Revised Common Lectionary (Semicontinuous)
25 ಯೆಹೋವನೇ, ನಿನ್ನ ಕಾರ್ಯಗಳಿಗಾಗಿ ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು;
ನನ್ನ ಹರಕೆಗಳನ್ನು ನಿನ್ನ ಭಕ್ತರ ಮುಂದೆ ಸಲ್ಲಿಸುವೆನು.
26 ಬಡವರು ತಿಂದು ತೃಪ್ತರಾಗುವರು.
ಯೆಹೋವನಿಗಾಗಿ ಹುಡುಕುತ್ತಾ ಬಂದವರೇ, ಆತನಿಗೆ ಸ್ತೋತ್ರಮಾಡಿರಿ!
ನಿಮ್ಮ ಹೃದಯವು ಯಾವಾಗಲೂ ಸಂತೋಷವಾಗಿರಲಿ.[a]
27 ದೂರದೇಶಗಳಲ್ಲಿರುವ ಜನರೆಲ್ಲರೂ ಯೆಹೋವನನ್ನು ಜ್ಞಾಪಿಸಿಕೊಂಡು ಆತನ ಬಳಿಗೆ ಹಿಂತಿರುಗಲಿ.
ವಿದೇಶಗಳಿಲ್ಲಿರುವ ಜನರೆಲ್ಲರೂ ಆತನನ್ನು ಆರಾಧಿಸಲಿ.
28 ಯಾಕೆಂದರೆ ಯೆಹೋವನೇ ರಾಜನು!
ಆತನು ಜನಾಂಗಗಳನ್ನೆಲ್ಲಾ ಆಳುವನು.
29 ಬಲಿಷ್ಠರೂ ದೃಢಕಾಯರೂ ತಿಂದು ದೇವರಮುಂದೆ ಅಡ್ಡಬೀಳುವರು.
ಸಾಯುವವರೂ ಸತ್ತುಹೋಗಿರುವವರೂ ಆತನ ಮುಂದೆ ಅಡ್ಡಬೀಳುವರು.
30 ಮುಂದಿನ ಕಾಲದಲ್ಲಿ ನಮ್ಮ ಸಂತತಿಗಳವರು ಯೆಹೋವನ ಸೇವೆಮಾಡುವರು.
ಆತನ ಕುರಿತಾಗಿ ಯಾವಾಗಲೂ ಹೇಳುತ್ತಿರುವರು.
31 ಪ್ರತಿಯೊಂದು ತಲೆಮಾರಿನವರೂ ತಮ್ಮ ಮಕ್ಕಳಿಗೆ
ಆತನ ಒಳ್ಳೆಯ ಕಾರ್ಯಗಳ ಬಗ್ಗೆ ಹೇಳುವರು.[b]
ಇಸ್ರೇಲಿನ ನಾಶನದ ವಾಗ್ದಾನ
7 ಯೆಹೋವನು ಹೀಗೆನ್ನುತ್ತಾನೆ:
“ಇಸ್ರೇಲೇ, ನೀನು ನನಗೆ ಇಥಿಯೋಪ್ಯದವರಂತಿರುವೆ.
ಇಸ್ರೇಲನ್ನು ಈಜಿಪ್ಟ್ ದೇಶದಿಂದ ನಾನು ಹೊರತಂದೆನು.
ಕಪ್ತೋರಿನಿಂದ ಫಿಲಿಷ್ಟಿಯರನ್ನು ಹೊರತಂದೆನು
ಮತ್ತು ಕೀರ್‌ನಿಂದ ಅರಾಮ್ಯರನ್ನು ತಂದೆನು.”
8 ಪಾಪದಿಂದ ತುಂಬಿದ ಇಸ್ರೇಲ್ ದೇಶವನ್ನು ಯೆಹೋವನು ನೋಡುತ್ತಿದ್ದಾನೆ.
ಆತನು ಹೇಳಿದ್ದೇನೆಂದರೆ,
“ನಾನು ಇಸ್ರೇಲರನ್ನು ಈ ಭೂಮುಖದಿಂದ ಅಳಿಸಿಬಿಡುವೆನು.
ಆದರೆ ಯಾಕೋಬನ ಸಂತತಿಯವರನ್ನು ಸಂಪೂರ್ಣವಾಗಿ ನಾಶಮಾಡುವುದಿಲ್ಲ.
9 ಇಸ್ರೇಲನ್ನು ನಾಶನ ಮಾಡುವದಕ್ಕಾಗಿ ಆಜ್ಞಾಪಿಸುವೆನು.
ಇಸ್ರೇಲರನ್ನು ನಾನು ಪರದೇಶಗಳಲ್ಲಿ, ಚದರಿಸಿಬಿಡುವೆನು.
ಒಬ್ಬನು ಜಾಳಿಗೆಯಲ್ಲಿ ಹಿಟ್ಟನ್ನು ಜಾಳಿಸುವಂತೆ ಇರುವುದು.
ಒಳ್ಳೆಯ ಹಿಟ್ಟು ಜಾಳಿಗೆಯ ರಂಧ್ರದ ಮೂಲಕ ಕೆಳಗೆ ಬಿದ್ದರೆ,
ಹಿಟ್ಟಿನ ಗಂಟುಗಳು ಜಾಳಿಗೆಯ ಮೇಲೆ ಸಿಕ್ಕಿಕೊಳ್ಳುವವು.
ಯಾಕೋಬನ ಕುಟುಂಬಕ್ಕೆ ಇದೇ ರೀತಿಯಾಗುವುದು.
10 “ನನ್ನ ಜನರಲ್ಲಿ ಪಾಪಿಗಳು ಹೇಳುತ್ತಾರೆ:
‘ನಮಗೆ ಯಾವ ಕೇಡೂ ಸಂಭವಿಸುವುದಿಲ್ಲ.’
ಆದರೆ ಅವರೆಲ್ಲಾ ಕತ್ತಿಯಿಂದ ಸಾಯುವರು.”
ರಾಜ್ಯವು ತಿರುಗಿ ಸ್ಥಾಪಿಸಲ್ಪಡುವದೆಂದು ದೇವರ ವಾಗ್ದಾನ
11 “ದಾವೀದನ ಗುಡಾರವು ಕುಸಿದುಬಿದ್ದಿದೆ.
ಆದರೆ ಆ ದಿವಸಗಳಲ್ಲಿ ತಿರುಗಿ ಅದನ್ನು ಮೇಲಕ್ಕೆತ್ತುವೆನು.
ಗೋಡೆಯಲ್ಲಿರುವ ರಂಧ್ರಗಳನ್ನು ನಾನು ಸರಿಪಡಿಸುವೆನು.
ಬಿದ್ದುಹೋದ ಕಟ್ಟಡಗಳನ್ನು ತಿರುಗಿ ಕಟ್ಟುವೆನು.
ಮುಂಚೆ ಹೇಗಿತ್ತೋ ಹಾಗೆಯೇ ಇರುವದು.
12 ಆಗ ಎದೋಮಿನಲ್ಲಿ ಉಳಿದವರು
ಮತ್ತು ನನ್ನ ಹೆಸರಿನಿಂದ ಕರೆಯಲ್ಪಟ್ಟ ಜನರು ಸಹಾಯಕ್ಕಾಗಿ ಯೆಹೋವನನ್ನು ನೋಡುವರು.”
ಇದು ಯೆಹೋವನ ನುಡಿ.
ಆತನು ಅವುಗಳನ್ನು ನೆರವೇರಿಸುವನು.
13 ಯೆಹೋವನು ಹೇಳುವುದೇನೆಂದರೆ, “ಒಂದು ಸಮಯವು ಬರುವುದು,
ಆಗ ಉಳುವವನು ಕೊಯ್ಯುವವನನ್ನೇ
ಮೀರಿಸಿ ಮುಂದೆ ಹೋಗುವನು.
ದ್ರಾಕ್ಷಿನೆಡುವವನು ದ್ರಾಕ್ಷಿಯನ್ನು ಕೊಯ್ಯುವನನ್ನೇ
ಮೀರಿಸಿ ಮುಂದೆ ಹೋಗುವನು.
ಬೆಟ್ಟಗಳಿಂದಲೂ ಪರ್ವತಗಳಿಂದಲೂ
ಸಿಹಿ ದ್ರಾಕ್ಷಾರಸವು ಹರಿದುಬರುವುದು.
14 ಸೆರೆಯಿಂದ ಬಿಡಿಸಿ ನನ್ನ ಜನರಾದ ಇಸ್ರೇಲನ್ನು
ಹಿಂದಕ್ಕೆ ಕರೆತರುವೆನು.
ಪಾಳುಬಿದ್ದ ಪಟ್ಟಣಗಳನ್ನು ತಿರುಗಿ ಕಟ್ಟಿ
ಅದರಲ್ಲಿ ವಾಸಿಸುವರು.
ದ್ರಾಕ್ಷಿತೋಟವನ್ನು ಮಾಡಿ
ಅದರಿಂದ ಸಿಗುವ ದ್ರಾಕ್ಷಾರಸವನ್ನು ಕುಡಿಯುವರು.
ತೋಟಗಳನ್ನು ಮಾಡಿ
ಅದರ ಫಲಗಳನ್ನು ಭೋಗಿಸುವರು.
15 ನಾನು ನನ್ನ ಜನರನ್ನು ಅವರ ದೇಶದಲ್ಲಿ ಸ್ಥಾಪಿಸುವೆನು.
ನಾನು ಕೊಟ್ಟಿರುವ ದೇಶದಿಂದ ಅವರು ಕೀಳಲ್ಪಡುವುದಿಲ್ಲ.”
ನಿಮ್ಮ ದೇವರಾದ ಯೆಹೋವನು ಈ ಸಂಗತಿಗಳನ್ನು ಹೇಳಿದ್ದಾನೆ.
ದೇವರ ರಾಜ್ಯವು ಸಾಸಿವೆ ಕಾಳಿನಂತಿದೆ
(ಮತ್ತಾಯ 13:31-32,34-35; ಲೂಕ 13:18-19)
30 ನಂತರ ಯೇಸು, “ದೇವರ ರಾಜ್ಯದ ಬಗ್ಗೆ ವಿವರಿಸಲು ನಾನು ನಿಮಗೆ ಯಾವ ಸಾಮ್ಯವನ್ನು ಹೇಳಲಿ? 31 ದೇವರ ರಾಜ್ಯವು ಸಾಸಿವೆ ಕಾಳಿನಂತಿರುತ್ತದೆ. ನೀವು ಭೂಮಿಯಲ್ಲಿ ಬಿತ್ತುವ ಕಾಳುಗಳಲ್ಲಿ ಸಾಸಿವೆ ಕಾಳು ಅತ್ಯಂತ ಸಣ್ಣದಾಗಿದೆ. 32 ಆದರೆ ನೀವು ಈ ಕಾಳನ್ನು ಬಿತ್ತಿದಾಗ, ಅದು ಬೆಳೆದು, ನಿಮ್ಮ ತೋಟದ ಇತರ ಗಿಡಗಳಿಗಿಂತ ಅತಿ ದೊಡ್ಡದಾಗುತ್ತದೆ. ಅದಕ್ಕೆ ದೊಡ್ಡದೊಡ್ಡ ರೆಂಬೆಗಳಿರುತ್ತವೆ. ಕಾಡಿನ ಹಕ್ಕಿಗಳು ಬಂದು, ಅಲ್ಲಿ ಗೂಡುಗಳನ್ನು ಕಟ್ಟಿಕೊಂಡು ಸೂರ್ಯನ ತಾಪದಿಂದ ತಪ್ಪಿಸಿಕೊಳ್ಳುತ್ತವೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International