Revised Common Lectionary (Complementary)
ಇಸ್ರೇಲ್ ಅಬ್ರಹಾಮನಂತೆ ಇರಬೇಕು
51 “ಒಳ್ಳೆಯವರಾಗಿ ಜೀವಿಸಲು ಬಹಳವಾಗಿ ಪ್ರಯತ್ನಿಸುತ್ತಿರುವ ಯೆಹೋವನ ಭಕ್ತರೇ, ನನ್ನ ಮಾತನ್ನು ಕೇಳಿರಿ. ನಿಮ್ಮ ಪಿತೃವಾದ ಅಬ್ರಹಾಮನನ್ನೇ ದೃಷ್ಟಿಸಿ ನೋಡಿರಿ; ಆ ಬಂಡೆಯೊಳಗಿಂದಲೇ ನೀವು ತೆಗೆಯಲ್ಪಟ್ಟಿದ್ದೀರಿ. 2 ನಿಮ್ಮ ಪಿತೃವಾದ ಅಬ್ರಹಾಮನನ್ನೂ ನಿಮ್ಮ ಮಾತೆಯಾದ ಸಾರಳನ್ನೂ ದೃಷ್ಟಿಸಿರಿ; ನಾನು ಕರೆದಾಗ ಅಬ್ರಹಾಮನು ಒಬ್ಬಂಟಿಗನಾಗಿದ್ದನು. ನಾನು ಅವನನ್ನು ಆಶೀರ್ವದಿಸಿ, ಅವನ ಸಂತಾನವನ್ನು ಅಭಿವೃದ್ಧಿಪಡಿಸಿ, ಅವನನ್ನು ಮಹಾಜನಾಂಗದ ಮೂಲಪುರುಷನನ್ನಾಗಿ ಮಾಡಿದೆನು.”
3 ಅದೇ ರೀತಿಯಲ್ಲಿ ಯೆಹೋವನು ಚೀಯೋನನ್ನು ಮತ್ತು ನಿರ್ಜನವಾದ ಅದರ ಸ್ಥಳಗಳನ್ನು ಆದರಿಸುವನು; ಅವರಿಗಾಗಿ ಮಹಾದೊಡ್ಡ ಕಾರ್ಯವನ್ನು ಮಾಡುವನು. ಯೆಹೋವನು ಮರುಭೂಮಿಯನ್ನು ಏದೆನ್ ಉದ್ಯಾನವನದಂತೆ ಮಾಡುವನು. ಆ ದೇಶವು ಬರಿದಾಗಿತ್ತು. ಆದರೆ ಅದು ಯೆಹೋವನ ಉದ್ಯಾನವನವಾಗುವದು. ಅದರೊಳಗಿರುವ ಜನರು ಸಂತೋಷಭರಿತರಾಗುವರು. ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸುವರು. ಅವರು ಕೃತಜ್ಞತಾಸ್ತುತಿ ಮಾಡುವರು, ಜಯಗೀತೆಯನ್ನು ಹಾಡುವರು.
4 “ನನ್ನ ಜನರೇ, ನನ್ನ ಮಾತನ್ನು ಕೇಳಿರಿ.
ನನ್ನ ಕಟ್ಟಳೆ ಮತ್ತು ನ್ಯಾಯ ಬೆಳಕಿನಂತಿದ್ದು ಹೇಗೆ ಜೀವಿಸಬೇಕೆಂಬುದನ್ನು ಜನರಿಗೆ ತೋರಿಸುತ್ತವೆ.
5 ನಾನು ನ್ಯಾಯವಂತನೆಂದು ನಿಮಗೆ ಬೇಗನೆ ತೋರಿಸುವೆನು. ನಿಮ್ಮನ್ನು ಬೇಗನೆ ರಕ್ಷಿಸುವೆನು.
ನಾನು ನನ್ನ ಸಾಮರ್ಥ್ಯದಿಂದ ಎಲ್ಲಾ ಜನಾಂಗಗಳಿಗೆ ನ್ಯಾಯತೀರಿಸುವೆನು.
ದೂರದೇಶದವರು ನನಗೋಸ್ಕರ ಕಾಯುತ್ತಿದ್ದಾರೆ.
ಅವರು ತಮ್ಮ ರಕ್ಷಣೆಗಾಗಿ ನನ್ನ ಶಕ್ತಿಯನ್ನು ಎದುರುನೋಡುತ್ತಿದ್ದಾರೆ.
6 ಪರಲೋಕದ ಕಡೆಗೆ ದೃಷ್ಟಿಸಿರಿ.
ನಿಮ್ಮ ಸುತ್ತಲೂ ಇರುವ ಭೂಮಿಯನ್ನು ನೋಡಿರಿ.
ಹೊಗೆಯ ಮೋಡದಂತೆ ಆಕಾಶವು ಇಲ್ಲದೆಹೋಗುವದು.
ಭೂಮಿಯು ಬೆಲೆಯಿಲ್ಲದ ಹಳೆಯ ಬಟ್ಟೆಯಂತಾಗುವುದು.
ಭೂಮಿಯ ಮೇಲಿರುವ ಜನರು ಸಾಯುವರು.
ಆದರೆ ನನ್ನ ರಕ್ಷಣೆಯು ನಿರಂತರವಾಗಿರುವದು.
ನನ್ನ ಕರುಣೆಯು ಅಂತ್ಯವಾಗದು.
ಸ್ತುತಿಗೀತೆ. ರಚನೆಗಾರ: ದಾವೀದ.
138 ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಕೊಂಡಾಡುವೆನು.
ನಿನ್ನ ಹಾಡುಗಳನ್ನು ಎಲ್ಲಾ ದೇವರುಗಳ ಎದುರಿನಲ್ಲಿ ಹಾಡುವೆನು.
2 ನಾನು ನಿನ್ನ ಪರಿಶುದ್ಧಾಲಯದ ಕಡೆಗೆ ಅಡ್ಡಬೀಳುವೆನು.
ನಾನು ನಿನ್ನ ಹೆಸರನ್ನೂ ನಿನ್ನ ಪ್ರೀತಿಯನ್ನೂ ನಿನ್ನ ನಂಬಿಗಸ್ತಿಕೆಯನ್ನೂ ಕೊಂಡಾಡುವೆನು.
ನೀನು ನಿನ್ನ ವಾಕ್ಯವನ್ನು ನೆರವೇರಿಸಿ ನಿನ್ನ ನಾಮಮಹತ್ವವನ್ನು ಹೆಚ್ಚಿಸಿರುವೆ.
3 ನಾನು ಸಹಾಯಕ್ಕಾಗಿ ನಿನಗೆ ಮೊರೆಯಿಟ್ಟಾಗ
ನೀನು ನನಗೆ ಸದುತ್ತರವನ್ನು ದಯಪಾಲಿಸಿದೆ; ನನಗೆ ಬಲವನ್ನು ಅನುಗ್ರಹಿಸಿದೆ.
4 ಯೆಹೋವನೇ, ಭೂರಾಜರುಗಳೆಲ್ಲಾ ನಿನ್ನ ನುಡಿಗಳನ್ನು ಕೇಳಿ
ನಿನ್ನನ್ನು ಕೊಂಡಾಡಬೇಕೆಂಬುದು ನನ್ನ ಅಪೇಕ್ಷೆ.
5 ಅವರೆಲ್ಲರೂ ಯೆಹೋವನ ಮಾರ್ಗವನ್ನು ಹಾಡಿ ಕೊಂಡಾಡುವರು;
ಯಾಕೆಂದರೆ ಯೆಹೋವನ ಮಹಿಮೆಯು ಮಹತ್ವವಾದದ್ದು.
6 ಯೆಹೋವನೇ ಮಹೋನ್ನತನು.
ಆದರೂ ಆತನು ದೀನರಿಗೋಸ್ಕರ ಚಿಂತಿಸುವನು.
ಗರ್ವಿಷ್ಠರ ಕಾರ್ಯಗಳು ಆತನಿಗೆ ಗೊತ್ತಿವೆ.
ಆದರೆ ಆತನು ಅವರಿಗೆ ದೂರವಾಗಿಯೇ ಇರುತ್ತಾನೆ.
7 ಯೆಹೋವನೇ, ನಾನು ಆಪತ್ತಿನಲ್ಲಿದ್ದರೆ, ನನ್ನ ಪ್ರಾಣವನ್ನು ಕಾಪಾಡು.
ನನ್ನ ವೈರಿಗಳು ನನ್ನ ಮೇಲೆ ಕೋಪಗೊಂಡಿದ್ದರೆ, ನನ್ನನ್ನು ಅವರಿಂದ ರಕ್ಷಿಸು.
8 ಯೆಹೋವನೇ, ನಿನ್ನ ವಾಗ್ದಾನಗಳನ್ನು ನೆರವೇರಿಸು.
ಯೆಹೋವನೇ, ನಿನ್ನ ಪ್ರೀತಿಯು ಶಾಶ್ವತವಾದದ್ದು.
ನಮ್ಮನ್ನು ಸೃಷ್ಟಿಸಿದಾತನು ನೀನೇ. ನಮ್ಮನ್ನು ಕೈಬಿಡಬೇಡ!
ನಿಮ್ಮ ಜೀವಿತಗಳನ್ನು ದೇವರಿಗೆ ಕೊಡಿರಿ
12 ಆದ್ದರಿಂದ ಸಹೋದರ ಸಹೋದರಿಯರೇ, ದೇವರ ಮಹಾಕನಿಕರವನ್ನು ನಿಮ್ಮ ನೆನಪಿಗೆ ತಂದು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ನಿಮ್ಮನ್ನೇ ದೇವರಿಗೆ ಮೀಸಲಾದ, ಮೆಚ್ಚುಗೆಯಾದ ಸಜೀವ ಯಜ್ಞಗಳಾಗಿ ಅರ್ಪಿಸಿರಿ. ಇದೇ ನೀವು ಸಲ್ಲಿಸಬೇಕಾದ ನಿಜವಾದ ಆರಾಧನೆ. 2 ಈ ಲೋಕದವರ ನಡವಳಿಕೆಯನ್ನು ಅನುಸರಿಸದೆ ಅಂತರಂಗದಲ್ಲಿ ಮಾರ್ಪಾಟನ್ನು ಹೊಂದಿದವರಾಗಿದ್ದು ಪರಲೋಕಭಾವದವರಾಗಿರಿ. ಆಗ ನೀವು ದೇವರ ಚಿತ್ತಾನುಸಾರ ಯಾವುದು ಉತ್ತಮವಾದುದು, ಯಾವುದು ಮೆಚ್ಚಿಕೆಯಾದುದು ಯಾವುದು ಉತ್ಕೃಷ್ಟವಾದುದು ಎಂಬುದನ್ನು ಅರಿತುಕೊಳ್ಳುವಿರಿ.
3 ದೇವರು ನನಗೆ ವಿಶೇಷವಾದ ಒಂದು ವರವನ್ನು ಕೊಟ್ಟಿದ್ದಾನೆ. ಆದಕಾರಣವೇ, ನಿಮ್ಮಲ್ಲಿರುವ ಪ್ರತಿಯೊಬ್ಬರಿಗೂ ಈ ಸಂಗತಿಗಳನ್ನು ತಿಳಿಸುತ್ತಿದ್ದೇನೆ. ನೀವು ನಿಮ್ಮ ನಿಜವಾದ ಯೋಗ್ಯತೆಗಿಂತಲೂ ಹೆಚ್ಚಾಗಿ ನಿಮ್ಮ ವಿಷಯದಲ್ಲಿ ಭಾವಿಸಿಕೊಳ್ಳಬೇಡಿ. ನೀವು ನಿಮ್ಮ ವಿಷಯದಲ್ಲಿ ಏನು ಭಾವಿಸಿಕೊಂಡರೂ ಆ ಭಾವನೆಯು ನಿಮ್ಮ ನಿಜವಾದ ಯೋಗ್ಯತೆಗೆ ಸರಿಸಮಾನವಾಗಿರಬೇಕು. ದೇವರು ನಿಮಗೆ ಎಂಥ ನಂಬಿಕೆಯನ್ನು ಕೊಟ್ಟಿದ್ದಾನೋ ಆ ನಂಬಿಕೆಗೆ ತಕ್ಕಂತೆ ನಿಮ್ಮ ವಿಷಯದಲ್ಲಿ ಭಾವಿಸಿಕೊಳ್ಳಿರಿ. 4 ಪ್ರತಿಯೊಬ್ಬರಿಗೂ ಒಂದು ದೇಹವಿದೆ. ಆ ದೇಹಕ್ಕೆ ಅನೇಕ ಅಂಗಾಂಗಗಳಿವೆ. ಆ ಅಂಗಾಂಗಗಳು ಒಂದೇ ಕಾರ್ಯವನ್ನು ಮಾಡುವುದಿಲ್ಲ. 5 ಹೀಗೆ ನಮ್ಮಲ್ಲಿ ಅನೇಕರಿದ್ದರೂ ಕ್ರಿಸ್ತನಲ್ಲಿ ನಾವೆಲ್ಲರೂ ಒಂದೇ ದೇಹವಾಗಿದ್ದೇವೆ. ನಾವು ಆ ದೇಹದ ಅಂಗಗಳಾಗಿದ್ದೇವೆ. ಆ ದೇಹದ ಪ್ರತಿಯೊಂದು ಅಂಗವು ಇತರ ಅಂಗಗಳಿಗೂ ಸೇರಿಕೊಂಡಿದೆ.
6 ನಾವೆಲ್ಲರೂ ಬೇರೆಬೇರೆ ವರಗಳನ್ನು ಹೊಂದಿದ್ದೇವೆ. ದೇವರು ನಮಗೆ ಕೊಟ್ಟಿರುವ ಕೃಪೆಯಿಂದಲೇ ಪ್ರತಿಯೊಂದು ವರವು ಬಂದಿದೆ. ಪ್ರವಾದಿಸುವ ವರವನ್ನು ಹೊಂದಿರುವವನು ತನಗಿರುವ ನಂಬಿಕೆಯೊಂದಿಗೆ ಆ ವರವನ್ನು ಉಪಯೋಗಿಸಬೇಕು. 7 ಸೇವೆಮಾಡುವ ವರವನ್ನು ಹೊಂದಿರುವವನು ಸೇವೆಮಾಡಬೇಕು. 8 ಉಪದೇಶಮಾಡುವ ವರವನ್ನು ಹೊಂದಿರುವವನು ಉಪದೇಶ ಮಾಡಬೇಕು. ಸಂತೈಸುವ ವರವನ್ನು ಹೊಂದಿರುವವನು ಬೇರೆಯವರನ್ನು ಸಂತೈಸಬೇಕು. ದಾನಮಾಡುವ ವರವನ್ನು ಹೊಂದಿರುವವನು ಉದಾರವಾಗಿ ಕೊಡಬೇಕು. ನಾಯಕತ್ವದ ವರವನ್ನು ಹೊಂದಿರುವವನು ನಾಯಕತ್ವವನ್ನು ವಹಿಸಿಕೊಂಡಿರುವಾಗ ಕಷ್ಟಪಟ್ಟು ದುಡಿಯಬೇಕು. ಕನಿಕರವನ್ನು ತೋರುವ ವರವನ್ನು ಹೊಂದಿರುವವನು ಆನಂದದಿಂದ ಆ ಕಾರ್ಯವನ್ನು ಮಾಡಬೇಕು.
ಯೇಸುವೇ ಕ್ರಿಸ್ತನೆಂದು ಪೇತ್ರನ ಪ್ರಕಟನೆ
(ಮಾರ್ಕ 8:27-30; ಲೂಕ 9:18-21)
13 ಯೇಸು ಫಿಲಿಪ್ಪನ ಸೆಜರೇಯ ಎಂಬ ಪ್ರಾಂತ್ಯಕ್ಕೆ ಹೋದನು. ಯೇಸು ತನ್ನ ಶಿಷ್ಯರಿಗೆ, “ಮನುಷ್ಯಕುಮಾರನಾದ ನನ್ನನ್ನು ಜನರು ಯಾರೆಂದು ಹೇಳುತ್ತಾರೆ?” ಎಂದು ಕೇಳಿದನು.
14 ಶಿಷ್ಯರು, “ಕೆಲವರು ‘ಸ್ನಾನಿಕ ಯೋಹಾನ’ನೆಂದು ಹೇಳುತ್ತಾರೆ. ಇನ್ನು ಕೆಲವರು ‘ಎಲೀಯ’ನೆಂದು ಹೇಳುತ್ತಾರೆ. ಮತ್ತೆ ಕೆಲವರು ‘ಯೆರೆಮೀಯ’ನೆಂದು ಇಲ್ಲವೆ ‘ಪ್ರವಾದಿಗಳಲ್ಲಿ ಒಬ್ಬ’ನೆಂದು ಹೇಳುತ್ತಾರೆ” ಎಂದು ಉತ್ತರಕೊಟ್ಟರು.
15 ಅದಕ್ಕೆ ಆತನು, “ನೀವು ನನ್ನನ್ನು ಯಾರೆಂದು ಹೇಳುತ್ತೀರಿ?” ಎಂದು ಕೇಳಿದನು.
16 ಸೀಮೋನ್ ಪೇತ್ರನು, “ನೀನೇ ಬರಬೇಕಾಗಿರುವ ಕ್ರಿಸ್ತನು. ನೀನೇ ಜೀವಸ್ವರೂಪನಾದ ದೇವರ ಮಗನು” ಎಂದು ಉತ್ತರಕೊಟ್ಟನು.
17 ಯೇಸು, “ಯೋನನ ಮಗನಾದ ಸೀಮೋನನೇ ನೀನು ಧನ್ಯನು. ಅದನ್ನು ನಿನಗೆ ತಿಳಿಸಿಕೊಟ್ಟವನು ಯಾವ ಮನುಷ್ಯನೂ ಅಲ್ಲ. ಪರಲೋಕದಲ್ಲಿರುವ ನನ್ನ ತಂದೆಯೇ ನಿನಗೆ ತಿಳಿಸಿಕೊಟ್ಟನು. 18 ಆದ್ದರಿಂದ ನಾನು ನಿನಗೆ ಹೇಳುವುದೇನೆಂದರೆ, ನೀನೇ ಪೇತ್ರ.[a] ನಾನು ಈ ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುತ್ತೇನೆ. ಪಾತಾಳಲೋಕದ ಬಲವು ನನ್ನ ಸಭೆಯನ್ನು ಸೋಲಿಸಲಾರದು. 19 ಪರಲೋಕರಾಜ್ಯದ ಬೀಗದ ಕೈಗಳನ್ನು ನಾನು ನಿನಗೆ ಕೊಡುತ್ತೇನೆ. ನೀನು ಭೂಲೋಕದಲ್ಲಿ ನೀಡುವ ನ್ಯಾಯತೀರ್ಪು ದೇವರ ನ್ಯಾಯತೀರ್ಪಾಗಿರುತ್ತದೆ. ನೀನು ಭೂಲೋಕದಲ್ಲಿ ನೀಡುವ ಕ್ಷಮೆಯು ದೇವರ ಕ್ಷಮೆಯಾಗಿರುತ್ತದೆ” ಎಂದು ಉತ್ತರಿಸಿದನು.
20 ಬಳಿಕ ಯೇಸು ತನ್ನ ಶಿಷ್ಯರಿಗೆ, ತಾನು ಕ್ರಿಸ್ತನೆಂಬುದನ್ನು ಯಾರಿಗೂ ಹೇಳಕೂಡದೆಂದು ಎಚ್ಚರಿಕೆ ಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International