Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 80

ಸ್ತುತಿಗೀತೆ. ರಚನೆಗಾರ: ಆಸಾಫ.

80 ಇಸ್ರೇಲನ್ನು ಕಾಯುವ ಕುರುಬನೇ,
    ಯೋಸೇಫನ ಜನರನ್ನು ಕುರಿಮಂದೆಯಂತೆ ನಡೆಸುವಾತನೇ,
ಕೆರೂಬಿ ದೂತರ ಮೇಲೆ ರಾಜನಂತೆ ಕುಳಿತಿರುವಾತನೇ,
    ಕಿವಿಗೊಡು. ನಾವು ನಿನ್ನನ್ನು ನೋಡುವಂತಾಗಲಿ.
ಇಸ್ರೇಲನ್ನು ಕಾಯುವ ಕುರುಬನೇ, ನಿನ್ನ ಮಹತ್ವವನ್ನು ಎಫ್ರಾಯೀಮನಿಗೂ ಬೆನ್ಯಾಮೀನನಿಗೂ ಮನಸ್ಸೆಗೂ ತೋರಿಸು.
    ಬಂದು ನಮ್ಮನ್ನು ರಕ್ಷಿಸು.
ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸು.
    ನಮ್ಮನ್ನು ರಕ್ಷಿಸು! ನಮ್ಮನ್ನು ಸ್ವೀಕರಿಸು!
ಸೇನಾಧೀಶ್ವರನಾದ ಯೆಹೋವನೇ, ಇನ್ನೆಷ್ಟರವರೆಗೆ ನಮ್ಮ ಮೇಲೆ ಕೋಪದಿಂದಿರುವೆ?
    ನಮ್ಮ ಪ್ರಾರ್ಥನೆಗಳಿಗೆ ಯಾವಾಗ ಕಿವಿಗೊಡುವೆ?
ನಿನ್ನ ಜನರಿಗೆ ಕಣ್ಣೀರನ್ನು ಆಹಾರವನ್ನಾಗಿ ಮಾಡಿರುವೆ.
    ನಿನ್ನ ಜನರಿಗೆ ಕಣ್ಣೀರು ತುಂಬಿರುವ ಪಾತ್ರೆಗಳನ್ನು ಕೊಟ್ಟಿರುವೆ.
    ಕಣ್ಣೀರೇ ಅವರಿಗೆ ಕುಡಿಯುವ ನೀರಾಗಿದೆ.
ಸುತ್ತಲಿನ ಜನಾಂಗಗಳಿಗೆ ನಮ್ಮನ್ನು ಯುದ್ಧಕ್ಕೆ ಕಾರಣವನ್ನಾಗಿ ಮಾಡಿರುವೆ.
    ಶತ್ರುಗಳು ನಮ್ಮನ್ನು ನೋಡಿ ನಗುವರು.
ಸೇನಾಧೀಶ್ವರನಾದ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ.
    ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.

ಹಿಂದಿನ ಕಾಲದಲ್ಲಿ ನೀನು ನಮ್ಮನ್ನು
    ಅಮೂಲ್ಯವಾದ ಸಸಿಯಂತೆ ನೋಡಿಕೊಂಡೆ.
ನಿನ್ನ “ದ್ರಾಕ್ಷಾಲತೆ”ಯನ್ನು ಈಜಿಪ್ಟಿನಿಂದ ತೆಗೆದುಕೊಂಡು ಬಂದೆ.
    ನೀನು ಬೇರೆ ಜನರನ್ನು ಈ ನಾಡಿನಿಂದ ಹೊರಗಟ್ಟಿ ನಿನ್ನ “ದ್ರಾಕ್ಷಾಲತೆ”ಯನ್ನು ನೆಟ್ಟೆ.
“ದ್ರಾಕ್ಷಾಲತೆ”ಯು ಬೆಳೆಯಲೆಂದು ಭೂಮಿಯನ್ನು ಹದ ಮಾಡಿದೆ.
    ಅದರ ಬೇರುಗಳು ಬಲವಾಗಿ ಬೆಳೆಯಲು ಸಹಾಯಮಾಡಿದೆ.
    ಬಹುಬೇಗನೆ “ದ್ರಾಕ್ಷಾಲತೆ”ಯು ದೇಶದಲ್ಲೆಲ್ಲಾ ಹಬ್ಬಿಕೊಂಡಿತು.
10 ಅದರ ನೆರಳಿನಿಂದ ಬೆಟ್ಟಗಳು ಕವಿದುಕೊಂಡವು.
    ಅದರ ಎಲೆಗಳ ನೆರಳಿನಿಂದ ದೇವದಾರು ವೃಕ್ಷಗಳು ಕವಿದುಕೊಂಡವು.
11     ಅದರ ಬಳ್ಳಿಗಳು ಮೆಡಿಟರೇನಿಯನ್ ಸಮುದ್ರದವರೆಗೂ ಹಬ್ಬಿಕೊಂಡವು.
    ಅದರ ರೆಂಬೆಗಳು ಯೂಫ್ರೇಟೀಸ್ ನದಿಯವರೆಗೂ ಹಬ್ಬಿಕೊಂಡವು.
12 ನಿನ್ನ “ದ್ರಾಕ್ಷಾಲತೆ”ಯ ಸಂರಕ್ಷಣೆಗಾಗಿ ಕಟ್ಟಿದ್ದ ಗೋಡೆಗಳನ್ನು ನೀನು ಕೆಡವಿಬಿಟ್ಟದ್ದೇಕೆ?
    ಈಗ ಅದರ ಸಮೀಪದಲ್ಲಿ ಹೋಗುವ ಪ್ರತಿಯೊಬ್ಬರೂ ಅದರ ಹಣ್ಣುಗಳನ್ನು ತೆಗೆದುಕೊಳ್ಳುವರು.
13 ಕಾಡುಹಂದಿಗಳು ಬಂದು ನಿನ್ನ “ದ್ರಾಕ್ಷಾಲತೆ”ಯ ಮೇಲೆ ನಡೆಯುತ್ತವೆ.
    ಕಾಡುಪ್ರಾಣಿಗಳು ಬಂದು ಅವುಗಳ ಎಲೆಗಳನ್ನು ತಿನ್ನುತ್ತವೆ.
14 ಸೇನಾಧೀಶ್ವರನಾದ ದೇವರೇ, ಹಿಂತಿರುಗಿ ಬಾ.
    ಪರಲೋಕದಿಂದ ನಿನ್ನ “ದ್ರಾಕ್ಷಾಲತೆ”ಯನ್ನು ನೋಡಿ ಅದನ್ನು ಸಂರಕ್ಷಿಸು.
15 ನಿನ್ನ ಸ್ವಂತ ಕೈಗಳಿಂದ ನೀನು ನೆಟ್ಟ “ದ್ರಾಕ್ಷಾಲತೆ”ಯನ್ನು ನೋಡು.
    ನೀನು ಬೆಳೆಸಿದ ಎಳೆ ಸಸಿಯನ್ನು[a] ನೋಡು.
16 ನಿನ್ನ “ದ್ರಾಕ್ಷಾಲತೆ”ಯು ಒಣಗಿದ ಗೊಬ್ಬರದಂತೆ ಬೆಂಕಿಯಿಂದ ಸುಟ್ಟುಹೋಗಿದೆ.
    ನೀನು ಅದರ ಮೇಲೆ ಕೋಪಗೊಂಡು ನಾಶಮಾಡಿದೆ.

17 ನೀನು ಆರಿಸಿಕೊಂಡಿರುವಾತನ[b] ಕಡೆಗೆ ಕೈಚಾಚಿ ಸಹಾಯ ಮಾಡು.
    ನೀನು ಬೆಳೆಸಿದ ಜನರ[c] ಕಡೆಗೆ ಕೈಚಾಚು.
18 ಆಗ ನಾವು ನಿನ್ನನ್ನು ಎಂದಿಗೂ ತ್ಯಜಿಸುವುದಿಲ್ಲ.
    ನಮ್ಮನ್ನು ಬದುಕಿಸು.
    ನಾವು ಬದುಕುವಂತೆ ಮಾಡು, ಆಗ ನಾವು ನಿನ್ನನ್ನು ಆರಾಧಿಸುವೆವು.
19 ಸೇನಾಧೀಶ್ವರನಾದ ಯೆಹೋವ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ,
    ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.

ಯೆಶಾಯ 32:9-20

ಸಂಕಟದ ದಿವಸಗಳು ಬರುವವು

ಹೆಂಗಸರಲ್ಲಿ ಕೆಲವರು ಈಗ ಶಾಂತರಾಗಿದ್ದಾರೆ. ಈಗ ನೀವು ಸುರಕ್ಷಿತರಾಗಿದ್ದೀರಿ ಎಂದು ನಿಮಗೆ ಅನ್ನಿಸುತ್ತದೆ. ಆದರೆ ನೀವು ಸುಮ್ಮನಿದ್ದು ನಾನು ಹೇಳುವ ಮಾತುಗಳನ್ನು ಕೇಳಬೇಕು. 10 ಸ್ತ್ರೀಯರೇ, ನೀವೀಗ ಭದ್ರವಾಗಿದ್ದೀರಿ ಎಂದು ನೀವು ನೆನಸುತ್ತೀರಿ, ಆದರೆ ಒಂದು ವರ್ಷದ ನಂತರ ನಿಮಗೆ ಸಂಕಟವು ಪ್ರಾರಂಭವಾಗುವದು. ಮುಂದಿನ ವರ್ಷ ನೀವು ದ್ರಾಕ್ಷಿಹಣ್ಣುಗಳನ್ನು ಕೂಡಿಸುವದಿಲ್ಲ. ಕೂಡಿಸಲು ದ್ರಾಕ್ಷಿಹಣ್ಣುಗಳೇ ಇರುವದಿಲ್ಲ.

11 ಸ್ತ್ರೀಯರೇ, ನೀವೀಗ ಶಾಂತರಾಗಿದ್ದೀರಿ. ಆದರೆ ನೀವು ಭಯಪಡುವವರಾಗಿರಬೇಕು. ನೀವು ಈಗ ಸುರಕ್ಷಿತರಾಗಿದ್ದೀರಿ, ಆದರೆ ನೀವು ಚಿಂತಿಸುವವರಾಗಿರಬೇಕು. ನಿಮ್ಮ ಒಳ್ಳೆಯ ವಸ್ತ್ರಗಳನ್ನು ತೆಗೆದಿಟ್ಟು ಶೋಕಬಟ್ಟೆಯನ್ನು ಧರಿಸಿರಿ. ಆ ಬಟ್ಟೆಗಳನ್ನು ನಿಮ್ಮ ಸೊಂಟಕ್ಕೆ ಕಟ್ಟಿಕೊಳ್ಳಿರಿ. 12 ಶೋಕವಸ್ತ್ರಗಳನ್ನು ದುಃಖದಿಂದ ತುಂಬಿದ ನಿಮ್ಮ ಎದೆಗಳ ಮೇಲೆ ಹಾಕಿಕೊಳ್ಳಿ. ನಿಮ್ಮ ಹೊಲಗಳು ನಿಷ್ಪ್ರಯೋಜಕವಾಗಿರುವದಕ್ಕಾಗಿ ಅಳಿರಿ. ನಿಮ್ಮ ದ್ರಾಕ್ಷಿತೋಟವು ಒಳ್ಳೆಯ ಫಲ ಕೊಡುತ್ತಿತ್ತು. ಆದರೆ ಈಗ ತೋಟವು ಬರಿದಾಗಿದೆ. 13 ನನ್ನ ಜನರ ದೇಶಕ್ಕಾಗಿ ಕೂಗಿರಿ. ಯಾಕೆಂದರೆ ಅದರಲ್ಲಿ ಕೇವಲ ಹಣಜಿಯೂ ಮುಳ್ಳುಗಿಡಗಳೂ ಬೆಳೆಯುತ್ತವೆ. ಒಂದು ಕಾಲದಲ್ಲಿ ಸಂತೋಷಭರಿತವಾಗಿದ್ದ ಪಟ್ಟಣಕ್ಕಾಗಿಯೂ ಎಲ್ಲಾ ಮನೆಗಳಿಗಾಗಿಯೂ ಅಳಿರಿ.

14 ಜನರು ರಾಜಧಾನಿಯನ್ನು ತೊರೆದುಬಿಡುವರು. ಅರಮನೆ, ಬುರುಜುಗಳೆಲ್ಲವೂ ನಿರ್ಜನವಾಗಿವೆ. ಜನರು ಮನೆಗಳಲ್ಲಿ ವಾಸಿಸದೆ ಗುಹೆಗಳಲ್ಲಿ ವಾಸಮಾಡುವರು. ಕಾಡುಕತ್ತೆಗಳೂ ಕುರಿಗಳೂ ನಗರದಲ್ಲಿ ವಾಸಿಸುವವು. ಪಶುಗಳು ಅಲ್ಲಿ ಹುಲ್ಲು ಮೇಯುವವು.

15-16 ದೇವರು ನಮಗೆ ತನ್ನ ಆತ್ಮವನ್ನು ಸುರಿಸುವತನಕ ಇದು ಮುಂದುವರಿಯುವದು. ಈಗ ಯಾವ ಒಳ್ಳೆಯ ಸಂಗತಿಗಳು ನಡಿಯದೆ ಇರುವದರಿಂದ ದೇಶವು ಮರುಭೂಮಿಯಂತಿದೆ. ಆದರೆ ಮುಂದಿನ ದಿವಸಗಳಲ್ಲಿ ಮರುಭೂಮಿಯು ಕರ್ಮೆಲ್ ಪ್ರಾಂತ್ಯದಂತೆ ಆಗಿ ನ್ಯಾಯಧರ್ಮಗಳು ಅಲ್ಲಿ ನೆಲೆಸುವವು. ಕರ್ಮೆಲ್ ಹಸಿರು ಕಾಡಾಗಿದ್ದು ಶುಭವು ನೆಲೆಸಿರುವುದು. 17 ಆದ್ದರಿಂದ ಅಲ್ಲಿ ಆ ಸಮಾಧಾನ ಮತ್ತು ಭದ್ರತೆ ನಿತ್ಯವೂ ಶಾಶ್ವತವಾಗಿರುವವು. 18 ನನ್ನ ಜನರು ಮನೋಹರವಾಗಿರುವ ಶಾಂತಿಮಯವಾದ ಭೂಮಿಯಲ್ಲಿಯೂ ಸುರಕ್ಷಿತವಾದ ಗುಡಾರಗಳಲ್ಲಿಯೂ ಪ್ರಶಾಂತವಾದ ಮತ್ತು ನಿಶಬ್ದವಾದ ಸ್ಥಳಗಳಲ್ಲಿಯೂ ವಾಸಿಸುವರು.

19 ಇವು ಸಂಭವಿಸುವ ಮೊದಲು ಅರಣ್ಯವು ಆಲಿಕಲ್ಲುಗಳಿಂದ ನಾಶವಾಗಬೇಕು. ಪಟ್ಟಣವು ನೆಲಸಮವಾಗಬೇಕು. 20 ನಿಮ್ಮಲ್ಲಿ ಕೆಲವರು ಪ್ರತಿಯೊಂದು ನೀರಿನ ತೊರೆಗಳ ಬಳಿಯಲ್ಲಿ ಬೀಜ ಬಿತ್ತುವರು. ಅದರ ಸುತ್ತಲೂ ಹೋಗಿ ಯಾವ ಆತಂಕವಿಲ್ಲದೆ ತಿನ್ನಲು ನೀವು ನಿಮ್ಮ ಪಶುಗಳನ್ನು ಬಿಡುವಿರಿ; ಸಂತಸದಿಂದ ಇರುವಿರಿ.

ಯಾಕೋಬನು 3:17-18

17 ಆದರೆ ದೇವರಿಂದ ಬರುವ ಜ್ಞಾನವು ಹೀಗಿರುತ್ತದೆ: ಮೊದಲನೆಯದಾಗಿ ಅದು ಪರಿಶುದ್ಧವಾದದ್ದು. ಅದು ಶಾಂತಿದಾಯಕವಾದದ್ದು, ಸಾತ್ವಿಕವಾದದ್ದು ಮತ್ತು ಸುಲಭವಾಗಿ ಮೆಚ್ಚಿಕೊಳ್ಳುವಂಥದ್ದು. ಈ ಜ್ಞಾನವು ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡಲು ಮತ್ತು ಇತರ ಜನರಿಗೆ ಒಳ್ಳೆಯದನ್ನು ಮಾಡಲು ಯಾವಾಗಲೂ ಸಿದ್ಧವಾಗಿರುತ್ತದೆ. ಈ ಜ್ಞಾನವು ಯಾವಾಗಲೂ ನ್ಯಾಯವಾದದ್ದು ಮತ್ತು ಯಥಾರ್ಥವಾದದ್ದು. 18 ಶಾಂತಿ ಸ್ಥಾಪಿಸುವುದಕ್ಕಾಗಿ ಸಮಾಧಾನಕರವಾದ ರೀತಿಯಲ್ಲಿ ಕಾರ್ಯ ಮಾಡುವವರು ಯೋಗ್ಯವಾದ ಬದುಕಿನಿಂದ ಬರುವ ಉತ್ತಮ ಫಲಗಳನ್ನು ಪಡೆಯುತ್ತಾರೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International