Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 67

ಸ್ತುತಿಗೀತೆ.

67 ದೇವರೇ, ನನ್ನನ್ನು ಕರುಣಿಸಿ ಆಶೀರ್ವದಿಸು.
    ಪ್ರಸನ್ನಮುಖದಿಂದ ನಮ್ಮನ್ನು ನೋಡು.

ದೇವರೇ, ಸರ್ವಭೂನಿವಾಸಿಗಳು ನಿನ್ನನ್ನು ತಿಳಿದುಕೊಳ್ಳಲಿ.
    ಜನರಿಗೆ ನಿನ್ನಿಂದಾಗುವ ರಕ್ಷಣೆಯನ್ನು ಸರ್ವಜನಾಂಗಗಳೂ ಕಾಣಲಿ.
ದೇವರೇ, ಜನಾಂಗಗಳು ನಿನ್ನನ್ನು ಕೊಂಡಾಡಲಿ!
    ಸರ್ವಜನರೆಲ್ಲರೂ ನಿನ್ನನ್ನು ಸ್ತುತಿಸಲಿ!
ಎಲ್ಲಾ ಜನಾಂಗಗಳು ಸಂತೋಷದಿಂದ ಉಲ್ಲಾಸಿಸಲಿ.
    ಯಾಕೆಂದರೆ ಜನರಿಗೆ ನ್ಯಾಯವಾದ ತೀರ್ಪುಮಾಡುವಾತನು ನೀನೇ;
    ಪ್ರತಿಯೊಂದು ಜನಾಂಗವನ್ನು ಆಳುವಾತನು ನೀನೇ.
ದೇವರೇ, ಜನಾಂಗಗಳು ನಿನ್ನನ್ನು ಕೊಂಡಾಡಲಿ!
    ಸರ್ವಜನರೆಲ್ಲರೂ ನಿನ್ನನ್ನು ಸ್ತುತಿಸಲಿ!
ದೇವರೇ, ನಮ್ಮ ದೇವರೇ, ನಮ್ಮನ್ನು ಆಶೀರ್ವದಿಸು.
    ನಮ್ಮ ಭೂಮಿಯು ಮಹಾಸುಗ್ಗಿಯನ್ನು ಕೊಡಲಿ.
ಆತನು ನಮ್ಮನ್ನು ಆಶೀರ್ವದಿಸಲಿ.
    ಸರ್ವಭೂನಿವಾಸಿಗಳೆಲ್ಲರೂ ಆತನಲ್ಲಿ ಭಯಭಕ್ತಿವುಳ್ಳವರಾಗಲಿ.

ಯೆಶಾಯ 63:15-19

ಸಹಾಯಕ್ಕಾಗಿ ದೇವರಿಗೆ ಪ್ರಾರ್ಥನೆ

15 ಯೆಹೋವನೇ, ಈಗ ನಡೆಯುವ ಸಂಗತಿಗಳನ್ನು
    ಪರಲೋಕದಿಂದ ನೋಡು.
ಪರಲೋಕದಲ್ಲಿರುವ ನಿನ್ನ ಪವಿತ್ರಸ್ಥಾನದಿಂದ ನಮ್ಮನ್ನು ದೃಷ್ಟಿಸು.
    ನಮ್ಮ ಮೇಲಿನ ಗಾಢವಾದ ಪ್ರೀತಿ ಎಲ್ಲಿದೆ?
    ನಿನ್ನ ಅಂತರಂಗದೊಳಗಿಂದ ಬಂದ ಕಾರ್ಯಗಳೆಲ್ಲಿ?
    ನಮ್ಮ ಮೇಲೆ ನಿನಗಿರುವ ಕರುಣೆ ಎಲ್ಲಿ?
    ನಿನ್ನ ದಯಾಪರವಾದ ಪ್ರೀತಿಯನ್ನು ನಮ್ಮಿಂದ ಯಾಕೆ ಅಡಗಿಸುವೆ?
16 ನೀನು ನಮ್ಮ ತಂದೆಯಾಗಿರುವೆ.
    ಅಬ್ರಹಾಮನಿಗೆ ನಮ್ಮ ಪರಿಚಯವಿಲ್ಲ.
    ಇಸ್ರೇಲನು ನಮ್ಮನ್ನು ಗುರುತಿಸುವುದಿಲ್ಲ.
ಯೆಹೋವನೇ, ನೀನೇ ನಮ್ಮ ತಂದೆ.
    ನೀನೇ ನಮ್ಮನ್ನು ಯಾವಾಗಲೂ ರಕ್ಷಿಸಿದಾತನು.
17 ಯೆಹೋವನೇ, ನೀನು ನಮ್ಮನ್ನು ನಿನ್ನಿಂದ ದೂರ ಮಾಡಿರುವೆ.
    ನಾವು ನಿನ್ನನ್ನು ಹಿಂಬಾಲಿಸಬೇಕೆಂದರೂ ಹಾಗೆ ಆಗದಂತೆ ಅದನ್ನೇಕೆ ಕಷ್ಟಕರವಾಗಿ ಮಾಡಿರುವೆ?
ಯೆಹೋವನೇ, ನಮ್ಮ ಬಳಿಗೆ ಹಿಂದಿರುಗಿ ಬಾ.
    ನಾವು ನಿನ್ನ ಸೇವಕರಾಗಿದ್ದೇವೆ.
ನಮ್ಮ ಬಳಿಗೆ ಬಂದು ಸಹಾಯಮಾಡು.
    ನಮ್ಮ ಕುಟುಂಬಗಳು ನಿನ್ನವೇ.
18 ನಿನ್ನ ಪವಿತ್ರ ಜನರು ತಮ್ಮ ದೇಶದಲ್ಲಿ ಸ್ವಲ್ಪಕಾಲಕ್ಕೆ ಮಾತ್ರ ವಾಸಿಸಿದರು.
    ಆಗ ನಮ್ಮ ಶತ್ರುಗಳು ಬಂದು ನಿನ್ನ ಪವಿತ್ರ ಆಲಯದಲ್ಲಿ ತುಳಿದಾಡಿದರು.
19 ಕೆಲವರು ನಿನ್ನನ್ನು ಅನುಸರಿಸುವದಿಲ್ಲ.
    ಅವರು ನಿನ್ನ ಹೆಸರಿನಿಂದ ಕರೆಯಲ್ಪಡುವದಿಲ್ಲ.
    ನಾವು ಅವರಂತೆ ಇದ್ದೆವು.

ಅಪೊಸ್ತಲರ ಕಾರ್ಯಗಳು 14:19-28

19 ಬಳಿಕ ಕೆಲವು ಯೆಹೂದ್ಯರು ಅಂತಿಯೋಕ್ಯದಿಂದ ಮತ್ತು ಇಕೋನಿಯದಿಂದ ಬಂದು ಪೌಲನಿಗೆ ವಿರೋಧವಾಗಿ ಜನರನ್ನು ಹುರಿದುಂಬಿಸಿ ಪೌಲನಿಗೆ ಕಲ್ಲೆಸೆದು, ಅವನು ಸತ್ತನೆಂದು ಭಾವಿಸಿ ಪಟ್ಟಣದಿಂದ ಹೊರಗೆ ಎಳೆದುಹಾಕಿದರು. 20 ಆದರೆ, ಯೇಸುವಿನ ಶಿಷ್ಯರು ಅವನ ಸುತ್ತಲೂ ನೆರೆದು ಬಂದಾಗ ಅವನು ಎದ್ದು ಪಟ್ಟಣದೊಳಗೆ ಹೋದನು. ಮರುದಿನ ಅವನು ಮತ್ತು ಬಾರ್ನಬನು ದರ್ಬೆಪಟ್ಟಣಕ್ಕೆ ಹೋದರು.

ಸಿರಿಯದ ಅಂತಿಯೋಕ್ಯಕ್ಕೆ ಮರುಪ್ರಯಾಣ

21 ಪೌಲ ಬಾರ್ನಬರು ದರ್ಬೆ ಪಟ್ಟಣದಲ್ಲೂ ಸುವಾರ್ತೆಯನ್ನು ತಿಳಿಸಿದರು. ಅನೇಕ ಜನರು ಯೇಸುವಿನ ಶಿಷ್ಯರಾದರು. ಪೌಲಬಾರ್ನಬರು ಲುಸ್ತ್ರ, ಇಕೋನಿಯ ಮತ್ತು ಅಂತಿಯೋಕ್ಯ ಪಟ್ಟಣಗಳಿಗೆ ಹಿಂತಿರುಗಿ, 22 ಯೇಸುವಿನ ಶಿಷ್ಯರನ್ನು ಬಲಗೊಳಿಸಿ, ನಂಬಿಕೆಯಲ್ಲಿ ದೃಢವಾಗಿರಲು ಅವರಿಗೆ ಪ್ರೋತ್ಸಾಹಿಸಿದರು, “ನಾವು ದೇವರ ರಾಜ್ಯಕ್ಕೆ ಅನೇಕ ಕಷ್ಟಗಳ ಮೂಲಕ ಹೋಗಬೇಕಾಗಿದೆ” ಎಂದು ಬೋಧಿಸಿದರು. 23 ಪೌಲ ಬಾರ್ನಬರು ಪ್ರತಿಯೊಂದು ಸಭೆಗೂ ಹಿರಿಯರನ್ನು ಆಯ್ಕೆ ಮಾಡಿದರು. ಅವರು ಈ ಹಿರಿಯರಿಗೋಸ್ಕರ ಉಪವಾಸವಿದ್ದು ಪ್ರಾರ್ಥನೆ ಮಾಡಿ ಅವರನ್ನು ಪ್ರಭುವಿನ ಕೈಗೆ ಒಪ್ಪಿಸಿಕೊಟ್ಟರು.

24 ಪೌಲ ಬಾರ್ನಬರು ಪಿಸಿದಿಯ ನಾಡಿನ ಮೂಲಕವಾಗಿ ಪಾಂಫೀಲಿಯ ನಾಡಿಗೆ ಬಂದರು. 25 ಅವರು ದೇವರ ಸಂದೇಶವನ್ನು ಪೆರ್ಗ ಪಟ್ಟಣದಲ್ಲಿ ಬೋಧಿಸಿ, ಅಲ್ಲಿಂದ ಅತ್ತಾಲಿಯ ಪಟ್ಟಣಕ್ಕೆ ಬಂದರು. 26 ಅಲ್ಲಿಂದ ಅವರು ಸಿರಿಯಾದ ಅಂತಿಯೋಕ್ಯಕ್ಕೆ ನೌಕಾಯಾನ ಮಾಡಿದರು. ಈವರೆಗೆ ಮಾಡಿಮುಗಿಸಿದ್ದ ಸೇವಾಕಾರ್ಯಕ್ಕಾಗಿ ದೇವರ ಕೈಗೆ ಒಪ್ಪಿಸಿ ಕಳುಹಿಸಿಕೊಟ್ಟಿದ್ದವರು ಈ ಪಟ್ಟಣದ ವಿಶ್ವಾಸಿಗಳೇ.

27 ಪೌಲ ಬಾರ್ನಬರು ಇಲ್ಲಿಗೆ ತಲುಪಿದಾಗ, ಸಭಿಕರನ್ನೆಲ್ಲ ಒಟ್ಟುಗೂಡಿಸಿ, ದೇವರು ತಮ್ಮೊಂದಿಗಿದ್ದು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಅವರಿಗೆ ತಿಳಿಸಿದರು. ಮತ್ತು “ಇತರ ಜನಾಂಗಗಳವರು ಸಹ ನಂಬಿಕೊಳ್ಳುವಂತೆ ದೇವರು ಬಾಗಿಲನ್ನು ತೆರೆದಿದ್ದಾನೆ!” ಎಂದು ವಿವರಿಸಿದರು. 28 ಅಲ್ಲಿ ಪೌಲಬಾರ್ನಬರು ಯೇಸುವಿನ ಶಿಷ್ಯರೊಂದಿಗೆ ಬಹುಕಾಲ ಇದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International