Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 25:1-9

ರಚನೆಗಾರ: ದಾವೀದ.

25 ಯೆಹೋವನೇ, ನಿನ್ನಲ್ಲೇ ಮನಸ್ಸಿಟ್ಟಿದ್ದೇನೆ.
ನನ್ನ ದೇವರೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ.
    ನನ್ನನ್ನು ನಿರಾಶೆಗೊಳಿಸಬೇಡ.
    ವೈರಿಗಳು ನನ್ನನ್ನು ನೋಡಿ ಗೇಲಿ ಮಾಡದಂತಾಗಲಿ!
ನಿನ್ನಲ್ಲಿ ಭರವಸವಿಟ್ಟಿರುವವರು ನಿರಾಶರಾಗುವುದಿಲ್ಲ
    ದ್ರೋಹಿಗಳಾದರೋ ನಿರಾಶರಾಗುವರು.
    ಅವರಿಗೆ ಏನೂ ದೊರೆಯುವುದಿಲ್ಲ.

ಯೆಹೋವನೇ ನಿನ್ನ ಮಾರ್ಗಗಳನ್ನು ನನಗೆ ತಿಳಿಸು.
    ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು.
ನನಗೆ ಮಾರ್ಗದರ್ಶನ ನೀಡು; ನಿನ್ನ ಸತ್ಯಗಳನ್ನು ನನಗೆ ಉಪದೇಶಿಸು.
    ನೀನೇ ನನ್ನ ದೇವರು, ನೀನೇ ನನ್ನ ರಕ್ಷಕ.
    ಹಗಲೆಲ್ಲಾ ನಿನ್ನಲ್ಲಿ ಭರವಸವಿಟ್ಟಿರುವೆ.
ಯೆಹೋವನೇ, ನನಗೆ ಕರುಣೆ ತೋರಬೇಕೆಂಬುದನ್ನು ಜ್ಞಾಪಿಸಿಕೊ.
    ನಿನ್ನ ಶಾಶ್ವತವಾದ ಪ್ರೀತಿಯನ್ನು ನನಗೆ ತೋರಿಸು.
ನಾನು ಯೌವನಸ್ಥನಾಗಿದ್ದಾಗ ಮಾಡಿದ ಪಾಪಗಳನ್ನಾಗಲಿ ಕೆಟ್ಟಕಾರ್ಯಗಳನ್ನಾಗಲಿ ಜ್ಞಾಪಿಸಿಕೊಳ್ಳಬೇಡ.
    ಯೆಹೋವನೇ, ನಿನ್ನ ಒಳ್ಳೆಯ ಹೆಸರಿನ ನಿಮಿತ್ತ ನನ್ನನ್ನು ಪ್ರೀತಿಯಿಂದ ಜ್ಞಾಪಿಸಿಕೊ.

ಯೆಹೋವನು ಒಳ್ಳೆಯವನೂ ಸತ್ಯಸ್ವರೂಪನೂ ಆಗಿದ್ದಾನೆ.
    ಆತನು ಪಾಪಿಗಳಿಗೆ ಜೀವಮಾರ್ಗವನ್ನು ಬೋಧಿಸುವನು.
ಆತನು ದೀನರಿಗೆ ತನ್ನ ಮಾರ್ಗಗಳನ್ನು ಉಪದೇಶಿಸುವನು.
    ಆತನು ಅವರನ್ನು ತನ್ನ ನ್ಯಾಯಾನುಸಾರವಾಗಿ ನಡೆಸುವನು.

ಯೆಹೆಜ್ಕೇಲ 18:5-18

“ಒಬ್ಬ ವ್ಯಕ್ತಿ ನೀತಿವಂತನಾಗಿದ್ದರೆ ಅವನು ಬಾಳುವನು. ಆ ಮನುಷ್ಯನು ಜನರನ್ನು ಸರಿಯಾದ ರೀತಿಯಲ್ಲಿ ನೋಡುವನು. ಆ ನೀತಿವಂತ ಮನುಷ್ಯನು ಬೆಟ್ಟಗಳಿಗೆ ಹೋಗಿ ಅಲ್ಲಿ ಸುಳ್ಳು ದೇವರಿಗೆ ಅರ್ಪಿಸಿದ ಆಹಾರದಲ್ಲಿ ಪಾಲು ತೆಗೆದುಕೊಳ್ಳುವದಿಲ್ಲ. ಇಸ್ರೇಲಿನಲ್ಲಿರುವ ಆ ಹೊಲಸು ವಿಗ್ರಹಗಳಿಗೆ ಅವನು ಪ್ರಾರ್ಥಿಸುವುದಿಲ್ಲ. ಅವನು ತನ್ನ ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡುವುದಿಲ್ಲ. ತನ್ನ ಹೆಂಡತಿಯು ಮುಟ್ಟಾದಾಗ ಆಕೆಯನ್ನು ಕೂಡುವುದಿಲ್ಲ. ಆ ಒಳ್ಳೆಯ ಮನುಷ್ಯನು ಜನರ ಬಲಹೀನತೆಯನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ; ಸಾಲ ಮಾಡಿದವನ ಒತ್ತೆಯನ್ನು ಬಿಗಿಹಿಡಿಯುವುದಿಲ್ಲ; ಯಾರ ಸೊತ್ತನ್ನೂ ದರೋಡೆ ಮಾಡುವುದಿಲ್ಲ; ಹಸಿದವನಿಗೆ ಅನ್ನ ಕೊಡುವನು; ಬಟ್ಟೆಯಿಲ್ಲದವನಿಗೆ ಬಟ್ಟೆ ಕೊಡುವನು; ಅವನು ಸಾಲ ಕೊಡುವಾಗ ಬಡ್ಡಿಹಾಕುವುದಿಲ್ಲ. ಅವನು ಕೆಡುಕುಗಳನ್ನು ಮಾಡುವುದಿಲ್ಲ. ಅವನು ತನ್ನ ವ್ಯವಹಾರಗಳಲ್ಲಿ ಪ್ರತಿಯೊಬ್ಬನೊಂದಿಗೂ ಯಥಾರ್ಥವಾಗಿಯೂ ನ್ಯಾಯವಾಗಿಯೂ ಇರುವನು. ಅವನು ನನ್ನ ನಿಯಮಗಳಿಗನುಸಾರವಾಗಿ ಜೀವಿಸುವನು ಮತ್ತು ನನ್ನ ಕಟ್ಟಳೆಗಳಿಗೆ ನಂಬಿಗಸ್ತಿಕೆಯಿಂದ ವಿಧೇಯನಾಗುವನು. ಅಂಥಾ ಮನುಷ್ಯನು ನೀತಿವಂತನಾಗಿದ್ದಾನೆ ಮತ್ತು ಅವನು ಖಂಡಿತವಾಗಿಯೂ ಬದುಕುವನು.

10 “ಆದರೆ ಒಂದುವೇಳೆ ಆ ನೀತಿವಂತನ ಮಗನು ಒಳ್ಳೆಯ ಕಾರ್ಯಗಳನ್ನು ಮಾಡದೆ ದರೋಡೆ ಮಾಡುವವನೂ ಕೊಲೆಮಾಡುವವನೂ ಆಗಿರಬಹುದು. 11 ಅವನ ತಂದೆಯು ಈ ಪಾಪಗಳಿಂದ ದೂರವಿದ್ದಾಗ್ಯೂ, ಮಗನು ಈ ಪಾಪಗಳಲ್ಲಿ ಪ್ರತಿಯೊಂದನ್ನೂ ಮಾಡಿದ್ದಿರಬಹುದು. ಅವನು ಬೆಟ್ಟದ ಮೇಲೆ ಹೋಗಿ ಅಲ್ಲಿ ವಿಗ್ರಹಗಳಿಗರ್ಪಿಸಿದ ನೈವೇದ್ಯದಲ್ಲಿ ಪಾಲು ತೆಗೆದುಕೊಳ್ಳಬಹುದು. ಆ ಕೆಟ್ಟ ಮಗನು ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ನಡೆಸಿದ್ದಿರಬಹುದು. 12 ಬಡ, ನಿಸ್ಸಹಾಯಕರಾದ ಜನರಿಗೆ ಕಿರುಕುಳ ಕೊಟ್ಟಿರಬಹುದು. ಜನರ ನಿಸ್ಸಹಾಯಕತೆಯ ಪ್ರಯೋಜನ ಪಡೆಯುತ್ತಿರಬಹುದು. ಒತ್ತೆಗೆ ತೆಗೆದುಕೊಂಡ ವಸ್ತುವನ್ನು ಹಿಂದಕ್ಕೆ ಕೊಡದೆ ಇದ್ದಿರಬಹುದು. ಆ ಮಗನು ವಿಗ್ರಹಗಳಿಗೆ ಪ್ರಾರ್ಥಿಸಿ ಇನ್ನೂ ಅನೇಕ ಭಯಂಕರ ಕೃತ್ಯಗಳನ್ನೂ ಮಾಡಿದ್ದಿರಬಹುದು. 13 ಆ ಕೆಟ್ಟ ಮಗನಿಂದ ಯಾರಾದರೂ ಸಾಲ ತೆಗೆದುಕೊಂಡಿದ್ದರೆ ಅವನು ಅವರಿಂದ ಬಡ್ಡಿಯನ್ನು ಕಡ್ಡಾಯವಾಗಿ ವಸೂಲು ಮಾಡಿದ್ದಿರಬಹುದು. ಹೀಗಿರುವದರಿಂದ ಆ ಕೆಟ್ಟ ಮಗನು ಹೆಚ್ಚುಕಾಲ ಬದುಕುವುದಿಲ್ಲ. ಅವನು ಭಯಂಕರ ಕೃತ್ಯಗಳನ್ನು ಮಾಡಿರುವದರಿಂದ ಕೊಲ್ಲಲ್ಪಡುವನು. ಅವನ ಮರಣಕ್ಕೆ ಅವನೇ ಜವಾಬ್ದಾರನು.

14 “ಇಗೋ, ಆ ಕೆಟ್ಟ ಮಗನಿಗೆ ಒಬ್ಬ ಮಗನಿರಬಹುದು. ತಂದೆ ಮಾಡುವ ದುಷ್ಕೃತ್ಯಗಳನ್ನು ನೋಡಿದ ಅವನು ತಂದೆಯಂತೆ ಜೀವಿಸದಿರಬಹುದು. 15 ಈ ಒಳ್ಳೆಯ ಮಗನು ಬೆಟ್ಟಕ್ಕೆ ಹೋಗಿ ಅಲ್ಲಿ ವಿಗ್ರಹಗಳಿಗೆ ಅರ್ಪಿಸಿದ ನೈವೇದ್ಯವನ್ನು ತಿನ್ನುವುದಿಲ್ಲ. ಅವನು ಇಸ್ರೇಲಿನ ಹೊಲಸು ವಿಗ್ರಹಗಳಿಗೆ ಪ್ರಾರ್ಥಿಸುವುದಿಲ್ಲ. ಅವನು ತನ್ನ ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡುವುದಿಲ್ಲ. 16 ಆ ಒಳ್ಳೆಯ ಮಗನು ಯಾರ ಮೇಲೂ ದಬ್ಬಾಳಿಕೆ ನಡೆಸುವುದಿಲ್ಲ. ಅವನು ಒತ್ತೆಯಿಲ್ಲದೆ ಸಾಲಕೊಡುವನು. ಅವನು ಯಾರನ್ನೂ ದರೋಡೆ ಮಾಡುವುದಿಲ್ಲ. ಅವನು ಹಸಿದವರಿಗೆ ಊಟ ಕೊಡುವನು; ಬಟ್ಟೆಯಿಲ್ಲದವರಿಗೆ ಬಟ್ಟೆಯನ್ನು ಕೊಡುವನು. 17 ಅವನು ಬಡವರಿಗೆ ನೋವು ಮಾಡುವುದಿಲ್ಲ. ಅವನು ಹಣವನ್ನು ಸಾಲಕೊಡುವಾಗ ಬಡ್ಡಿಹಾಕುವುದಿಲ್ಲ. ಅವನು ನನ್ನ ಕಟ್ಟಳೆಗಳಿಗೆ ವಿಧೇಯನಾಗುವನು. ಮತ್ತು ನನ್ನ ನಿಯಮಗಳನ್ನು ಅನುಸರಿಸುವನು. ಈ ಒಳ್ಳೆಯ ಮಗನು ತಂದೆಯ ದುಷ್ಟತನದ ಕಾರಣಕ್ಕಾಗಿ ಮರಣಶಿಕ್ಷೆಯನ್ನು ಅನುಭವಿಸುವದಿಲ್ಲ. ಆ ಒಳ್ಳೆಯ ಮಗನು ಬಾಳುವನು. 18 ತಂದೆಯು ಜನರನ್ನು ಹೆದರಿಸಿಯಾಗಲಿ ದರೋಡೆ ಮಾಡಿಯಾಗಲಿ ವಸ್ತುಗಳನ್ನು ತೆಗೆದುಕೊಂಡಿರಬಹುದು. ತನ್ನ ಜನರ ಮಧ್ಯದಲ್ಲಿ ಕೆಟ್ಟದಾಗಿರುವುದನ್ನು ಅವನು ಮಾಡಿರಬಹುದು. ಆ ತಂದೆಯು ತನ್ನ ಪಾಪಗಳ ಸಲುವಾಗಿ ಸಾಯುವನು. ಆದರೆ ತಂದೆಯ ಪಾಪಗಳಿಗಾಗಿ ಮಗನು ಶಿಕ್ಷಿಸಲ್ಪಡುವುದಿಲ್ಲ.

ಅಪೊಸ್ತಲರ ಕಾರ್ಯಗಳು 13:32-41

32 “ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನದ ವಿಷಯವಾದ ಸುವಾರ್ತೆಯನ್ನು ನಾವು ನಿಮಗೆ ಹೇಳುತ್ತೇವೆ. 33 ನಾವು ಅವರ ಸಂತತಿಯವರಾಗಿದ್ದೇವೆ. ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸುವುದರ ಮೂಲಕ ಆ ವಾಗ್ದಾನವನ್ನು ನಮಗಾಗಿ ನೆರವೇರಿಸಿದ್ದಾನೆ. ಇದರ ಬಗ್ಗೆ ಎರಡನೆ ಕೀರ್ತನೆಯಲ್ಲಿ ಹೀಗೆಂದು ಬರೆದಿದೆ:

‘ನೀನೇ ನನ್ನ ಮಗನು.
    ಇಂದೇ ನಾನು ನಿನ್ನನ್ನು ಪಡೆದೆನು.’(A)

34 ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದರಿಂದ ಆತನು ಇನ್ನೆಂದಿಗೂ ಸಮಾಧಿಗೆ ಸೇರಿ ಕೊಳೆಯುವುದಿಲ್ಲ ಎಂಬ ವಿಷಯದಲ್ಲಿ ದೇವರು ಇಂತೆಂದಿದ್ದಾನೆ:

‘ನಾನು ದಾವೀದನಿಗೆ ಮಾಡಿದ ಸತ್ಯವೂ ಪವಿತ್ರವೂ
    ಆದ ವಾಗ್ದಾನಗಳನ್ನು ನಿನಗೆ ಕೊಡುತ್ತೇನೆ.’(B)

35 ಆದರೆ ಮತ್ತೊಂದು ಸ್ಥಳದಲ್ಲಿ ದೇವರು ಹೀಗೆನ್ನುತ್ತಾನೆ:

‘ನೀನು ನಿನ್ನ ಪರಿಶುದ್ಧನ ದೇಹವನ್ನು ಸಮಾಧಿಯಲ್ಲಿ ಕೊಳೆಯಲು ಬಿಡುವುದಿಲ್ಲ.’(C)

36 “ದಾವೀದನು ತನ್ನ ಜೀವಮಾನಕಾಲದಲ್ಲಿ ದೇವರ ಚಿತ್ತಕ್ಕನುಸಾರವಾಗಿ ಬಾಳಿದನು. ಬಳಿಕ ಅವನು ಸತ್ತುಹೋದನು. ದಾವೀದನನ್ನು ಅವನ ಪಿತೃಗಳೊಂದಿಗೆ ಸಮಾಧಿಮಾಡಲಾಯಿತು. ಅವನ ದೇಹ ಸಮಾಧಿಯಲ್ಲಿ ಕೊಳೆತುಹೋಯಿತು! 37 ಆದರೆ ದೇವರಿಂದ ಜೀವಂತವಾಗಿ ಎಬ್ಬಿಸಲ್ಪಟ್ಟ ಯೇಸುವಿನ ದೇಹ ಸಮಾಧಿಯಲ್ಲಿ ಕೊಳೆಯಲ್ಪಡಲಿಲ್ಲ. 38-39 ಸಹೋದರರೇ, ಇದು ನಿಮಗೆ ತಿಳಿದಿರಲಿ: ಆತನ ಮೂಲಕವಾಗಿ ನಿಮ್ಮ ಪಾಪಗಳಿಗೆ ಕ್ಷಮೆ ದೊರೆಯುತ್ತದೆ. ಮೋಶೆಯ ಧರ್ಮಶಾಸ್ತ್ರಕ್ಕೆ, ನಿಮ್ಮನ್ನು ನಿಮ್ಮ ಪಾಪಗಳಿಂದ ಬಿಡಿಸಲಾಗಲಿಲ್ಲ. ಆದರೆ ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನು ಆತನ ಮೂಲಕವಾಗಿ ತನ್ನ ಎಲ್ಲಾ ಪಾಪಗಳಿಂದ ಬಿಡುಗಡೆಯಾಗುವನು. 40 ಆದ್ದರಿಂದ ಪ್ರವಾದಿಗಳು ತಿಳಿಸಿರುವ ಈ ಕೆಲವು ಸಂಗತಿಗಳು ನಿಮ್ಮಲ್ಲಿ ನಿಜವಾಗದಂತೆ ಎಚ್ಚರಿಕೆಯಾಗಿರಿ:

41 ‘ಅಪಹಾಸ್ಯ ಮಾಡುವವರೇ,
    ಆಶ್ಚರ್ಯಪಡುತ್ತಾ ನಾಶವಾಗಿಹೋಗಿರಿ.
ನೀವು ನಂಬಲೊಲ್ಲದ ಒಂದು ಕಾರ್ಯವನ್ನು
    ನಾನು ಮಾಡುವೆನು.
ಬೇರೊಬ್ಬನು ನಿಮಗೆ ಅದನ್ನು ವಿವರಿಸಿದರೂ
    ನೀವು ನಂಬುವುದಿಲ್ಲ!’”(D)

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International