Add parallel Print Page Options

ನಾಲ್ಕು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ

(ಮತ್ತಾಯ 15:32-39)

ಇನ್ನೊಂದು ಸಮಯದಲ್ಲಿ ಯೇಸುವಿನ ಜೊತೆಯಲ್ಲಿ ಅನೇಕ ಜನರಿದ್ದರು. ಆ ಜನರ ಬಳಿ ಊಟಕ್ಕೆ ಏನೂ ಇರಲಿಲ್ಲ. ಆದ್ದರಿಂದ ಯೇಸು ತನ್ನ ಶಿಷ್ಯರನ್ನು ಕರೆದು, “ನಾನು ಈ ಜನರಿಗಾಗಿ ಕನಿಕರಪಡುತ್ತೇನೆ. ಇವರು ಮೂರು ದಿನಗಳಿಂದ ನನ್ನ ಜೊತೆಯಲ್ಲಿದ್ದಾರೆ. ಇವರ ಬಳಿ ಊಟಕ್ಕೆ ಏನೂ ಇಲ್ಲ. ಇವರು ಏನನ್ನೂ ತಿನ್ನದೆ ಹಸಿವೆಯಲ್ಲಿಯೇ ಹೊರಟರೆ ದಾರಿಯಲ್ಲಿ ಬಳಲಿ ಹೋಗುವರು. ಈ ಜನರಲ್ಲಿ ಕೆಲವರು ಬಹಳ ದೂರದಿಂದ ಬಂದಿದ್ದಾರೆ” ಎಂದು ಹೇಳಿದನು.

ಅದಕ್ಕೆ ಶಿಷ್ಯರು, “ಇಲ್ಲಿಗೆ ಯಾವ ಊರೂ ಸಮೀಪದಲ್ಲಿಲ್ಲ. ಈ ಜನರಿಗೆಲ್ಲಾ ಸಾಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿಂದ ತರಲು ಸಾದ್ಯ?” ಎಂದು ಉತ್ತರಿಸಿದರು.

ಯೇಸು, “ನಿಮ್ಮ ಬಳಿ ಎಷ್ಟು ರೊಟ್ಟಿಗಳಿವೆ?” ಎಂದು ಅವರನ್ನು ಕೇಳಿದನು.

ಅದಕ್ಕೆ ಶಿಷ್ಯರು, “ನಮ್ಮ ಬಳಿ ಏಳು ರೊಟ್ಟಿಗಳಿವೆ” ಎಂದು ಉತ್ತರಿಸಿದರು.

ಯೇಸು ಆ ಜನರಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಹೇಳಿದನು. ನಂತರ ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು, ದೇವರಿಗೆ ಸ್ತೋತ್ರಸಲ್ಲಿಸಿ ಅವುಗಳನ್ನು ಮುರಿದು, ತನ್ನ ಶಿಷ್ಯರಿಗೆ ಕೊಟ್ಟು, ಅವುಗಳನ್ನು ಜನರಿಗೆ ಹಂಚಬೇಕೆಂದು ಹೇಳಿದನು. ಶಿಷ್ಯರು ಹಾಗೆಯೇ ಮಾಡಿದರು. ಶಿಷ್ಯರ ಬಳಿ ಕೆಲವು ಸಣ್ಣ ಮೀನುಗಳೂ ಇದ್ದವು. ಯೇಸು ಆ ಮೀನುಗಳಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಅವುಗಳನ್ನೂ ಜನರಿಗೆ ಕೊಡಬೇಕೆಂದು ಶಿಷ್ಯರಿಗೆ ಹೇಳಿದನು.

ಜನರೆಲ್ಲರೂ ಊಟಮಾಡಿ ತೃಪ್ತರಾದರು. ನಂತರ ತಿನ್ನದೆ ಉಳಿದಿದ್ದ ಆಹಾರದ ಚೂರುಗಳನ್ನು ಶಿಷ್ಯರು ಶೇಖರಿಸಿದಾಗ ಏಳು ಬುಟ್ಟಿಗಳು ತುಂಬಿಹೋದವು. ಅಲ್ಲಿ ಊಟ ಮಾಡಿದವರಲ್ಲಿ ಸುಮಾರು ನಾಲ್ಕು ಸಾವಿರ ಗಂಡಸರಿದ್ದರು. ಅವರು ಊಟಮಾಡಿದ ಮೇಲೆ, ಯೇಸು ಅವರನ್ನು ಕಳುಹಿಸಿಕೊಟ್ಟನು. 10 ಬಳಿಕ ಆತನು ತನ್ನ ಶಿಷ್ಯರೊಂದಿಗೆ ದೋಣಿಯನ್ನು ಹತ್ತಿ ದಲ್ಮನೂಥ ಪ್ರದೇಶಕ್ಕೆ ಹೋದನು.

Read full chapter