Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 145:1-8

ರಚನೆಗಾರ: ದಾವೀದ.

145 ನನ್ನ ದೇವರೇ, ನನ್ನ ರಾಜನೇ, ನಿನ್ನನ್ನು ಸ್ತುತಿಸುವೆನು;
    ನಿನ್ನ ಹೆಸರನ್ನು ಎಂದೆಂದಿಗೂ ಕೊಂಡಾಡುವೆನು.
ನಿನ್ನನ್ನು ಪ್ರತಿದಿನವೂ ಸ್ತುತಿಸುವೆನು.
    ನಿನ್ನ ಹೆಸರನ್ನು ಎಂದೆಂದಿಗೂ ಕೊಂಡಾಡುವೆನು.
ಯೆಹೋವನು ಮಹೋನ್ನತನೂ ಸ್ತುತಿಗೆ ಪಾತ್ರನೂ ಆಗಿದ್ದಾನೆ.
    ಆತನ ಮಹತ್ಕಾರ್ಯಗಳು ಅಸಂಖ್ಯಾತವಾಗಿವೆ.
ಯೆಹೋವನೇ, ನಿನ್ನ ಕಾರ್ಯಗಳನ್ನು ಜನರು ಎಂದೆಂದಿಗೂ ಸ್ತುತಿಸುವರು;
    ನಿನ್ನ ಮಹತ್ಕಾರ್ಯಗಳ ವಿಷಯವಾಗಿ ಜನರು ಬೇರೆಯವರಿಗೆ ಹೇಳುವರು.
ನಿನ್ನ ಪ್ರಭಾವವುಳ್ಳ ಮಹಿಮೆಯ ಕುರಿತು ಜನರು ಹೇಳುವರು.
    ನಾನು ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುವೆನು.
ನಿನ್ನ ಅತ್ಯಾಶ್ಚರ್ಯಕರವಾದ ಕಾರ್ಯಗಳನ್ನು ಜನರು ಕೊಂಡಾಡುವರು.
    ನಿನ್ನ ಮಹತ್ಕಾರ್ಯಗಳನ್ನು ನಾನು ವರ್ಣಿಸುವೆನು.
ನಿನ್ನ ಒಳ್ಳೆಯ ಕಾರ್ಯಗಳ ಕುರಿತಾಗಿ ಜನರು ಹೇಳುವರು.
    ನಿನ್ನ ನೀತಿಯು ಕುರಿತಾಗಿ ಜನರು ಹಾಡುವರು.

ಯೆಹೋವನು ದಯೆಯುಳ್ಳವನೂ ಕನಿಕರವುಳ್ಳವನೂ
    ದೀರ್ಘಶಾಂತನೂ ಪ್ರೀತಿಪೂರ್ಣನೂ ಆಗಿದ್ದಾನೆ.

ನಹೂಮ 2:3-13

ಆ ಸೈನಿಕರ ಗುರಾಣಿಗಳು ಕೆಂಪಗಿವೆ.
    ಅವರ ಸಮವಸ್ತ್ರಗಳು ಕೆಂಪುಬಣ್ಣದಿಂದ ಹೊಳೆಯುತ್ತಿವೆ.
ಅವರ ರಥಗಳು ಯುದ್ಧಕ್ಕಾಗಿ ಸಾಲುಗಟ್ಟಿ ನಿಂತಿವೆ
    ಮತ್ತು ಬೆಂಕಿಯ ಜ್ವಾಲೆಯಂತೆ ಹೊಳೆಯುತ್ತಿವೆ.
    ಅವರ ಭರ್ಜಿಗಳು ಎತ್ತಲ್ಪಟ್ಟಿವೆ.
ರಸ್ತೆಯ ಮೇಲೆ ರಥಗಳು ರಭಸದಿಂದ ಓಡುತ್ತಿವೆ.
    ನಗರದ ಚೌಕಕ್ಕೆ ಹಿಂದೆ ಮುಂದೆ ಓಡುತ್ತಿವೆ.
ಅವು ಉರಿಯುವ ಪಂಜಿನೋಪಾದಿಯಲ್ಲಿವೆ,
    ಒಂದೆಡೆಯಿಂದ ಇನ್ನೊಂದೆಡೆಗೆ ಹಾರುವ ಮಿಂಚಿನಂತಿವೆ.

ವೈರಿಗಳು ತಮ್ಮ ಶೂರ ಯೋಧರನ್ನು ಕರೆಯುತ್ತಿದ್ದಾರೆ.
    ಅವರು ಮುನ್ನುಗ್ಗುವಾಗ ಎಡವಿಬೀಳುವರು,
ಗೋಡೆಗಳ ಕಡೆಗೆ ನುಗ್ಗಿ
    ತಮ್ಮ ಗುರಾಣಿಗಳನ್ನು ಇಡುವರು.
ಆದರೆ ಹೊಳೆಯ ಕದಗಳು ತೆರೆಯಲ್ಪಟ್ಟಿವೆ.
    ಅದರ ಮೂಲಕ ವೈರಿಗಳು ಮುನ್ನುಗ್ಗುತ್ತಿದ್ದಾರೆ.
    ಅರಸನ ಮನೆಯನ್ನು ನಾಶಮಾಡುತ್ತಿದ್ದಾರೆ.
ವೈರಿಗಳು ರಾಣಿಯನ್ನು ಎತ್ತಿಕೊಂಡು ಹೋಗುತ್ತಾರೆ.
    ಆಕೆಯ ಸೇವಕಿಯರು ಪಾರಿವಾಳಗಳಂತೆ ಗೋಳಾಡುತ್ತಿದ್ದಾರೆ.
    ತಮ್ಮ ದುಃಖವನ್ನು ಪ್ರದರ್ಶಿಸಲು ಎದೆಯನ್ನು ಬಡಕೊಳ್ಳುತ್ತಿದ್ದಾರೆ.

ನಿನೆವೆಯು ನೀರು ಬತ್ತುತ್ತಿರುವ ಕೊಳದಂತಿದೆ.
“ನಿಲ್ಲಿ, ನಿಲ್ಲಿ, ಓಡಿಹೋಗಬೇಡಿ” ಎಂದು ಜನರು ಬೊಬ್ಬಿಡುತ್ತಾರೆ.
    ಆದರೆ ಅದರಿಂದ ಪ್ರಯೋಜನವಿಲ್ಲ.

ನಿನೆವೆಯನ್ನು ನಾಶಮಾಡುವ ಸೈನಿಕರೇ,
    ಬೆಳ್ಳಿಬಂಗಾರಗಳನ್ನು ತೆಗೆದುಕೊಳ್ಳಿರಿ.
ತೆಗೆದುಕೊಳ್ಳಲು ಎಷ್ಟೋ ವಸ್ತುಗಳಿವೆ.
    ಎಷ್ಟೋ ನಿಕ್ಷೇಪಗಳಿವೆ.
10 ಈಗ ನಿನೆವೆಯು ಖಾಲಿಯಾಯಿತು.
    ಎಲ್ಲಾ ದೋಚಲ್ಪಟ್ಟಿತು.
    ನಗರವು ನಾಶವಾಯಿತು.
ಜನರು ತಮ್ಮ ಧೈರ್ಯ ಕಳೆದುಕೊಂಡಿದ್ದಾರೆ.
    ಭಯದಿಂದ ಅವರ ಹೃದಯವು ಕರಗುತ್ತಿದೆ.
ಮೊಣಕಾಲುಗಳು ನಡುಗುತ್ತಿದೆ.
    ಅವರ ದೇಹವು ಅಲ್ಲಾಡುತ್ತಿದೆ.
    ಭಯದಿಂದ ಅವರ ಮುಖವು ರಕ್ತಹೀನವಾಗಿದೆ.

11 ಸಿಂಹದ ಗುಹೆಯಂತಿದ್ದ ನಿನೆವೆಯು ಎಲ್ಲಿ?
ಗಂಡು ಹೆಣ್ಣು ಸಿಂಹಗಳು ಅದರೊಳಗೆ ವಾಸಿಸುತ್ತಿದ್ದವು.
    ಅದರ ಮರಿಗಳಿಗೆ ಭಯವಿಲ್ಲ.
12 ನಿನೆವೆಯು (ಅರಸನಾದ ಸಿಂಹವು) ಜನರನ್ನು ಕೊಂದಿತು.
    ತನ್ನ ಮರಿಗಳಿಗೂ ಸಿಂಹಿಣಿಗೂ ಆಹಾರವನ್ನು ಕೊಟ್ಟಿತು.
ತನ್ನ ಗುಹೆಯನ್ನು (ನಿನೆವೆ ರಾಜನು) ಮನುಷ್ಯರ ಶರೀರಗಳಿಂದಲೂ
    ತಾನು ಕೊಂದ ಹೆಂಗಸರಿಂದಲೂ ತುಂಬಿಸಿತು.

13 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ,
    “ನಿನೆವೆಯೇ, ನಾನು ನಿನಗೆ ವಿರೋಧವಾಗಿದ್ದೇನೆ.
ನಿನ್ನ ರಥಗಳನ್ನು ಸುಟ್ಟುಹಾಕುತ್ತೇನೆ.
    ನಿನ್ನ ಎಳೆ ಸಿಂಹಗಳನ್ನು ರಣರಂಗದಲ್ಲಿ ಸಾಯಿಸುತ್ತೇನೆ.
    ಈ ಭೂಮಿಯ ಮೇಲೆ ಇನ್ನು ಯಾರನ್ನೂ ಭೇಟಿ ಮಾಡದಿರುವೆ.
ನಿನ್ನ ಸಂದೇಶವಾಹಕರಿಂದ ಕೆಟ್ಟ ಸಮಾಚಾರವನ್ನು
    ಜನರು ಇನ್ನು ಎಂದಿಗೂ ಕೇಳರು.”

2 ಕೊರಿಂಥದವರಿಗೆ 13:5-10

ನೀವು ನಂಬಿಕೆಯಲ್ಲಿ ಜೀವಿಸುತ್ತಿದ್ದೀರೋ ಎಂಬುದನ್ನು ತಿಳಿದುಕೊಳ್ಳಲು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ. ಕ್ರಿಸ್ತಯೇಸುವು ನಿಮ್ಮೊಳಗೆ ಇದ್ದಾನೆಂಬುದು ನಿಮಗೆ ಗೊತ್ತಿದೆ. ಆತನು ನಿಮ್ಮಲ್ಲಿಲ್ಲದಿದ್ದರೆ ನೀವು ಅಯೋಗ್ಯರಾಗಿದ್ದೀರಿ. ಆದರೆ ನಾವು ಅಯೋಗ್ಯರಲ್ಲವೆಂದು ನಿಮಗೆ ಖಚಿತವಾಗುವುದರಲ್ಲಿ ನಮಗೆ ಸಂದೇಹವಿಲ್ಲ. ನೀವು ಯಾವ ತಪ್ಪನ್ನೂ ಮಾಡದಿರಲಿ ಎಂಬುದಾಗಿ ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ. ನಮ್ಮನ್ನು ಅಯೋಗ್ಯರೆಂದು ಜನರು ಭಾವಿಸಿಕೊಂಡರೂ ನೀವು ಒಳ್ಳೆಯದನ್ನು ಮಾಡುವುದೇ ಮುಖ್ಯ. ಸತ್ಯಕ್ಕೆ ವಿರೋಧವಾದ ಸಂಗತಿಗಳನ್ನು ಮಾಡಲು ನಮಗೆ ಸಾಧ್ಯವಿಲ್ಲ. ಸತ್ಯದ ಪರವಾದ ಕಾರ್ಯಗಳನ್ನು ಮಾತ್ರ ಮಾಡಲು ನಮಗೆ ಸಾಧ್ಯ. ನೀವು ಶಕ್ತರಾಗಿರುವುದಾದರೆ, ನಾವು ಬಲಹೀನರಾಗಿರಲು ಸಂತೋಷಿಸುತ್ತೇವೆ. ನೀವು ನಂಬಿಕೆಯಲ್ಲಿ ಪರಿಪೂರ್ಣರಾಗಬೇಕೆಂಬುದೇ ನಮ್ಮ ಉದ್ದೇಶ. 10 ನಾನು ನಿಮ್ಮೊಂದಿಗೆ ಇಲ್ಲದಿರುವಾಗ ಈ ಸಂಗತಿಗಳನ್ನು ಬರೆಯುತ್ತಿದ್ದೇನೆ. ಏಕೆಂದರೆ ನಾನು ಬಂದಾಗ ನಿಮ್ಮನ್ನು ದಂಡಿಸುವುದಕ್ಕಾಗಿ ನನ್ನ ಅಧಿಕಾರವನ್ನು ಉಪಯೋಗಿಸುವ ಅಗತ್ಯವಿರುವುದಿಲ್ಲ. ಪ್ರಭುವು ನನಗೆ ಅಧಿಕಾರವನ್ನು ಕೊಟ್ಟಿರುವುದು ನಿಮ್ಮನ್ನು ಬಲಗೊಳಿಸುವುದಕ್ಕಾಗಿಯೇ ಹೊರತು ನಾಶಮಾಡುವುದಕ್ಕಾಗಿಯಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International