Revised Common Lectionary (Semicontinuous)
ರಚನೆಗಾರ: ದಾವೀದ.
4 ನೀತಿಸ್ವರೂಪನಾದ ದೇವರೇ, ನನ್ನ ಪ್ರಾರ್ಥನೆಗೆ ಉತ್ತರಿಸು!
ನನ್ನ ಮೊರೆಗೆ ಕಿವಿಗೊಟ್ಟು ನನ್ನನ್ನು ಕರುಣಿಸು!
ಇಕ್ಕಟ್ಟುಗಳಿಂದ ನನ್ನನ್ನು ಬಿಡಿಸಿ
ಸುರಕ್ಷಿತ ಸ್ಥಳದಲ್ಲಿ ಸೇರಿಸು.
2 ಜನರೇ, ಇನ್ನೆಷ್ಟರವರೆಗೆ ನನ್ನ ಬಗ್ಗೆ ಕೆಟ್ಟದ್ದನ್ನು ಹೇಳುವಿರಿ?
ಅಸತ್ಯವನ್ನೇ ಪ್ರೀತಿಸುತ್ತಾ, ನನ್ನ ಮೇಲೆ ಹೊರಿಸಲು ಸುಳ್ಳಪವಾದಗಳಿಗಾಗಿ ಯಾಕೆ ಹುಡುಕುತ್ತಿದ್ದೀರಿ?
3 ಯೆಹೋವನು ತನ್ನ ಭಕ್ತನನ್ನು ತನಗೋಸ್ಕರ ಪ್ರತ್ಯೇಕಿಸಿಕೊಂಡಿದ್ದಾನೆಂಬುದು ನಿಮಗೆ ತಿಳಿದಿರಲಿ.
ನಾನು ಮೊರೆಯಿಡುವಾಗಲೆಲ್ಲಾ ಆತನು ನನಗೆ ಕಿವಿಗೊಡುತ್ತಾನೆ.
4 ನೀವು ಕೋಪದಿಂದಿರುವಾಗ ಎಚ್ಚರಿಕೆಯಾಗಿದ್ದು ಪಾಪಮಾಡದಿರಿ.
ಹಾಸಿಗೆಯ ಮೇಲಿರುವಾಗ ಹೃದಯಗಳನ್ನು ಪರೀಕ್ಷಿಸಿಕೊಳ್ಳಿರಿ.
5 ದೇವರಿಗೆ ಯೋಗ್ಯವಾದ ಯಜ್ಞಗಳನ್ನು ಅರ್ಪಿಸಿರಿ;
ಯೆಹೋವನಲ್ಲಿಯೇ ಭರವಸೆಯಿಡಿರಿ!
6 “ನಮಗೆ ಒಳ್ಳೆಯದನ್ನು ಯಾರು ತೋರಿಸುವರು?
ಯೆಹೋವನೇ, ನಿನ್ನ ಪ್ರಕಾಶಮಾನವಾದ ಮುಖವನ್ನು ನಾವು ನೋಡುವಂತಾಗಲಿ!” ಎಂದು ಅನೇಕರು ಅಂದುಕೊಳ್ಳುವರು.
7 ಧಾನ್ಯಯವೂ ದ್ರಾಕ್ಷಿಯೂ ಸಮೃದ್ಧಿಯಾಗಿ ಬೆಳೆದ ಸುಗ್ಗಿಕಾಲದಲ್ಲಿ ಜನರಲ್ಲಿರುವ ಸಂತೋಷಕ್ಕಿಂತಲೂ ಅಧಿಕವಾದ ಆನಂದವನ್ನು ನೀನು ನನ್ನ ಹೃದಯದಲ್ಲಿ ತುಂಬಿರುವೆ.
8 ನಾನು ಹಾಸಿಗೆಯ ಮೇಲೆ ಸಮಾಧಾನದಿಂದ ನಿದ್ರಿಸುವೆನು.
ಯಾಕೆಂದರೆ, ಯೆಹೋವನೇ, ನನ್ನನ್ನು ಕಾಪಾಡುವಾತನು ನೀನೇ.
2 ದಾನಿಯೇಲನು ಹೇಳುವುದೇನೆಂದರೆ: ಆ ಸಮಯದಲ್ಲಿ ದಾನಿಯೇಲನೆಂಬ ನಾನು ಮೂರು ವಾರ ಶೋಕದಲ್ಲಿದ್ದೆನು. 3 ಆ ಮೂರು ವಾರಗಳಲ್ಲಿ ನಾನು ಇಷ್ಟಪಡುತ್ತಿದ್ದ ಆಹಾರವನ್ನು ತಿನ್ನಲಿಲ್ಲ; ಮಾಂಸಾಹಾರವನ್ನು ಸೇವಿಸಲಿಲ್ಲ; ದ್ರಾಕ್ಷಾರಸವನ್ನು ಕುಡಿಯಲಿಲ್ಲ; ತಲೆಗೆ ಎಣ್ಣೆಯನ್ನು ಹಾಕಿಕೊಳ್ಳಲಿಲ್ಲ. ಮೂರು ವಾರಗಳವರೆಗೆ ಇದೆಲ್ಲವನ್ನು ನಾನು ನಿಲ್ಲಿಸಿಬಿಟ್ಟೆ.
4 ವರ್ಷದ ಮೊದಲನೆ ತಿಂಗಳ ಇಪ್ಪತ್ನಾಲ್ಕನೆಯ ದಿನದಲ್ಲಿ ನಾನು ಟೈಗ್ರಿಸ್ ಮಹಾನದಿಯ, ದಡದಲ್ಲಿ ನಿಂತುಕೊಂಡಿದ್ದೆ. 5 ಅಲ್ಲಿ ನಿಂತುಕೊಂಡಿದ್ದಾಗ ನಾನು ಮುಖವೆತ್ತಿ ನೋಡಿದೆ. ನನ್ನ ಎದುರಿಗೆ ಒಬ್ಬ ವ್ಯಕ್ತಿಯು ನಿಂತಿದ್ದನ್ನು ಕಂಡೆ. ಅವನು ನಾರುಬಟ್ಟೆಯನ್ನು ಧರಿಸಿಕೊಂಡಿದ್ದನು. ಅವನು ಊಫಜಿನ ಅಪರಂಜಿಯ ಪಟ್ಟಿಯನ್ನು ಸೊಂಟಕ್ಕೆ ಬಿಗಿದುಕೊಂಡಿದ್ದನು. 6 ಅವನ ಶರೀರವು ಪ್ರಕಾಶಮಾನವಾದ ವಜ್ರದಂತೆ ಇತ್ತು. ಅವನ ಮುಖವು ಕೋಲ್ಮಿಂಚಿನಂತೆ ಹೊಳೆಯುತ್ತಿತ್ತು. ಅವನ ಕಣ್ಣುಗಳು ಬೆಂಕಿಯ ಪಂಜುಗಳಂತಿದ್ದವು. ಅವನ ಕೈಕಾಲುಗಳು ಉಜ್ಜಿದ ಹಿತ್ತಾಳೆಯಂತೆ ಝಗಝಗಿಸುತ್ತಿದ್ದವು. ಅವನ ಧ್ವನಿಯು ಜನಜಂಗುಳಿಯ ಧ್ವನಿಯಂತೆ ದೊಡ್ಡದಾಗಿತ್ತು.
7 ದಾನಿಯೇಲನೆಂಬ ನನಗೆ ಮಾತ್ರ ಆ ದರ್ಶನವಾಯಿತು. ನನ್ನ ಜೊತೆಯಲ್ಲಿದ್ದವರಿಗೆ ಆ ದರ್ಶನ ಕಾಣಿಸಲಿಲ್ಲವಾದರೂ ಅವರು ಭಯಪಟ್ಟರು. ಅವರು ಭಯದಿಂದ ಓಡಿಹೋಗಿ ಅಡಗಿಕೊಂಡರು. 8 ನಾನೊಬ್ಬನೇ ಅಲ್ಲಿದ್ದೆ. ನಾನು ಆ ದರ್ಶನವನ್ನು ನೋಡುತ್ತಲೇ ಇದ್ದೆ. ಅದರಿಂದ ನನಗೆ ಭಯವಾಯಿತು. ನಾನು ದುರ್ಬಲನಾದೆ. ನನ್ನ ಮುಖವು ಸತ್ತವರ ಮುಖದಂತೆ ಬಿಳುಪೇರಿತು; ನಾನು ನಿಸ್ಸಹಾಯಕನಾದೆ. 9 ದರ್ಶನದಲ್ಲಿ ಕಾಣಿಸಿಕೊಂಡ ಮನುಷ್ಯನು ಮಾತನಾಡುವದನ್ನು ನಾನು ಕೇಳಿದೆ. ಅವನ ಧ್ವನಿಯನ್ನು ಕೇಳಿದ ಕೂಡಲೇ ನಾನು ಬೋರಲುಬಿದ್ದು ಗಾಢವಾದ ನಿದ್ರೆಯಲ್ಲಿ ಮುಳುಗಿದೆ.
10 ಆಗ ಒಂದು ಕೈ ನನ್ನನ್ನು ಮುಟ್ಟಿತು. ನಾನು ಮೊಣಕಾಲುಗಳನ್ನು ಮತ್ತು ಅಂಗೈಗಳನ್ನು ನೆಲಕ್ಕೆ ಊರಿ ಬಾಗಿ ನಿಂತುಕೊಂಡೆ. ನಾನು ಭಯದಿಂದ ನಡುಗುತ್ತಿದ್ದೆ. 11 ದರ್ಶನದಲ್ಲಿ ಕಾಣಿಸಿಕೊಂಡ ಮನುಷ್ಯನು ನನಗೆ, “ದಾನಿಯೇಲನೇ, ದೇವರು ನಿನ್ನನ್ನು ತುಂಬ ಪ್ರೀತಿಸುತ್ತಾನೆ. ನಾನು ನಿನಗೆ ಈ ಮುಂದೆ ಹೇಳುವ ಮಾತುಗಳ ಬಗ್ಗೆ ಚೆನ್ನಾಗಿ ವಿಚಾರಮಾಡು. ಎದ್ದುನಿಲ್ಲು, ನನ್ನನ್ನು ನಿನ್ನ ಬಳಿಗೆ ಕಳುಹಿಸಲಾಗಿದೆ” ಎಂದು ಹೇಳಿದನು. ಆಗ ನಾನು ಎದ್ದುನಿಂತೆ. ನಾನು ಭಯದಿಂದ ಇನ್ನೂ ನಡುಗುತ್ತಿದ್ದೆ. 12 ಆಮೇಲೆ ದರ್ಶನದಲ್ಲಿನ ಆ ಮನುಷ್ಯನು ಪುನಃ ಮಾತನಾಡಲು ಪ್ರಾರಂಭಿಸಿದನು. ಅವನು, “ದಾನಿಯೇಲನೇ, ಭಯಪಡಬೇಡ. ನೀನು ಜ್ಞಾನಸಂಪಾದನೆ ಮಾಡಬೇಕೆಂದೂ ದೇವರೆದುರಿಗೆ ಭಕ್ತಿವಿನಯಗಳಿಂದ ವರ್ತಿಸಬೇಕೆಂದೂ ತೀರ್ಮಾನಿಸಿದ ಮೊದಲ ದಿನದಿಂದಲೇ ಆತನು ನಿನ್ನ ಪ್ರಾರ್ಥನೆಗಳನ್ನು ಆಲಿಸುತ್ತಿದ್ದಾನೆ. ನೀನು ಪ್ರಾರ್ಥನೆ ಮಾಡಿದ್ದರಿಂದಲೇ ನಾನು ಇಲ್ಲಿಗೆ ಬಂದೆನು. 13 ಆದರೆ ಪಾರಸಿಯ ರಾಜ್ಯದ ದಿವ್ಯಪಾಲಕನು ನನ್ನೊಂದಿಗೆ ಕಳೆದ ಇಪ್ಪತ್ತೊಂದು ದಿನಗಳಿಂದ ಹೋರಾಡುತ್ತಿದ್ದನು; ನನಗೆ ತೊಂದರೆ ಕೊಡುತ್ತಿದ್ದನು. ಆಗ ಪ್ರಧಾನ ದಿವ್ಯಪಾಲಕರಲ್ಲೊಬ್ಬನಾದ ಮಿಕಾಯೇಲನು ನನ್ನ ಸಹಾಯಕ್ಕೆ ಬಂದನು. ನಾನು ಅಲ್ಲಿ ಪಾರಸಿಯ ರಾಜನ ಹತ್ತಿರ ಸಿಕ್ಕಿಹಾಕಿಕೊಂಡಿದ್ದೆ. 14 ದಾನಿಯೇಲನೇ, ಭವಿಷ್ಯದಲ್ಲಿ ನಿನ್ನ ಜನರಿಗೆ ಏನಾಗುವದೆಂಬುದನ್ನು ನಿನಗೆ ವಿವರಿಸಲು ನಾನು ಈಗ ಇಲ್ಲಿಗೆ ಬಂದೆನು. ಈ ಕನಸು ಭವಿಷ್ಯದ ಒಂದು ಕಾಲದ ಕುರಿತಾಗಿದೆ” ಎಂದು ಹೇಳಿದನು.
15 ಆ ಪುರುಷನು ನನ್ನೊಂದಿಗೆ ಮಾತನಾಡುತ್ತಿದ್ದಾಗ ನಾನು ನೆಲವನ್ನು ನೋಡುತ್ತಾ ಬಾಗಿಕೊಂಡಿದ್ದೆ. ಮಾತನಾಡಲು ನನ್ನಿಂದ ಸಾಧ್ಯವಾಗಲಿಲ್ಲ. 16 ಆಗ ಮನುಷ್ಯಕುಮಾರನಂತಿರುವವನು ನನ್ನ ತುಟಿಗಳನ್ನು ಸ್ಪರ್ಶಿಸಿದನು. ನಾನು ಬಾಯಿ ತೆರೆದು ಮಾತನಾಡಲು ಪ್ರಾರಂಭಿಸಿದೆ. ನನ್ನ ಎದುರಿಗೆ ನಿಂತುಕೊಂಡಿದ್ದವನಿಗೆ, “ಸ್ವಾಮಿ, ದರ್ಶನದಲ್ಲಿ ನೋಡಿದ ಸಂಗತಿಗಳಿಂದ ನಾನು ಚಿಂತಾಕ್ರಾಂತನಾಗಿದ್ದೇನೆ; ಅಂಜಿಕೊಂಡಿದ್ದೇನೆ; ನಿಸ್ಸಹಾಯಕನಾಗಿದ್ದೇನೆ. 17 ಸ್ವಾಮೀ, ನಾನು ನಿಮ್ಮ ಸೇವಕನಾದ ದಾನಿಯೇಲ. ನಾನು ನಿಮ್ಮ ಸಂಗಡ ಹೇಗೆ ಮಾತನಾಡಲಿ. ನನಗೆ ಶಕ್ತಿಯೇ ಇಲ್ಲದಂತಾಗಿದೆ. ಉಸಿರಾಡುವುದೂ ಕಷ್ಟವಾಗಿದೆ” ಎಂದೆ.
18 ಆ ಮನುಷ್ಯಕುಮಾರನಂತಿರುವವನು ಪುನಃ ನನ್ನನ್ನು ಸ್ಪರ್ಶಿಸಿದನು. ಆತನು ನನ್ನನ್ನು ಸ್ಪರ್ಶಿಸಿದಾಗ ನನಗೆ ಉಪಶಮನವಾಯಿತು. 19 ಆಗ ಆತನು “ದಾನಿಯೇಲನೇ, ಭಯಪಡಬೇಡ. ದೇವರು ನಿನ್ನನ್ನು ತುಂಬ ಪ್ರೀತಿಸುತ್ತಾನೆ. ಸಮಾಧಾನ ತಂದುಕೊ. ಈಗ ನೀನು ಬಲಗೊಳ್ಳು, ಬಲಗೊಳ್ಳು” ಎಂದು ಹೇಳಿದನು.
ಆತನು ನನ್ನೊಂದಿಗೆ ಮಾತನಾಡಿದ ಮೇಲೆ ನನಗೆ ಬಲಬಂದಿತು. ಆಗ ನಾನು, “ಸ್ವಾಮೀ, ನೀವು ನನಗೆ ಬಲವನ್ನು ನೀಡಿದಿರಿ. ಈಗ ನೀವು ಮಾತನಾಡಬಹುದು” ಎಂದು ಹೇಳಿದೆ.
26 ನಿಮ್ಮನ್ನು ತಪ್ಪುಮಾರ್ಗಕ್ಕೆ ಸೆಳೆಯುವ ಜನರನ್ನು ಕುರಿತು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. 27 ಕ್ರಿಸ್ತನು ನಿಮಗೆ ವಿಶೇಷವಾದ ವರವನ್ನು ದಯಪಾಲಿಸಿರುವನು. ಅದು ನಿಮ್ಮಲ್ಲಿ ಇನ್ನೂ ಇದೆ. ಆದ್ದರಿಂದ ನಿಮಗೆ ಯಾವ ಉಪದೇಶಕರ ಅಗತ್ಯವೂ ಇಲ್ಲ. ಆತನು ನಿಮಗೆ ಕೊಟ್ಟಿರುವ ವರವು ನಿಮಗೆ ಎಲ್ಲವನ್ನೂ ಉಪದೇಶಿಸುತ್ತದೆ. ಅದು ನಿಜವಾದುದು, ಸುಳ್ಳಲ್ಲ. ಆದ್ದರಿಂದ ಅದರ ಉಪದೇಶಕ್ಕನುಸಾರವಾಗಿ ನೀವು ಆತನಲ್ಲಿ ನೆಲೆಗೊಂಡಿರಿ.
28 ಹೌದು, ನನ್ನ ಪ್ರಿಯ ಮಕ್ಕಳೇ, ಆತನಲ್ಲಿಯೇ ನೆಲೆಗೊಂಡಿರೋಣ. ನಾವು ಹೀಗೆ ಮಾಡಿದರೆ, ಕ್ರಿಸ್ತನು ಮರಳಿ ಬರುವ ದಿನದಂದು ನಾವು ಭಯಪಡಬೇಕಾಗಿಲ್ಲ; ಅಡಗಿಕೊಳ್ಳುವ ಅಗತ್ಯವಿರುವುದಿಲ್ಲ; ನಾಚಿಕೆಪಡುವ ಅಗತ್ಯವೂ ಇರುವುದಿಲ್ಲ.
Kannada Holy Bible: Easy-to-Read Version. All rights reserved. © 1997 Bible League International