Revised Common Lectionary (Complementary)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.
133 ಆಹಾ, ಸಹೋದರರು ಅನ್ಯೋನ್ಯತೆಯಿಂದಿರುವುದು
ಎಷ್ಟೋ ಒಳ್ಳೆಯದು, ಎಷ್ಟೋ ರಮ್ಯವಾದದ್ದು.
2 ಅದು ಯಾಜಕನ ತಲೆಯ ಮೇಲೆ ಹಾಕಲ್ಪಟ್ಟು ಆರೋನನ ಗಡ್ಡಕ್ಕೂ
ಅಲ್ಲಿಂದ ಅವನ ಉಡುಪುಗಳ ಮೇಲೆಯೂ ಇಳಿದುಬರುವ ಪರಿಮಳ ತೈಲದಂತಿರುವುದು;
3 ಅದು ಹೆರ್ಮೋನ್ ಪರ್ವತದಿಂದ ಹುಟ್ಟಿ ಚೀಯೋನ್ ಪರ್ವತದ ಮೇಲೆ ಬೀಳುವ ದಟ್ಟವಾದ ಮಂಜಿನಂತಿರುವುದು.
ಯೆಹೋವನು ನಿತ್ಯಜೀವವೆಂಬ ತನ್ನ ಆಶೀರ್ವಾದವನ್ನು ಅನುಗ್ರಹಿಸಿದ್ದು ಚೀಯೋನಿನಲ್ಲಿಯೇ.
22 ಯೋಸೇಫನು ತನ್ನ ತಂದೆಯ ಕುಟುಂಬದವರೊಂದಿಗೆ ಈಜಿಪ್ಟಿನಲ್ಲೇ ವಾಸವಾಗಿದ್ದನು. ಯೋಸೇಫನು ತನ್ನ ನೂರಹತ್ತನೆಯ ವರ್ಷದಲ್ಲಿ ತೀರಿಕೊಂಡನು. 23 ಯೋಸೇಫನು ಜೀವದಿಂದಿದ್ದ ಕಾಲದಲ್ಲಿ, ಎಫ್ರಾಯೀಮನು ಮಕ್ಕಳನ್ನೂ ಮೊಮ್ಮಕ್ಕಳನ್ನೂ ಪಡೆದನು. ಅವನ ಮಗನಾದ ಮನಸ್ಸೆಗೆ ಮಾಕೀರನೆಂಬ ಗಂಡುಮಗನು ಹುಟ್ಟಿದನು. ಯೋಸೇಫನು ಮಾಕೀರನ ಮಕ್ಕಳನ್ನೂ ನೋಡಿದನು.
24 ಯೋಸೇಫನಿಗೆ ಸಾವು ಸಮೀಪಿಸಿದಾಗ ಅವನು ತನ್ನ ಸಹೋದರರಿಗೆ, “ನಾನು ಸಾಯುವ ಕಾಲ ಸಮೀಪಿಸಿದೆ. ಆದರೆ ನಿಮ್ಮನ್ನು ಪೋಷಿಸುವವನು ದೇವರೆಂಬುದು ನಿಮಗೆ ತಿಳಿದಿರಲಿ. ಆತನು ಈ ದೇಶದಿಂದ ನಿಮ್ಮನ್ನು ಕರೆದುಕೊಂಡು ಹೋಗಿ ಅಬ್ರಹಾಮನಿಗೂ ಇಸಾಕನಿಗೂ ಮತ್ತು ಯಾಕೋಬನಿಗೂ ವಾಗ್ದಾನ ಮಾಡಿದ್ದ ದೇಶವನ್ನು ಕೊಡುವನು” ಎಂದು ಹೇಳಿದನು.
25 ಅಲ್ಲದೆ ಯೋಸೇಫನು ತನ್ನ ಸಹೋದರರಿಗೆ, “ದೇವರು ನಿಮ್ಮನ್ನು ಈ ದೇಶದಿಂದ ಹೊರಗೆ ನಡೆಸಿದಾಗ ನನ್ನ ಮೂಳೆಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗುವಿರೆಂದು ಪ್ರಮಾಣ ಮಾಡಿ” ಎಂದು ಹೇಳಿ ಅವರಿಂದ ಪ್ರಮಾಣ ಮಾಡಿಸಿಕೊಂಡನು.
26 ಯೋಸೇಫನು ತನ್ನ ನೂರಹತ್ತನೆ ವರ್ಷದಲ್ಲಿ ತೀರಿಕೊಂಡನು. ಈಜಿಪ್ಟಿನಲ್ಲಿ ವೈದ್ಯರು ಅವನ ಶರೀರವನ್ನು ಸಮಾಧಿಗೆ ಸಿದ್ಧಪಡಿಸಿ ಶವಪೆಟ್ಟಿಗೆಯಲ್ಲಿಟ್ಟರು.
ನಂಬಿಕೆಯ ಶಕ್ತಿ
(ಮತ್ತಾಯ 21:20-22)
20 ಮರುದಿನ ಬೆಳಿಗ್ಗೆ, ಯೇಸು ತನ್ನ ಶಿಷ್ಯರೊಂದಿಗೆ ಹೋಗುತ್ತಿದ್ದನು. ಹಿಂದಿನ ದಿನ ಯೇಸು ಶಪಿಸಿದ ಅಂಜೂರದ ಮರವನ್ನು ಶಿಷ್ಯರು ನೋಡಿದರು. ಅಂಜೂರದ ಮರವು ಬೇರುಸಹಿತ ಒಣಗಿಹೋಗಿತ್ತು. 21 ಪೇತ್ರನು ಆ ಮರವನ್ನು ಜ್ಞಾಪಿಸಿಕೊಂಡು, ಯೇಸುವಿಗೆ, “ಗುರುವೇ, ನೋಡು! ನಿನ್ನೆ ನೀನು ಶಪಿಸಿದ ಅಂಜೂರದ ಮರ ಒಣಗಿಹೋಗಿದೆ!” ಎಂದನು.
22 ಯೇಸು, “ದೇವರಲ್ಲಿ ನಂಬಿಕೆ ಇಡಿರಿ. 23 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಈ ಬೆಟ್ಟಕ್ಕೆ, ‘ನೀನು ಹೋಗಿ ಸಮುದ್ರದೊಳಗೆ ಬೀಳು’ ಎಂದು ಹೇಳಿ, ಸಂಶಯವನ್ನೇಪಡದೆ, ನೀವು ಹೇಳಿದ್ದು ಖಂಡಿತವಾಗಿ ನೆರವೇರುತ್ತದೆ ಎಂದು ನಂಬಿದರೆ, ದೇವರು ಅದನ್ನು ನಿಮಗಾಗಿ ಮಾಡುತ್ತಾನೆ. 24 ಆದ್ದರಿಂದ ನೀವು ಪ್ರಾರ್ಥನೆಯಲ್ಲಿ ಬೇಡಿಕೊಂಡು, ಅದನ್ನೆಲ್ಲಾ ಹೊಂದಿಕೊಂಡಾಯಿತೆಂದು ನಂಬಿದರೆ, ಅದೆಲ್ಲಾ ನಿಮ್ಮದಾಗುತ್ತವೆ ಎಂದು ನಾನು ನಿಮಗೆ ಹೇಳುತ್ತೇನೆ. 25 ನೀವು ಪ್ರಾರ್ಥಿಸಲು ಸಿದ್ಧರಾಗಿರುವಾಗ, ನೀವು ಇನ್ನೊಬ್ಬನ ವಿಷಯದಲ್ಲಿ ಯಾವುದೇ ಕಾರಣದಿಂದಾಗಲಿ ಕೋಪದಿಂದಿರುವುದು ನಿಮ್ಮ ನೆನಪಿಗೆ ಬಂದರೆ, ಅವನನ್ನು ಕ್ಷಮಿಸಿಬಿಡಿ. ಆಗ ಪರಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ಪಾಪಗಳನ್ನು ಕ್ಷಮಿಸುವನು” ಎಂದು ಉತ್ತರಿಸಿದನು.
Kannada Holy Bible: Easy-to-Read Version. All rights reserved. © 1997 Bible League International