Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 133

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.

133 ಆಹಾ, ಸಹೋದರರು ಅನ್ಯೋನ್ಯತೆಯಿಂದಿರುವುದು
    ಎಷ್ಟೋ ಒಳ್ಳೆಯದು, ಎಷ್ಟೋ ರಮ್ಯವಾದದ್ದು.
ಅದು ಯಾಜಕನ ತಲೆಯ ಮೇಲೆ ಹಾಕಲ್ಪಟ್ಟು ಆರೋನನ ಗಡ್ಡಕ್ಕೂ
    ಅಲ್ಲಿಂದ ಅವನ ಉಡುಪುಗಳ ಮೇಲೆಯೂ ಇಳಿದುಬರುವ ಪರಿಮಳ ತೈಲದಂತಿರುವುದು;
ಅದು ಹೆರ್ಮೋನ್ ಪರ್ವತದಿಂದ ಹುಟ್ಟಿ ಚೀಯೋನ್ ಪರ್ವತದ ಮೇಲೆ ಬೀಳುವ ದಟ್ಟವಾದ ಮಂಜಿನಂತಿರುವುದು.
    ಯೆಹೋವನು ನಿತ್ಯಜೀವವೆಂಬ ತನ್ನ ಆಶೀರ್ವಾದವನ್ನು ಅನುಗ್ರಹಿಸಿದ್ದು ಚೀಯೋನಿನಲ್ಲಿಯೇ.

ಆದಿಕಾಂಡ 49:29-50:14

29 ಬಳಿಕ ಇಸ್ರೇಲನು ಅವರಿಗೆ ಈ ಆಜ್ಞೆಯನ್ನು ಕೊಟ್ಟನು: “ನಾನು ಸತ್ತಾಗ, ನನ್ನ ಪೂರ್ವಿಕರ ಸಂಗಡವಿರಲು ಇಷ್ಟಪಡುತ್ತೇನೆ. ನನ್ನ ಪೂರ್ವಿಕರಿಗೆ ಸಮಾಧಿ ಮಾಡಿರುವ ಹಿತ್ತಿಯನಾದ ಎಫ್ರೋನನ ಗವಿಯಲ್ಲಿ ನನಗೆ ಸಮಾಧಿಮಾಡಬೇಕು. 30 ಆ ಗವಿಯು ಕಾನಾನ್ ದೇಶದ ಮಮ್ರೆಗೆ ಎದುರಾಗಿರುವ ಮಕ್ಪೇಲ ಎಂಬ ಬಯಲಿನಲ್ಲಿದೆ. ಅಬ್ರಹಾಮನು ತನ್ನ ಸಮಾಧಿಗಾಗಿ ಈ ಸ್ಥಳವನ್ನು ಎಫ್ರೋನನಿಂದ ಕೊಂಡುಕೊಂಡನು. 31 ಅಬ್ರಹಾಮನನ್ನು ಮತ್ತು ಅವನ ಹೆಂಡತಿಯಾದ ಸಾರಳನ್ನು ಆ ಗವಿಯಲ್ಲಿ ಸಮಾಧಿ ಮಾಡಲಾಗಿದೆ. ಇಸಾಕನನ್ನು ಮತ್ತು ರೆಬೆಕ್ಕಳನ್ನು ಅಲ್ಲಿ ಸಮಾಧಿ ಮಾಡಲಾಗಿದೆ. ನನ್ನ ಹೆಂಡತಿಯಾದ ಲೇಯಳನ್ನು ನಾನು ಅಲ್ಲಿ ಸಮಾಧಿ ಮಾಡಿದ್ದೇನೆ. ಬೆನ್ಯಾಮೀನ 32 ಆ ಗುಹೆಯನ್ನು ಮತ್ತು ಆ ಗುಹೆಯಿರುವ ಹೊಲವನ್ನು ಹಿತ್ತಿಯರಿಂದ ಕೊಂಡುಕೊಳ್ಳಲಾಗಿದೆ” ಎಂದು ಹೇಳಿದನು. 33 ಯಾಕೋಬನು ತನ್ನ ಗಂಡುಮಕ್ಕಳೊಂದಿಗೆ ಮಾತನಾಡಿದ ಮೇಲೆ ತನ್ನ ಹಾಸಿಗೆಯ ಮೇಲೆ ಕಾಲುಗಳನ್ನು ಮುದುರಿಕೊಂಡು ಪ್ರಾಣಬಿಟ್ಟನು.

ಯಾಕೋಬನ ಅಂತ್ಯಕ್ರಿಯೆ

50 ಇಸ್ರೇಲನು ಸತ್ತಾಗ ಯೋಸೇಫನು ತುಂಬ ದುಃಖಿಸಿದನು. ಅವನು ತನ್ನ ತಂದೆಯನ್ನು ಅಪ್ಪಿಕೊಂಡು ಗೋಳಾಡಿ ಮುದ್ದಿಟ್ಟನು. ಯೋಸೇಫನು ತನ್ನ ತಂದೆಯ ಶವವನ್ನು ಸಿದ್ಧಪಡಿಸಲು ತನ್ನ ಸೇವಕರಾದ ವೈದ್ಯರಿಗೆ ಹೇಳಿದನು. ಆ ವೈದ್ಯರು ಯಾಕೋಬನ ಶರೀರವನ್ನು ಸಮಾಧಿಮಾಡಲು ಸಿದ್ಧಪಡಿಸಿದರು. ಈಜಿಪ್ಟಿನವರು ಆ ಶರೀರವನ್ನು ವಿಶೇಷವಾದ ರೀತಿಯಲ್ಲಿ ನಲವತ್ತು ದಿನಗಳವರೆಗೆ ಸಿದ್ಧಪಡಿಸಿದರು. ಬಳಿಕ ಈಜಿಪ್ಟಿನವರು ಯಾಕೋಬನಿಗಾಗಿ ಎಪ್ಪತ್ತು ದಿನಗಳವರೆಗೆ ಗೋಳಾಡಿದರು.

ಎಪ್ಪತ್ತು ದಿನಗಳಾದ ಮೇಲೆ ಯೋಸೇಫನು ಫರೋಹನ ಅಧಿಕಾರಿಗಳಿಗೆ, “ದಯವಿಟ್ಟು ಇದನ್ನು ಫರೋಹನಿಗೆ ತಿಳಿಸಿರಿ. ‘ನನ್ನ ತಂದೆಯು ಸಾಯುವಾಗ ನಾನು ಅವನಿಗೆ ಒಂದು ಪ್ರಮಾಣವನ್ನು ಮಾಡಿದೆನು. ಕಾನಾನ್ ದೇಶದಲ್ಲಿ ಒಂದು ಗುಹೆಯನ್ನು ಅವನು ತನಗಾಗಿ ಸಿದ್ಧಪಡಿಸಿಕೊಂಡಿದ್ದಾನೆ. ಆದ್ದರಿಂದ, ನಾನು ಹೋಗಿ ನನ್ನ ತಂದೆಯನ್ನು ಸಮಾಧಿಮಾಡಿ ಮತ್ತೆ ಹಿಂತಿರುಗಿ ನಿಮ್ಮ ಬಳಿಗೆ ಬರಲು ದಯವಿಟ್ಟು ಅವಕಾಶ ಕೊಡಿ’ ಎಂದು ತಿಳಿಸಿರಿ” ಎಂಬುದಾಗಿ ಹೇಳಿದನು.

ಫರೋಹನು, “ನಿನ್ನ ಪ್ರಮಾಣವನ್ನು ಉಳಿಸಿಕೊ. ಹೋಗಿ ನಿನ್ನ ತಂದೆಯನ್ನು ಸಮಾಧಿಮಾಡು” ಎಂದು ಉತ್ತರಿಸಿದನು.

ಆದ್ದರಿಂದ ಯೋಸೇಫನು ತನ್ನ ತಂದೆಯನ್ನು ಸಮಾಧಿಮಾಡಲು ಹೋದನು. ಫರೋಹನ ಎಲ್ಲಾ ಅಧಿಕಾರಿಗಳು ಯೋಸೇಫನೊಂದಿಗೆ ಹೋದರು. ಫರೋಹನ ನಾಯಕರು ಮತ್ತು ಈಜಿಪ್ಟಿನ ಎಲ್ಲಾ ಹಿರಿಯರು ಯೋಸೇಫನೊಂದಿಗೆ ಹೋದರು. ಯೋಸೇಫನ ಕುಟುಂಬದಲ್ಲಿದ್ದ ಜನರು ಮತ್ತು ಅವನ ಸಹೋದರರು ಅವನೊಂದಿಗೆ ಹೋದರು. ಅವನ ತಂದೆಯ ಕುಟುಂಬದವರೆಲ್ಲ ಯೋಸೇಫನೊಂದಿಗೆ ಹೋದರು. (ಹೆಂಡತಿ, ಮಕ್ಕಳು ಮತ್ತು ಪ್ರಾಣಿಗಳು ಮಾತ್ರ ಗೋಷೆನ್ ಪ್ರಾಂತ್ಯದಲ್ಲಿ ಉಳಿದುಕೊಂಡರು.) ಗಂಡಸರು ಯೋಸೇಫನೊಂದಿಗೆ ರಥಗಳಲ್ಲಿ ಮತ್ತು ಕುದುರೆಗಳ ಮೇಲೆ ಹೋದರು. ಅದು ಬಹಳ ದೊಡ್ಡ ಗುಂಪಾಗಿತ್ತು.

10 ಅವರು ಗೋರೆನ್‌ಅಟಾದ್ ಎಂಬಲ್ಲಿಗೆ ಬಂದರು. ಅದು ಜೋರ್ಡನ್ ನದಿಯ ಪೂರ್ವದಲ್ಲಿತ್ತು. ಆ ಸ್ಥಳದಲ್ಲಿ ಅವರು ತುಂಬ ಸಮಯದವರೆಗೆ ಶೋಕಿಸಿದರು. ಆ ಶೋಕವು ಏಳು ದಿನಗಳವರೆಗೆ ಮುಂದುವರೆಯಿತು. 11 ಕಾನಾನಿನ ಜನರು ಗೋರೆನ್‌ಅಟಾದ್‌ನಲ್ಲಿ ಶೋಕಿಸುತ್ತಿರುವವರನ್ನು ನೋಡಿ, “ಈಜಿಪ್ಟಿನವರು ಬಹಳ ದುಃಖಕರವಾದ ಅಂತ್ಯಕ್ರಿಯೆ ಮಾಡುತ್ತಿದ್ದಾರೆ” ಎಂದು ಹೇಳಿದರು. ಆದ್ದರಿಂದ ಆ ಸ್ಥಳಕ್ಕೆ ಆಬೇಲ್ ಮಿಚ್ರಯೀಮ್ ಎಂದು ಹೆಸರಾಯಿತು.

12 ಹೀಗೆ ಯಾಕೋಬನ ಗಂಡುಮಕ್ಕಳು ತಮ್ಮ ತಂದೆಯ ಆಜ್ಞೆಯಂತೆ ಮಾಡಿದರು. 13 ಅವರು ಅವನ ಶರೀರವನ್ನು ಕಾನಾನ್ ದೇಶಕ್ಕೆ ತೆಗೆದುಕೊಂಡು ಹೋಗಿ ಮಕ್ಪೇಲದಲ್ಲಿದ್ದ ಗವಿಯಲ್ಲಿ ಸಮಾಧಿ ಮಾಡಿದರು. ಮಮ್ರೆಯ ಬಯಲಿನಲ್ಲಿದ್ದ ಈ ಗವಿಯನ್ನು ಅಬ್ರಹಾಮನು ಹಿತ್ತಿಯನಾದ ಎಫ್ರೋನನಿಂದ ಸಮಾಧಿಯ ಸ್ಥಳಕ್ಕಾಗಿ ಕೊಂಡುಕೊಂಡಿದ್ದನು. 14 ತಂದೆಯನ್ನು ಸಮಾಧಿ ಮಾಡಿದನಂತರ ಯೋಸೇಫನೂ ಅವನ ಅಣ್ಣತಮ್ಮಂದಿರೂ ಅವನ ತಂದೆಯ ಉತ್ತರಕ್ರಿಯೆಗಾಗಿ ಅವನೊಂದಿಗೆ ಹೋಗಿದ್ದವರೆಲ್ಲರೂ ಈಜಿಪ್ಟಿಗೆ ಹಿಂತಿರುಗಿದರು.

ರೋಮ್ನಗರದವರಿಗೆ 14:13-15:2

ಬೇರೆಯವರ ಪಾಪಕ್ಕೆ ನೀವು ಕಾರಣರಾಗಬೇಡಿ

13 ಆದ್ದರಿಂದ, ನಾವು ಒಬ್ಬರಿಗೊಬ್ಬರು ತೀರ್ಪುಕೊಡುವುದನ್ನು ಬಿಟ್ಟುಬಿಡಬೇಕು. ನಮ್ಮ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ಬಲಹೀನಗೊಳಿಸುವಂಥ ಅಥವಾ ಪಾಪಕ್ಕೆ ಬೀಳಿಸುವಂಥ ಯಾವುದನ್ನೇ ಆಗಲಿ ಮಾಡದಂತೆ ನಾವು ನಿರ್ಧರಿಸಬೇಕು. 14 ನಾನು ಪ್ರಭುವಾದ ಯೇಸುವಿನಲ್ಲಿದ್ದೇನೆ. ಯಾವ ಆಹಾರಪದಾರ್ಥವನ್ನೇ ಆಗಲಿ ತಿನ್ನುವುದು ತಪ್ಪಲ್ಲವೆಂದು ನನಗೆ ಗೊತ್ತಿದೆ. ಒಬ್ಬನು ಯಾವುದಾದರೂ ಆಹಾರಪದಾರ್ಥವನ್ನು ತಿನ್ನುವುದು ತಪ್ಪೆಂದು ನಂಬಿದರೆ, ಆ ಆಹಾರಪದಾರ್ಥವು ಅವನಿಗೆ ಅಶುದ್ಧವಾಗುತ್ತದೆ.

15 ನೀನು ತಿನ್ನುವ ಒಂದು ಆಹಾರಪದಾರ್ಥದಿಂದ ನಿನ್ನ ಸಹೋದರನ ನಂಬಿಕೆಗೆ ನೀನು ತೊಂದರೆಯನ್ನು ಮಾಡಿದರೆ, ನೀನು ಪ್ರೀತಿಯ ಮಾರ್ಗವನ್ನು ನಿಜವಾಗಿಯೂ ಅನುಸರಿಸುತ್ತಿಲ್ಲ. ಒಬ್ಬನು ಯಾವುದಾದರೂ ಆಹಾರಪದಾರ್ಥವನ್ನು ತಿನ್ನುವುದು ತಪ್ಪೆಂದು ಭಾವಿಸಿಕೊಂಡಿರುವಾಗ, ನೀನು ಆ ಪದಾರ್ಥವನ್ನು ತಿಂದರೆ ಅವನ ನಂಬಿಕೆ ಹಾಳಾಗುವುದು. ಆದ್ದರಿಂದ ನೀನು ಹಾಗೆ ಮಾಡಕೂಡದು. ಕ್ರಿಸ್ತನು ಆ ವ್ಯಕ್ತಿಗಾಗಿಯೂ ಸತ್ತನು. 16 ನೀನು ಯಾವುದನ್ನು ಒಳ್ಳೆಯದೆಂದು ಆಲೋಚಿಸುವಿಯೋ ಅದು ಬೇರೆಯವರಿಂದ ಕೆಟ್ಟದ್ದು ಎಂಬ ಟೀಕೆಗೆ ಒಳಗಾಗದಂತೆ ಎಚ್ಚರವಹಿಸು. 17 ದೇವರ ರಾಜ್ಯದಲ್ಲಿ ತಿನ್ನುವುದಾಗಲಿ ಕುಡಿಯುವುದಾಗಲಿ ಮುಖ್ಯವಲ್ಲ. ನೀತಿಯೂ ಸಮಾಧಾನವೂ ಪವಿತ್ರಾತ್ಮನಿಂದಾಗುವ ಆನಂದವೂ ಅಲ್ಲಿ ಮುಖ್ಯವಾಗಿವೆ. 18 ಈ ರೀತಿಯಲ್ಲಿ ಕ್ರಿಸ್ತನ ಸೇವೆಮಾಡುವವನು ದೇವರನ್ನು ಮೆಚ್ಚಿಸುವವನಾಗಿದ್ದಾನೆ. ಜನರೂ ಅವನನ್ನು ಸ್ವೀಕರಿಸಿಕೊಳ್ಳುವರು.

19 ಆದ್ದರಿಂದ ಸಮಾಧಾನವನ್ನು ಉಂಟುಮಾಡುವ ಕಾರ್ಯಗಳನ್ನು ನಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಮಾಡಲು ನಾವು ಪ್ರಯತ್ನಿಸೋಣ. ಪರಸ್ಪರ ಸಹಾಯಕವಾದ ಕಾರ್ಯಗಳನ್ನೇ ಮಾಡಲು ನಾವು ಪ್ರಯತ್ನಿಸೋಣ. ದೇವರ ಕಾರ್ಯವನ್ನು ನಾಶಪಡಿಸಲು ಆಹಾರಕ್ಕೆ ಅವಕಾಶ ಕೊಡಬೇಡಿ. 20 ಎಲ್ಲಾ ಆಹಾರಪದಾರ್ಥಗಳು ಶುದ್ಧವಾಗಿವೆ ಮತ್ತು ತಿನ್ನಲು ಯೋಗ್ಯವಾಗಿವೆ. ಆದರೆ ಒಬ್ಬನು ತಾನು ತಿನ್ನುವ ಆಹಾರಪದಾರ್ಥದ ಮೂಲಕ ಮತ್ತೊಬ್ಬ ವ್ಯಕ್ತಿಯನ್ನು ಪಾಪಕ್ಕೆ ಬೀಳಿಸುವುದಾಗಿದ್ದರೆ, ಅವನು ಆ ಪದಾರ್ಥವನ್ನು ತಿನ್ನುವುದೇ ತಪ್ಪು. 21 ನೀನು ಮಾಂಸ ತಿನ್ನುವುದು ಅಥವಾ ದ್ರಾಕ್ಷಾರಸ ಕುಡಿಯುವುದು, ನಿನ್ನ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ಪಾಪಕ್ಕೆ ಬೀಳಿಸುವುದಾಗಿದ್ದರೆ ಮಾಂಸವನ್ನು ತಿನ್ನದೆ, ದ್ರಾಕ್ಷಾರಸವನ್ನು ಕುಡಿಯದೇ ಇರುವುದು ಉತ್ತಮ. ನಿನ್ನ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ಪಾಪಕ್ಕೆ ಬೀಳಿಸುವಂಥದ್ದನ್ನು ಮಾಡದಿರುವುದೇ ಉತ್ತಮ.

22 ಈ ಸಂಗತಿಗಳ ಬಗ್ಗೆ ನಿನಗಿರುವ ವಿಶ್ವಾಸವು ನಿನಗೂ ದೇವರಿಗೂ ಮಾತ್ರ ತಿಳಿದಿರಲಿ. ತನಗೆ ಸರಿಯೆನಿಸಿದ ಕಾರ್ಯಗಳನ್ನು ತಾನು ದೋಷಿಯಾಗುತ್ತೇನೆಂಬ ಸಂಶಯವಿಲ್ಲದೆ ಮಾಡುವವನೇ ಭಾಗ್ಯವಂತನು. 23 ಆದರೆ ಒಬ್ಬನು ತಾನು ತಿನ್ನುವ ಪದಾರ್ಥದಲ್ಲಿ ದೋಷವಿಲ್ಲ ಎಂಬ ದೃಢನಂಭಿಕೆಯಿಲ್ಲದೆ ತಿಂದರೆ, ಅವನು ತನ್ನನ್ನೇ ತಪ್ಪಿತಸ್ಥನನಾಗಿ ಮಾಡಿಕೊಳ್ಳುತ್ತಾನೆ. ಏಕೆಂದರೆ ಅದು ದೋಷರಹಿತವಾದದ್ದು ಎಂಬ ನಂಬಿಕೆ ಅವನಲ್ಲಿಲ್ಲ. ನಂಬಿಕೆಯ ಆಧಾರವಿಲ್ಲದೆ ಮಾಡುವುದೆಲ್ಲವೂ ಪಾಪವೇ.

15 ಆದ್ದರಿಂದ ನಂಬಿಕೆಯಲ್ಲಿ ಬಲಹೀನವಾಗಿರುವವರ ಬಲಹೀನತೆಗಳನ್ನು ನಾವು ಸಹಿಸಿಕೊಳ್ಳಬೇಕು. ನಾವು ಕೇವಲ ನಮ್ಮ ಹಿತವನ್ನು ಮಾತ್ರ ನೋಡಿಕೊಳ್ಳಬಾರದು. ನಮ್ಮಲ್ಲಿ ಪ್ರತಿಯೊಬ್ಬರು ತಮ್ಮ ನೆರೆಯವರ ಹಿತವನ್ನು ನೋಡಿಕೊಳ್ಳಬೇಕು. ನಂಬಿಕೆಯಲ್ಲಿ ಬಲಹೀನರಾಗಿರುವವರನ್ನು ಬಲಗೊಳಿಸಲು ನೆರವಾಗಿರಬೇಕು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International