Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 25:1-9

ರಚನೆಗಾರ: ದಾವೀದ.

25 ಯೆಹೋವನೇ, ನಿನ್ನಲ್ಲೇ ಮನಸ್ಸಿಟ್ಟಿದ್ದೇನೆ.
ನನ್ನ ದೇವರೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ.
    ನನ್ನನ್ನು ನಿರಾಶೆಗೊಳಿಸಬೇಡ.
    ವೈರಿಗಳು ನನ್ನನ್ನು ನೋಡಿ ಗೇಲಿ ಮಾಡದಂತಾಗಲಿ!
ನಿನ್ನಲ್ಲಿ ಭರವಸವಿಟ್ಟಿರುವವರು ನಿರಾಶರಾಗುವುದಿಲ್ಲ
    ದ್ರೋಹಿಗಳಾದರೋ ನಿರಾಶರಾಗುವರು.
    ಅವರಿಗೆ ಏನೂ ದೊರೆಯುವುದಿಲ್ಲ.

ಯೆಹೋವನೇ ನಿನ್ನ ಮಾರ್ಗಗಳನ್ನು ನನಗೆ ತಿಳಿಸು.
    ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು.
ನನಗೆ ಮಾರ್ಗದರ್ಶನ ನೀಡು; ನಿನ್ನ ಸತ್ಯಗಳನ್ನು ನನಗೆ ಉಪದೇಶಿಸು.
    ನೀನೇ ನನ್ನ ದೇವರು, ನೀನೇ ನನ್ನ ರಕ್ಷಕ.
    ಹಗಲೆಲ್ಲಾ ನಿನ್ನಲ್ಲಿ ಭರವಸವಿಟ್ಟಿರುವೆ.
ಯೆಹೋವನೇ, ನನಗೆ ಕರುಣೆ ತೋರಬೇಕೆಂಬುದನ್ನು ಜ್ಞಾಪಿಸಿಕೊ.
    ನಿನ್ನ ಶಾಶ್ವತವಾದ ಪ್ರೀತಿಯನ್ನು ನನಗೆ ತೋರಿಸು.
ನಾನು ಯೌವನಸ್ಥನಾಗಿದ್ದಾಗ ಮಾಡಿದ ಪಾಪಗಳನ್ನಾಗಲಿ ಕೆಟ್ಟಕಾರ್ಯಗಳನ್ನಾಗಲಿ ಜ್ಞಾಪಿಸಿಕೊಳ್ಳಬೇಡ.
    ಯೆಹೋವನೇ, ನಿನ್ನ ಒಳ್ಳೆಯ ಹೆಸರಿನ ನಿಮಿತ್ತ ನನ್ನನ್ನು ಪ್ರೀತಿಯಿಂದ ಜ್ಞಾಪಿಸಿಕೊ.

ಯೆಹೋವನು ಒಳ್ಳೆಯವನೂ ಸತ್ಯಸ್ವರೂಪನೂ ಆಗಿದ್ದಾನೆ.
    ಆತನು ಪಾಪಿಗಳಿಗೆ ಜೀವಮಾರ್ಗವನ್ನು ಬೋಧಿಸುವನು.
ಆತನು ದೀನರಿಗೆ ತನ್ನ ಮಾರ್ಗಗಳನ್ನು ಉಪದೇಶಿಸುವನು.
    ಆತನು ಅವರನ್ನು ತನ್ನ ನ್ಯಾಯಾನುಸಾರವಾಗಿ ನಡೆಸುವನು.

ಯೆಹೆಜ್ಕೇಲ 12:17-28

ಜನರು ಭಯಭೀತರಾಗಿ ನಡುಗುವರು

17 ಆಗ ಯೆಹೋವನ ವಾಕ್ಯವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 18 “ನರಪುತ್ರನೇ, ನೀನು ಭೀತಿಯಲ್ಲಿರುವವನಂತೆ ನಟನೆ ಮಾಡಬೇಕು. ನೀನು ಆಹಾರ ತೆಗೆದುಕೊಳ್ಳುವಾಗ ನಡುಗಬೇಕು. ನೀರು ಕುಡಿಯುವಾಗ ಭಯಪಡಬೇಕು ಮತ್ತು ಚಿಂತಿಸಬೇಕು. 19 ಇದನ್ನು ನೀನು ಸಾಮಾನ್ಯ ಜನರಿಗೆ ತಿಳಿಸಬೇಕು. ನೀನು ಹೀಗೆ ಹೇಳಬೇಕು, ‘ಇನ್ನೂ ಇಸ್ರೇಲ್ ದೇಶದಲ್ಲಿರುವ ಜೆರುಸಲೇಮಿನ ನಿವಾಸಿಗಳ ಬಗ್ಗೆ ನಮ್ಮ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ಅವರು ಊಟಮಾಡುವಾಗ ಉದ್ವೇಗದಿಂದಿರುವರು; ಅವರು ಕುಡಿಯುವಾಗ ಭಯದಿಂದಿರುವರು. ಯಾಕೆಂದರೆ ಅವರ ದೇಶದಲ್ಲಿರುವ ಸಮಸ್ತವು ನಾಶವಾಗುತ್ತದೆ, ಯಾಕೆಂದರೆ ಅಲ್ಲಿ ವಾಸಿಸುವವರೆಲ್ಲರೂ ಹಿಂಸಕರಾಗಿದ್ದಾರೆ. 20 ಜನರು ವಾಸವಾಗಿರುವ ಪಟ್ಟಣಗಳು ನಾಶವಾಗುತ್ತವೆ; ಇಡೀ ದೇಶವೇ ನಾಶವಾಗುತ್ತದೆ. ನಾನೇ ಯೆಹೋವನೆಂದು ಆಗ ನಿಮಗೆ ತಿಳಿಯುವುದು.’”

ಇಸ್ರೇಲಿಗೆ ಬರುವ ದುರ್ಗತಿ

21 ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ, 22 “ನರಪುತ್ರನೇ,

‘ಸಂಕಷ್ಟದ ದಿನಗಳು ಉರುಳುತ್ತಿವೆ;
    ಎಲ್ಲಾ ದರ್ಶನಗಳು ನೆರವೇರುವುದಿಲ್ಲ’

ಎಂಬ ಈ ಗಾದೆಯನ್ನು ಇಸ್ರೇಲ್ ದೇಶದಲ್ಲಿರುವ ನೀವೆಲ್ಲರೂ ಹೇಗೆ ಅರ್ಥಮಾಡಿಕೊಳ್ಳುವಿರಿ?

23 “ಆ ಜನರಿಗೆ ಹೀಗೆ ಹೇಳು: ಅವರ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಾನು ಈ ಗಾದೆಗೆ ಅಂತ್ಯವನ್ನು ಬರಮಾಡುವೆನು. ಇಸ್ರೇಲಿನಲ್ಲಿ ಆ ಗಾದೆಯನ್ನು ಅವರು ಇನ್ನೆಂದಿಗೂ ಬಳಸುವುದಿಲ್ಲ. ಅದರ ಬದಲಾಗಿ ಅವರಿಗೆ ಹೀಗೆ ಹೇಳು:

‘ಸಂಕಷ್ಟದ ದಿನಗಳು ಸಮೀಪಿಸಿವೆ;
    ಪ್ರತಿಯೊಂದು ದರ್ಶನವೂ ನೆರವೇರುವುದು.’

24 “ಇಸ್ರೇಲಿನಲ್ಲಿ ಇನ್ನು ಮೇಲೆ ಸುಳ್ಳುದರ್ಶನಗಳಿರುವುದಿಲ್ಲ; ಮುಖಸ್ತುತಿಯ ಕಣಿಯೂ ಇರುವುದಿಲ್ಲ. 25 ಯಾಕೆಂದರೆ ನಾನೇ ಯೆಹೋವನು. ನನಗೆ ಇಷ್ಟಬಂದದ್ದನ್ನು ನಾನು ಹೇಳುವೆನು ಮತ್ತು ಆ ಸಂಗತಿಯು ನೆರವೇರುವುದು. ಅದಕ್ಕೆ ಹೆಚ್ಚು ಸಮಯಬೇಕಾಗದು. ಆ ಸಂಕಟಗಳು ಬೇಗನೇ ಬರುವವು; ನಿಮ್ಮ ಜೀವಮಾನ ಕಾಲದಲ್ಲಿಯೇ ಬರುವವು. ಓ ದಂಗೆಕೋರರಾದ ಜನರೇ, ನಾನು ಒಂದು ವಿಷಯದಲ್ಲಿ ಏನಾದರೂ ಹೇಳಿದರೆ ಆ ವಿಷಯವು ಸಂಭವಿಸುವಂತೆ ಮಾಡುವೆನು.” ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು.

26 ಆಗ ಯೆಹೋವನ ಸಂದೇಶವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 27 “ನರಪುತ್ರನೇ, ನಿನಗೆ ನಾನು ಕೊಟ್ಟ ದರ್ಶನಗಳ ಕುರಿತು ಬಹಳ ಕಾಲದ ನಂತರ ಅದು ನೆರವೇರುವುದು ಎಂದು ಇಸ್ರೇಲರ ಜನರು ನೆನೆಸುತ್ತಿದ್ದಾರೆ. 28 ಆದ್ದರಿಂದ ಅವರಿಗೆ ನೀನು ಈ ವಿಷಯವನ್ನು ತಿಳಿಸು, ‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ: ಏನೆಂದರೆ ನಾನು ಇನ್ನು ಹೆಚ್ಚು ತಡಮಾಡುವುದಿಲ್ಲ. ನಾನೊಂದು ವಿಷಯವು ನೆರವೇರುವುದು ಎಂದು ಹೇಳಿದರೆ ಅದು ಖಂಡಿತ ನೆರವೇರುವುದು.’” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.

ಯಾಕೋಬನು 4:11-16

ನೀವು ತೀರ್ಪುಗಾರರಲ್ಲ

11 ಸಹೋದರ ಸಹೋದರಿಯರೇ, ಒಬ್ಬರ ವಿರುದ್ಧ ಮತ್ತೊಬ್ಬರು ನಿಂದೆಯ ಮಾತುಗಳನ್ನಾಡದಿರಿ. ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿರುವವನನ್ನು ನೀವು ಟೀಕಿಸಿದರೆ ಅಥವಾ ಅವನ ಬಗ್ಗೆ ತೀರ್ಪು ನೀಡಿದರೆ, ಅವನು ಅನುಸರಿಸುವ ಧರ್ಮಶಾಸ್ತ್ರವನ್ನೇ ಟೀಕಿಸಿದಂತಾಯಿತು. ಕ್ರಿಸ್ತನಲ್ಲಿ ಸಹೋದರನಾಗಿರುವವನಿಗೆ ನೀವು ತೀರ್ಪು ನೀಡಿದರೆ, ಅವನು ಅನುಸರಿಸುತ್ತಿರುವ ಧರ್ಮಶಾಸ್ತ್ರದ ಬಗ್ಗೆ ನೀವು ತೀರ್ಪು ನೀಡಿದಂತಾಯಿತು. ನೀವು ಧರ್ಮಶಾಸ್ತ್ರಕ್ಕೆ ತೀರ್ಪು ನೀಡುವಾಗ ನೀವು ಧರ್ಮಶಾಸ್ತ್ರವನ್ನು ಅನುಸರಿಸುವವರಲ್ಲ. ನೀವು ನ್ಯಾಯಾಧಿಪತಿಗಳಾಗಿದ್ದೀರಿ! 12 ದೇವರೊಬ್ಬನೇ ನಿಯಮಗಳನ್ನು ಮಾಡುವಾತನು. ಆತನೊಬ್ಬನೇ ನಿಜವಾದ ನ್ಯಾಯಾಧಿಪತಿ. ದೇವರೊಬ್ಬನೇ ರಕ್ಷಿಸಬಲ್ಲನು ಮತ್ತು ನಾಶಮಾಡಬಲ್ಲನು. ಆದ್ದರಿಂದ ಬೇರೊಬ್ಬ ವ್ಯಕ್ತಿಯ ಬಗ್ಗೆ ತೀರ್ಪು ನೀಡುವುದು ನಿಮಗೆ ಯೋಗ್ಯವಾದುದಲ್ಲ.

ದೇವರೇ ನಿನ್ನ ಜೀವನದ ಬಗ್ಗೆ ಯೋಚಿಸಲಿ

13 ನಿಮ್ಮಲ್ಲಿ ಕೆಲವರು, “ಈ ಹೊತ್ತು ಅಥವಾ ನಾಳೆ ನಗರಕ್ಕೆ ಹೋಗುತ್ತೇವೆ. ಅಲ್ಲಿ ಒಂದು ವರ್ಷವಿದ್ದು ವ್ಯಾಪಾರಮಾಡಿ ಹಣ ಸಂಪಾದಿಸುತ್ತೇವೆ” ಎಂದು ಹೇಳುವಿರಿ. ಆಲಿಸಿರಿ! ಇದರ ಬಗ್ಗೆ ಯೋಚಿಸಿರಿ: 14 ನಾಳೆ ಏನಾಗುವುದೋ ನಿಮಗೆ ತಿಳಿಯದು! ನಿಮ್ಮ ಜೀವನವು ಹಬೆಯಂತಿದೆ. ನೀವು ಅದನ್ನು ಸ್ವಲ್ಪಕಾಲ ನೋಡುವಿರಿ. ನಂತರ ಅದು ಅದೃಶ್ಯವಾಗುವುದು. 15 ಆದ್ದರಿಂದ, ನೀವು ಹೀಗೆ ಹೇಳಬೇಕು, “ಪ್ರಭುವು ಇಚ್ಛೆಪಟ್ಟರೆ, ನಾವು ಜೀವಿಸಿರುತ್ತೇವೆ. ಇಂಥಿಂಥದ್ದನ್ನು ಮಾಡುತ್ತೇವೆ.” 16 ಆದರೆ ನೀವೀಗ ಜಂಬಗಾರರಾಗಿ ಹೊಗಳಿಕೊಳ್ಳುತ್ತೀರಿ. ನಿಮ್ಮ ಹೊಗಳಿಕೆಯೆಲ್ಲವೂ ಕೆಟ್ಟದ್ದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International