Revised Common Lectionary (Complementary)
106 ಯೆಹೋವನನ್ನು ಸ್ತುತಿಸಿರಿ!
ಆತನು ಒಳ್ಳೆಯವನು! ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
ಆತನ ಪ್ರೀತಿಯು ಶಾಶ್ವತವಾದದ್ದು!
2 ಯೆಹೋವನ ಮಹತ್ವವನ್ನು ಸಂಪೂರ್ಣವಾಗಿ ವರ್ಣಿಸಲು ಯಾರಿಗೂ ಆಗದು;
ಆತನನ್ನು ಸಂಪೂರ್ಣವಾಗಿ ಸ್ತುತಿಸುವುದಕ್ಕೂ ಯಾರಿಗೂ ಸಾಧ್ಯವಿಲ್ಲ.
3 ದೇವರ ಆಜ್ಞೆಗಳಿಗೆ ವಿಧೇಯರಾಗಿರುವವರು ಭಾಗ್ಯವಂತರೇ ಸರಿ!
ಅವರು ಸತ್ಕಾರ್ಯಗಳನ್ನು ಯಾವಾಗಲೂ ಮಾಡುತ್ತಿರುವರು.
4 ಯೆಹೋವನೇ, ನಿನ್ನ ಜನರಿಗೆ ದಯೆತೋರುವಾಗ ನನ್ನನ್ನು ಜ್ಞಾಪಿಸಿಕೊಂಡು ದಯೆತೋರು.
ನಿನ್ನ ಜನರನ್ನು ರಕ್ಷಿಸುವಾಗ ನನ್ನನ್ನು ನೆನಪು ಮಾಡಿಕೊಂಡು ರಕ್ಷಿಸು.
5 ಯೆಹೋವನೇ, ನಿನ್ನ ಜನರಿಗೋಸ್ಕರ ನೀನು ಮಾಡುವ
ಒಳ್ಳೆಯವುಗಳಲ್ಲಿ ನನಗೂ ಪಾಲು ದೊರೆಯಲಿ.
ನಿನ್ನ ಜನರೊಂದಿಗೆ ನಾನೂ ಸಂತೋಷಪಡುವಂತೆ ಮಾಡು.
ನಿನ್ನ ಜನರೊಂದಿಗೆ ನಾನೂ ನಿನ್ನ ಬಗ್ಗೆ ಹೆಮ್ಮೆಪಡುವಂತಾಗಲಿ.
6 ನಮ್ಮ ಪೂರ್ವಿಕರು ಪಾಪಮಾಡಿದಂತೆಯೇ ನಾವು ಪಾಪ ಮಾಡಿದೆವು.
ನಾವು ಅಪರಾಧಿಗಳಾಗಿದ್ದೆವು; ದುಷ್ಕೃತ್ಯಗಳನ್ನು ಮಾಡಿದೆವು!
7 ನೀನು ಈಜಿಪ್ಟಿನಲ್ಲಿ ಮಾಡಿದ ಮಹತ್ಕಾರ್ಯಗಳಿಂದ
ನಮ್ಮ ಪೂರ್ವಿಕರು ಏನೂ ಕಲಿತುಕೊಳ್ಳಲಿಲ್ಲ.
ಕೆಂಪು ಸಮುದ್ರದ ಬಳಿಯಲ್ಲಿ
ನಮ್ಮ ಪೂರ್ವಿಕರು ನಿನಗೆ ವಿರೋಧವಾಗಿ ತಿರುಗಿದರು.
8 ಆದರೆ ಆತನು ತನ್ನ ಹೆಸರಿನ ನಿಮಿತ್ತವಾಗಿ ನಮ್ಮ ಪೂರ್ವಿಕರನ್ನು ರಕ್ಷಿಸಿದನು;
ತನ್ನ ಮಹಾಶಕ್ತಿಯನ್ನು ತೋರಿಸುವುದಕ್ಕಾಗಿ ಅವರನ್ನು ರಕ್ಷಿಸಿದನು.
9 ಆತನು ಆಜ್ಞಾಪಿಸಲು ಕೆಂಪು ಸಮುದ್ರವು ಒಣಗಿಹೋಯಿತು.
ಆತನು ಆಳವಾದ ಸಮುದ್ರವನ್ನು ಇಬ್ಭಾಗ ಮಾಡಿ ಮರಳುಗಾಡಿನಂತೆ ಒಣಗಿಹೋಗಿದ್ದ ಭೂಮಿಯ ಮೇಲೆ ನಮ್ಮ ಪೂರ್ವಿಕರನ್ನು ನಡೆಸಿದನು.
10 ನಮ್ಮ ಪೂರ್ವಿಕರನ್ನು ಅವರ ಶತ್ರುಗಳಿಂದ ರಕ್ಷಿಸಿದನು!
ವೈರಿಗಳಿಂದ ಪಾರುಮಾಡಿದನು!
11 ಅವರ ಶತ್ರುಗಳನ್ನು ಸಮುದ್ರದಲ್ಲಿ ಮುಳುಗಿಸಿಬಿಟ್ಟನು.
ಅವರ ಶತ್ರುಗಳಲ್ಲಿ ಒಬ್ಬರೂ ತಪ್ಪಿಸಿಕೊಳ್ಳಲಾಗಲಿಲ್ಲ!
12 ನಮ್ಮ ಪೂರ್ವಿಕರು ಆತನ ಆಜ್ಞೆಗಳನ್ನು
ನಂಬಿ ಆತನನ್ನು ಸಂಕೀರ್ತಿಸಿದರು.
ನಿರ್ಮಾಣಿಕನಾದ ಯೆಹೋವನು ನಿರಂತರವೂ ಜೀವಿಸುವನು
41 ಯೆಹೋವನು ಹೇಳುವುದೇನೆಂದರೆ:
“ಬಹು ದೂರದಲ್ಲಿರುವ ಜನಾಂಗಗಳವರೇ, ಮೌನವಾಗಿದ್ದು ನನ್ನ ಬಳಿಗೆ ಬನ್ನಿರಿ.
ಜನಾಂಗಗಳೇ, ಮತ್ತೆ ಬಲಿಷ್ಠರಾಗಿರಿ.
ನನ್ನ ಬಳಿಗೆ ಬಂದು ನನ್ನೊಂದಿಗೆ ಮಾತಾಡಿರಿ.
ನಾವು ಒಟ್ಟಾಗಿ ಸೇರಿಬಂದು
ಯಾರು ಸರಿ ಎಂದು ವಾದಿಸೋಣ!
2 ಈ ಪ್ರಶ್ನೆಗಳಿಗೆ ಉತ್ತರಿಸಿರಿ: ಪೂರ್ವದಿಕ್ಕಿನಿಂದ ಬರುವ ಮನುಷ್ಯನನ್ನು ಎಚ್ಚರಿಸಿದವರು ಯಾರು?
ಅವನು ಒಳ್ಳೆಯತನವನ್ನು ತನ್ನೊಂದಿಗಿರಲು ಕೇಳುತ್ತಾನೆ.
ತನ್ನ ಖಡ್ಗವನ್ನು ಉಪಯೋಗಿಸಿ ಜನಾಂಗಗಳನ್ನು ಸೋಲಿಸುವನು.
ಅವರನ್ನು ಧೂಳಿನಂತೆ ಮಾಡುವನು. ತನ್ನ ಬಿಲ್ಲನ್ನು ಉಪಯೋಗಿಸಿ ರಾಜರನ್ನು ವಶಪಡಿಸಿಕೊಳ್ಳುತ್ತಾನೆ.
ಅವರು ಗಾಳಿಯಲ್ಲಿ ತೂರಾಡುವ ಹುಲ್ಲಿನಂತೆ ಓಡಿಹೋಗುವರು.
3 ಅವನು ಸೈನ್ಯವನ್ನು ಓಡಿಸಿದರೂ ಗಾಯಗೊಳ್ಳುವದಿಲ್ಲ.
ತಾನು ಹಿಂದೆಂದೂ ಹೋಗದ ಸ್ಥಳಗಳಿಗೆ ಹೋಗುವನು.
4 ಇವೆಲ್ಲಾ ನೆರವೇರುವಂತೆ ಮಾಡಿದವರು ಯಾರು?
ಆದಿಯಿಂದ ಎಲ್ಲಾ ಜನರನ್ನು ಕರೆದವರು ಯಾರು?
ಯೆಹೋವನೆಂಬ ನಾನೇ ಇವೆಲ್ಲವನ್ನು ಮಾಡಿದೆನು.
ನಾನೇ ಮೊದಲನೆಯವನಾಗಿದ್ದೇನೆ.
ಅನಾದಿಕಾಲಕ್ಕಿಂತ ಮೊದಲು ನಾನಿದ್ದೆನು.
ಎಲ್ಲವೂ ಅಂತ್ಯವಾಗುವ ತನಕ ನಾನು ಇರುತ್ತೇನೆ.
5 ದೂರ ಸ್ಥಳಗಳವರೇ,
ನೋಡಿರಿ, ಭಯಗೊಳ್ಳಿರಿ.
ಭೂಮಿಯ ಕಟ್ಟಕಡೆಗಿರುವ ದೇಶಗಳೇ,
ಭಯದಿಂದ ನಡುಗಿರಿ.
ನನ್ನ ಬಳಿಗೆ ಬಂದು
ನನ್ನ ಮಾತನ್ನು ಕೇಳಿರಿ ಎಂದಾಗ ಅವರು ಬಂದರು.
6 “ಕೆಲಸಗಾರರು ಒಬ್ಬರಿಗೊಬ್ಬರು ಸಹಾಯ ಮಾಡುವರು. ಅವರು ಬಲಶಾಲಿಗಳಾಗಬೇಕೆಂದು ಪರಸ್ಪರ ಪ್ರೋತ್ಸಾಹಿಸುವರು. 7 ಒಬ್ಬ ಕೆಲಸಗಾರನು ಮರವನ್ನು ಕಡಿದು ಅದರಿಂದ ವಿಗ್ರಹವನ್ನು ಮಾಡುವನು. ಅವನು ಬಂಗಾರದ ಕೆಲಸದವನನ್ನು ಪ್ರೋತ್ಸಾಹಿಸುವನು. ಇನ್ನೊಬ್ಬನು ತನ್ನ ಸುತ್ತಿಗೆಯಿಂದ ತಗಡನ್ನು ಸಮತಟ್ಟು ಮಾಡುವನು. ಅವನು ಕಬ್ಬಿಣದ ಕೆಲಸದವನನ್ನು ಪ್ರೋತ್ಸಾಹಿಸುವನು. ಈ ಕೆಲಸದವನು ‘ಇದು ಒಳ್ಳೆಯ ಕೆಲಸ. ತಗಡು ಹೊರಗೆ ಬರಲಾರದು’ ಎಂದು ಹೇಳಿ ಆ ವಿಗ್ರಹವನ್ನು ಪೀಠಕ್ಕೆ ಮೊಳೆ ಹೊಡೆದು ಭದ್ರಪಡಿಸುವನು. ಈಗ ವಿಗ್ರಹವು ಅಲ್ಲಾಡುವದಿಲ್ಲ, ಕೆಳಕ್ಕೆ ಬೀಳುವದಿಲ್ಲ.”
ಯೆಹೋವನೊಬ್ಬನೇ ನಮ್ಮನ್ನು ರಕ್ಷಿಸುವನು
8 ಯೆಹೋವನು ಹೀಗೆನ್ನುತ್ತಾನೆ, “ಇಸ್ರೇಲೇ, ನೀನು ನನ್ನ ಸೇವಕನಾಗಿರುವೆ.
ಯಾಕೋಬೇ, ನಾನು ನಿನ್ನನ್ನು ಆರಿಸಿಕೊಂಡೆನು.
ನೀನು ನನ್ನ ಸ್ನೇಹಿತನಾದ ಅಬ್ರಹಾಮನ ಕುಟುಂಬದವನಾಗಿರುವೆ.
9 ನೀನು ದೂರದೇಶದಲ್ಲಿದ್ದೆ.
ಆದರೆ ಕೈಚಾಚಿ ಆ ದೇಶದಿಂದ ನಿನ್ನನ್ನು ಕರೆದೆನು.
‘ನೀನು ನನ್ನ ಸೇವಕ’ ಎಂದು ಹೇಳಿದೆನು.
ನಾನು ನಿನ್ನನ್ನು ಆರಿಸಿಕೊಂಡೆನು.
ಆದರೆ ನಿನ್ನನ್ನು ತಳ್ಳಿಬಿಡಲಿಲ್ಲ.
10 ನಾನೇ ನಿನ್ನ ಸಂಗಡವಿದ್ದೇನೆ. ಆದ್ದರಿಂದ ಚಿಂತಿಸದಿರು.
ನಾನೇ ನಿನ್ನ ದೇವರು, ಆದ್ದರಿಂದ ಭಯಪಡಬೇಡ.
ನಿನ್ನನ್ನು ಬಲಪಡಿಸುವೆನು.
ನಿನಗೆ ಸಹಾಯ ಮಾಡುವೆನು.
ನನ್ನ ನೀತಿಯ ಬಲಗೈಯಿಂದ ನಿನಗೆ ಆಧಾರ ಕೊಡುವೆನು.
11 ನೋಡು, ಕೆಲವರು ನಿನ್ನ ಮೇಲೆ ಕೋಪಗೊಂಡಿದ್ದಾರೆ.
ಆದರೆ ಅವರು ನಾಚಿಕೆಪಡುವರು.
ನಿನ್ನ ಶತ್ರುಗಳು ಕಳೆದುಹೋಗಿ ಕಾಣದೆಹೋಗುವರು.
12 ನಿನಗೆ ವಿರುದ್ಧವಾಗಿದ್ದ ಜನರನ್ನು ನೀನು ಹುಡುಕುವೆ.
ಆದರೆ ಅವರು ನಿನಗೆ ಕಾಣಿಸುವುದಿಲ್ಲ.
ನಿನ್ನ ವಿರುದ್ಧವಾಗಿ ಯುದ್ಧ ಮಾಡಿದವರು ಕಾಣದೆಹೋಗುವರು.
13 ನಿನ್ನ ದೇವರಾದ ಯೆಹೋವನು ನಾನೇ.
ನಾನು ನಿನ್ನ ಬಲಗೈಯನ್ನು ಹಿಡಿದಿದ್ದೇನೆ.
‘ನೀನು ಹೆದರಬೇಡ, ನಾನೇ ನಿನಗೆ ಸಹಾಯ ಮಾಡುತ್ತೇನೆ’
ಎಂದು ಹೇಳುತ್ತಿದ್ದೇನೆ.
ಅತ್ಯುತ್ತಮ ಸ್ಥಾನ ಯಾರಿಗೆ?
(ಮಾರ್ಕ 9:33-37; ಲೂಕ 9:46-48)
18 ಆ ಸಮಯದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಪರಲೋಕರಾಜ್ಯದಲ್ಲಿ ಯಾರಿಗೆ ಅತ್ಯುತ್ತಮ ಸ್ಥಾನ ದೊರೆಯುತ್ತದೆ” ಎಂದು ಕೇಳಿದರು.
2 ಯೇಸು ಚಿಕ್ಕ ಮಗುವನ್ನು ತನ್ನ ಹತ್ತಿರಕ್ಕೆ ಕರೆದು ತನ್ನ ಶಿಷ್ಯರ ಮುಂದೆ ಆ ಮಗುವನ್ನು ನಿಲ್ಲಿಸಿ ಹೀಗೆಂದನು: 3 “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ನೀವು ಬದಲಾವಣೆ ಹೊಂದಿಕೊಂಡು ನಿಮ್ಮ ಹೃದಯದಲ್ಲಿ ಚಿಕ್ಕ ಮಕ್ಕಳಂತೆ ಆಗಬೇಕು. ಇಲ್ಲವಾದರೆ, ನೀವು ಪರಲೋಕರಾಜ್ಯಕ್ಕೆ ಸೇರುವುದೇ ಇಲ್ಲ. 4 ಈ ಚಿಕ್ಕ ಮಗುವಿನಂತೆ ತನ್ನನ್ನು ತಗ್ಗಿಸಿಕೊಳ್ಳುವವನೇ ಪರಲೋಕರಾಜ್ಯದಲ್ಲಿ ಅತ್ಯುತ್ತಮ ಸ್ಥಾನ ಪಡೆಯುತ್ತಾನೆ.
5 “ಯಾವನಾದರೂ ನನ್ನ ಹೆಸರಿನಲ್ಲಿ ಒಂದು ಚಿಕ್ಕ ಮಗುವನ್ನು ಸ್ವೀಕರಿಸಿಕೊಂಡರೆ ಅವನು ನನ್ನನ್ನೇ ಸ್ವೀಕರಿಸಿಕೊಂಡಂತಾಯಿತು.
Kannada Holy Bible: Easy-to-Read Version. All rights reserved. © 1997 Bible League International