Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಅಪೊಸ್ತಲರ ಕಾರ್ಯಗಳು 3:12-19

12 ಆಗ ಪೇತ್ರನು ಅವರಿಗೆ, “ನನ್ನ ಯೆಹೂದ್ಯ ಸಹೋದರರೇ, ಇದನ್ನು ಕಂಡು ನೀವು ಯಾಕೆ ಆಶ್ಚರ್ಯಗೊಂಡಿರುವಿರಿ? ಈ ಮನುಷ್ಯನನ್ನು ನಡೆಯುವಂತೆ ಮಾಡಿದ್ದು ನಮ್ಮ ಶಕ್ತಿಯೆಂದು ನೀವು ನಮ್ಮನ್ನು ನೋಡುತ್ತಿರುವಿರಾ? ನಾವು ಒಳ್ಳೆಯವರಾಗಿರುವುದರಿಂದ ಈ ಕಾರ್ಯವಾಯಿತೆಂದು ಭಾವಿಸಿಕೊಂಡಿದ್ದೀರಾ? 13 ಈ ಕಾರ್ಯವನ್ನು ಮಾಡಿದ್ದು ನಾವಲ್ಲ! ದೇವರು! ಆತನೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ[a] ದೇವರು. ಆತನೇ ನಮ್ಮ ಪಿತೃಗಳೆಲ್ಲರ ದೇವರು. ಆತನು ತನ್ನ ವಿಶೇಷ ಸೇವಕನಾದ ಯೇಸುವನ್ನು ಮಹಿಮೆಪಡಿಸಿದ್ದಾನೆ. ಆದರೆ ನೀವು ಯೇಸುವನ್ನು ಕೊಲ್ಲಲು ಒಪ್ಪಿಸಿಕೊಟ್ಟಿರಿ. ಯೇಸುವನ್ನು ಬಿಡುಗಡೆ ಮಾಡಲು ಪಿಲಾತನು ನಿರ್ಧರಿಸಿದನು. ಆದರೆ ನೀವು ಪಿಲಾತನಿಗೆ, ನಮಗೆ ಯೇಸು ಬೇಕಿಲ್ಲವೆಂದು ಹೇಳಿದಿರಿ. 14 ಯೇಸು ಪರಿಶುದ್ಧನಾಗಿದ್ದನು ಮತ್ತು ಒಳ್ಳೆಯವನಾಗಿದ್ದನು. ಆದರೆ ನೀವು ಆತನನ್ನು ತಿರಸ್ಕರಿಸಿದಿರಿ. ಆತನ ಬದಲಾಗಿ ಕೊಲೆಗಾರನನ್ನು[b] ಬಿಡುಗಡೆ ಮಾಡಬೇಕೆಂದು ಪಿಲಾತನನ್ನು ಬೇಡಿಕೊಂಡಿರಿ. 15 ಹೀಗೆ ನೀವು ಜೀವದಾಯಕನನ್ನೇ ಕೊಂದುಹಾಕಿದಿರಿ! ಆದರೆ ದೇವರು ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ಇದಕ್ಕೆ ನಾವೇ ಸಾಕ್ಷಿಗಳು. ಇದನ್ನು ನಾವು ಕಣ್ಣಾರೆ ಕಂಡಿದ್ದೇವೆ.

16 “ನಿಮ್ಮ ಕಣ್ಣೆದುರಿಗಿರುವ ಇವನ ಪರಿಚಯ ನಿಮ್ಮೆಲ್ಲರಿಗೂ ಇದೆ. ಇವನು ಗುಣವಾದದ್ದಕ್ಕೆ ಇವನು ಯೇಸುವಿನ ಹೆಸರಿನಲ್ಲಿ ಇಟ್ಟ ನಂಬಿಕೆಯೇ ಕಾರಣ. ಆ ಹೆಸರೇ ಇವನನ್ನು ಬಲಪಡಿಸಿತು. ಆತನ ಮೂಲಕ ಉಂಟಾಗಿರುವ ನಂಬಿಕೆಯೇ ಇವನನ್ನು ನಿಮ್ಮೆಲ್ಲರ ಮುಂದೆ ಗುಣಪಡಿಸಿತು.

17 “ಸಹೋದರರೇ, ನೀವು ತಿಳಿಯದೆ ಯೇಸುವಿಗೆ ಹೀಗೆ ಮಾಡಿದಿರೆಂದು ನನಗೆ ಗೊತ್ತಿದೆ. ನಿಮ್ಮ ನಾಯಕರು ಸಹ ಅರ್ಥಮಾಡಿಕೊಳ್ಳಲಿಲ್ಲ. 18 ಹೀಗಾಗುತ್ತದೆ ಎಂದು ದೇವರು ಮೊದಲೇ ತಿಳಿಸಿದ್ದನು. ಕ್ರಿಸ್ತನು ಶ್ರಮೆ ಅನುಭವಿಸಿ ಸಾಯುವನೆಂದು ದೇವರು ತನ್ನ ಪ್ರವಾದಿಗಳ ಮೂಲಕ ಮೊದಲೇ ತಿಳಿಸಿದ್ದನ್ನು ಹೀಗೆ ನೆರವೇರಿಸಿದ್ದಾನೆ. 19 ಆದ್ದರಿಂದ ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿ. ಆಗ ಆತನು ನಿಮ್ಮ ಪಾಪಗಳನ್ನು ಕ್ಷಮಿಸುವನು.

ಕೀರ್ತನೆಗಳು 4

ರಚನೆಗಾರ: ದಾವೀದ.

ನೀತಿಸ್ವರೂಪನಾದ ದೇವರೇ, ನನ್ನ ಪ್ರಾರ್ಥನೆಗೆ ಉತ್ತರಿಸು!
    ನನ್ನ ಮೊರೆಗೆ ಕಿವಿಗೊಟ್ಟು ನನ್ನನ್ನು ಕರುಣಿಸು!
ಇಕ್ಕಟ್ಟುಗಳಿಂದ ನನ್ನನ್ನು ಬಿಡಿಸಿ
    ಸುರಕ್ಷಿತ ಸ್ಥಳದಲ್ಲಿ ಸೇರಿಸು.

ಜನರೇ, ಇನ್ನೆಷ್ಟರವರೆಗೆ ನನ್ನ ಬಗ್ಗೆ ಕೆಟ್ಟದ್ದನ್ನು ಹೇಳುವಿರಿ?
    ಅಸತ್ಯವನ್ನೇ ಪ್ರೀತಿಸುತ್ತಾ, ನನ್ನ ಮೇಲೆ ಹೊರಿಸಲು ಸುಳ್ಳಪವಾದಗಳಿಗಾಗಿ ಯಾಕೆ ಹುಡುಕುತ್ತಿದ್ದೀರಿ?

ಯೆಹೋವನು ತನ್ನ ಭಕ್ತನನ್ನು ತನಗೋಸ್ಕರ ಪ್ರತ್ಯೇಕಿಸಿಕೊಂಡಿದ್ದಾನೆಂಬುದು ನಿಮಗೆ ತಿಳಿದಿರಲಿ.
    ನಾನು ಮೊರೆಯಿಡುವಾಗಲೆಲ್ಲಾ ಆತನು ನನಗೆ ಕಿವಿಗೊಡುತ್ತಾನೆ.

ನೀವು ಕೋಪದಿಂದಿರುವಾಗ ಎಚ್ಚರಿಕೆಯಾಗಿದ್ದು ಪಾಪಮಾಡದಿರಿ.
    ಹಾಸಿಗೆಯ ಮೇಲಿರುವಾಗ ಹೃದಯಗಳನ್ನು ಪರೀಕ್ಷಿಸಿಕೊಳ್ಳಿರಿ.
ದೇವರಿಗೆ ಯೋಗ್ಯವಾದ ಯಜ್ಞಗಳನ್ನು ಅರ್ಪಿಸಿರಿ;
    ಯೆಹೋವನಲ್ಲಿಯೇ ಭರವಸೆಯಿಡಿರಿ!

“ನಮಗೆ ಒಳ್ಳೆಯದನ್ನು ಯಾರು ತೋರಿಸುವರು?
    ಯೆಹೋವನೇ, ನಿನ್ನ ಪ್ರಕಾಶಮಾನವಾದ ಮುಖವನ್ನು ನಾವು ನೋಡುವಂತಾಗಲಿ!” ಎಂದು ಅನೇಕರು ಅಂದುಕೊಳ್ಳುವರು.
ಧಾನ್ಯಯವೂ ದ್ರಾಕ್ಷಿಯೂ ಸಮೃದ್ಧಿಯಾಗಿ ಬೆಳೆದ ಸುಗ್ಗಿಕಾಲದಲ್ಲಿ ಜನರಲ್ಲಿರುವ ಸಂತೋಷಕ್ಕಿಂತಲೂ ಅಧಿಕವಾದ ಆನಂದವನ್ನು ನೀನು ನನ್ನ ಹೃದಯದಲ್ಲಿ ತುಂಬಿರುವೆ.
ನಾನು ಹಾಸಿಗೆಯ ಮೇಲೆ ಸಮಾಧಾನದಿಂದ ನಿದ್ರಿಸುವೆನು.
    ಯಾಕೆಂದರೆ, ಯೆಹೋವನೇ, ನನ್ನನ್ನು ಕಾಪಾಡುವಾತನು ನೀನೇ.

1 ಯೋಹಾನ 3:1-7

ನಾವು ದೇವರ ಮಕ್ಕಳಾಗಿದ್ದೇವೆ

ತಂದೆಯು ನಮ್ಮನ್ನು ಬಹಳವಾಗಿ ಪ್ರೀತಿಸಿದನು! ದೇವರ ಮಕ್ಕಳು ಎಂಬ ಹೆಸರನ್ನು ನಮಗೆ ಕೊಡುವಷ್ಟರ ಮಟ್ಟಿಗೆ ದೇವರು ನಮ್ಮನ್ನು ಪ್ರೀತಿಸಿದನು. ನಾವು ನಿಜವಾಗಿಯೂ ದೇವರ ಮಕ್ಕಳಾಗಿದ್ದೇವೆ. ಆದರೆ ಲೋಕದಲ್ಲಿರುವ ಜನರಾದರೋ ನಾವು ದೇವರ ಮಕ್ಕಳೆಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಏಕೆಂದರೆ ಅವರು ದೇವರನ್ನು ತಿಳಿದಿಲ್ಲ. ಪ್ರಿಯ ಸ್ನೇಹಿತರೇ, ಈಗ ನಾವು ದೇವರ ಮಕ್ಕಳಾಗಿದ್ದೇವೆ. ನಾವು ಮುಂದೆ ಏನಾಗುವೆವೆಂಬುದನ್ನು ನಮಗಿನ್ನೂ ತೋರ್ಪಡಿಸಿಲ್ಲ. ಆದರೆ ಕ್ರಿಸ್ತನು ಮರಳಿ ಬಂದಾಗ ಅದನ್ನು ತಿಳಿದುಕೊಳ್ಳುತ್ತೇವೆ. ನಾವು ಆತನಂತಾಗುವೆವು. ನಾವು ಆತನ ನಿಜಸ್ವರೂಪವನ್ನೇ ನೋಡುವೆವು. ಕ್ರಿಸ್ತನಲ್ಲಿ ಈ ನಿರೀಕ್ಷೆಯನ್ನು ಹೊಂದಿರುವ ಪ್ರತಿಯೊಬ್ಬನೂ ಕ್ರಿಸ್ತನು ಶುದ್ಧನಾಗಿರುವಂತೆ ತನ್ನನ್ನು ಶುದ್ಧಮಾಡಿಕೊಳ್ಳುತ್ತಾನೆ.

ಪಾಪ ಮಾಡುವವನು ದೇವರ ಕಟ್ಟಳೆಗಳನ್ನು ಉಲ್ಲಂಘಿಸುವವನಾಗಿದ್ದಾನೆ. ಹೌದು, ಪಾಪಮಾಡುವುದಕ್ಕೂ ದೇವರ ಕಟ್ಟಳೆಗಳಿಗೆ ವಿರುದ್ಧವಾಗಿ ಜೀವಿಸುವುದಕ್ಕೂ ಯಾವ ವ್ಯತ್ಯಾಸವಿಲ್ಲ. ಕ್ರಿಸ್ತನು ಜನರ ಪಾಪಗಳನ್ನು ಹೋಗಲಾಡಿಸಲು ಬಂದನೆಂಬುದು ನಿಮಗೆ ತಿಳಿದಿದೆ. ಆತನಲ್ಲಿ ಪಾಪವೆಂಬುದಿಲ್ಲ. ಆದ್ದರಿಂದ ಕ್ರಿಸ್ತನಲ್ಲಿ ನೆಲಸಿರುವ ವ್ಯಕ್ತಿಯು ಪಾಪದಲ್ಲೇ ಮುಂದುವರಿಯುವುದಿಲ್ಲ. ಪಾಪವನ್ನು ಮಾಡುತ್ತಲೇ ಇರುವವನು ಆತನನ್ನು ಎಂದೂ ಅರ್ಥಮಾಡಿಕೊಂಡವನಲ್ಲ ಮತ್ತು ಎಂದೂ ತಿಳಿದವನಲ್ಲ.

ಪ್ರಿಯ ಮಕ್ಕಳೇ, ನಿಮ್ಮನ್ನು ಯಾರೂ ತಪ್ಪುಮಾರ್ಗಕ್ಕೆ ಎಳೆಯದಂತೆ ನೋಡಿಕೊಳ್ಳಿರಿ. ಕ್ರಿಸ್ತನು ನೀತಿವಂತನಾಗಿದ್ದಾನೆ. ಆತನಂತೆ ನೀತಿವಂತನಾಗಿರಲು ಬಯಸುವವನು ಒಳ್ಳೆಯದನ್ನು ಮಾಡಬೇಕು.

ಲೂಕ 24:36-48

ಯೇಸು ತನ್ನ ಶಿಷ್ಯರಿಗೆ ಕಾಣಿಸಿಕೊಂಡನು

(ಮತ್ತಾಯ 28:16-20; ಮಾರ್ಕ 16:14-18; ಯೋಹಾನ 20:19-23; ಅ.ಕಾ. 1:6-8)

36 ಅವರಿಬ್ಬರೂ ಈ ಸಂಗತಿಗಳನ್ನು ಹೇಳುತ್ತಿದ್ದಾಗ, ಯೇಸುವು ಶಿಷ್ಯರ ಗುಂಪಿನ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ನಿಮಗೆ ಶಾಂತಿಯಾಗಲಿ” ಅಂದನು.

37 ಆಗ ಶಿಷ್ಯರು ಬೆರಗಾದರು. ಅವರಿಗೆ ಭಯವಾಯಿತು. ಅದು ಭೂತವೇ ಇರಬೇಕೆಂದು ಅವರು ಭಾವಿಸಿದರು. 38 ಆದರೆ ಯೇಸು, “ನೀವು ಏಕೆ ಗಲಿಬಿಲಿಗೊಂಡಿದ್ದೀರಿ? ನೀವು ಕಣ್ಣಾರೆ ಕಂಡರೂ ಏಕೆ ಸಂಶಯಪಡುತ್ತೀರಿ? 39 ನನ್ನ ಕೈಗಳನ್ನು ಮತ್ತು ಪಾದಗಳನ್ನು ನೋಡಿರಿ. ನಾನೇ ಅಲ್ಲವೇ! ನನ್ನನ್ನು ಮುಟ್ಟಿರಿ. ನನ್ನ ಈ ಜೀವಂತ ದೇಹವನ್ನು ನೀವೇ ನೋಡಿರಿ. ಭೂತಕ್ಕೆ ಈ ರೀತಿಯ ದೇಹವಿರುವುದಿಲ್ಲ” ಅಂದನು.

40 ಯೇಸು ಅವರಿಗೆ ಇದನ್ನು ಹೇಳಿದ ನಂತರ, ತನ್ನ ಕೈಗಳಲ್ಲಿ ಮತ್ತು ಪಾದಗಳಲ್ಲಿರುವ ಗಾಯದ ಗುರುತುಗಳನ್ನು ತೋರಿಸಿದನು. 41 ಶಿಷ್ಯರು ಅತ್ಯಾಶ್ಚರ್ಯಗೊಂಡರು ಮತ್ತು ಯೇಸುವನ್ನು ಜೀವಂತವಾಗಿ ಕಂಡು ಅತ್ಯಂತ ಸಂತೋಷಪಟ್ಟರು. ಆದರೆ ಅವರಿಗಿನ್ನೂ ನಂಬಲಾಗಲಿಲ್ಲ. ಯೇಸು ಅವರಿಗೆ, “ನಿಮ್ಮಲ್ಲಿ ಆಹಾರವೇನಾದರೂ ಇದೆಯೋ?” ಎಂದು ಕೇಳಿದನು. 42 ಅವರು ಸುಟ್ಟ ಮೀನಿನ ತುಂಡನ್ನು ಕೊಟ್ಟರು. 43 ಶಿಷ್ಯರ ಕಣ್ಣೆದುರಿನಲ್ಲಿಯೇ, ಯೇಸು ಆ ಮೀನನ್ನು ತೆಗೆದುಕೊಂಡು ತಿಂದನು.

44 ಯೇಸು ಅವರಿಗೆ, “ನಾನು ಮೊದಲು ನಿಮ್ಮ ಸಂಗಡ ಇದ್ದುದನ್ನು ಜ್ಞಾಪಕಮಾಡಿಕೊಳ್ಳಿರಿ. ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿ ಪ್ರವಾದಿಗಳ ಗ್ರಂಥಗಳಲ್ಲಿ, ಕೀರ್ತನೆಗಳಲ್ಲಿ ಬರೆದಿರುವ ಪ್ರತಿಯೊಂದು ಸಂಗತಿಯೂ ನೆರವೇರಬೇಕಾಗಿದೆ ಎಂದು ನಾನು ಹೇಳಿದೆನು” ಅಂದನು.

45 ಬಳಿಕ ಯೇಸು ಪವಿತ್ರ ಗ್ರಂಥವನ್ನು ತನ್ನ ಶಿಷ್ಯರಿಗೆ ವಿವರಿಸಿದನು. ತನ್ನ ಬಗ್ಗೆ ಬರೆದಿರುವ ಸಂಗತಿಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡಿದನು. 46 ಬಳಿಕ ಯೇಸು ಅವರಿಗೆ, “ಕ್ರಿಸ್ತನು ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಸತ್ತವರೊಳಗಿಂದ ಎದ್ದುಬರುವನು ಎಂದು ಬರೆಯಲ್ಪಟ್ಟಿದೆ. 47-48 ಈ ಸಂಗತಿಗಳು ನೆರವೇರುವುದನ್ನು ನೀವು ನೋಡಿದಿರಿ. ನೀವೇ ಇದಕ್ಕೆ ಸಾಕ್ಷಿಗಳು. ನೀವು ಜನರ ಬಳಿಗೆ ಹೋಗಿ, ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವವರಿಗೆ ಪಾಪಕ್ಷಮೆಯಾಗುತ್ತದೆ ಎಂದು ತಿಳಿಸಿರಿ. ನೀವು ಈ ಸುವಾರ್ತೆಯನ್ನು ಜೆರುಸಲೇಮಿನಲ್ಲಿ ಪ್ರಾರಂಭಿಸಿ ಲೋಕದ ಜನರೆಲ್ಲರಿಗೂ ನನ್ನ ಹೆಸರಿನಲ್ಲಿ ತಿಳಿಸಬೇಕು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International