Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:33-40

33 ಯೆಹೋವನೇ, ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು,
    ಆಗ ಅವುಗಳನ್ನು ಅನುಸರಿಸುವೆನು.
34 ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡು.
    ಆಗ ನಿನ್ನ ಉಪದೇಶಗಳಿಗೆ ಸಂಪೂರ್ಣವಾಗಿ ವಿಧೇಯನಾಗುವೆನು.
35 ನಿನ್ನ ಆಜ್ಞೆಗಳ ಮಾರ್ಗದಲ್ಲಿ ನನ್ನನ್ನು ನಡೆಸು.
    ಆ ಮಾರ್ಗವೇ ನನಗೆ ಬಹು ಇಷ್ಟ.
36 ಐಶ್ವರ್ಯದ ಮೇಲೆ ಮನಸ್ಸಿಡದೆ
    ನಿನ್ನ ಒಡಂಬಡಿಕೆಯ ಬಗ್ಗೆ ಧ್ಯಾನಿಸಲು ನನಗೆ ಸಹಾಯಮಾಡು.
37 ನಿಷ್ಪ್ರಯೋಜಕವಾದವುಗಳ ಮೇಲೆ ದೃಷ್ಟಿಸದಂತೆ ನನ್ನನ್ನು ಕಾಪಾಡು.
    ನಿನ್ನ ಮಾರ್ಗದಲ್ಲಿ ಜೀವಿಸಲು ನನಗೆ ಸಹಾಯಮಾಡು.
38 ನಿನ್ನ ಸೇವಕನಾದ ನನಗೆ ನೀನು ಮಾಡಿದ ವಾಗ್ದಾನಗಳನ್ನು ನೆರವೇರಿಸು.
    ಆಗ ಜನರು ನಿನ್ನನ್ನು ಗೌರವಿಸುವರು.
39 ಅವಮಾನವನ್ನು ನನ್ನಿಂದ ತೊಲಗಿಸು. ನಾನು ಅದಕ್ಕೆ ಹೆದರಿಕೊಂಡಿದ್ದೇನೆ.
    ನಿನ್ನ ಜ್ಞಾನದ ನಿರ್ಧಾರಗಳು ಒಳ್ಳೆಯವುಗಳಾಗಿವೆ.
40 ಇಗೋ, ನಿನ್ನ ಆಜ್ಞೆಗಳನ್ನು ಪ್ರೀತಿಸುವೆನು.
    ನನಗೆ ಒಳ್ಳೆಯವನಾಗಿದ್ದು ನನ್ನನ್ನು ಉಜ್ಜೀವನಗೊಳಿಸು.

ಯೆಹೆಜ್ಕೇಲ 24:1-14

ಮಡಕೆ ಮತ್ತು ಮಾಂಸ

24 ನನ್ನ ಒಡೆಯನಾದ ಯೆಹೋವನ ಸಂದೇಶ ನನಗೆ ಬಂತು. ಇದು ಸೆರೆಹೋದ (ಯೆಹೋಯಾಖೀನನು ಸೆರೆಯಾದ) ಒಂಭತ್ತನೇ ವರ್ಷದ ಹತ್ತನೇ ತಿಂಗಳಿನ ಹತ್ತನೇ ದಿವಸದಲ್ಲಿ ಆಯಿತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಈವತ್ತಿನ ದಿವಸವನ್ನೂ ಸಂದೇಶವನ್ನೂ ಬರೆ: ‘ಈ ದಿವಸ ಬಾಬಿಲೋನ್ ರಾಜನ ಸೈನ್ಯವು ಜೆರುಸಲೇಮಿಗೆ ಮುತ್ತಿಗೆ ಹಾಕಿತು.’ ಈ ವಿಷಯವನ್ನು ವಿಧೇಯರಾಗದ ಆ ಸಂತಾನಕ್ಕೆ ತಿಳಿಸು. ಅವರಿಗೆ ಹೀಗೆ ಹೇಳು, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:

“‘ಹಂಡೆಯನ್ನು ಬೆಂಕಿಯ ಮೇಲಿಟ್ಟು
    ಅದರಲ್ಲಿ ನೀರು ಹೊಯ್ಯಿ.
ಅದರೊಳಗೆ ಮಾಂಸದ ತುಂಡುಗಳನ್ನು ಹಾಕು.
    ತೊಡೆ, ಭುಜ, ಮಾಂಸದ ಒಳ್ಳೆಯ ಭಾಗಗಳನ್ನು ಹಾಕು.
ಒಳ್ಳೆಯ ಎಲುಬುಗಳನ್ನೂ ಹಾಕು.
    ಹಿಂಡಿನಿಂದ ಉತ್ತಮವಾದ ಪಶುವನ್ನು ತೆಗೆದುಕೊ.
ಹಂಡೆಯ ಕೆಳಗೆ ಸೌದೆಗಳನ್ನು ಜೋಡಿಸು.
    ಮಾಂಸ ತುಂಡುಗಳನ್ನು ಬೇಯಿಸು.
    ಮೂಳೆಗಳನ್ನು ಸಹ ಹಂಡೆಯಲ್ಲಿ ಬೇಯಿಸು.’

“‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:
ಕೊಲೆಗಾರರ ಪಟ್ಟಣವಾದ ಜೆರುಸಲೇಮಿಗೆ ಆಪತ್ತು ಬರುವುದು.
    ಕೊಲೆಗಾರರ ನಗರಕ್ಕೆ ಕೇಡಾಗುವದು.
ಜೆರುಸಲೇಮು ಕಿಲುಬು ಹಿಡಿದ ಹಂಡೆಯಂತಿದೆ.
    ಆ ಕಿಲುಬಿನ ಕಲೆಯನ್ನು ತೆಗೆಯಲಾಗುವುದೇ ಇಲ್ಲ.
    ಆ ಹಂಡೆಯು ಅಶುದ್ಧವಾಗಿರುವುದರಿಂದ ಅದರೊಳಗಿರುವ ಮಾಂಸವನ್ನೆಲ್ಲಾ ಹೊರಗೆ ತೆಗೆದುಬಿಡು.
    ಆ ಮಾಂಸವನ್ನು ನೀನಾಗಲಿ ಯಾಜಕರಾಗಲಿ ತಿನ್ನಕೂಡದು.
ಜೆರುಸಲೇಮು ಕಿಲುಬು ಹಿಡಿದ ಹಂಡೆಯಂತಿದೆ.
    ಯಾಕೆಂದರೆ ಆಕೆ ಸುರಿಸಿದ ರಕ್ತದ ಕಲೆಗಳು ಇನ್ನೂ ಇವೆ.
ಆಕೆಯು ಆ ರಕ್ತವನ್ನು ನೆಲದ ಮೇಲೆ ಸುರಿಯದೆ
    ಬಂಡೆಯ ಮೇಲೆ ಸುರಿದು ಅದಕ್ಕೆ ಮಣ್ಣನ್ನೂ ಮುಚ್ಚಲಿಲ್ಲ.
ಆಕೆಯು ಸುರಿಸಿದ ರಕ್ತವು ಬರಿದಾದ
    ಬಂಡೆಯ ಮೇಲೆ ಮುಚ್ಚಲ್ಪಡದಂತೆ ನಾನೇ ಮಾಡಿದೆನು.
ನಿರಪರಾಧಿಗಳನ್ನು ಆಕೆ ಕೊಂದದ್ದಕ್ಕೆ ಜನರು ಕೋಪಗೊಂಡು
    ಆಕೆಯನ್ನು ದಂಡಿಸಲೆಂದು ನಾನು ಹೀಗೆ ಮಾಡಿದೆನು.

“‘ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:
ಕೊಲೆಗಾರರಿಂದ ತುಂಬಿದ್ದ ನಗರಕ್ಕೆ ಕೇಡು ಉಂಟಾಗುವದು.
    ನಾನು ಸೌದೆಯ ಗುಡ್ಡೆಯನ್ನು ದೊಡ್ಡದು ಮಾಡುವೆನು.
10 ಹಂಡೆಯಡಿಯಲ್ಲಿ ತುಂಬಾ ಸೌದೆಯನ್ನು ಇಡು.
    ಬೆಂಕಿಯನ್ನು ಹಚ್ಚು.
ಮಾಂಸವು ಬೇಯುವತನಕ ಬೇಯಿಸು.
    ಮೂಳೆಗಳು ಸುಟ್ಟುಹೋಗಲಿ.
11 ಬರಿದಾದ ಹಂಡೆಯು ಉರಿಯುವ ಕೆಂಡಗಳ ಮೇಲಿದ್ದು,
    ಕಾದು ಅದರ ತಾಮ್ರವು ಕೆಂಪಾಗಲಿ.
ಮತ್ತು ಅದರೊಳಗಿರುವ ಕಲೆಗಳು ಕರಗಿಹೋಗಲಿ.
    ಮತ್ತು ಅದರ ಕಿಲುಬು ಸುಟ್ಟುಹೋಗಲಿ.

12 “‘ತನ್ನ ಕಿಲುಬುಗಳ ಕಲೆಯನ್ನು ತೆಗೆಯಲು
    ಜೆರುಸಲೇಮ್ ತುಂಬಾ ಕಷ್ಟಪಡಬಹುದು.
ಆದರೆ ಆ ಕಿಲುಬು ಹೋಗುವದಿಲ್ಲ.
    ಬೆಂಕಿಯು ಮಾತ್ರ ಕಿಲುಬನ್ನು ತೆಗೆದುಹಾಕುವುದು.

13 “‘ನಿನ್ನ ವಿರುದ್ಧ ನನಗಿರುವ ಕೋಪ ತೃಪ್ತಿಗೊಳ್ಳುವ ತನಕ
    ನೀನು ಮತ್ತೆಂದಿಗೂ ಶುದ್ಧಳಾಗುವುದಿಲ್ಲ.
ನಿನ್ನನ್ನು ತೊಳೆದು ಕಲೆಗಳನ್ನು ತೆಗೆಯಲು ನನಗೆ ಮನಸ್ಸಿತ್ತು.
    ಆದರೆ ಕಲೆಗಳು ಹೋಗಲಿಲ್ಲ.
ಆದ್ದರಿಂದ ನಿನ್ನ ಮೇಲಿನ ನನ್ನ ಕೋಪವು ತಣ್ಣಗಾಗುವ ತನಕ
    ನಾನು ನಿನ್ನನ್ನು ತೊಳೆಯುವುದೇ ಇಲ್ಲ.

14 “‘ನಾನೇ ಯೆಹೋವನು. ನಿನಗೆ ಶಿಕ್ಷೆಯು ಬರುವದು ಎಂದು ನಾನು ಹೇಳಿದರೆ ಅದು ಬರುವಂತೆ ನಾನು ಮಾಡುವೆನು. ನಾನು ದಂಡನೆಯನ್ನು ತಡೆಹಿಡಿಯುವುದಿಲ್ಲ. ನಾನು ನಿನ್ನನ್ನು ಬಿಟ್ಟುಬಿಡುವುದಿಲ್ಲ. ಅದರ ಬಗ್ಗೆ ನನ್ನ ಮನಸ್ಸನ್ನು ನಾನು ಮಾರ್ಪಡಿಸುವುದಿಲ್ಲ. ನಿನ್ನ ಕೆಟ್ಟಕಾರ್ಯಗಳಿಗಾಗಿ ನಾನು ನಿನ್ನನ್ನು ಶಿಕ್ಷಿಸುವೆನು.’ ನನ್ನ ಒಡೆಯನಾದ ಯೆಹೋವನು ಇದನ್ನು ನುಡಿದಿದ್ದಾನೆ.”

2 ಕೊರಿಂಥದವರಿಗೆ 12:11-21

ಕೊರಿಂಥದ ಕ್ರೈಸ್ತರ ಮೇಲೆ ಪೌಲನಿಗಿರುವ ಪ್ರೀತಿ

11 ನಾನು ಬದ್ಧಿಹೀನನಂತೆ ಮಾತಾಡುತ್ತಿದ್ದೇನೆ. ಅದಕ್ಕೆ ನೀವೇ ಕಾರಣರು. ನೀವೇ ನನ್ನ ಬಗ್ಗೆ ಒಳ್ಳೆಯ ಸಂಗತಿಗಳನ್ನು ಹೇಳಬೇಕು. ನನಗೆ ಯಾವ ಬೆಲೆಯೂ ಇಲ್ಲ. ನಾನು ಕೇವಲ ಅಲ್ಪನಾಗಿದ್ದೇನೆ, ಆದರೆ ಆ “ಮಹಾಅಪೊಸ್ತಲರು” ನನಗಿಂತ ಯಾವುದರಲ್ಲಿಯೂ ಮಿಗಿಲಾಗಿಲ್ಲ. 12 ನಾನು ನಿಮ್ಮೊಂದಿಗಿದ್ದಾಗ ನಾನೂ ಅಪೊಸ್ತಲನೆಂಬುದನ್ನು ನಿರೂಪಿಸುವಂಥ ಸೂಚಕಕಾರ್ಯಗಳನ್ನು, ಆಶ್ಚರ್ಯಕರವಾದ ಕಾರ್ಯಗಳನ್ನು, ಅದ್ಭುತಕಾರ್ಯಗಳನ್ನು ಮಾಡಿದೆನು. 13 ನಾನು ಈ ಕಾರ್ಯಗಳನ್ನು ಬಹು ತಾಳ್ಮೆಯಿಂದ ಮಾಡಿದೆನು. ಆದ್ದರಿಂದ ಇತರ ಸಭೆಗಳಿಗೆ ದೊರೆತವುಗಳೆಲ್ಲ ನಿಮಗೂ ದೊರೆತವು. ಒಂದೇ ಒಂದು ವ್ಯತ್ಯಾಸವೇನೆಂದರೆ, ನಾನು ನಿಮಗೆ ಭಾರವಾಗಿರಲಿಲ್ಲ. ಈ ವಿಷಯದಲ್ಲಿ ನನ್ನನ್ನು ಕ್ಷಮಿಸಿರಿ.

14 ಈಗ ನಿಮ್ಮನ್ನು ಮೂರನೆ ಸಲ ಸಂದರ್ಶಿಸಲು ಸಿದ್ಧನಾಗಿದ್ದೇನೆ, ಆದರೆ ನಾನು ನಿಮಗೆ ಭಾರವಾಗಿರುವುದಿಲ್ಲ. ನಿಮ್ಮ ಸ್ವತ್ತುಗಳಲ್ಲಿ ಯಾವುದೂ ನನಗೆ ಬೇಕಾಗಿಲ್ಲ. ನನಗೆ ಬೇಕಾಗಿರುವುದು ನೀವೇ. ಮಕ್ಕಳು ತಂದೆತಾಯಿಗಳಿಗೋಸ್ಕರ ಹಣವನ್ನು ಉಳಿಸಿ ಕೊಡಬೇಕಾಗಿಲ್ಲ. ತಂದೆತಾಯಿಗಳು ಹಣವನ್ನು ಉಳಿಸಿ ಮಕ್ಕಳಿಗೆ ಕೊಡಬೇಕು. 15 ಆದ್ದರಿಂದ ನನ್ನಲ್ಲಿರುವುದನ್ನೆಲ್ಲಾ ನಿಮಗೆ ಕೊಡಲು ಸಂತೋಷಿಸುತ್ತೇನೆ. ನನ್ನನ್ನೇ ನಿಮಗೆ ಕೊಟ್ಟುಬಿಡುತ್ತೇನೆ. ನಾನು ನಿಮ್ಮನ್ನು ಬಹಳವಾಗಿ ಪ್ರೀತಿಸಿದರೆ, ನೀವು ನನ್ನನ್ನು ಕಡಿಮೆಯಾಗಿ ಪ್ರೀತಿಸುವಿರೋ?

16 ನಾನು ನಿಮಗೆ ಭಾರವಾಗಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಸುಳ್ಳು ಹೇಳಿ ಕುತಂತ್ರದಿಂದ ನಿಮ್ಮನ್ನು ಬಲೆಗೆ ಬೀಳಿಸುವವನಾಗಿದ್ದೇನೆಂದು ನೀವು ಯೋಚಿಸಿಕೊಂಡಿದ್ದೀರಿ. 17 ನಾನು ನಿಮ್ಮ ಬಳಿಗೆ ಕಳುಹಿಸಿದ ಜನರಲ್ಲಿ ಯಾರ ಮೂಲಕವಾದರೂ ನಿಮ್ಮನ್ನು ಮೋಸಗೊಳಿಸಿದೆನೇ? ಇಲ್ಲ! ನಾನು ಮೋಸಗೊಳಿಸಲಿಲ್ಲ ಎಂಬುದು ನಿಮಗೆ ಗೊತ್ತಿದೆ. 18 ನಿಮ್ಮ ಬಳಿಗೆ ಹೋಗಬೇಕೆಂದು ತೀತನನ್ನು ಕೇಳಿಕೊಂಡೆನು. ಅಲ್ಲದೆ ನಮ್ಮ ಸಹೋದರನನ್ನು ಅವನೊಂದಿಗೆ ಕಳುಹಿಸಿದೆನು. ಅವನು ನಿಮ್ಮನ್ನು ಮೋಸಗೊಳಿಸಲಿಲ್ಲ. ಅವನು ಮೋಸ ಮಾಡಿದನೇ? ಇಲ್ಲ! ಅವನು ಮತ್ತು ನಾನು ಒಂದೇ ಆತ್ಮನಿಂದ ಪ್ರೇರಿತರಾಗಿ ಒಂದೇ ರೀತಿಯಲ್ಲಿ ನಡೆದುಕೊಂಡೆವು.

19 ಈವರೆಗೂ ನಾವು ನಿಮ್ಮೊಂದಿಗೆ ನಮ್ಮ ಬಗ್ಗೆ ಸಮರ್ಥಿಸಿಕೊಳ್ಳುತ್ತಿದ್ದೇವೆಂದು ಭಾವಿಸುತ್ತೀರೋ? ಇಲ್ಲ! ನಾವು ಕ್ರಿಸ್ತನಲ್ಲಿ ಈ ಸಂಗತಿಗಳನ್ನು ದೇವರ ಮುಂದೆ ಹೇಳುತ್ತಿದ್ದೇವೆ. ನೀವು ನಮ್ಮ ಪ್ರಿಯ ಸ್ನೇಹಿತರು. ನಾವು ಮಾಡುವ ಪ್ರತಿಯೊಂದೂ ನಿಮ್ಮನ್ನು ಮತ್ತಷ್ಟು ಬಲಿಷ್ಠರನ್ನಾಗಿ ಮಾಡುವುದಕ್ಕಾಗಿಯೇ. 20 ಕಾರಣವೇನೆಂದರೆ, ನಾನು ಬಂದಾಗ ನನ್ನ ಅಪೇಕ್ಷೆಗೆ ತಕ್ಕಂತೆ ನೀವು ಇರುವುದಿಲ್ಲವೆಂಬ ಭಯ ನನಗಿದೆ. ನಿಮ್ಮ ಸಭೆಯಲ್ಲಿ ವಾದ, ಹೊಟ್ಟೆಕಿಚ್ಚು, ಕೋಪ, ಸ್ವಾರ್ಥಪರವಾದ ಹೋರಾಟ, ಕೆಟ್ಟಮಾತು, ಸುಳ್ಳುಸುದ್ದಿ, ಗರ್ವ ಮತ್ತು ಗಲಿಬಿಲಿ ಇರಬಹುದೆಂಬ ಭಯ ನನಗಿದೆ. 21 ನಾನು ನಿಮ್ಮ ಬಳಿಗೆ ಮತ್ತೆ ಬಂದಾಗ ನನ್ನ ದೇವರು ನನ್ನನ್ನು ನಿಮ್ಮ ಮುಂದೆ ದೀನನನ್ನಾಗಿ ಮಾಡಬಹುದೆಂಬ ಭಯವಿದೆ. ನಿಮ್ಮಲ್ಲಿ ಪಾಪಕ್ಕೆ ಒಳಗಾಗಿರುವ ಅನೇಕರಿಂದ ನಾನು ದುಃಖಿತನಾಗಬಹುದು. ಏಕೆಂದರೆ, ಆ ಜನರು ತಮ್ಮ ದುಷ್ಟಜೀವಿತದ ಬಗ್ಗೆ, ತಮ್ಮ ಲೈಂಗಿಕ ಪಾಪಗಳ ಬಗ್ಗೆ ಮತ್ತು ನಾಚಿಕೆಕರವಾದ ಕಾರ್ಯಗಳ ಬಗ್ಗೆ ದುಃಖಪಟ್ಟಿಲ್ಲ ಮತ್ತು ತಮ್ಮ ಹೃದಯಗಳನ್ನು ಮಾರ್ಪಾಟು ಮಾಡಿಕೊಂಡಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International