
ಸರ್ವಭೂನಿವಾಸಿಗಳೆಲ್ಲರೂ ಆತನಲ್ಲಿ ಭಯಭಕ್ತಿವುಳ್ಳವರಾಗಲಿ.
ಎಲ್ಲಾ ಜನಾಂಗದವರು ಯೆಹೋವನನ್ನು ಅನುಸರಿಸುವರು
56 ಯೆಹೋವನು ಹೇಳುವುದೇನೆಂದರೆ: “ಎಲ್ಲರಿಗೂ ನ್ಯಾಯವಂತರಾಗಿರಿ; ಎಲ್ಲರಿಗೂ ಒಳ್ಳೆಯವರಾಗಿರಿ; ಯಾಕೆಂದರೆ ನನ್ನ ರಕ್ಷಣೆಯು ಬೇಗನೆ ಬರಲಿದೆ; ಇಡೀ ಲೋಕಕ್ಕೆಲ್ಲಾ ನನ್ನ ನೀತಿಯು ಬೇಗನೆ ವ್ಯಕ್ತವಾಗುವುದು. 2 ಸಬ್ಬತ್ತಿನ ವಿಷಯದಲ್ಲಿ ದೇವರ ಕಟ್ಟಳೆಗಳನ್ನು ಅನುಸರಿಸುವವರು ಆಶೀರ್ವಾದ ಹೊಂದುವರು. ದುಷ್ಕೃತ್ಯಗಳನ್ನು ಮಾಡದವನು ಸಂತೋಷದಿಂದಿರುವನು.”
3 ಯೆಹೂದ್ಯರಲ್ಲದ ಜನರು ಯೆಹೋವನ ಬಳಿಗೆ ಬರುವರು. ಅವರು, “ಯೆಹೋವನು ನಮ್ಮನ್ನು ತನ್ನ ಜನರೊಂದಿಗೆ ಸ್ವೀಕರಿಸುವದಿಲ್ಲ” ಎಂದು ಹೇಳಬಾರದು. ಕಂಚುಕಿಯು, “ನಾನು ಕೆಲಸಕ್ಕೆ ಬಾರದ ಒಣಗಿದ ಮರ.” ಎಂದು ಹೇಳಬಾರದು.
4-5 ಯಾಕೆಂದರೆ ಯೆಹೋವನು ಹೇಳುವುದೇನೆಂದರೆ: “ಈ ಕಂಚುಕಿಯರಲ್ಲಿ ಕೆಲವರು ಸಬ್ಬತ್ ನಿಯಮವನ್ನು ಅನುಸರಿಸುತ್ತಾರೆ. ಅವರು ನನ್ನ ಇಷ್ಟಪ್ರಕಾರ ನಡೆದುಕೊಳ್ಳುತ್ತಾರೆ; ಅವರು ನನ್ನ ಒಡಂಬಡಿಕೆಗೆ ಸರಿಯಾಗಿ ನಡೆಯುತ್ತಾರೆ. ಆದ್ದರಿಂದ ನಾನು ಅವರಿಗೋಸ್ಕರ ನನ್ನ ಮಂದಿರದಲ್ಲಿ ಸ್ಮಾರಕಸ್ತಂಭ ನೆಡುವೆನು. ನನ್ನ ಪಟ್ಟಣದಲ್ಲಿ ಅವರ ಹೆಸರುಗಳು ಜ್ಞಾಪಕ ಮಾಡಲ್ಪಡುವವು. ಹೌದು, ಆ ಕಂಚುಕಿಗಳಿಗೆ ನಾನು ಮಕ್ಕಳಿಗಿಂತ ಉತ್ತಮವಾದದ್ದನ್ನು ಕೊಡುವೆನು. ಅವರಿಗೆ ನಿತ್ಯಕಾಲಕ್ಕೂ ಇರುವ ಹೆಸರನ್ನು ಕೊಡುವೆನು. ನನ್ನ ಜನರಿಂದ ಅವರನ್ನು ಬೇರ್ಪಡಿಸುವುದಿಲ್ಲ.”
ಅನೇಕ ರೋಗಿಗಳಿಗೆ ಯೇಸುವಿನಿಂದ ಸ್ವಸ್ಥತೆ
(ಮಾರ್ಕ 6:53-56)
34 ಅವರು ಸರೋವರವನ್ನು ದಾಟಿ ಗೆನೆಸರೇತ್ ದಡಕ್ಕೆ ಬಂದರು. 35 ಅಲ್ಲಿದ್ದ ಜನರು ಯೇಸುವನ್ನು ನೋಡಿದರು. ಆತನು ಯಾರೆಂಬುದು ಅವರಿಗೆ ತಿಳಿದಿತ್ತು. ಆದ್ದರಿಂದ ಅವರು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಯೇಸು ಬಂದಿದ್ದಾನೆ ಎಂದು ತಿಳಿಸಿದರು. ಜನರು ರೋಗಗಳಿಂದ ಬೇನೆಗಳಿಂದ ನರಳುತ್ತಿದ್ದವರನ್ನೆಲ್ಲ ಆತನ ಬಳಿಗೆ ತಂದರು. 36 ಆತನ ಮೇಲಂಗಿಯನ್ನಾದರೂ ಮುಟ್ಟಿ ಗುಣಹೊಂದಲು ಅವಕಾಶಕೊಡಬೇಕೆಂದು ಅವರು ಬೇಡಿಕೊಂಡರು. ಆತನ ಮೇಲಂಗಿಯನ್ನು ಮುಟ್ಟಿದ ಜನರೆಲ್ಲರೂ ಗುಣಹೊಂದಿದರು.
Kannada Holy Bible: Easy-to-Read Version. All rights reserved. © 1997 Bible League International