Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆಶಾಯ 28-29

ಉತ್ತರ ಇಸ್ರೇಲಿಗೆ ಎಚ್ಚರಿಕೆ

28 ಸಮಾರ್ಯದ ಕಡೆಗೆ ನೋಡು!
ಎಫ್ರಾಯೀಮಿನ ಮತ್ತರಾದ ಜನರು ಆ ಪಟ್ಟಣದ ಬಗ್ಗೆ ಬಹಳ ಅಭಿಮಾನಪಡುತ್ತಿದ್ದಾರೆ.
    ಆ ನಗರವು ಪರ್ವತದ ಮೇಲಿರುವುದು; ಅದರ ಸುತ್ತಲೂ ಫಲವತ್ತಾದ ಕಣಿವೆ ಇರುವುದು.
ಸಮಾರ್ಯದ ಜನರು ತಮ್ಮ ನಗರವು ಸುಂದರವಾದ ಕಿರೀಟವೆಂದು ನೆನಸುತ್ತಾರೆ.
ಆದರೆ ಅವರು ಕುಡಿದು ಮತ್ತರಾಗಿದ್ದಾರೆ.
    ಅವರ “ಸುಂದರ ಕಿರೀಟವು” ಒಣಗಿದ ತರಗೆಲೆಯಾಗಿದೆ.

ಇಗೋ, ನನ್ನ ಒಡೆಯನಿಗೆ ಬಲಿಷ್ಠನೂ ಧೈರ್ಯವಂತನೂ ಆಗಿರುವ ಒಬ್ಬನಿದ್ದಾನೆ.
    ಅವನು ದೇಶದೊಳಗೆ ಆಲಿಕಲ್ಲಿನ ಮಳೆಯಿಂದ ಕೂಡಿದ ಬಿರುಗಾಳಿಯಂತೆಯೂ
ನದಿಯ ಬಲವಾದ ಪ್ರವಾಹವು ದೇಶದೊಳಗೆ ನುಗ್ಗಿಬರುವಂತೆಯೂ ಅವನು ಬರುವನು.
    ಆ ಕಿರೀಟವನ್ನು (ಸಮಾರ್ಯ) ನೆಲದ ಮೇಲೆ ಬಿಸಾಡುವನು.
ಕುಡಿದು ಮತ್ತರಾದ ಎಫ್ರಾಯೀಮ್ಯರಿಗೆ ಸುಂದರವಾದ ಕಿರೀಟದ ಮೇಲೆ ಹೆಚ್ಚಳ.
    ಆದರೆ ಆ ನಗರವು ತುಳಿಯಲ್ಪಡುವದು.
ಆ ನಗರವು ಬೆಟ್ಟದ ಮೇಲೆ ಕುಳಿತಿದೆ; ಸುತ್ತಲೂ ಫಲವತ್ತಾದ ಕಣಿವೆ ಇದೆ.
    ಆ ಸುಂದರವಾದ ಪುಷ್ಪ ಕಿರೀಟವು ಕೇವಲ ಒಣಗಿದ ತರಗೆಲೆ.
ಆ ನಗರವು ಬೇಸಿಗೆಯ ಮೊದಲಿನ (ಅಂಜೂರದ) ಹಣ್ಣುಗಳಂತೆ ಇದೆ.
    ಅದನ್ನು ನೋಡಿದವರು ಕೂಡಲೇ ತೆಗೆದುಕೊಂಡು ಬಾಯಿಗೆ ಹಾಕಿಕೊಳ್ಳುವರು.

ಆ ಸಮಯದಲ್ಲಿ ಸರ್ವಶಕ್ತನಾದ ಯೆಹೋವನು “ಮಹಿಮಾಪೂರ್ಣವಾದ ಕಿರೀಟ”ವಾಗುವನು. ಉಳಿದಿರುವ ಆತನ ಜನರಿಗೆ ಆತನು “ಅಂದವಾದ ಪುಷ್ಪಕಿರೀಟ”ವಾಗಿರುವನು. ಆತನ ಜನರನ್ನು ಆಳುವ ನ್ಯಾಯಾಧಿಪತಿಗಳಿಗೆ ಯೆಹೋವನು ಜ್ಞಾನವನ್ನು ಕೊಡುವನು. ಪುರದ್ವಾರದಲ್ಲಿ ಯುದ್ಧಮಾಡುವ ಆತನ ಜನರಿಗೆ ಯೆಹೋವನು ಬಲವನ್ನು ಕೊಡುವನು. ಆದರೆ ಈಗ ಆ ನಾಯಕರುಗಳು ಮತ್ತರಾಗಿದ್ದಾರೆ. ಯಾಜಕರೂ ಪ್ರವಾದಿಗಳೂ ಮದ್ಯಸೇವನೆಯಿಂದ ಮತ್ತರಾಗಿದ್ದಾರೆ. ಅವರು ಎಡವಿಬೀಳುತ್ತಾರೆ. ಪ್ರವಾದಿಗಳು ದರ್ಶನಗಳನ್ನು ಕಾಣುವಾಗ ಅಮಲೇರಿದವರಾಗಿರುತ್ತಾರೆ; ನ್ಯಾಯಾಧೀಶರು ತೀರ್ಪುಕೊಡುವಾಗ ಅಮಲೇರಿದವರಾಗಿರುತ್ತಾರೆ. ಅವರ ಮುಂದಿರುವ ಮೇಜುಗಳ ಮೇಲೆ ವಾಂತಿಯು ತುಂಬಿರುತ್ತದೆ; ಶುದ್ಧವಾದ ಸ್ಥಳವೇ ಇರುವದಿಲ್ಲ.

ದೇವರು ತನ್ನ ಜನರಿಗೆ ಸಹಾಯ ಮಾಡುವನು

ಯೆಹೋವನು ಜನರಿಗೆ ಪಾಠ ಕಲಿಸಲು ಪ್ರಯತ್ನಿಸುತ್ತಿದ್ದಾನೆ. ತನ್ನ ಬೋಧನೆಯನ್ನು ತನ್ನ ಜನರು ಅರಿತುಕೊಳ್ಳಲೆಂದು ಯೆಹೋವನು ಪ್ರಯತ್ನಿಸುತ್ತಿದ್ದಾನೆ. ಆದರೆ ಜನರು ಇನ್ನೂ ತಾಯಿ ಹಾಲು ಕುಡಿಯುವ ಚಿಕ್ಕ ಕೂಸುಗಳಿಂತಿದ್ದಾರೆ. 10 ಆದ್ದರಿಂದ ಚಿಕ್ಕಕೂಸುಗಳೊಂದಿಗೆ ಮಾತಾಡುವಂತೆ ಯೆಹೋವನು ಅವರ ಸಂಗಡ ಮಾತಾಡುತ್ತಾನೆ:

“ಸಾ ಲಸಾವ್ ಸಾ ಲಸಾವ್
ಖಾವ್ ಲಖಾವ್ ಖಾವ್ ಲಖಾವ್
ಜೆಯಿರ್ ಶಾಮ್ ಜೆಯಿರ್ ಶಾಮ್.”[a]

11 ಯೆಹೋವನು ಅವರ ಸಂಗಡ ವಿಚಿತ್ರವಾಗಿಯೂ ಅನ್ಯಭಾಷೆಗಳಲ್ಲಿಯೂ ಮಾತನಾಡುತ್ತಾನೆ.

12 ಹಿಂದಿನ ಕಾಲದಲ್ಲಿ ದೇವರು ಅವರ ಸಂಗಡ ಮಾತನಾಡಿ, “ಇಲ್ಲಿ ವಿಶ್ರಾಂತಿಯ ಸ್ಥಳವಿದೆ, ಇದು ವಿಶ್ರಮಿಸುವ ಸ್ಥಳ. ಆಯಾಸಗೊಂಡವರೇ, ಬಂದು ವಿಶ್ರಮಿಸಿರಿ. ಇದು ಸಮಾಧಾನಕರವಾದ ಸ್ಥಳ” ಎಂದು ಹೇಳುತ್ತಿದ್ದನು.

ಆದರೆ ಜನರಿಗೆ ಆತನ ಮಾತುಗಳನ್ನು ಕೇಳಲು ಇಷ್ಟವಾಗಲಿಲ್ಲ. 13 ಆದ್ದರಿಂದ ಆತನ ಮಾತು ಅವರಿಗೆ ಪರಭಾಷೆಯಂತೆ ಕೇಳಿಸುವುದು.

“ಸಾ ಲಸಾವ್ ಸಾ ಲಸಾವ್
ಖಾವ್ ಲಖಾವ್ ಖಾವ್ ಲಖಾವ್
ಜೆಯಿರ್ ಶಾಮ್ ಜೆಯಿರ್ ಶಾಮ್.”

ಜನರು ತಮ್ಮ ಇಷ್ಟಪ್ರಕಾರ ನಡೆದರು. ಆದ್ದರಿಂದ ಅವರು ಸೋಲಿಸಲ್ಪಟ್ಟರು. ಅವರು ಉರುಲಿಗೆ ಸಿಕ್ಕಿ ಹಾಕಿಕೊಂಡು ಹಿಡಿಯಲ್ಪಟ್ಟರು.

ದೇವರ ನ್ಯಾಯತೀರ್ಪಿನಿಂದ ಯಾರೂ ತಪ್ಪಿಸಿಕೊಳ್ಳುವದಿಲ್ಲ

14 ಆದಕಾರಣ ಜೆರುಸಲೇಮಿನಲ್ಲಿರುವ ಅಧಿಪತಿಗಳೇ, ಯೆಹೋವನ ಸಂದೇಶವನ್ನು ನೀವು ಕೇಳಬೇಕು. ಆದರೆ ನೀವು ಅದನ್ನು ಕೇಳಲು ನಿರಾಕರಿಸುತ್ತಿದ್ದೀರಿ. 15 ನೀವು, “ನಾವು ಮರಣದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ನಾವು ಪಾತಾಳದೊಂದಿಗೆ ಒಪ್ಪಂದ ಮಾಡಿದ್ದೇವೆ. ಆದ್ದರಿಂದ ನಾವು ಶಿಕ್ಷಿಸಲ್ಪಡುವದಿಲ್ಲ. ಶಿಕ್ಷೆಯು ಹಾದುಹೋಗುವಾಗ ಅದು ನಮಗೇನೂ ಹಾನಿ ಮಾಡುವದಿಲ್ಲ. ನಾವು ನಮ್ಮ ಸುಳ್ಳುಮೋಸಗಳ ಹಿಂದೆ ಅವಿತುಕೊಳ್ಳುತ್ತೇವೆ” ಎಂದು ಹೇಳುತ್ತೀರಿ.

16 ಇದಕ್ಕೋಸ್ಕರವಾಗಿಯೇ, ನನ್ನ ಒಡೆಯನಾದ ಯೆಹೋವನು ಹೀಗೆನ್ನುವನು: “ಚೀಯೋನಿನಲ್ಲಿ ನಾನು ಒಂದು ಮೂಲೆಗಲ್ಲು ಇಡುವೆನು, ಇದು ಬಹು ಅಮೂಲ್ಯವಾದ ಕಲ್ಲು. ಈ ವಿಶೇಷವಾದ ಕಲ್ಲಿನ ಮೇಲೆ ಎಲ್ಲವೂ ಕಟ್ಟಲ್ಪಡುವದು. ಆ ಕಲ್ಲಿನ ಮೇಲೆ ಭರವಸವಿಡುವ ಯಾವನು ಆಶಾಭಂಗಪಡುವುದಿಲ್ಲ.

17 “ಗೋಡೆಯು ನೆಟ್ಟಗಿದೆಯೆಂದು ನೋಡಲು ಜನರು ಗುಂಡನ್ನೂ ನೂಲನ್ನೂ ಉಪಯೋಗಿಸುತ್ತಾರೆ. ಅದೇ ರೀತಿಯಲ್ಲಿ ನಾನು ನ್ಯಾಯವನ್ನು ನೂಲನ್ನಾಗಿಯೂ ಕರುಣೆಯನ್ನು ಗುಂಡನ್ನಾಗಿಯೂ ಉಪಯೋಗಿಸುವೆನು. ನೀವು ದುಷ್ಟಜನರು. ನೀವು ನಿಮ್ಮ ಸುಳ್ಳುಮೋಸಗಳ ಹಿಂದೆ ಅವಿತುಕೊಳ್ಳುತ್ತಿದ್ದೀರಿ. ಆದರೆ ನೀವು ಶಿಕ್ಷಿಸಲ್ಪಡುವಿರಿ. ನೀವು ಅಡಗಿಕೊಂಡಿರುವ ಸ್ಥಳವನ್ನು ನಾಶಮಾಡುವ ಬಿರುಗಾಳಿಯಂತೆಯೂ ಪ್ರವಾಹದಂತೆಯೂ ಅದಿರುವುದು. 18 ಮರಣದೊಂದಿಗೆ ನೀವು ಮಾಡಿದ ಒಪ್ಪಂದವು ಮುರಿಯಲ್ಪಡುವದು. ಪಾತಾಳದೊಂದಿಗೆ ನೀವು ಮಾಡಿದ ಒಪ್ಪಂದವು ನಿಮ್ಮ ಸಹಾಯಕ್ಕೆ ಬಾರದು.

“ನಿಮ್ಮನ್ನು ಶಿಕ್ಷಿಸಲು ಒಬ್ಬನು ಬರುವನು. ಆತನು ನೀವು ಧೂಳೋ ಎಂಬಂತೆ ನಿಮ್ಮ ಮೇಲೆ ತುಳಿದಾಡುವನು. 19 ಆತನು ಬಂದು ನಿಮ್ಮನ್ನು ತೆಗೆದುಕೊಂಡು ಹೋಗುವನು. ನಿಮಗೆ ದೊರಕುವ ಶಿಕ್ಷೆ ಬಹು ಭಯಂಕರವಾದದ್ದು. ಅದರ ಬಗ್ಗೆ ನೀವು ಕೇಳಿದ ಕೂಡಲೇ ಚಿಂತಿಸಲಾರಂಭಿಸುವಿರಿ. ಅದು ಮುಂಜಾನೆ ಬಂದು ರಾತ್ರಿ ಬಹು ಹೊತ್ತಿನ ತನಕ ಇರುವದು.

“ಆಗ ನೀವು ಈ ಕಥೆಯನ್ನು ಅರ್ಥಮಾಡಿಕೊಳ್ಳುವಿರಿ: 20 ಒಬ್ಬ ಮನುಷ್ಯನು ತನಗೆ ಚಿಕ್ಕದಾಗಿರುವ ಹಾಸಿಗೆಯ ಮೇಲೆ ಮಲಗಲು ಪ್ರಯತ್ನಿಸುವನು. ಅವನಲ್ಲಿರುವ ಕಂಬಳಿಯು ಅವನನ್ನು ಪೂರ್ಣವಾಗಿ ಮುಚ್ಚುತ್ತಿರಲಿಲ್ಲ. ಆ ಹಾಸಿಗೆಯೂ, ಆ ಕಂಬಳಿಯೂ ಹೇಗೆ ನಿಷ್ಪ್ರಯೋಜಕವೋ ಹಾಗೆಯೇ ನಿಮ್ಮ ಒಪ್ಪಂದವೂ ನಿಷ್ಪ್ರಯೋಜಕವಾಗಿದೆ.”

21 ಪೆರಾಚೀಮ್ ಬೆಟ್ಟದ ಮೇಲೆ ಯೆಹೋವನು ಯುದ್ಧ ಮಾಡಿದಂತೆಯೇ ಆತನು ಯುದ್ಧಮಾಡುವನು. ಗಿಬ್ಯೋನ್ ಕಣಿವೆಯಲ್ಲಿ ಯೆಹೋವನು ಕೋಪಗೊಂಡಿದ್ದಂತೆಯೇ ಕೋಪಗೊಳ್ಳುವನು. ಆಗ ಆತನು ಮಾಡಬೇಕಾದ ಕಾರ್ಯಗಳನ್ನು ಮಾಡುವನು. ಯೆಹೋವನು ಕೆಲವು ಅಪರಿಚಿತವಾದ ಸಂಗತಿಗಳನ್ನು ಮಾಡುವನು. ಆದರೆ ಆತನು ತನ್ನ ಕಾರ್ಯವನ್ನು ಮಾಡಿಮುಗಿಸುವನು. ಆ ಕೆಲಸವು ಒಬ್ಬ ಪರಿಚಯವಿಲ್ಲದವನ ಕೆಲಸವಾಗಿದೆ. 22 ಈಗ ನೀವು ಆ ವಿಷಯಗಳೊಂದಿಗೆ ಯುದ್ಧ ಮಾಡಬಾರದು. ನೀವು ಹಾಗೆ ಮಾಡಿದ್ದಲ್ಲಿ ನಿಮ್ಮ ಸುತ್ತಲಿರುವ ಹಗ್ಗವು ಇನ್ನೂ ಬಿಗಿಯಾಗುವದು.

ನಾನು ಕೇಳಿರುವ ಮಾತುಗಳು ಬದಲಾಗವು. ಯಾಕೆಂದರೆ ಅವು ಸರ್ವಶಕ್ತನಾದ ಯೆಹೋವನ ಮಾತುಗಳು. ಆತನು ಪ್ರಪಂಚವನ್ನು ಆಳುವಾತನು. ಆ ಸಂಗತಿಗಳೆಲ್ಲವೂ ಸಂಭವಿಸುವವು.

ಯೆಹೋವನ ಶಿಕ್ಷೆಯು ನ್ಯಾಯಸಮ್ಮತವಾದದ್ದು

23 ನಾನು ಹೇಳುವ ಸಂದೇಶಕ್ಕೆ ಜಾಗ್ರತೆಯಿಂದ ಕಿವಿಗೊಡಿರಿ. 24 ಒಬ್ಬ ವ್ಯವಸಾಯಗಾರನು ಯಾವಾಗಲೂ ಉಳುತ್ತಲೇ ಇರುವನೋ? ಇಲ್ಲ. ಅವನು ಮಣ್ಣಿನಲ್ಲಿ ಯಾವಾಗಲೂ ಕೆಲಸ ಮಾಡುತ್ತಿರುವನೋ? ಇಲ್ಲ. 25 ವ್ಯವಸಾಯಗಾರನು ಮಣ್ಣನ್ನು ಹಸನುಮಾಡಿ ನಂತರ ಬೀಜ ಬಿತ್ತುವನು. ಬೇರೆಬೇರೆ ತರದ ಬೀಜಗಳನ್ನು ಬೇರೆಬೇರೆ ರೀತಿಯಲ್ಲಿ ಬಿತ್ತುವನು. ಅವನು ಗೋಧಿಯನ್ನಾಗಲಿ ಬಾರ್ಲಿಯನ್ನಾಗಲಿ ನೆಲದ ಮೇಲೆ ಬಿಸಾಡುವನು. ಗೋಧಿಯನ್ನು ಸಾಲಾಗಿ ಬಿತ್ತುವನು. ಬೇರೆಬೇರೆ ಗಿಡಗಳ ಬೀಜವನ್ನು ಬೇರೆಬೇರೆ ಸ್ಥಳಗಳಲ್ಲಿಯೂ ಬೇರೆಬೇರೆ ವಿಧಾನದಲ್ಲಿಯೂ ಬಿತ್ತುವನು.

26 ನಮ್ಮ ದೇವರು ಈ ಉದಾಹರಣೆಯ ಮೂಲಕ ಒಂದು ಪಾಠವನ್ನು ಕಲಿಸುತ್ತಾನೆ. ಏನೆಂದರೆ ಆತನು ಜನರನ್ನು ಶಿಕ್ಷಿಸುವಾಗ ನ್ಯಾಯವಾಗಿ ಶಿಕ್ಷಿಸುತ್ತಾನೆ. 27 ವ್ಯವಸಾಯಗಾರನು ಜೀರಿಗೆಯನ್ನು ಒಕ್ಕುವದು ಹಲಿವೆಯಿಂದಲ್ಲ, ಕೋಲಿನಿಂದಲೇ. ಜೀರಿಗೆಯನ್ನು ಕುದುರೆಯಿಂದ ಗುಂಡನ್ನು ಉರುಳಿಸಿ ನುಚ್ಚುನೂರು ಮಾಡುವನೋ? ಇಲ್ಲ! ಅವನೊಂದು ಸಣ್ಣ ಕೋಲನ್ನು ಉಪಯೋಗಿಸುವನು. 28 ಸ್ತ್ರೀಯು ರೊಟ್ಟಿಯನ್ನು ತಯಾರಿಸುವಾಗ ಹಿಟ್ಟನ್ನು ಕೈಯಲ್ಲಿ ನಾದಿ ಅದನ್ನು ಚೆನ್ನಾಗಿ ಹದಗೊಳಿಸುವಳು. ಆದರೆ ಆಕೆ ಹಾಗೆಯೇ ಮಾಡುತ್ತಾ ಇರುವದಿಲ್ಲ. ಅದೇ ರೀತಿಯಲ್ಲಿ ಯೆಹೋವನು ಜನರನ್ನು ಶಿಕ್ಷಿಸುವನು. ಆತನು ಬಂಡಿಯ ಚಕ್ರದಿಂದ ಬೆದರಿಸುವನು. ಆದರೆ ಅವರನ್ನು ಸಂಪೂರ್ಣವಾಗಿ ಪುಡಿಪುಡಿ ಮಾಡುವದಿಲ್ಲ. ಅವರನ್ನು ತುಳಿದುಬಿಡಲು ಅನೇಕ ಕುದುರೆಗಳನ್ನು ಉಪಯೋಗಿಸುವದಿಲ್ಲ. 29 ಈ ಪಾಠವು ಸರ್ವಶಕ್ತನಾದ ಯೆಹೋವನಿಂದ ಬರುತ್ತದೆ. ಆತನು ಆಶ್ಚರ್ಯಕರವಾದ ಸಲಹೆಯನ್ನು ಕೊಡುತ್ತಾನೆ. ಆತನು ನಿಜವಾಗಿಯೂ ಜ್ಞಾನಿ.

ಜೆರುಸಲೇಮಿನ ಮೇಲೆ ದೇವರ ಪ್ರೀತಿ

29 ದೇವರು ಹೇಳುವುದೇನೆಂದರೆ, “ಅರೀಯೇಲನ್ನು ನೋಡು. ಅಲ್ಲಿ ದಾವೀದನು ಪಾಳೆಯಮಾಡಿಕೊಂಡಿದ್ದನು. ಆಕೆಯ ಹಬ್ಬಗಳು ಪ್ರತಿ ವರ್ಷವೂ ನಡೆಯುತ್ತಿವೆ. ನಾನು ಅರೀಯೇಲನ್ನು ಶಿಕ್ಷಿಸಿದ್ದೇನೆ. ಆ ನಗರವು ದುಃಖರೋಧನಗಳಿಂದ ತುಂಬಿದೆ. ಆದರೆ ಆಕೆ ಯಾವಾಗಲೂ ನನ್ನ ಅರೀಯೇಲಾಗಿದ್ದಾಳೆ.

“ನಿನ್ನ ಸುತ್ತಲೂ ನಾನು ಸೈನ್ಯವನ್ನಿಟ್ಟಿದ್ದೇನೆ. ಅರೀಯೇಲೇ, ನಿನಗೆ ವಿರುದ್ಧವಾಗಿ ನಾನು ಯುದ್ಧದ ಬುರುಜನ್ನು ಕಟ್ಟಿಸಿರುತ್ತೇನೆ. ನೀನು ಸೋತುಹೋಗಿರುವೆ ಮತ್ತು ನೆಲದ ಮೇಲೆ ಕೆಡವಲ್ಪಟ್ಟಿರುವೆ. ಈಗ ನಿನ್ನ ಸ್ವರವು ಪ್ರೇತದ ಸ್ವರದಂತೆ ನನಗೆ ಕೇಳಿಸುತ್ತದೆ. ಅದು ಬಲಹೀನವಾದ ಸ್ವರವಾಗಿದೆ.”

ನೆಲದ ಮೇಲೆ ಅನೇಕ ಅಪರಿಚಿತರು ಧೂಳಿನ ಕಣಗಳಂತೆ ಇದ್ದಾರೆ. ಅನೇಕ ಮಂದಿ ದುಷ್ಟಜನರು ಗಾಳಿಯಲ್ಲಿ ತೂರಿಹೋಗುವ ಹೊಟ್ಟಿನಂತಿದ್ದಾರೆ. ಸರ್ವಶಕ್ತನಾದ ಯೆಹೋವನು ನಿಮ್ಮನ್ನು ಗುಡುಗು, ಮಹಾಶಬ್ದ, ಬಿರುಗಾಳಿ, ಚಂಡಮಾರುತ, ದಹಿಸುವ ಅಗ್ನಿಜ್ವಾಲೆ ಇವುಗಳಿಂದ ಶಿಕ್ಷಿಸಿದನು. ಅರೀಯೇಲ್ ವಿರುದ್ಧವಾಗಿ ಅನೇಕಾನೇಕ ಜನಾಂಗಗಳು ಯುದ್ಧಮಾಡಿದರು. ಅವೆಲ್ಲಾ ರಾತ್ರಿಕಾಲದ ಭಯಂಕರ ಕನಸುಗಳಂತೆ ಇದ್ದವು. ಸೈನ್ಯವು ಅರೀಯೇಲ್‌ಗೆ ಮುತ್ತಿಗೆ ಹಾಕಿ ಅದನ್ನು ಶಿಕ್ಷಿಸಿದವು. ಅದು ಕೂಡಾ ಸೈನ್ಯದವರಿಗೆ ಒಂದು ಕನಸಿನಂತಿರುವದು. ಅವರಿಗೆ ಬೇಕಾದದ್ದು ದೊರಕುವದಿಲ್ಲ. ಹಸಿವೆಯಲ್ಲಿರುವ ಒಬ್ಬನು ಆಹಾರದ ಕನಸು ಕಂಡಂತಿರುವದು. ಅವನು ಎಚ್ಚರವಾದಾಗ ಹಸಿವಿನಿಂದಲೇ ಇರುವನು. ಬಾಯಾರಿದ ಮನುಷ್ಯನು ನೀರಿಗಾಗಿ ಕಾಣುವ ಕನಸಿನಂತಿರುವುದು. ಅವನು ಎಚ್ಚರಗೊಂಡಾಗ ಬಾಯಾರಿಕೆಯು ಇನ್ನೂ ಇರುವದು. ಚೀಯೋನಿಗೆ ವಿರುದ್ಧ ಯುದ್ಧಮಾಡುವ ಆ ಜನಾಂಗಗಳ ಗತಿಯು ಅಂತೆಯೇ ಇರುವದು. ಅವರು ತಾವು ಆಶಿಸುವ ವಸ್ತುಗಳನ್ನು ಹೊಂದುವದಿಲ್ಲ.

ಆಶ್ಚರ್ಯಪಡಿರಿ! ಬೆರಗಾಗಿರಿ!
    ನೀವು ಮತ್ತರಾಗಿರುವಿರಿ! ಆದರೆ ದ್ರಾಕ್ಷಾರಸದಿಂದಲ್ಲ.
ನೋಡಿ, ಆಶ್ಚರ್ಯಪಡಿರಿ!
    ನೀವು ಮುಗ್ಗರಿಸಿಬೀಳುವಿರಿ, ಆದರೆ ಮದ್ಯಪಾನದಿಂದಲ್ಲ.
10 ಯೆಹೋವನು ನಿಮಗೆ ತೂಕಡಿಕೆ ಬರಮಾಡುವನು.
    ಆತನು ನಿಮ್ಮ ಕಣ್ಣುಗಳನ್ನು ಮುಚ್ಚುವನು. (ಪ್ರವಾದಿಗಳು ನಿಮ್ಮ ಕಣ್ಣುಗಳಾಗಿದ್ದಾರೆ.)
    ಯೆಹೋವನು ನಿಮ್ಮ ತಲೆಗಳನ್ನು ಮುಚ್ಚುವನು. (ಪ್ರವಾದಿಗಳು ನಿಮ್ಮ ತಲೆಗಳಾಗಿದ್ದಾರೆ.)

11 ನಾನು ಖಂಡಿತವಾಗಿ ಹೇಳುತ್ತೇನೆ, ಈ ಸಂಗತಿಗಳು ನೆರವೇರುವವು. ಆದರೆ ನೀವು ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ. ನನ್ನ ಮಾತುಗಳು ಒಂದು ಪುಸ್ತಕದಲ್ಲಿ ಬರೆದು ಮುಚ್ಚಿ ಅದಕ್ಕೆ ಮುದ್ರೆಹಾಕಿ ಇರಿಸಿದಂತಿರುವದು. 12 ಓದುಬರುವವನಿಗೆ ಇದನ್ನು ಓದು ಎಂದು ಹೇಳಿದರೆ ಅವನು, “ಈ ಪುಸ್ತಕ ಮುಚ್ಚಲ್ಪಟ್ಟಿದೆ, ನನಗೆ ತೆರೆಯಲು ಸಾಧ್ಯವಿಲ್ಲ” ಎಂದು ಹೇಳುವನು. ಓದುಬಾರದ ಒಬ್ಬನಿಗೆ ಕೊಟ್ಟರೆ ಅವನು, “ನನಗೆ ಓದಲು ಬರುವದಿಲ್ಲ” ಎಂದು ಹೇಳಿ ಪುಸ್ತಕವನ್ನು ಹಿಂದಕ್ಕೆ ಕೊಡುವನು.

13 ನನ್ನ ಒಡೆಯನು ಹೇಳುವುದೇನೆಂದರೆ, “ನನ್ನನ್ನು ಪ್ರೀತಿಸುವದಾಗಿ ಇವರು ಹೇಳುತ್ತಾರೆ. ಅವರು ತಮ್ಮ ಮಾತುಗಳಿಂದ ನನ್ನನ್ನು ಗೌರವಿಸುತ್ತಾರೆ. ಆದರೆ ಅವರ ಹೃದಯಗಳು ನನ್ನಿಂದ ದೂರವಾಗಿವೆ. ಅವರು ನನಗೆ ತೋರಿಸುವ ಗೌರವವು ಅವರು ಬಾಯಿಪಾಠ ಮಾಡಿದ ಮಾನವ ನಿರ್ಮಿತವಾದ ನಿಯಮಗಳಾಗಿವೆ. 14 ನಾನು ಅದ್ಭುತಕಾರ್ಯಗಳಿಂದ ಅವರನ್ನು ಆಶ್ಚರ್ಯಗೊಳಿಸುತ್ತಾ ಇರುವೆನು. ಅವರ ಜ್ಞಾನಿಗಳು ತಮ್ಮ ಜ್ಞಾನವನ್ನು ಕಳೆದುಕೊಳ್ಳುವರು. ಅವರು ಅರ್ಥಮಾಡಿಕೊಳ್ಳಲಾರರು.”

15 ಯೆಹೋವನಿಗೆ ತಮ್ಮ ಆಲೋಚನೆಗಳು ತಿಳಿಯಬಾರದೆಂದು ಕುತಂತ್ರೋಪಾಯಗಳನ್ನು ಮಾಡಿ, ಕತ್ತಲೆಯಲ್ಲಿ ದುಷ್ಕೃತ್ಯಗಳನ್ನು ಮಾಡುತ್ತಾ, “ನಮ್ಮನ್ನು ಯಾರು ನೋಡಬಲ್ಲರು, ನಮ್ಮನ್ನು ಯಾರು ಗುರುತಿಸಬಲ್ಲರು?” ಎಂದುಕೊಳ್ಳುವವರ ಗತಿಯನ್ನು ಏನು ಹೇಳಲಿ.

16 ನೀವು ಗಲಿಬಿಲಿಗೊಂಡಿದ್ದೀರಿ. ಜೇಡಿಮಣ್ಣು ಕುಂಬಾರನಿಗೆ ಸಮಾನವಾಗಿದೆ ಎಂದು ಯೋಚಿಸುತ್ತೀರಿ. ಒಂದು ವಸ್ತು ಅದರ ನಿರ್ಮಾಣಿಕನಿಗೆ, “ನೀನು ನನ್ನನ್ನು ನಿರ್ಮಿಸಲಿಲ್ಲ” ಎಂದು ಕೇಳಬಹುದು ಎಂದು ನೆನಸುತ್ತೀರಿ. ಒಂದು ಮಡಿಕೆಯು ಅದನ್ನು ಮಾಡಿದವನಿಗೆ, “ನಿನಗೆ ಏನೂ ಗೊತ್ತಿಲ್ಲ” ಎಂದು ಹೇಳಿದ ಹಾಗಾಯಿತು.

ಒಳ್ಳೆಯ ಸಮಯವು ಬರುತ್ತಿದೆ

17 ಇದು ಸತ್ಯ: ಸ್ವಲ್ಪ ಸಮಯದ ನಂತರ, ಕರ್ಮೆಲ್ ಬೆಟ್ಟದಂತೆ ಲೆಬನೋನ್ ಫಲವತ್ತಾಗುವದು. ಕರ್ಮೆಲ್ ಬೆಟ್ಟವು ದಟ್ಟ ಅಡವಿಯಾಗುವದು. 18 ಪುಸ್ತಕದಲ್ಲಿರುವ ಮಾತುಗಳನ್ನು ಕಿವುಡನು ಕೇಳಿಸಿಕೊಳ್ಳುವನು. ಕುರುಡನು ಕತ್ತಲೆಯಲ್ಲಿಯೂ ಮಂಜು ತುಂಬಿದ್ದಾಗಲೂ ನೋಡುವನು. 19 ದೀನರನ್ನು ಯೆಹೋವನು ಸಂತೋಷಿಸುವಂತೆ ಮಾಡುವನು. ಬಡವರು ಇಸ್ರೇಲರ ಪರಿಶುದ್ಧನಲ್ಲಿ ಉಲ್ಲಾಸಿಸುವರು.

20 ಇದು ಕ್ರೂರಿಗಳೂ ದುಷ್ಟರೂ ನಾಶವಾದಾಗ ಆಗುವದು. ಕೆಟ್ಟಕಾರ್ಯಗಳನ್ನು ಮಾಡುವದರಲ್ಲಿ ಸಂತೋಷಿಸುವವರು ಇಲ್ಲದೆ ಹೋದಾಗ ಆ ಕಾರ್ಯಗಳು ನಡಿಯುವವು. 21 (ಅವರು ನೀತಿವಂತರ ವಿಷಯವಾಗಿ ಸುಳ್ಳಾಡುವರು. ನ್ಯಾಯಾಲಯದಲ್ಲಿ ಜನರನ್ನು ಸಿಕ್ಕಿಸಿ ಹಾಕುವರು. ದೀನರನ್ನು ನಾಶಮಾಡಲು ಅವರು ಪ್ರಯತ್ನಿಸುವರು.)

22 ಯೆಹೋವನು ಯಾಕೋಬನ ವಂಶಕ್ಕೆ ಹೀಗೆನ್ನುತ್ತಾನೆ: “ಅಬ್ರಹಾಮನನ್ನು ಬಿಡಿಸಿದ ಯೆಹೋವನೇ ನಾನು. ಈಗ ಯಾಕೋಬಿನ ಜನರು ನಾಚಿಕೆಪಡುವದಿಲ್ಲ ಮತ್ತು ಅವಮಾನ ಹೊಂದುವದಿಲ್ಲ. 23 ಅವನು ತನ್ನ ಎಲ್ಲಾ ಮಕ್ಕಳನ್ನು ನೋಡಿ ‘ಪವಿತ್ರ ಎಂಬುದೇ ನನ್ನ ಹೆಸರು’ ಎಂದು ಹೇಳುವನು. ನನ್ನ ಕೈಗಳಿಂದ ನಾನು ಆ ಮಕ್ಕಳನ್ನು ನಿರ್ಮಿಸಿದೆನು. ಆ ಮಕ್ಕಳು ಯಾಕೋಬನ ಪರಿಶುದ್ಧ ದೇವರು ವಿಶೇಷವಾದವನು ಎಂದು ಹೇಳುವರು. ಆ ಮಕ್ಕಳು ಇಸ್ರೇಲರ ದೇವರನ್ನು ಗೌರವಿಸುವರು. 24 ಅವರಲ್ಲಿ ಅನೇಕರು ಸರಿಯಾಗಿ ತಿಳಿದುಕೊಳ್ಳಲಿಲ್ಲ. ಆದ್ದರಿಂದ ಅವರು ತಪ್ಪಿಹೋದರು. ಆದರೆ ಅವರು ಪಾಠಗಳನ್ನು ಕಲಿತುಕೊಳ್ಳುವರು.”

ಫಿಲಿಪ್ಪಿಯವರಿಗೆ 3

ಕ್ರಿಸ್ತನೇ ಎಲ್ಲಕ್ಕಿಂತಲೂ ಮುಖ್ಯ

ನನ್ನ ಸಹೋದರ ಸಹೋದರಿಯರೇ, ಪ್ರಭುವಿನಲ್ಲಿ ಸಂತೋಷವಾಗಿರಿ. ನಾನು ಮೊದಲು ಬರೆದದ್ದನ್ನೇ ಮತ್ತೆ ಬರೆಯಲು ನನಗೆ ಬೇಸರವೇನೂ ಇಲ್ಲ; ಏಕೆಂದರೆ ಅದು ನಿಮ್ಮನ್ನು ಮತ್ತಷ್ಟು ಸಂರಕ್ಷಿಸುತ್ತದೆ.

ಕೇಡುಮಾಡುವಂಥ ಜನರ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ಅವರು ನಾಯಿಗಳಂತಿದ್ದಾರೆ. ಸುನ್ನತಿ ಎಂದು ಹೇಳಿಕೊಂಡು ಅಂಗಚ್ಛೇದನೆ ಮಾಡುವವರ ವಿಷಯದಲ್ಲಿ ಎಚ್ಚರಿಕೆಯಾಗಿರಿ. ನಾವಾದರೋ ನಿಜವಾದ ಸುನ್ನತಿಯನ್ನು ಹೊಂದಿದವರಾಗಿದ್ದೇವೆ; ದೇವರನ್ನು ಆತ್ಮನ ಮೂಲಕ ಆರಾಧಿಸುವವರಾಗಿದ್ದೇವೆ.[a] ನಾವು ಕ್ರಿಸ್ತ ಯೇಸುವಿನಲ್ಲಿರಲು ಹೆಮ್ಮೆಪಡುತ್ತೇವೆ. ನಾವು ನಮ್ಮ ಮೇಲಾಗಲಿ ನಾವು ಮಾಡಬಲ್ಲವುಗಳ ಮೇಲಾಗಲಿ ಭರವಸೆ ಇಡುವುದಿಲ್ಲ. ನಾನು ನನ್ನ ಮೇಲೆ ಭರವಸೆ ಇಡಬಲ್ಲವನಾಗಿದ್ದರೂ ಇಡುವುದಿಲ್ಲ. ತನ್ನ ಮೇಲೆ ಭರವಸೆ ಇಡಲು ತನಗೆ ಆಧಾರವಿರುವುದಾಗಿ ಯಾವನಾದರೂ ಯೋಚಿಸಿದರೆ, ನನ್ನ ಮೇಲೆ ಭರವಸೆ ಇಡಲು ನನಗೆ ಅದಕ್ಕಿಂತಲೂ ಹೆಚ್ಚಿನ ಆಧಾರವಿದೆ. ಹುಟ್ಟಿದ ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು. ನಾನು ಇಸ್ರೇಲ್ ವಂಶದವನು ಮತ್ತು ಬೆನ್ಯಾಮೀನನ ಕುಲದವನು. ನಾನು ಇಬ್ರಿಯನು ಮತ್ತು ನನ್ನ ತಂದೆತಾಯಿಗಳು ಸಹ ಇಬ್ರಿಯರು. ನಾನು ಮೋಶೆಯ ಧರ್ಮಶಾಸ್ತ್ರವನ್ನು ಮುಖ್ಯವಾದದ್ದೆಂದು ಪರಿಗಣಿಸಿ ಫರಿಸಾಯನಾದೆನು; ಯೆಹೂದ್ಯ ಧರ್ಮದಲ್ಲಿ ಬಹಳ ಆಸಕ್ತಿಯುಳ್ಳವನಾಗಿದ್ದು ಕ್ರೈಸ್ತಸಭೆಯನ್ನು (ವಿಶ್ವಾಸಿಗಳನ್ನು) ಹಿಂಸಿಸಿದೆನು. ಮೋಶೆಯ ಧರ್ಮಶಾಸ್ತ್ರಕ್ಕೆ ಯಾವಾಗಲೂ ವಿಧೇಯನಾಗಿದ್ದುದರಿಂದ ಯಾರೂ ನನ್ನ ವಿಷಯದಲ್ಲಿ ತಪ್ಪನ್ನು ಕಂಡುಹಿಡಿಯಲಾಗಲಿಲ್ಲ.

ಒಂದು ಕಾಲದಲ್ಲಿ ಇವುಗಳೆಲ್ಲ ನನಗೆ ಮುಖ್ಯವಾಗಿದ್ದವು. ಆದರೆ ಈಗ ಅವುಗಳೆಲ್ಲ ಕ್ರಿಸ್ತನ ದೆಸೆಯಿಂದ ನಿಷ್ಪ್ರಯೋಜಕವಾಗಿವೆ. ಅಷ್ಟೇ ಅಲ್ಲ, ನನ್ನ ಪ್ರಭುವಾದ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವುದೇ ಎಲ್ಲಾ ಸಂಗತಿಗಳಿಗಿಂತಲೂ ಅತಿಶ್ರೇಷ್ಠವಾದದ್ದೆಂದು ನನಗೆ ಮನದಟ್ಟಾಗಿದೆ. ನಾನು ಯಾವುದನ್ನು ಮುಖ್ಯವಾದವುಗಳೆಂದು ಪರಿಗಣಿಸಿದ್ದೆನೋ ಅವುಗಳನ್ನೆಲ್ಲ ಕ್ರಿಸ್ತನ ನಿಮಿತ್ತ ಕಳೆದುಕೊಂಡೆನು. ಅವುಗಳೆಲ್ಲ ನಿಷ್ಪ್ರಯೋಜಕವಾದವುಗಳೆಂದು ನನಗೆ ತಿಳಿದಿದೆ. ನಾನು ಕ್ರಿಸ್ತನನ್ನು ಹೊಂದಿಕೊಳ್ಳಲು ಮತ್ತು ಕ್ರಿಸ್ತನಲ್ಲಿರಲು ಇದು ನನಗೆ ಅವಕಾಶ ಮಾಡಿಕೊಡುತ್ತದೆ. ನಾನು ಕ್ರಿಸ್ತನ ಮೂಲಕ ನೀತಿವಂತನಾಗಿದ್ದೇನೆ. ಈ ನೀತಿಯು, ಧರ್ಮಶಾಸ್ತ್ರವನ್ನು ಅನುಸರಿಸಿದ ಮಾತ್ರಕ್ಕೆ ದೊರೆಯುವುದಿಲ್ಲ. ಇದು ನಂಬಿಕೆಯ ಮೂಲಕ ದೇವರಿಂದ ಬರುತ್ತದೆ. ಕ್ರಿಸ್ತನಲ್ಲಿ ನನಗಿರುವ ನಂಬಿಕೆಯ ಮೂಲಕ ದೇವರು ನನ್ನನ್ನು ನೀತಿವಂತನನ್ನಾಗಿ ಮಾಡಿದನು. 10 ಕ್ರಿಸ್ತನನ್ನೂ ಪುನರುತ್ಥಾನದ ಶಕ್ತಿಯನ್ನೂ ತಿಳಿದುಕೊಂಡು ಆತನ ಸಂಕಟದಲ್ಲಿ ಪಾಲುಗಾರನಾಗಿ ಆತನ ಮರಣದಲ್ಲಿ ಆತನಂತಾಗಬೇಕೆಂಬುದೇ ನನ್ನ ಅಪೇಕ್ಷೆ. 11 ಹೀಗಾದರೆ, ನಾನು ಸತ್ತವರೊಳಗಿಂದ ಎಬ್ಬಿಸಲ್ಪಡುತ್ತೇನೆ ಎಂಬ ನಿರೀಕ್ಷೆ ನನಗಿದೆ.

ಗುರಿಮುಟ್ಟಲು ಪ್ರಯತ್ನ

12 ಈಗಾಗಲೇ ನಾನು ಇದೆಲ್ಲವನ್ನು ಸಾಧಿಸಿ ಪರಿಪೂರ್ಣತೆಯನ್ನು ಗಳಿಸಿದ್ದೇನೆ ಎಂದು ಹೇಳುತ್ತಿಲ್ಲ. ನಾನು ಆ ಗುರಿಯನ್ನು ಇನ್ನೂ ಮುಟ್ಟಿಲ್ಲ. ಆದರೆ ಆ ಗುರಿಯನ್ನು ಮುಟ್ಟಿ ಅದನ್ನು ನನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇದು ಕ್ರಿಸ್ತನ ಅಪೇಕ್ಷೆ. ಆದಕಾರಣವೇ, ಕ್ರಿಸ್ತನು ನನ್ನನ್ನು ತನ್ನವನನ್ನಾಗಿ ಮಾಡಿಕೊಂಡನು. 13 ಸಹೋದರ ಸಹೋದರಿಯರೇ, ನಾನಿನ್ನೂ ಆ ಗುರಿಯನ್ನು ಮುಟ್ಟಿಲ್ಲವೆಂಬುದು ನನಗೆ ಗೊತ್ತಿದೆ. ಆದರೆ ನಾನು ಯಾವಾಗಲೂ ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ನನ್ನ ಮುಂದಿರುವ ಗುರಿಯನ್ನು ಮುಟ್ಟಲು ನನ್ನಿಂದಾದಷ್ಟರ ಮಟ್ಟಿಗೆ ಓಡುತ್ತಿದ್ದೇನೆ. 14 ದೇವರು ನಮ್ಮನ್ನು ಕ್ರಿಸ್ತನ ಮೂಲಕ ಮೇಲೋಕದ ಜೀವಿತಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಹುಮಾನವನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.

15 ಆತ್ಮಿಕತೆಯಲ್ಲಿ ಪರಿಪೂರ್ಣವಾದ ಮಟ್ಟಕ್ಕೆ ಬಂದಿರುವ ನಾವೆಲ್ಲರೂ ಇದೇ ರೀತಿ ಯೋಚಿಸಬೇಕು. ನೀವು ಈ ಸಂಗತಿಗಳಲ್ಲಿ ಯಾವುದನ್ನಾದರೂ ಒಪ್ಪಿಕೊಳ್ಳದಿದ್ದರೆ ದೇವರೇ ನಿಮಗೆ ಅದನ್ನು ಸ್ಪಷ್ಟಪಡಿಸುವನು. 16 ಆದರೆ ನಾವು ಈಗಾಗಲೇ ಹೊಂದಿರುವ ಸತ್ಯವನ್ನು ಅನುಸರಿಸುತ್ತಾ ನಡೆಯೋಣ.

17 ಸಹೋದರ ಸಹೋದರಿಯರೇ, ನೀವೆಲ್ಲರೂ ನನ್ನಂತೆ ಜೀವಿಸಲು ಪ್ರಯತ್ನಿಸಿ. ನಾವು ನಿಮಗೆ ತೋರಿಸಿದ ಮಾದರಿಯ ಪ್ರಕಾರ ಜೀವಿಸುವವರನ್ನು ಅನುಸರಿಸಿರಿ. 18 ಅನೇಕರು ಕ್ರಿಸ್ತನ ಶಿಲುಬೆಗೆ ವೈರಿಗಳೊ ಎಂಬಂತೆ ಜೀವಿಸುತ್ತಾರೆ. ಅವರ ಬಗ್ಗೆ ನಾನು ನಿಮಗೆ ಅನೇಕ ಸಲ ತಿಳಿಸಿದ್ದೇನೆ. ಈಗಲೂ ಕಣ್ಣೀರಿನಿಂದ ಹೇಳುತ್ತೇನೆ. 19 ಅವರ ನಡತೆಯು ಅವರನ್ನು ನಾಶದೆಡೆಗೆ ನಡೆಸುತ್ತಿದೆ. ಅವರು ದೇವರ ಸೇವೆ ಮಾಡುತ್ತಿಲ್ಲ. ಆ ಜನರು ಕೇವಲ ತಮ್ಮ ಸಂತೋಷಕ್ಕಾಗಿ ಜೀವಿಸುತ್ತಿದ್ದಾರೆ. ಅವರು ನಾಚಿಕೆಕರವಾದ ಕೆಲಸಗಳನ್ನು ಮಾಡಿ, ಅವುಗಳ ಬಗ್ಗೆ ಹೆಮ್ಮೆಪಡುತ್ತಾರೆ. ಅವರು ಕೇವಲ ಈ ಲೋಕದ ವಿಷಯಗಳ ಬಗ್ಗೆ ಆಲೋಚಿಸುತ್ತಾರೆ. 20 ನಾವಾದರೋ ಪರಲೋಕ ಸಂಸ್ಥಾನದವರು. ನಮ್ಮ ರಕ್ಷಕನು ಅಲ್ಲಿಂದಲೇ ಬರುವುದನ್ನು ನಾವು ಎದುರುನೋಡುತ್ತಿದ್ದೇವೆ. ಪ್ರಭುವಾದ ಯೇಸು ಕ್ರಿಸ್ತನೇ ನಮ್ಮ ರಕ್ಷಕನು. 21 ಆತನು ತನ್ನ ಶಕ್ತಿಯಿಂದ ಸಮಸ್ತವನ್ನು ಆಳುತ್ತಾನೆ ಮತ್ತು ನಮ್ಮ ದೀನಾವಸ್ಥೆಯ ಈ ಶರೀರವನ್ನು ರೂಪಾಂತರಪಡಿಸಿ ತನ್ನ ಸ್ವಂತ ಮಹಿಮಾಶರೀರದಂತೆ ಮಾಡುತ್ತಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International