Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.
133 ಆಹಾ, ಸಹೋದರರು ಅನ್ಯೋನ್ಯತೆಯಿಂದಿರುವುದು
ಎಷ್ಟೋ ಒಳ್ಳೆಯದು, ಎಷ್ಟೋ ರಮ್ಯವಾದದ್ದು.
2 ಅದು ಯಾಜಕನ ತಲೆಯ ಮೇಲೆ ಹಾಕಲ್ಪಟ್ಟು ಆರೋನನ ಗಡ್ಡಕ್ಕೂ
ಅಲ್ಲಿಂದ ಅವನ ಉಡುಪುಗಳ ಮೇಲೆಯೂ ಇಳಿದುಬರುವ ಪರಿಮಳ ತೈಲದಂತಿರುವುದು;
3 ಅದು ಹೆರ್ಮೋನ್ ಪರ್ವತದಿಂದ ಹುಟ್ಟಿ ಚೀಯೋನ್ ಪರ್ವತದ ಮೇಲೆ ಬೀಳುವ ದಟ್ಟವಾದ ಮಂಜಿನಂತಿರುವುದು.
ಯೆಹೋವನು ನಿತ್ಯಜೀವವೆಂಬ ತನ್ನ ಆಶೀರ್ವಾದವನ್ನು ಅನುಗ್ರಹಿಸಿದ್ದು ಚೀಯೋನಿನಲ್ಲಿಯೇ.
ದಾನಿಯೇಲನು ಕನಸಿನ ಅರ್ಥವನ್ನು ಹೇಳಿದನು
24 ಆಮೇಲೆ ದಾನಿಯೇಲನು ಅರ್ಯೋಕನ ಬಳಿಗೆ ಹೋದನು. ಅರಸನಾದ ನೆಬೂಕದ್ನೆಚ್ಚರನು ಬಾಬಿಲೋನಿನ ವಿದ್ವಾಂಸರನ್ನು ಕೊಲ್ಲುವದಕ್ಕೆ ಅರ್ಯೋಕನನ್ನು ಆರಿಸಿದ್ದನು. ದಾನಿಯೇಲನು ಅರ್ಯೋಕನಿಗೆ, “ಬಾಬಿಲೋನಿನ ವಿದ್ವಾಂಸರನ್ನು ಕೊಲ್ಲಬೇಡ. ನನ್ನನ್ನು ಅರಸನ ಹತ್ತಿರ ಕರೆದುಕೊಂಡು ಹೋಗು. ನಾನು ಅವನಿಗೆ ಅವನ ಕನಸನ್ನು ಮತ್ತು ಅದರ ಅರ್ಥವನ್ನು ತಿಳಿಸುತ್ತೇನೆ” ಎಂದನು.
25 ಕೂಡಲೇ ಅರ್ಯೋಕನು ದಾನಿಯೇಲನನ್ನು ಅರಸನ ಹತ್ತಿರ ಕರೆದುಕೊಂಡು ಹೋದನು. ಅರ್ಯೊಕನು ಅರಸನಿಗೆ, “ಯೆಹೂದದಿಂದ ಸೆರೆಯಾಳಾಗಿ ತಂದವರಲ್ಲಿ ಅರಸನ ಕನಸನ್ನು ಮತ್ತು ಅದರ ಅರ್ಥವನ್ನು ಹೇಳಬಲ್ಲ ಒಬ್ಬನನ್ನು ನಾನು ಕಂಡುಹಿಡಿದಿದ್ದೇನೆ. ಅವನು ಅರಸನ ಕನಸನ್ನೂ ಅದರ ಅರ್ಥವನ್ನೂ ತಿಳಿಸುತ್ತಾನೆ” ಎಂದನು.
26 ಅರಸನು ದಾನಿಯೇಲನಿಗೆ (ಬೇಲ್ತೆಶಚ್ಚರನಿಗೆ), “ನೀನು ನನ್ನ ಕನಸನ್ನೂ ಅದರ ಅರ್ಥವನ್ನೂ ಹೇಳಬಲ್ಲೆಯಾ?” ಎಂದು ಕೇಳಿದನು.
27 ದಾನಿಯೇಲನು, “ಅರಸನಾದ ನೆಬೂಕದ್ನೆಚ್ಚರನೇ, ಯಾವ ವಿದ್ವಾಂಸರಾಗಲಿ ಮಾಟಗಾರರಾಗಲಿ ಜೋಯಿಸರಾಗಲಿ ಶಕುನದವರಾಗಲಿ ಅರಸನಾದ ನಿನಗೆ ರಹಸ್ಯವನ್ನು ಹೇಳಲಾಗಲಿಲ್ಲ. 28 ಆದರೆ ಪರಲೋಕದಲ್ಲಿ ಯೆಹೋವನು ಎಂಬಾತನಿದ್ದಾನೆ. ಆತನು ರಹಸ್ಯಗಳನ್ನು ಹೇಳುತ್ತಾನೆ. ಭವಿಷ್ಯದಲ್ಲಿ ನಡೆಯಲಿರುವುದನ್ನು ಅರಸನಾದ ನಿನಗೆ ಯೆಹೋವನು ತಿಳಿಯಪಡಿಸಿದ್ದಾನೆ. ಇದೇ ನೀನು ಕಂಡ ಕನಸು, ನೀನು ಹಾಸಿಗೆಯ ಮೇಲೆ ಮಲಗಿದ್ದಾಗ ಕಂಡ ಸಂಗತಿಗಳು ಇವು: 29 ಅರಸನೇ, ನೀನು ನಿನ್ನ ಹಾಸಿಗೆಯ ಮೇಲೆ ಮಲಗಿಕೊಂಡಿದ್ದೆ. ಭವಿಷ್ಯದಲ್ಲಿ ಸಂಭವಿಸುವುದರ ಬಗ್ಗೆ ಆಲೋಚಿಸತೊಡಗಿದ್ದೆ. ದೇವರು ಜನರಿಗೆ ರಹಸ್ಯವನ್ನು ತಿಳಿಸಬಲ್ಲನು. ಭವಿಷ್ಯದಲ್ಲಿ ನಡೆಯಲಿರುವುದನ್ನು ಆತನೇ ನಿನಗೆ ತೋರಿಸಿದನು. 30 ದೇವರು ರಹಸ್ಯವನ್ನು ನನಗೂ ತಿಳಿಸಿದ್ದಾನೆ! ದೇವರು ನನಗೆ ತಿಳಿಸಿರುವುದು ನಾನು ಬೇರೆಯವರಿಗಿಂತ ಹೆಚ್ಚು ಬುದ್ಧಿವಂತನೆಂದಲ್ಲ. ಆದರೆ ಅರಸನಾದ ನಿನಗೆ ಇದರ ಅರ್ಥ ತಿಳಿಯಲಿ ಎಂಬ ಉದ್ದೇಶದಿಂದ ದೇವರು ನನಗೆ ತಿಳಿಸಿದ್ದಾನೆ. ಇದರಿಂದ ನಿನ್ನ ಮನಸ್ಸಿನ ಯೋಚನೆಗಳ ವಿಷಯ ನಿನಗೆ ತಿಳಿದುಬರುತ್ತದೆ.
31 “ಅರಸನೇ, ನಿನ್ನ ಕನಸಿನಲ್ಲಿ ನಿನ್ನ ಎದುರಿಗೆ ಒಂದು ದೊಡ್ಡ ಪ್ರತಿಮೆಯನ್ನು ಕಂಡೆ. ಅದು ಬಹಳ ದೊಡ್ಡದಾಗಿಯೂ ಪ್ರಕಾಶಮಾನವಾಗಿಯೂ ಪ್ರಭಾವಶಾಲಿಯಾಗಿಯೂ ಇತ್ತು. ನೋಡಿದವರು ಆಶ್ಚರ್ಯಚಕಿತರಾಗಿ ಕಣ್ಣರಳಿಸುವಂತಿತ್ತು. 32 ಆ ಪ್ರತಿಮೆಯ ತಲೆಯನ್ನು ಚೊಕ್ಕ ಚಿನ್ನದಿಂದ ಮಾಡಲಾಗಿತ್ತು. ಅದರ ಎದೆ ಮತ್ತು ತೋಳುಗಳು ಬೆಳ್ಳಿಯಿಂದ ಮಾಡಲ್ಪಟ್ಟಿದ್ದವು. ಆ ಪ್ರತಿಮೆಯ ಹೊಟ್ಟೆ, ಸೊಂಟ ಮತ್ತು ತೊಡೆಗಳು ಕಂಚಿನಿಂದ ಮಾಡಲ್ಪಟ್ಟಿದ್ದವು. 33 ಕಾಲುಗಳು ಕಬ್ಬಿಣದಿಂದ ಮಾಡಲ್ಪಟ್ಟಿದ್ದವು. ಆ ಪ್ರತಿಮೆಯ ಪಾದಗಳು ಕಬ್ಬಿಣ ಮತ್ತು ಜೇಡಿಮಣ್ಣಿನಿಂದ ಮಾಡಲಾಗಿದ್ದವು. 34 ನೀನು ಆ ಪ್ರತಿಮೆಯನ್ನು ನೋಡುತ್ತಿದ್ದಾಗ ನಿನಗೊಂದು ಬಂಡೆಯು ಕಾಣಿಸಿತು. ಆ ಬಂಡೆಯು ತನ್ನಷ್ಟಕ್ಕೆ ತಾನೇ ಸಡಿಲಗೊಂಡಿತು; ಯಾರೂ ಅದನ್ನು ಒಡೆಯಲಿಲ್ಲ. ಆಮೇಲೆ ಆ ಬಂಡೆಯು ಗಾಳಿಯಲ್ಲಿ ಹಾರಿಬಂದು ಆ ಪ್ರತಿಮೆಯ ಕಬ್ಬಿಣ ಮತ್ತು ಮಣ್ಣಿನ ಪಾದಗಳಿಗೆ ಅಪ್ಪಳಿಸಿತು. ಆ ಬಂಡೆಯು ಪ್ರತಿಮೆಯ ಪಾದಗಳನ್ನು ಒಡೆದು ಪುಡಿಪುಡಿ ಮಾಡಿತು. 35 ಆಮೇಲೆ ಕಬ್ಬಿಣ, ಮಣ್ಣು, ಕಂಚು, ಬೆಳ್ಳಿ, ಚಿನ್ನ ಎಲ್ಲವೂ ಏಕಕಾಲಕ್ಕೆ ಒಡೆದು ಚೂರುಚೂರಾದವು. ಆ ಚೂರುಗಳೆಲ್ಲ ಬೇಸಿಗೆಕಾಲದ ಕಣದಲ್ಲಿನ ಹೊಟ್ಟಿನಂತಾದವು. ಗಾಳಿಯು ಆ ಚೂರುಗಳನ್ನು ಹಾರಿಸಿಕೊಂಡು ಹೋಯಿತು. ಅಲ್ಲಿ ಏನೂ ಉಳಿಯಲಿಲ್ಲ. ಹಿಂದೆಂದೂ ಅಲ್ಲೊಂದು ಪ್ರತಿಮೆ ಇತ್ತೆಂದು ಯಾರೂ ಹೇಳುವಂತಿರಲಿಲ್ಲ. ಆಮೇಲೆ ಆ ಪ್ರತಿಮೆಗೆ ಅಪ್ಪಳಿಸಿದ ಬಂಡೆಯು ಒಂದು ದೊಡ್ಡ ಪರ್ವತವಾಗಿ ಇಡೀ ಭೂಮಂಡಲವನ್ನು ವ್ಯಾಪಿಸಿತು.
36 “ಇದೇ ನಿನ್ನ ಕನಸು. ಈಗ ನಾನು ನಿನಗೆ ಅದರ ಅರ್ಥವನ್ನು ಹೇಳುತ್ತೇನೆ. 37 ಅರಸನೇ, ನೀನು ರಾಜಾಧಿರಾಜ. ಪರಲೋಕದ ದೇವರು ನಿನಗೆ ರಾಜ್ಯ, ಬಲ, ಪರಾಕ್ರಮ ಮತ್ತು ವೈಭವಗಳನ್ನು ದಯಪಾಲಿಸಿದ್ದಾನೆ. 38 ದೇವರು ನಿನಗೆ ಅಧಿಕಾರವನ್ನು ಕೊಟ್ಟಿದ್ದಾನೆ. ಆ ದೇವರು ನಿನ್ನನ್ನು ಎಲ್ಲೆಡೆಯಲ್ಲಿರುವ ಜನರ ಮೇಲೆ, ಕಾಡುಪ್ರಾಣಿಗಳ ಮೇಲೆ, ಪಕ್ಷಿಗಳ ಮೇಲೆ ಆಳುವಂತೆ ಮಾಡಿದ್ದಾನೆ. ಅರಸನಾದ ನೆಬೂಕದ್ನೆಚ್ಚರನೇ, ನೀನೇ ಆ ಪ್ರತಿಮೆಯ ಬಂಗಾರದ ತಲೆ.
39 “ನಿನ್ನ ಕಾಲವಾದ ಮೇಲೆ ಮತ್ತೊಂದು ರಾಜ್ಯವುಂಟಾಗುವುದು. ಅದು ಬೆಳ್ಳಿಯ ಭಾಗ. ಆದರೆ ಆ ರಾಜ್ಯವು ನಿನ್ನ ರಾಜ್ಯದಷ್ಟು ದೊಡ್ಡದಾಗಿರುವುದಿಲ್ಲ. ಆ ತರುವಾಯ ಬೇರೊಂದು ಮೂರನೇ ರಾಜ್ಯವು ಈ ಭೂಮಿಯ ಮೇಲೆ ಆಳ್ವಿಕೆ ಮಾಡುವುದು. ಅದು ಕಂಚಿನ ಭಾಗ. 40 ಆಮೇಲೆ ನಾಲ್ಕನೆಯ ರಾಜ್ಯ. ಆ ರಾಜ್ಯವು ಕಬ್ಬಿಣದಂತೆ ಗಟ್ಟಿಯಾಗಿರುತ್ತದೆ. ಹೇಗೆ ಕಬ್ಬಿಣವು ಎಲ್ಲ ವಸ್ತುಗಳನ್ನು ಒಡೆದು ಪುಡಿ ಮಾಡುತ್ತದೆಯೋ ಹಾಗೆಯೇ ಆ ನಾಲ್ಕನೆಯ ರಾಜ್ಯವು ಉಳಿದೆಲ್ಲ ರಾಜ್ಯಗಳನ್ನು ಒಡೆದು ಪುಡಿ ಮಾಡುತ್ತದೆ.
41 “ಆ ಪ್ರತಿಮೆಯ ಪಾದಗಳು ಮತ್ತು ಕಾಲ್ಬೆರಳುಗಳು ಕಬ್ಬಿಣ ಮತ್ತು ಜೇಡಿಮಣ್ಣಿನಿಂದ ಮಾಡಿದ್ದನ್ನು ನೀನು ನೋಡಿರುವೆ. ನಾಲ್ಕನೆಯ ರಾಜ್ಯವು ವಿಭಜಿತ ರಾಜ್ಯವಾಗುವದೆಂದು ಇದರ ಅರ್ಥ. ನೀನು ನೋಡಿದಂತೆ ಕಬ್ಬಿಣವು ಜೇಡಿಮಣ್ಣಿನಲ್ಲಿ ಬೆರೆತದ್ದರಿಂದ ಅದರಲ್ಲಿ ಕಬ್ಬಿಣದ ಗಟ್ಟಿತನ ಸ್ವಲ್ಪ ಇರುತ್ತದೆ. 42 ಆ ಪ್ರತಿಮೆಯ ಕಾಲ್ಬೆರಳುಗಳ ಒಂದಂಶ ಕಬ್ಬಿಣ ಮತ್ತೊಂದು ಅಂಶ ಜೇಡಿಮಣ್ಣಾಗಿದ್ದಂತೆ ಆ ರಾಜ್ಯದ ಒಂದಂಶವು ಕಬ್ಬಿಣದಂತೆ ಗಟ್ಟಿ, ಇನ್ನೊಂದು ಅಂಶವು ಜೇಡಿಮಣ್ಣಿನಂತೆ ದುರ್ಬಲವಾಗಿರುತ್ತದೆ. 43 ಕಬ್ಬಿಣ ಮತ್ತು ಜೇಡಿಮಣ್ಣು ಬೆರೆಸಿದ್ದನ್ನು ನೀನು ನೋಡಿರುವೆ. ಆದರೆ ಕಬ್ಬಿಣ ಮತ್ತು ಜೇಡಿಮಣ್ಣು ಸಂಪೂರ್ಣವಾಗಿ ಪರಸ್ಪರ ಬೆರೆಯುವದಿಲ್ಲ. ಅದೇ ರೀತಿ ನಾಲ್ಕನೇ ರಾಜ್ಯದ ಜನರು ಪರಸ್ಪರ ಕೂಡಿದ್ದರೂ ಸಹ ಒಂದೇ ಜನರಲ್ಲಿರಬೇಕಾದ ಏಕತೆ ಅವರಲ್ಲಿರುವದಿಲ್ಲ.
44 “ನಾಲ್ಕನೇ ರಾಜ್ಯದ ಅರಸರ ಕಾಲದಲ್ಲಿ ಪರಲೋಕದ ದೇವರು ಇನ್ನೊಂದು ಹೊಸ ಸಾಮ್ರಾಜ್ಯವನ್ನು ಸ್ಥಾಪಿಸುವನು. ಈ ಸಾಮ್ರಾಜ್ಯವು ಎಂದೆಂದಿಗೂ ಉಳಿಯುವದು. ಎಂದಿಗೂ ಅಳಿಯದು; ಬೇರೊಂದು ಜನರ ಗುಂಪಿಗೆ ಹೋಗದಂಥ ಸಾಮ್ರಾಜ್ಯವಾಗಿರುವುದು. ಈ ಸಾಮ್ರಾಜ್ಯವು ಉಳಿದೆಲ್ಲ ಸಾಮ್ರಾಜ್ಯಗಳನ್ನು ನಾಶಮಾಡಿ ಕೊನೆಗಾಣಿಸುವುದು. ಆದರೆ ಆ ಸಾಮ್ರಾಜ್ಯವು ಮಾತ್ರ ಶಾಶ್ವತವಾಗಿ ನಿಲ್ಲುವದು.
45 “ಅರಸನಾದ ನೆಬೂಕದ್ನೆಚ್ಚರನೇ, ಬೆಟ್ಟದಿಂದ ಒಂದು ದೊಡ್ಡ ಬಂಡೆ ಒಡೆದು ಬಂದದ್ದನ್ನು ನೀನು ನೋಡಿದೆ. ಯಾರೂ ಅದನ್ನು ಒಡೆಯಲಿಲ್ಲ! ಆ ಬಂಡೆಯು ಕಬ್ಬಿಣವನ್ನು, ಕಂಚನ್ನು, ಜೇಡಿಮಣ್ಣನ್ನು, ಬೆಳ್ಳಿಯನ್ನು, ಚಿನ್ನವನ್ನು ಚೂರುಚೂರು ಮಾಡಿತು. ಭವಿಷ್ಯದಲ್ಲಿ ಏನಾಗುವದೆಂಬುದನ್ನು ದೇವರು ನಿನಗೆ ಈ ರೀತಿಯಲ್ಲಿ ತೋರಿಸಿದ್ದಾನೆ. ನಿನ್ನ ಕನಸು ನಿಜ. ಅದರ ಅರ್ಥವು ನಂಬಿಕೆಗೆ ಯೋಗ್ಯವಾಗಿದೆ” ಎಂದು ವಿವರಿಸಿದನು.
46 ಆಗ ಅರಸನಾದ ನೆಬೂಕದ್ನೆಚ್ಚರನು ದಾನಿಯೇಲನ ಮುಂದೆ ಅಡ್ಡಬಿದ್ದು ಅವನನ್ನು ಹೊಗಳಿದನು; ಅವನ ಗೌರವಾರ್ಥವಾಗಿ ಧೂಪಹಾಕಿ ನೈವೇದ್ಯಮಾಡಬೇಕೆಂದು ಆಜ್ಞಾಪಿಸಿದನು. ಆಮೇಲೆ ಅರಸನು ದಾನಿಯೇಲನಿಗೆ, 47 “ನಿನ್ನ ದೇವರು ಸರ್ವಶ್ರೇಷ್ಠನು ಮತ್ತು ಪ್ರಬಲನು ಎನ್ನುವದು ನನಗೆ ಖಚಿತವಾಯಿತು. ಆತನು ಎಲ್ಲ ಅರಸರ ಒಡೆಯನಾಗಿದ್ದಾನೆ. ಆತನು ಜನರಿಗೆ ನಿಗೂಢವಾಗಿದ್ದ ರಹಸ್ಯವನ್ನು ತಿಳಿಸುತ್ತಾನೆ. ನೀನು ನನಗೆ ಈ ರಹಸ್ಯವನ್ನು ತಿಳಿಸಲು ಸಮರ್ಥನಾದುದರಿಂದ ಇದೆಲ್ಲ ನಿಜವೆಂದು ನಾನು ನಂಬುತ್ತೇನೆ” ಎಂದು ಹೇಳಿದನು.
48 ತರುವಾಯ ಅರಸನು ದಾನಿಯೇಲನಿಗೆ ತನ್ನ ರಾಜ್ಯದಲ್ಲಿ ಬಹುಮುಖ್ಯವಾದ ಉದ್ಯೋಗವನ್ನು ಕೊಟ್ಟನು. ಅಮೂಲ್ಯವಾದ ಕಾಣಿಕೆಗಳನ್ನೂ ಕೊಟ್ಟನು. ನೆಬೂಕದ್ನೆಚ್ಚರನು ದಾನಿಯೇಲನನ್ನು ಬಾಬಿಲೋನ್ ಸಂಸ್ಥಾನದ ಅಧಿಪತಿಯನ್ನಾಗಿ ಮಾಡಿದನು. ಬಾಬಿಲೋನಿನ ಎಲ್ಲಾ ವಿದ್ವಾಂಸರ ಮುಖ್ಯಸ್ಥನನ್ನಾಗಿ ಮಾಡಿದನು. 49 ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಬಾಬಿಲೋನ್ ಸಂಸ್ಥಾನದ ದೊಡ್ಡ ಅಧಿಕಾರಿಗಳನ್ನಾಗಿ ನೇಮಿಸಬೇಕೆಂದು ದಾನಿಯೇಲನು ಅರಸನನ್ನು ಕೇಳಿಕೊಂಡನು. ದಾನಿಯೇಲನು ಹೇಳಿದಂತೆ ಅರಸನು ಮಾಡಿದನು. ದಾನಿಯೇಲನು ಅರಸನ ಸನ್ನಿಧಿಯಲ್ಲಿರುವ ಪ್ರಮುಖರಲ್ಲಿ ಒಬ್ಬನಾದನು.
ಯೇಸುವಿನ ಉಪದೇಶ ಜನರಿಗೆ ತೀರ್ಪು ಮಾಡುವುದು
44 ಬಳಿಕ ಯೇಸು ಗಟ್ಟಿಯಾಗಿ ಹೀಗೆಂದನು: “ನನ್ನಲ್ಲಿ ನಂಬಿಕೆ ಇಡುವವನು ನನ್ನನ್ನು ಕಳುಹಿಸಿದಾತನಲ್ಲಿ (ದೇವರು) ನಿಜವಾಗಿಯೂ ನಂಬಿಕೆ ಇಡುವವನಾಗಿದ್ದಾನೆ. 45 ನನ್ನನ್ನು ನೋಡುವವನು ನನ್ನನ್ನು ಕಳುಹಿಸಿದಾತನನ್ನು ನಿಜವಾಗಿಯೂ ನೋಡುವವನಾಗಿದ್ದಾನೆ. 46 ನಾನೇ ಬೆಳಕಾಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವರು ಕತ್ತಲೆಯಲ್ಲಿ ಇರಬಾರದೆಂದು ನಾನೇ ಈ ಲೋಕಕ್ಕೆ ಬಂದಿದ್ದೇನೆ.
47 “ನಾನು ಈ ಲೋಕಕ್ಕೆ ಬಂದದ್ದು ಜನರಿಗೆ ತೀರ್ಪು ಮಾಡುವುದಕ್ಕಾಗಿಯಲ್ಲ. ಈ ಲೋಕದಲ್ಲಿರುವ ಜನರನ್ನು ರಕ್ಷಿಸುವುದಕ್ಕಾಗಿ ನಾನು ಬಂದೆನು. ಆದ್ದರಿಂದ ನನ್ನ ಮಾತುಗಳನ್ನು ಕೇಳಿಯೂ ನಂಬದಿರುವ ಜನರಿಗೆ ತೀರ್ಪು ಮಾಡುವವನು ನಾನಲ್ಲ. 48 ನನ್ನಲ್ಲಿ ನಂಬಿಕೆ ಇಡದಿರುವವನಿಗೆ ಮತ್ತು ನಾನು ಹೇಳುವುದನ್ನು ತಿರಸ್ಕರಿಸುವವನಿಗೆ ತೀರ್ಪುಮಾಡುವಂಥದ್ದು ನಾನು ಆಡಿದ ಮಾತುಗಳೇ. ಅಂತಿಮ ದಿನದಂದು ಅವೇ ಅವನಿಗೆ ತೀರ್ಪುಮಾಡುತ್ತವೆ. 49 ಏಕೆಂದರೆ, ನನ್ನ ಮಾತುಗಳು ನನ್ನಿಂದ ಬಂದವುಗಳಲ್ಲ. ನನ್ನನ್ನು ಕಳುಹಿಸಿದ ತಂದೆಯೇ ನಾನು ಏನು ಹೇಳಬೇಕು, ಏನು ಮಾತಾಡಬೇಕು ಎಂದು ನನಗೆ ಹೇಳಿಕೊಟ್ಟಿದ್ದಾನೆ. 50 ತಂದೆಯ ಆಜ್ಞೆಯು ನಿತ್ಯಜೀವಕ್ಕೆ ನಡೆಸುತ್ತದೆ ಎಂದು ನಾನು ಬಲ್ಲೆನು. ಆದ್ದರಿಂದ ತಂದೆಯು ನನಗೆ ಹೇಳಿಕೊಟ್ಟ ಸಂಗತಿಗಳನ್ನೇ ನಾನು ತಿಳಿಸುತ್ತೇನೆ.”
Kannada Holy Bible: Easy-to-Read Version. All rights reserved. © 1997 Bible League International