Revised Common Lectionary (Semicontinuous)
ವಿಶ್ವಾಸಿಗಳ ಅನ್ಯೋನ್ಯ ಜೀವನ
32 ವಿಶ್ವಾಸಿಗಳ ಹೃದಯವೂ ಪ್ರಾಣವೂ ಒಂದೇ ಆಗಿತ್ತು. ಸಮುದಾಯದಲ್ಲಿದ್ದ ಯಾವನಾಗಲಿ ತನ್ನಲ್ಲಿರುವವುಗಳನ್ನು ತನ್ನದೆಂದು ಹೇಳುತ್ತಿರಲಿಲ್ಲ. ಬದಲಾಗಿ, ಅವರು ಪ್ರತಿಯೊಂದನ್ನು ಹಂಚಿಕೊಳ್ಳುತ್ತಿದ್ದರು. 33 ಪ್ರಭುವಾದ ಯೇಸು ನಿಜವಾಗಿಯೂ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನೆಂದು ಅಪೊಸ್ತಲರು ಬಹುಬಲವಾಗಿ ಜನರಿಗೆ ಹೇಳುತ್ತಿದ್ದರು. ದೇವರು ವಿಶ್ವಾಸಿಗಳೆಲ್ಲರನ್ನು ಬಹಳವಾಗಿ ಆಶೀರ್ವದಿಸಿದನು. 34 ಅವರೆಲ್ಲರ ಅವಶ್ಯಕತೆಗಳನ್ನು ಪೂರೈಸಲಾಗುತ್ತಿತ್ತು. ಜಮೀನುಗಳನ್ನು ಮತ್ತು ಮನೆಗಳನ್ನು ಹೊಂದಿದ್ದ ಪ್ರತಿಯೊಬ್ಬರು ಅವುಗಳನ್ನು ಮಾರಿ, 35 ಬಂದ ಹಣವನ್ನು ಅಪೊಸ್ತಲರ ಪಾದಗಳ ಬಳಿ ಇಡುತ್ತಿದ್ದರು. ಬಳಿಕ ಅದನ್ನು ಪ್ರತಿಯೊಬ್ಬರಿಗೂ ಅವರವರ ಅಗತ್ಯತೆಗಳಿಗನುಸಾರವಾಗಿ ಹಂಚಲಾಗುತ್ತಿತ್ತು.
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.
133 ಆಹಾ, ಸಹೋದರರು ಅನ್ಯೋನ್ಯತೆಯಿಂದಿರುವುದು
ಎಷ್ಟೋ ಒಳ್ಳೆಯದು, ಎಷ್ಟೋ ರಮ್ಯವಾದದ್ದು.
2 ಅದು ಯಾಜಕನ ತಲೆಯ ಮೇಲೆ ಹಾಕಲ್ಪಟ್ಟು ಆರೋನನ ಗಡ್ಡಕ್ಕೂ
ಅಲ್ಲಿಂದ ಅವನ ಉಡುಪುಗಳ ಮೇಲೆಯೂ ಇಳಿದುಬರುವ ಪರಿಮಳ ತೈಲದಂತಿರುವುದು;
3 ಅದು ಹೆರ್ಮೋನ್ ಪರ್ವತದಿಂದ ಹುಟ್ಟಿ ಚೀಯೋನ್ ಪರ್ವತದ ಮೇಲೆ ಬೀಳುವ ದಟ್ಟವಾದ ಮಂಜಿನಂತಿರುವುದು.
ಯೆಹೋವನು ನಿತ್ಯಜೀವವೆಂಬ ತನ್ನ ಆಶೀರ್ವಾದವನ್ನು ಅನುಗ್ರಹಿಸಿದ್ದು ಚೀಯೋನಿನಲ್ಲಿಯೇ.
1 ಈ ಲೋಕವು ಆರಂಭವಾಗುವುದಕ್ಕಿಂತ ಮುಂಚಿನಿಂದಲೂ ಇದ್ದ ಜೀವವಾಕ್ಯದ ಕುರಿತಾಗಿ ನಾವು ನಿಮಗೆ ಬರೆಯುತ್ತಿದ್ದೇವೆ: ಅದನ್ನು ಕಿವಿಯಾರೆ ಕೇಳಿದೆವು; ಕಣ್ಣಾರೆ ನೋಡಿದೆವು, ಮನಸ್ಸಿಟ್ಟು ಗಮನಿಸಿದೆವು, ಕೈಗಳಿಂದ ಮುಟ್ಟಿ ನೋಡಿದೆವು. 2 ಆ ಜೀವವು ನಮಗೆ ಪ್ರತ್ಯಕ್ಷವಾಯಿತು. ನಾವು ಅದನ್ನು ನೋಡಿದ್ದರಿಂದ ಅದರ ಬಗ್ಗೆ ಸಾಕ್ಷಿ ಹೇಳ ಬಲ್ಲೆವು. ನಾವೀಗ ನಿಮಗೆ ಆ ಜೀವದ ಬಗ್ಗೆ ಸಾಕ್ಷಿ ಹೇಳುತ್ತೇವೆ. ಅದು ತಂದೆಯಾದ ದೇವರ ಸಂಗಡವಿದ್ದ ನಿತ್ಯವಾದ ಜೀವ. ದೇವರು ಈ ಜೀವವನ್ನು ನಮಗೆ ತೋರಿಸಿದನು. 3 ನಾವು ನೋಡಿದವುಗಳನ್ನೂ ಕೇಳಿದವುಗಳನ್ನೂ ಈಗ ನಿಮಗೆ ಹೇಳುತ್ತೇವೆ. ಏಕೆಂದರೆ ನೀವು ನಮ್ಮ ಅನ್ಯೋನ್ಯತೆಯಲ್ಲಿ ಪಾಲುಗಾರರಾಗಬೇಕೆಂಬುದು ನಮ್ಮ ಅಪೇಕ್ಷೆ. ನಮ್ಮ ಈ ಅನ್ಯೋನ್ಯತೆಯು ತಂದೆಯಾದ ದೇವರ ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಸಂಗಡವಿರುವಂಥದ್ದು. 4 ನಮ್ಮ[a] ಸಂತೋಷವು ಪರಿಪೂರ್ಣವಾಗಲೆಂದು ನಾವು ನಿಮಗೆ ಈ ಸಂಗತಿಗಳನ್ನು ಬರೆಯುತ್ತಿದ್ದೇವೆ.
ದೇವರು ನಮ್ಮ ಪಾಪಗಳನ್ನು ಕ್ಷಮಿಸುತ್ತಾನೆ
5 ನಾವು ದೇವರಿಂದ ಕೇಳಿ ನಿಮಗೆ ತಿಳಿಸುವ ವಾರ್ತೆ ಏನೆಂದರೆ, ದೇವರು ಬೆಳಕಾಗಿದ್ದಾನೆ; ಆತನಲ್ಲಿ ಅಂಧಕಾರವಿಲ್ಲ. 6 ಆದ್ದರಿಂದ ದೇವರ ಜೊತೆಯಲ್ಲಿ ಅನ್ಯೋನ್ಯತೆಯಿಂದ ಇದ್ದೇವೆ ಎಂದು ನಾವು ಹೇಳಿಕೊಂಡು, ಅಂಧಕಾರದಲ್ಲಿ ಜೀವಿಸುತ್ತಿದ್ದರೆ ಸುಳ್ಳು ಹೇಳಿದಂತಾಯಿತು. ಏಕೆಂದರೆ ನಾವು ಸತ್ಯವನ್ನು ಅನುಸರಿಸುತ್ತಿಲ್ಲ. 7 ದೇವರು ಬೆಳಕಿನಲ್ಲಿದ್ದಾನೆ. ಆದ್ದರಿಂದ ನಾವೂ ಬೆಳಕಿನಲ್ಲಿ ಜೀವಿಸಬೇಕಾಗಿದೆ. ನಾವು ಬೆಳಕಿನಲ್ಲಿ ಜೀವಿಸುವವರಾಗಿದ್ದರೆ ಪರಸ್ಪರ ಅನ್ಯೋನ್ಯತೆಯಲ್ಲಿದ್ದೇವೆ ಮತ್ತು ದೇವರ ಮಗನಾದ ಯೇಸುವಿನ ರಕ್ತವು ನಮ್ಮ ಪಾಪಗಳನ್ನೆಲ್ಲಾ ನಿವಾರಣೆ ಮಾಡುತ್ತದೆ.
8 ನಮ್ಮಲ್ಲಿ ಪಾಪವಿಲ್ಲವೆಂದು ಹೇಳಿಕೊಂಡರೆ, ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುವವರಾಗಿದ್ದೇವೆ ಮತ್ತು ನಮ್ಮಲ್ಲಿ ಸತ್ಯವೇ ಇಲ್ಲ. 9 ಆದರೆ ನಮ್ಮ ಪಾಪಗಳನ್ನು ಅರಿಕೆ ಮಾಡಿದರೆ, ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿ ನಮ್ಮನ್ನು ಶುದ್ಧೀಕರಿಸುತ್ತಾನೆ. 10 ನಾವು ಪಾಪಮಾಡಿಲ್ಲವೆಂದು ಹೇಳಿದರೆ ದೇವರನ್ನೇ ಸುಳ್ಳುಗಾರನನ್ನಾಗಿ ಮಾಡುವವರಾಗಿದ್ದೇವೆ ಮತ್ತು ದೇವರ ವಾಕ್ಯವನ್ನು ಒಪ್ಪಿಕೊಳ್ಳದವರಾಗಿದ್ದೇವೆ.
ಯೇಸು ನಮ್ಮ ಸಹಾಯಕ
2 ನನ್ನ ಪ್ರಿಯ ಮಕ್ಕಳೇ, ನೀವು ಪಾಪಗಳನ್ನು ಮಾಡದಿರಲೆಂದು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಆದರೆ ಯಾರಾದರೂ ಪಾಪವನ್ನು ಮಾಡಿದರೆ ನಮಗೆ ಸಹಾಯ ಮಾಡಲು ಯೇಸು ಕ್ರಿಸ್ತನಿದ್ದಾನೆ. ನೀತಿವಂತನಾಗಿರುವ ಆತನು ತಂದೆಯಾದ ದೇವರ ಬಳಿಯಲ್ಲಿದ್ದಾನೆ. 2 ನಮ್ಮ ಪಾಪಗಳ ನಿವಾರಣೆಗೂ ಎಲ್ಲಾ ಜನರ ಪಾಪಗಳ ನಿವಾರಣೆಗೂ ಯೇಸುವೇ ಮಾರ್ಗವಾಗಿದ್ದಾನೆ.
ಶಿಷ್ಯರಿಗೆ ಯೇಸುವಿನ ದರ್ಶನ
(ಮತ್ತಾಯ 28:16-20; ಮಾರ್ಕ 16:14-18; ಲೂಕ 24:36-49)
19 ಅಂದು ಭಾನುವಾರ, ಅದೇ ಸಾಯಂಕಾಲ ಶಿಷ್ಯರು ಒಟ್ಟಾಗಿ ಸೇರಿದ್ದರು. ಅವರು ಯೆಹೂದ್ಯರಿಗೆ ಹೆದರಿ ಬಾಗಿಲುಗಳನ್ನು ಮುಚ್ಚಿಕೊಂಡು ಒಳಗೇ ಇದ್ದರು. ಆಗ ಯೇಸು ಬಂದು ಅವರ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ಶಾಂತಿಯು ನಿಮ್ಮೊಂದಿಗಿರಲಿ!” ಎಂದು ಹೇಳಿದನು. 20 ಯೇಸು ಹೀಗೆ ಹೇಳಿದ ಮೇಲೆ, ತನ್ನ ಕೈಗಳನ್ನು ಮತ್ತು ಪಕ್ಕೆಯನ್ನು ಅವರಿಗೆ ತೋರಿಸಿದನು. ಪ್ರಭುವನ್ನು ಕಂಡು ಶಿಷ್ಯರಿಗೆ ಬಹು ಸಂತೋಷವಾಯಿತು.
21 ಬಳಿಕ ಯೇಸು ಮತ್ತೆ, “ಶಾಂತಿಯು ನಿಮ್ಮೊಂದಿಗಿರಲಿ! ತಂದೆಯು ನನ್ನನ್ನು ಕಳುಹಿಸಿದನು. ಅದೇ ರೀತಿಯಲ್ಲಿ, ಈಗ ನಾನೂ ನಿಮ್ಮನ್ನು ಕಳುಹಿಸುತ್ತೇನೆ” ಎಂದು ಹೇಳಿದನು. 22 ಯೇಸು ಹೀಗೆ ಹೇಳಿದ ನಂತರ ಶಿಷ್ಯರ ಮೇಲೆ ಉಸಿರೂದಿ, “ಪವಿತ್ರಾತ್ಮನನ್ನು ಸ್ವೀಕರಿಸಿಕೊಳ್ಳಿ. 23 ನೀವು ಯಾರ ಪಾಪಗಳನ್ನು ಕ್ಷಮಿಸುತ್ತೀರೋ, ಅವರ ಪಾಪಗಳನ್ನು ಕ್ಷಮಿಸಲಾಗುವುದು. ನೀವು ಯಾರ ಪಾಪಗಳನ್ನು ಕ್ಷಮಿಸುವುದಿಲ್ಲವೋ, ಅವರ ಪಾಪಗಳಿಗೆ ಕ್ಷಮೆ ದೊರೆಯುವುದಿಲ್ಲ” ಎಂದು ಹೇಳಿದನು.
ತೋಮನಿಗೆ ಯೇಸುವಿನ ದರ್ಶನ
24 ಯೇಸು ಬಂದಾಗ ದಿದುಮನೆಂಬ ತೋಮನು ಶಿಷ್ಯರೊಂದಿಗೆ ಇರಲಿಲ್ಲ. ಹನ್ನೆರಡು ಮಂದಿ ಶಿಷ್ಯರಲ್ಲಿ ತೋಮನೂ ಒಬ್ಬನಾಗಿದ್ದನು. 25 ಉಳಿದ ಶಿಷ್ಯರು ತೋಮನಿಗೆ, “ನಾವು ಪ್ರಭುವನ್ನು ನೋಡಿದೆವು” ಎಂದು ಹೇಳಿದರು. ಆದರೆ ತೋಮನು, “ಆತನ ಕೈಗಳಲ್ಲಿರುವ ಮೊಳೆಯ ಗಾಯದ ಗುರುತುಗಳನ್ನು ನಾನು ನೋಡುವವರೆಗೆ, ಮೊಳೆಗಳನ್ನು ಜಡಿದಿದ್ದ ಸ್ಥಳದಲ್ಲಿ ನನ್ನ ಬೆರಳನ್ನಿಡುವವರೆಗೆ ಮತ್ತು ಆತನ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟುನೋಡುವವರೆಗೆ ನಾನು ಅದನ್ನು ನಂಬುವುದಿಲ್ಲ” ಎಂದು ಹೇಳಿದನು.
26 ಒಂದು ವಾರದ ನಂತರ ಶಿಷ್ಯರು ಮನೆಯೊಂದರಲ್ಲಿ ಒಟ್ಟಾಗಿ ಸೇರಿದ್ದರು. ತೋಮನು ಅವರೊಂದಿಗೆ ಇದ್ದನು. ಬಾಗಿಲುಗಳನ್ನು ಮುಚ್ಚಲಾಗಿತ್ತು. ಆಗ ಯೇಸು ಬಂದು ಅವರ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ಶಾಂತಿಯು ನಿಮ್ಮೊಂದಿಗಿರಲಿ!” ಎಂದು ಹೇಳಿದನು. 27 ಬಳಿಕ ಯೇಸು ತೋಮನಿಗೆ, “ನಿನ್ನ ಬೆರಳನ್ನು ಇಲ್ಲಿಡು. ನನ್ನ ಕೈಗಳನ್ನು ನೋಡು. ನಿನ್ನ ಕೈಯನ್ನು ನನ್ನ ಪಕ್ಕೆಯಲ್ಲಿ ಹಾಕು. ಸಂಶಯಪಡದೆ ನಂಬುವವನಾಗು” ಎಂದು ಹೇಳಿದನು.
28 ತೋಮನು ಯೇಸುವಿಗೆ, “ನನ್ನ ಪ್ರಭುವೇ, ನನ್ನ ದೇವರೇ!” ಎಂದು ಹೇಳಿದನು.
29 ಯೇಸು ತೋಮನಿಗೆ, “ನೀನು ನನ್ನನ್ನು ನೋಡಿದ್ದರಿಂದ ನಂಬಿದೆ. ನನ್ನನ್ನು ನೋಡದೆ ನಂಬುವವರು ನಿಜವಾಗಿಯೂ ಧನ್ಯರು” ಎಂದು ಹೇಳಿದನು.
ಯೋಹಾನನು ಈ ಪುಸ್ತಕವನ್ನು ಬರೆದ ಉದ್ದೇಶ
30 ಯೇಸು ಇನ್ನೂ ಅನೇಕ ಸೂಚಕಕಾರ್ಯಗಳನ್ನು ತನ್ನ ಶಿಷ್ಯರ ಕಣ್ಮುಂದೆ ಮಾಡಿದನು. ಆ ಅದ್ಭುತಕಾರ್ಯಗಳನ್ನು ಈ ಪುಸ್ತಕದಲ್ಲಿ ಬರೆದಿಲ್ಲ. 31 ಆದರೆ ಆತನೇ ಕ್ರಿಸ್ತನೆಂದೂ ದೇವರ ಮಗನೆಂದೂ ನೀವು ನಂಬುವಂತೆಯೂ ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡೆದುಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದದೆ.
Kannada Holy Bible: Easy-to-Read Version. All rights reserved. © 1997 Bible League International