Revised Common Lectionary (Semicontinuous)
150 ಯೆಹೋವನಿಗೆ ಸ್ತೋತ್ರವಾಗಲಿ!
ದೇವರನ್ನು ಆತನ ಆಲಯದಲ್ಲಿ ಸ್ತುತಿಸಿರಿ!
ಆತನ ಶಕ್ತಿಯನ್ನು ಪರಲೋಕದಲ್ಲಿ ಸ್ತುತಿಸಿರಿ!
2 ಆತನ ಮಹತ್ಕಾರ್ಯಗಳಿಗಾಗಿ ಆತನನ್ನು ಸ್ತುತಿಸಿರಿ!
ಆತನ ಮಹತ್ವಕ್ಕೆ ತಕ್ಕಂತೆ ಆತನನ್ನು ಸ್ತುತಿಸಿರಿ!
3 ತುತ್ತೂರಿಗಳನ್ನೂ ಕೊಂಬುಗಳನ್ನೂ ಊದುತ್ತಾ ಆತನನ್ನು ಸ್ತುತಿಸಿರಿ!
ಹಾರ್ಪ್ವಾದ್ಯಗಳನ್ನೂ ಲೈರ್ವಾದ್ಯಗಳನ್ನೂ ನುಡಿಸುತ್ತಾ ಆತನನ್ನು ಸ್ತುತಿಸಿರಿ.
4 ದಮ್ಮಡಿಗಳನ್ನು ಬಡಿಯುತ್ತಾ ಕುಣಿಯುತ್ತಾ ಆತನನ್ನು ಸ್ತುತಿಸಿರಿ.
ತಂತಿವಾದ್ಯಗಳಿಂದಲೂ ಕೊಳಲುಗಳಿಂದಲೂ ಆತನನ್ನು ಸ್ತುತಿಸಿರಿ.
5 ತಾಳಗಳಿಂದ ಆತನನ್ನು ಸ್ತುತಿಸಿರಿ!
ಝಲ್ಲರಿಗಳಿಂದ ಆತನನ್ನು ಸ್ತುತಿಸಿರಿ!
6 ಸಮಸ್ತ ಜೀವಿಗಳೇ, ಯೆಹೋವನಿಗೆ ಸ್ತೋತ್ರಮಾಡಿರಿ!
ಯೆಹೋವನಿಗೆ ಸ್ತೋತ್ರವಾಗಲಿ!
ಆಶಾದಾಯಕವಾದ ವಾಗ್ದಾನಗಳು
30 ಯೆಹೋವನಿಂದ ಯೆರೆಮೀಯನಿಗೆ ಈ ಸಂದೇಶ ಬಂದಿತು. 2 ಇಸ್ರೇಲರ ದೇವರಾದ ಯೆಹೋವನು ಹೀಗೆ ಹೇಳಿದನು: “ಯೆರೆಮೀಯನೇ, ನಾನು ನಿನಗೆ ಹೇಳಿದ ಸಂಗತಿಗಳನ್ನು ಒಂದು ಪುಸ್ತಕದಲ್ಲಿ ಬರೆದಿಡು. ಈ ಪುಸ್ತಕವನ್ನು ನೀನೇ ಬರೆಯಬೇಕು. 3 ಏಕೆಂದರೆ ನಾನು ನನ್ನ ಜನರಾದ ಇಸ್ರೇಲರನ್ನು ಮತ್ತು ಯೆಹೂದ್ಯರನ್ನು ಸೆರೆವಾಸದಿಂದ ಕರೆದುಕೊಂಡು ಬರುವ ದಿನಗಳು ಬರುತ್ತಿವೆ.” ಈ ಸಂದೇಶವು ಯೆಹೋವನಿಂದ ಬಂದದ್ದು. “ಆ ಜನರನ್ನು ನಾನು ಅವರ ಪೂರ್ವಿಕರಿಗೆ ಕೊಟ್ಟ ಪ್ರದೇಶದಲ್ಲಿ ನೆಲಸುವಂತೆ ಮಾಡುತ್ತೇನೆ. ಆಗ ನನ್ನ ಜನರು ಆ ಪ್ರದೇಶದ ಒಡೆತನ ಪಡೆಯುವರು.”
4 ಇಸ್ರೇಲಿನ ಮತ್ತು ಯೆಹೂದದ ಜನರ ಬಗ್ಗೆ ಯೆಹೋವನು ಈ ಸಂದೇಶವನ್ನು ಕೊಟ್ಟನು:
5 “ಜನರು ಭಯದಿಂದ ಗೋಳಿಡುವದನ್ನು ನಾವು ಕೇಳುತ್ತಿದ್ದೇವೆ.
ಜನರು ಅಂಜಿಕೊಂಡಿದ್ದಾರೆ; ನೆಮ್ಮದಿಯಿಲ್ಲದವರಾಗಿದ್ದಾರೆ.
6 “ಈ ಪ್ರಶ್ನೆಯನ್ನು ಕೇಳಿ ಪರಿಶೀಲಿಸಿರಿ.
ಪುರುಷನು ಮಗುವಿಗೆ ಜನ್ಮಕೊಡಬಲ್ಲನೆ? ಖಂಡಿತವಾಗಿಯೂ ಇಲ್ಲ.
ಹಾಗಾದರೆ ಪ್ರತಿಯೊಬ್ಬ ಬಲಿಷ್ಠನೂ ಪ್ರಸವವೇದನೆಪಡುತ್ತಿರುವ
ಸ್ತ್ರೀಯಂತೆ ತನ್ನ ಹೊಟ್ಟೆಯನ್ನು ಏಕೆ ಹಿಡಿದುಕೊಂಡಿದ್ದಾನೆ?
ಪ್ರತಿಯೊಬ್ಬನ ಮುಖವು ಸತ್ತವನ ಮುಖದಂತೆ ಏಕೆ ಬಿಳಿಚಿದೆ?
ಏಕೆಂದರೆ ಜನರು ಬಹಳ ಭಯಪಟ್ಟಿದ್ದಾರೆ.
7 “ಇದು ಯಾಕೋಬ್ಯರಿಗೆ ಬಹು ಮುಖ್ಯವಾದ ಸಮಯ.
ಇದು ಬಹಳ ಕಷ್ಟದ ಸಮಯ.
ಎಂದೂ ಇಂಥ ಕಷ್ಟದ ಸಮಯ ಬರುವದಿಲ್ಲ.
ಆದರೆ ಯಾಕೋಬ್ ಇದರಿಂದ ಪಾರಾಗುವುದು.”
8 ಇದು ಸರ್ವಶಕ್ತನಾದ ಯೆಹೋವನ ನುಡಿ. “ಆ ಸಮಯದಲ್ಲಿ ನಾನು ಇಸ್ರೇಲರ ಮತ್ತು ಯೆಹೂದ್ಯರ ಹೆಗಲ ಮೇಲಿನ ನೊಗವನ್ನು ಮುರಿದುಬಿಡುವೆನು. ನಿಮಗೆ ಕಟ್ಟಿರುವ ಹಗ್ಗಗಳನ್ನು ಕಿತ್ತುಹಾಕುವೆನು. ಪರದೇಶದವರು ಮತ್ತೆಂದಿಗೂ ನನ್ನ ಜನರನ್ನು ದಾಸರನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. 9 ಇಸ್ರೇಲರು ಮತ್ತು ಯೆಹೂದ್ಯರು ಪರದೇಶಿಯರ ಸೇವೆಮಾಡುವುದಿಲ್ಲ. ಅವರು ತಮ್ಮ ದೇವರಾದ ಯೆಹೋವನ ಸೇವೆಯನ್ನೇ ಮಾಡುವರು, ಅವರು ತಮ್ಮ ರಾಜನಾದ ದಾವೀದನ ಸೇವೆಮಾಡುವರು, ನಾನು ಆ ರಾಜನನ್ನು ಕಳುಹಿಸುವೆನು.”
10 ಯೆಹೋವನು ಹೀಗೆಂದನು:
“ನನ್ನ ಸೇವಕನಾದ ಯಾಕೋಬನೇ, ಭಯಪಡಬೇಡ!
ಇಸ್ರೇಲೇ, ಅಂಜಬೇಡ,
ನಾನು ನಿಮ್ಮನ್ನು ಆ ದೂರಪ್ರದೇಶದಿಂದ ರಕ್ಷಿಸುವೆನು.
ಆ ದೂರದೇಶದಲ್ಲಿ ನೀವು ಬಂಧಿಗಳಾಗಿದ್ದೀರಿ,
ಆದರೆ ನಾನು ನಿಮ್ಮ ವಂಶದವರನ್ನು ರಕ್ಷಿಸುತ್ತೇನೆ.
ಅವರನ್ನು ಆ ನಾಡಿನಿಂದ ಮತ್ತೆ ಕರೆದುತರುತ್ತೇನೆ.
ಯಾಕೋಬು ಮತ್ತೆ ನೆಮ್ಮದಿಯಿಂದ ಇರುವುದು.
ಜನರು ಯಾಕೋಬನನ್ನು ಪೀಡಿಸುವದಿಲ್ಲ;
ನನ್ನ ಜನರನ್ನು ಹೆದರಿಸುವ ಶತ್ರುಗಳಿರುವದಿಲ್ಲ.”
ಇದು ಯೆಹೋವನ ನುಡಿ.
11 “ಇಸ್ರೇಲರೇ, ಯೆಹೂದ್ಯರೇ ನಾನು ನಿಮ್ಮೊಂದಿಗಿದ್ದೇನೆ.
ನಾನು ನಿಮ್ಮನ್ನು ರಕ್ಷಿಸುತ್ತೇನೆ.
ನಾನು ನಿಮ್ಮನ್ನು ಆ ಜನಾಂಗಗಳ ಬಳಿಗೆ ಕಳುಹಿಸಿದೆ.
ಆದರೆ ನಾನು ಆ ಎಲ್ಲಾ ಜನಾಂಗಗಳನ್ನು ಸಂಪೂರ್ಣವಾಗಿ ನಾಶಮಾಡುವೆನು.
ಇದು ನಿಜ. ನಾನು ಆ ಜನಾಂಗಗಳನ್ನು ನಾಶಮಾಡುವೆನು.
ಆದರೆ ನಾನು ನಿಮ್ಮನ್ನು ನಾಶಮಾಡುವದಿಲ್ಲ.
ನೀವು ಮಾಡಿದ ದುಷ್ಕೃತ್ಯಗಳಿಗಾಗಿ ನಿಮಗೆ ದಂಡನೆಯಾಗಲೇಬೇಕು.
ನಾನು ನಿಮ್ಮನ್ನು ಸರಿಯಾಗಿ ಶಿಕ್ಷಿಸುತ್ತೇನೆ.”
10 ಆದ್ದರಿಂದ ದೇವರ ಮಕ್ಕಳು ಯಾರೆಂಬುದನ್ನೂ ಸೈತಾನನ ಮಕ್ಕಳು ಯಾರೆಂಬುದನ್ನೂ ನಾವು ತಿಳಿದುಕೊಳ್ಳಬಹುದು. ಯೋಗ್ಯವಾದುದನ್ನು ಮಾಡದಿರುವ ಜನರು ದೇವರ ಮಕ್ಕಳಲ್ಲ. ತನ್ನ ಸಹೋದರನನ್ನು ಪ್ರೀತಿಸದಿರುವವನು ದೇವರ ಮಗನಲ್ಲ.
ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು
11 ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬುದೇ ನೀವು ಆರಂಭದಿಂದಲೂ ಕೇಳಿದ ವಾಕ್ಯ. 12 ನೀವು ಕಾಯಿನನಂತಿರಬೇಡಿ. ಅವನು ಕೆಡುಕನಿಗೆ ಸೇರಿದವನಾಗಿದ್ದನು. ಅವನು ತನ್ನ ತಮ್ಮನನ್ನು (ಹೇಬೆಲ) ಕೊಂದುಹಾಕಿದನು. ಅವನು ತನ್ನ ತಮ್ಮನನ್ನು ಕೊಂದದ್ದೇಕೆ? ತನ್ನ ಕೃತ್ಯಗಳು ಕೆಟ್ಟವುಗಳೂ ತನ್ನ ತಮ್ಮನ ಕೃತ್ಯಗಳು ಒಳ್ಳೆಯವುಗಳೂ ಆಗಿದ್ದರಿಂದಲೇ.
13 ಸಹೋದರ ಸಹೋದರಿಯರೇ, ಈ ಲೋಕದ ಜನರು ನಿಮ್ನನ್ನು ದ್ವೇಷಿಸುವಾಗ ಆಶ್ಚರ್ಯಗೊಳ್ಳದಿರಿ. 14 ನಾವು ಮರಣವನ್ನು (ಪಾಪಗಳನ್ನು) ತೊರೆದು ಜೀವಕ್ಕೆ ಬಂದಿದ್ದೇವೆ ಎಂಬುದು ನಮಗೆ ಗೊತ್ತಿದೆ. ಕ್ರಿಸ್ತನಲ್ಲಿ ನಮ್ಮ ಸಹೋದರ ಸಹೋದರಿಯರನ್ನು ನಾವು ಪ್ರೀತಿಸುತ್ತಿರುವುದರಿಂದಲೇ ಇದನ್ನು ತಿಳಿದುಕೊಂಡಿದ್ದೇನೆ. ಪ್ರೀತಿಸದಿರುವ ವ್ಯಕ್ತಿಯು ಇನ್ನೂ ಮರಣದಲ್ಲಿದ್ದಾನೆ. 15 ತನ್ನ ಸಹೋದರನನ್ನು ದ್ವೇಷಿಸುವ ಪ್ರತಿಯೊಬ್ಬನೂ ಕೊಲೆಗಾರನಾಗಿದ್ದಾನೆ. ಯಾವ ಕೊಲೆಗಾರನಲ್ಲಿಯೂ ನಿತ್ಯಜೀವ ಇರುವುದಿಲ್ಲವೆಂಬುದು ನಿಮಗೆ ತಿಳಿದಿದೆ.
16 ಯೇಸು ತನ್ನ ಪ್ರಾಣವನ್ನೇ ಕೊಟ್ಟದ್ದರಿಂದ ನಿಜವಾದ ಪ್ರೀತಿಯೆಂದರೇನೆಂಬುದನ್ನು ನಾವು ತಿಳಿದುಕೊಂಡೆವು. ಆದ್ದರಿಂದ ಕ್ರಿಸ್ತನಲ್ಲಿ ಸಹೋದರ ಸಹೋದರಿಯರಾದವರಿಗೋಸ್ಕರ ನಾವೂ ನಮ್ಮ ಪ್ರಾಣಗಳನ್ನು ಕೊಡಬೇಕು.
Kannada Holy Bible: Easy-to-Read Version. All rights reserved. © 1997 Bible League International