Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 22:25-31

25 ಯೆಹೋವನೇ, ನಿನ್ನ ಕಾರ್ಯಗಳಿಗಾಗಿ ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು;
    ನನ್ನ ಹರಕೆಗಳನ್ನು ನಿನ್ನ ಭಕ್ತರ ಮುಂದೆ ಸಲ್ಲಿಸುವೆನು.
26 ಬಡವರು ತಿಂದು ತೃಪ್ತರಾಗುವರು.
    ಯೆಹೋವನಿಗಾಗಿ ಹುಡುಕುತ್ತಾ ಬಂದವರೇ, ಆತನಿಗೆ ಸ್ತೋತ್ರಮಾಡಿರಿ!
    ನಿಮ್ಮ ಹೃದಯವು ಯಾವಾಗಲೂ ಸಂತೋಷವಾಗಿರಲಿ.[a]
27 ದೂರದೇಶಗಳಲ್ಲಿರುವ ಜನರೆಲ್ಲರೂ ಯೆಹೋವನನ್ನು ಜ್ಞಾಪಿಸಿಕೊಂಡು ಆತನ ಬಳಿಗೆ ಹಿಂತಿರುಗಲಿ.
    ವಿದೇಶಗಳಿಲ್ಲಿರುವ ಜನರೆಲ್ಲರೂ ಆತನನ್ನು ಆರಾಧಿಸಲಿ.
28 ಯಾಕೆಂದರೆ ಯೆಹೋವನೇ ರಾಜನು!
    ಆತನು ಜನಾಂಗಗಳನ್ನೆಲ್ಲಾ ಆಳುವನು.
29 ಬಲಿಷ್ಠರೂ ದೃಢಕಾಯರೂ ತಿಂದು ದೇವರಮುಂದೆ ಅಡ್ಡಬೀಳುವರು.
    ಸಾಯುವವರೂ ಸತ್ತುಹೋಗಿರುವವರೂ ಆತನ ಮುಂದೆ ಅಡ್ಡಬೀಳುವರು.
30 ಮುಂದಿನ ಕಾಲದಲ್ಲಿ ನಮ್ಮ ಸಂತತಿಗಳವರು ಯೆಹೋವನ ಸೇವೆಮಾಡುವರು.
    ಆತನ ಕುರಿತಾಗಿ ಯಾವಾಗಲೂ ಹೇಳುತ್ತಿರುವರು.
31 ಪ್ರತಿಯೊಂದು ತಲೆಮಾರಿನವರೂ ತಮ್ಮ ಮಕ್ಕಳಿಗೆ
    ಆತನ ಒಳ್ಳೆಯ ಕಾರ್ಯಗಳ ಬಗ್ಗೆ ಹೇಳುವರು.[b]

ಆಮೋಸ 8:11-13

ದೇವರ ವಾಕ್ಯಕ್ಕಾಗಿ ಅತಿಯಾದ ಹಸಿವೆಯಿಂದ ಕೇಳುವ ದಿವಸಗಳು ಬರುವವು

11 ಯೆಹೋವನು ಹೇಳುವುದೇನೆಂದರೆ,

“ನಿಮ್ಮ ದೇಶದಲ್ಲಿ ಹಸಿವೆಯ
    ದಿವಸಗಳನ್ನು ಬರಮಾಡುವೆನು.
ಜನರು ರೊಟ್ಟಿಗಾಗಿ ಹಸಿಯುವುದಿಲ್ಲ.
    ನೀರಿಗಾಗಿ ಬಾಯಾರುವದಿಲ್ಲ.
    ಇಲ್ಲ! ಜನರು ಯೆಹೋವನ ವಾಕ್ಯಕ್ಕಾಗಿ ಹಸಿವೆಯುಳ್ಳವರಾಗುವರು.
12 ಮೃತ್ಯುಸಮುದ್ರದಿಂದ ಮೆಡಿಟರೇನಿಯನ್ ಸಮುದ್ರದ ತನಕ,
    ಉತ್ತರದಿಂದ ಪೂರ್ವದಿಕ್ಕಿನ ತನಕ ಜನರು
ಯೆಹೋವನ ಸಂದೇಶಕ್ಕಾಗಿ ಹಾತೊರೆಯುತ್ತಾ ಅಲೆದಾಡುವರು.
    ಆದರೆ ಅವರು ಕಂಡುಕೊಳ್ಳುವುದಿಲ್ಲ.
13 ಆ ಸಮಯದಲ್ಲಿ ಸುಂದರವಾದ
    ತರುಣತರುಣಿಯರು ದಾಹದಿಂದ ಬಳಲುವರು.

ಅಪೊಸ್ತಲರ ಕಾರ್ಯಗಳು 8:9-25

ಆದರೆ ಆ ಪಟ್ಟಣದಲ್ಲಿ ಸಿಮೋನ ಎಂಬ ಒಬ್ಬನಿದ್ದನು. ಫಿಲಿಪ್ಪನು ಅಲ್ಲಿಗೆ ಬರುವುದಕ್ಕಿಂತ ಮೊದಲಿನಿಂದಲೂ ಸಿಮೋನನು ಮಂತ್ರತಂತ್ರಗಳನ್ನು ಮಾಡುತ್ತಿದ್ದನು. ಅವನು ತನ್ನ ತಂತ್ರಗಳಿಂದ ಸಮಾರ್ಯದ ಜನರೆಲ್ಲರನ್ನು ವಿಸ್ಮಯಗೊಳಿಸಿದ್ದನು. ಸಿಮೋನನು ತನ್ನನ್ನು ಮಹಾವ್ಯಕ್ತಿಯೆಂದು ಹೇಳಿಕೊಂಡು ಜಂಭಪಡುತ್ತಿದ್ದನು. 10 ಎಲ್ಲಾ ಜನರು ಅಂದರೆ ಕನಿಷ್ಠರಾದವರು ಮತ್ತು ಅತಿಮುಖ್ಯರಾದವರು ಸಿಮೋನನು ಹೇಳಿದ ಸಂಗತಿಗಳನ್ನು ನಂಬಿದ್ದರು. “ಈ ಮನುಷ್ಯನಲ್ಲಿ ‘ಮಹಾಶಕ್ತಿ’ ಎಂಬ ದೇವರ ಶಕ್ತಿಯಿದೆ!” ಎಂದು ಜನರು ಅವನ ಬಗ್ಗೆ ಹೇಳುತ್ತಿದ್ದರು. 11 ಸಿಮೋನನು ತನ್ನ ಮಂತ್ರತಂತ್ರಗಳಿಂದ ಜನರನ್ನು ಬಹುಕಾಲದಿಂದಲೂ ವಿಸ್ಮಯಗೊಳಿಸಿದ್ದರಿಂದ ಜನರು ಅವನ ಹಿಂಬಾಲಕರಾಗಿದ್ದರು. 12 ಆದರೆ ಫಿಲಿಪ್ಪನು ದೇವರ ರಾಜ್ಯದ ಬಗ್ಗೆ ಮತ್ತು ಯೇಸುಕ್ರಿಸ್ತನ ಶಕ್ತಿಯ ಬಗ್ಗೆ ಜನರಿಗೆ ಸುವಾರ್ತೆಯನ್ನು ಹೇಳಿದನು. ಗಂಡಸರು ಮತ್ತು ಹೆಂಗಸರು ಫಿಲಿಪ್ಪನು ಹೇಳಿದ್ದನ್ನು ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡರು. 13 ಸಿಮೋನನು ಸಹ ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡನು. ಸಿಮೋನನು ಫಿಲಿಪ್ಪನ ಸಮೀಪದಲ್ಲೇ ಇದ್ದನು. ಫಿಲಿಪ್ಪನು ಮಾಡಿದ ಅದ್ಭುತಕಾರ್ಯಗಳನ್ನು ಮತ್ತು ಸೂಚಕಕಾರ್ಯಗಳನ್ನು ಸಿಮೋನನು ನೋಡಿ ವಿಸ್ಮಿತನಾದನು.

14 ಅಪೊಸ್ತಲರು ಇನ್ನೂ ಜೆರುಸಲೇಮಿನಲ್ಲಿದ್ದರು. ಸಮಾರ್ಯದ ಜನರು ದೇವರ ವಾಕ್ಯವನ್ನು ಸ್ವೀಕರಿಸಿಕೊಂಡರೆಂಬುದು ಅವರಿಗೆ ತಿಳಿಯಿತು. ಆದ್ದರಿಂದ ಅಪೊಸ್ತಲರು ಪೇತ್ರ ಮತ್ತು ಯೋಹಾನರನ್ನು ಸಮಾರ್ಯದ ಜನರ ಬಳಿಗೆ ಕಳುಹಿಸಿದರು. 15 ಪೇತ್ರ ಮತ್ತು ಯೋಹಾನರು ಅಲ್ಲಿಗೆ ಬಂದು ಸಮಾರ್ಯದ ವಿಶ್ವಾಸಿಗಳಿಗೂ ಪವಿತ್ರಾತ್ಮನು ದೊರೆಯಬೇಕೆಂದು ಅವರಿಗಾಗಿ ಪ್ರಾರ್ಥಿಸಿದರು. 16 ಈ ಜನರು ಪ್ರಭುವಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರು. ಆದರೆ ಪವಿತ್ರಾತ್ಮನು ಅವರಲ್ಲಿ ಯಾರ ಮೇಲೆಯೂ ಇನ್ನೂ ಇಳಿದು ಬಂದಿರಲಿಲ್ಲ. ಈ ಕಾರಣದಿಂದಲೇ ಪೇತ್ರ ಮತ್ತು ಯೋಹಾನರು ಪ್ರಾರ್ಥಿಸಿದರು. 17 ಈ ಇಬ್ಬರು ಅಪೊಸ್ತಲರು ಅವರ ಮೇಲೆ ತಮ್ಮ ಕೈಗಳನ್ನಿಟ್ಟಾಗ ಅವರು ಪವಿತ್ರಾತ್ಮನನ್ನು ಹೊಂದಿಕೊಂಡರು.

18 ಅಪೊಸ್ತಲರು ಜನರ ಮೇಲೆ ತಮ್ಮ ಕೈಗಳನ್ನಿಟ್ಟಾಗ ಜನರಿಗೆ ಪವಿತ್ರಾತ್ಮನು ದೊರೆತ್ತಿದ್ದನ್ನು ಸಿಮೋನನು ಕಂಡನು. ಆದ್ದರಿಂದ ಸಿಮೋನನು ಅಪೊಸ್ತಲರಿಗೆ ಹಣವನ್ನು ನೀಡುತ್ತಾ, 19 “ನಾನು ಯಾರ ಮೇಲೆ ಕೈಯಿಟ್ಟರೂ ಅವರಿಗೆ ಪವಿತ್ರಾತ್ಮನು ದೊರೆಯುವಂಥ ಶಕ್ತಿಯನ್ನು ನನಗೆ ಕೊಡಿರಿ” ಎಂದು ಹೇಳಿದನು.

20 ಪೇತ್ರನು ಸಿಮೋನನಿಗೆ, “ನೀನೂ ನಾಶವಾಗು! ನಿನ್ನ ಹಣವೂ ನಾಶವಾಗಲಿ! ದೇವರ ವರವನ್ನು ಹಣದಿಂದ ಕೊಂಡುಕೊಳ್ಳಬಹುದೆಂದು ನೀನು ಭಾವಿಸಿದೆ. 21 ಈ ಕಾರ್ಯದಲ್ಲಿ ನೀನು ನಮ್ಮೊಂದಿಗೆ ಭಾಗಿಯಾಗಲು ಸಾಧ್ಯವಿಲ್ಲ. ನಿನ್ನ ಹೃದಯವು ದೇವರ ಮುಂದೆ ಸರಿಯಾಗಿಲ್ಲ. 22 ನಿನ್ನ ಹೃದಯವನ್ನು ಮಾರ್ಪಡಿಸಿಕೊ! ನೀನು ಮಾಡಿದ ಕೆಟ್ಟಕಾರ್ಯದಿಂದ ತಿರುಗಿಕೊ. ಪ್ರಭುವಿನಲ್ಲಿ ಪ್ರಾರ್ಥಿಸು. ನೀನು ಹೀಗೆ ಆಲೋಚಿಸಿದ್ದನ್ನು ಆತನು ಕ್ಷಮಿಸಬಹುದು. 23 ನೀನು ಅತೀವ ಅಸೂಯೆಯಿಂದ ತುಂಬಿದವನೂ ಪಾಪದ ಆಳ್ವಿಕೆಗೆ ಒಳಗಾದವನೂ ಆಗಿರುವೆ” ಎಂದು ಹೇಳಿದನು.

24 ಸಿಮೋನನು, “ನೀವಿಬ್ಬರೂ ನನಗೋಸ್ಕರ ಪ್ರಭುವಿನಲ್ಲಿ ಪ್ರಾರ್ಥಿಸಿ. ನೀವು ಹೇಳಿದ ಸಂಗತಿಗಳು ನನಗಾಗದಂತೆ ಪ್ರಾರ್ಥಿಸಿ!” ಎಂದು ಕೇಳಿಕೊಂಡನು.

25 ಬಳಿಕ ಆ ಇಬ್ಬರು ಅಪೊಸ್ತಲರು ತಾವು ಕಂಡ ಯೇಸುವಿನ ಕಾರ್ಯಗಳನ್ನು ಜನರಿಗೆ ತಿಳಿಸಿದರು. ಅಪೊಸ್ತಲರು ಜನರಿಗೆ ಪ್ರಭುವಿನ ಸಂದೇಶವನ್ನು ತಿಳಿಸಿದರು. ಆಮೇಲೆ ಅವರು ಜೆರುಸಲೇಮಿಗೆ ಹಿಂತಿರುಗಿದರು. ದಾರಿಯಲ್ಲಿ ಅವರು ಸಮಾರ್ಯದ ಅನೇಕ ಊರುಗಳಿಗೆ ಹೋಗಿ ಜನರಿಗೆ ಸುವಾರ್ತೆಯನ್ನು ತಿಳಿಸಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International