Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 118:1-2

118 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ.
    ಆತನು ಒಳ್ಳೆಯವನು.
    ಆತನ ಪ್ರೀತಿಯು ಶಾಶ್ವತವಾದದ್ದು!
ಇಸ್ರೇಲರೇ,
    “ಆತನ ಪ್ರೀತಿ ಶಾಶ್ವತವಾದದ್ದು” ಎಂದು ಹೇಳಿರಿ.

ಕೀರ್ತನೆಗಳು 118:14-24

14 ನನ್ನ ಬಲವೂ ಜಯಗೀತೆಯೂ ಯೆಹೋವನೇ.
    ಆತನೇ ನನ್ನನ್ನು ರಕ್ಷಿಸುವನು!
15 ಜಯೋತ್ಸವವು ನೀತಿವಂತರ ಮನೆಗಳಲ್ಲಿ ಕೇಳಿಬರುತ್ತಿದೆ.
    ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿಸಿದ್ದಾನೆ.
16 ಯೆಹೋವನ ಬಲಗೈ ಜಯಗಳಿಸಿದೆ.
    ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿದ್ದಾನೆ.

17 ನಾನು ಸಾಯುವುದಿಲ್ಲ;
    ನಾನು ಜೀವದಿಂದಿದ್ದು ಯೆಹೋವನ ಕಾರ್ಯಗಳ ಕುರಿತು ಹೇಳುತ್ತೇನೆ.
18 ಯೆಹೋವನು ನನ್ನನ್ನು ಶಿಕ್ಷಿಸಿದರೂ
    ಸಾವಿಗೀಡುಮಾಡಲಿಲ್ಲ.
19 ನೀತಿಯ ಬಾಗಿಲುಗಳೇ, ನನಗೋಸ್ಕರ ತೆರೆಯಿರಿ,
    ನಾನು ಒಳಗೆ ಬಂದು ಯೆಹೋವನನ್ನು ಆರಾಧಿಸುತ್ತೇನೆ.
20 ಅವು ಯೆಹೋವನ ಬಾಗಿಲುಗಳು.
    ನೀತಿವಂತರು ಮಾತ್ರ ಆ ಬಾಗಿಲುಗಳ ಮೂಲಕ ಹೋಗಬಲ್ಲರು.
21 ಯೆಹೋವನೇ, ನನ್ನ ಪ್ರಾರ್ಥನೆಗೆ ನೀನು ಉತ್ತರಿಸಿ
    ನನ್ನನ್ನು ರಕ್ಷಿಸಿದ್ದಕ್ಕೋಸ್ಕರ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.

22 ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು.
23 ಇದು ಯೆಹೋವನಿಂದಲೇ ಆಯಿತು.
    ನಮಗಂತೂ ಇದು ಆಶ್ಚರ್ಯಕರವಾಗಿದೆ!
24 ಈ ದಿನವನ್ನು ಮಾಡಿದಾತನು ಯೆಹೋವನೇ.
    ಇಂದೇ ನಾವು ಉಲ್ಲಾಸದಿಂದ ಆನಂದಿಸೋಣ.

ಪರಮ ಗೀತ 3

ಪ್ರಿಯತಮೆ

ರಾತ್ರಿಯಲ್ಲಿಯೂ ನನ್ನ ಪ್ರಾಣಪ್ರಿಯನಿಗಾಗಿ
    ಹಾಸಿಗೆಯ ಮೇಲೆ ಹುಡುಕಿದೆನು.
ಎಷ್ಟು ಹುಡುಕಿದರೂ
    ಅವನು ಸಿಕ್ಕಲಿಲ್ಲ.
ಈಗ ನಾನು ಎದ್ದು
    ನಗರದಲ್ಲೆಲ್ಲಾ ಸುತ್ತಾಡುವೆನು.
ನನ್ನ ಪ್ರಿಯನಿಗಾಗಿ
    ಬೀದಿಗಳಲ್ಲಿಯೂ ಚೌಕಗಳಲ್ಲಿಯೂ ಹುಡುಕುವೆನು.

ನಾನು ಅವನಿಗಾಗಿ ಹುಡುಕಿದೆ,
    ಆದರೆ ಅವನು ಸಿಕ್ಕಲಿಲ್ಲ.
ನಗರದಲ್ಲಿ ಗಸ್ತು ತಿರುಗುವ ಕಾವಲುಗಾರರನ್ನು ಕಂಡು,
    “ನನ್ನ ಪ್ರಿಯನನ್ನು ನೋಡಿದಿರಾ?” ಎಂದು ಕೇಳಿದೆನು.

ಅಲ್ಲಿಂದ ಸ್ವಲ್ಪದೂರ ಹೋದಾಗ,
    ನನ್ನ ಪ್ರಿಯನನ್ನು ಕಂಡು ಅಪ್ಪಿಕೊಂಡೆ.
ನನ್ನ ತಾಯಿಯ ಮನೆಗೆ,
    ಅಂದರೆ ನನ್ನನ್ನು ಹೆತ್ತವಳ ಕೋಣೆಗೆ ಸೇರುವತನಕ
    ಅವನನ್ನು ಬಿಡದೆ ಹಿಡಿದುಕೊಂಡೇ ಹೋದೆನು.

ಪ್ರಿಯತಮೆ ಸ್ತ್ರೀಯರಿಗೆ

ಜೆರುಸಲೇಮಿನ ಸ್ತ್ರೀಯರೇ,
    ತಕ್ಕಕಾಲಕ್ಕೆ ಮೊದಲೇ ಪ್ರೀತಿಯನ್ನು ಹುಟ್ಟಿಸಿ, ಬೆಳೆಯಿಸುವುದಿಲ್ಲವೆಂದು
ಜಿಂಕೆಗಳ ಮೇಲೆಯೂ ಕಾಡುಹುಲ್ಲೆಗಳ ಮೇಲೆಯೂ
    ನನಗೆ ಪ್ರಮಾಣಮಾಡಿರಿ.

ಜೆರುಸಲೇಮಿನ ಸ್ತ್ರೀಯರ ಮಾತುಗಳು

ಮಹಾ ಜನಸಮೂಹದೊಡನೆ
    ಅಡವಿಯಿಂದ ಬರುತ್ತಿರುವ ಈ ಸ್ತ್ರೀ ಯಾರು?
ಗೋಲರಸ, ಧೂಪ, ವರ್ತಕರ ಸಕಲ ಸುಗಂಧ ದ್ರವ್ಯಗಳನ್ನು ಸುಡುವಾಗ
    ಮೇಲೇರುವ ಹೊಗೆಯಂತೆ ಧೂಳು ಮೇಲೇರುತ್ತಿದೆ.

ನೋಡಿ, ಅದು ಸೊಲೊಮೋನನ ಪಲ್ಲಕ್ಕಿ.
    ಅದರ ಸುತ್ತಲೂ ಅರವತ್ತು ಮಂದಿ ಸೈನಿಕರಿದ್ದಾರೆ.
    ಅವರು ಇಸ್ರೇಲಿನ ಸೈನಿಕರು!
ಯುದ್ಧವೀರರಾದ ಅವರು ಕೈಯಲ್ಲಿ ಕತ್ತಿ ಹಿಡಿದಿದ್ದಾರೆ;
    ರಾತ್ರಿಯ ಅಪಾಯದ ನಿಮಿತ್ತ
    ಅವರು ಸೊಂಟಕ್ಕೆ ಕತ್ತಿ ಕಟ್ಟಿಕೊಂಡಿದ್ದಾರೆ.

ರಾಜನಾದ ಸೊಲೊಮೋನನು ತನಗೋಸ್ಕರ ಪಲ್ಲಕ್ಕಿಯನ್ನು
    ಲೆಬನೋನಿನ ದೇವದಾರು ಮರದಿಂದ ಮಾಡಿಸಿದ್ದಾನೆ.
10 ಅದರ ಕಂಬಗಳನ್ನು ಬೆಳ್ಳಿಯಿಂದಲೂ
    ಅದರ ಅಡ್ಡಕಂಬಗಳನ್ನು ಚಿನ್ನದಿಂದಲೂ ಮಾಡಲಾಗಿದೆ.
ಅದರ ಆಸನವನ್ನು ನೇರಳೆ ಬಣ್ಣದ ಬಟ್ಟೆಯಿಂದ ಹೊದಿಸಲಾಗಿದೆ.
    ಆ ಬಟ್ಟೆಯನ್ನು ಜೆರುಸಲೇಮಿನ ಸ್ತ್ರೀಯರು ಕಸೂತಿ ಕೆಲಸದಿಂದ ಅಲಂಕರಿಸಿದ್ದಾರೆ.

11 ಚೀಯೋನಿನ ಸ್ತ್ರೀಯರೇ,
    ಹೊರಗೆ ಹೋಗಿ ರಾಜನಾದ ಸೊಲೊಮೋನನನ್ನು ನೋಡಿರಿ.
ಅವನ ಮದುವೆಯ ದಿನದಲ್ಲಿ
    ಹೃದಯವು ಹರ್ಷಗೊಂಡಿದ್ದಾಗ
    ಅವನ ತಾಯಿ ತಲೆಗಿಟ್ಟ ಕಿರೀಟವನ್ನು ಧರಿಸಿಕೊಂಡಿದ್ದಾನೆ.

ಮಾರ್ಕ 16:1-8

ಯೇಸುವಿನ ಪುನರುತ್ಥಾನ

(ಮತ್ತಾಯ 28:1-8; ಲೂಕ 24:1-12; ಯೋಹಾನ 20:1-10)

16 ಸಬ್ಬತ್ ದಿನದ ಮರುದಿನ, ಮಗ್ದಲದ ಮರಿಯಳು, ಸಲೋಮೆ ಮತ್ತು ಯಾಕೋಬನ ತಾಯಿಯಾದ ಮರಿಯಳು ಕೆಲವು ಸುಗಂಧದ್ರವ್ಯಗಳನ್ನು ಯೇಸುವಿನ ದೇಹಕ್ಕೆ ಹಚ್ಚಬೇಕೆಂದಿದ್ದರು. ವಾರದ ಮೊದಲನೆಯ ದಿನ, ಮುಂಜಾನೆಯಲ್ಲಿಯೇ, ಅವರು ಸಮಾಧಿಗೆ ಹೊರಟರು. ಆಗ ಸೂರ್ಯೋದಯವಾಗಿದ್ದರೂ ಇನ್ನೂ ನಸುಕಾಗಿತ್ತು. ಆ ಸ್ತ್ರೀಯರು ಒಬ್ಬರಿಗೊಬ್ಬರು, “ದೊಡ್ಡ ಬಂಡೆಯಿಂದ ಸಮಾಧಿಯ ಬಾಗಿಲನ್ನು ಮುಚ್ಚಲಾಗಿದೆ. ಈ ಬಂಡೆಯನ್ನು ನಮಗಾಗಿ ಯಾರು ಉರುಳಿಸುತ್ತಾರೆ?” ಎಂದುಕೊಂಡರು.

ಆ ಸ್ತ್ರೀಯರು ಸಮಾಧಿಯನ್ನು ತಲುಪಿದಾಗ ಆ ಬಂಡೆ ಉರುಳಿರುವುದನ್ನು ಕಂಡರು. ಆ ಬಂಡೆಯು ಬಹಳ ದೊಡ್ಡದಾಗಿತ್ತು ಆದರೆ ಅದನ್ನು ಬಾಗಿಲಿನಿಂದ ದೂರಕ್ಕೆ ಉರುಳಿಸಲಾಗಿತ್ತು. ಆ ಸ್ತ್ರೀಯರು ಸಮಾಧಿಯೊಳಗೆ ಹೋದಾಗ ಬಿಳುಪಾದ ನಿಲುವಂಗಿ ಧರಿಸಿದ್ದ ಒಬ್ಬ ಯುವಕನು ಸಮಾಧಿಯ ಬಲಗಡೆ ಕುಳಿತಿರುವುದನ್ನು ಕಂಡು ಭಯಗೊಂಡರು.

ಆದರೆ ಅವನು, “ಭಯಪಡಬೇಡಿ! ಶಿಲುಬೆಗೇರಿಸಲ್ಪಟ್ಟ ನಜರೇತಿನ ಯೇಸುವನ್ನು ನೀವು ಹುಡುಕುತ್ತಿದ್ದೀರಲ್ಲವೇ? ಆತನು ಜೀವಂತನಾಗಿ ಎದ್ದಿದ್ದಾನೆ. ಆತನು ಇಲ್ಲಿಲ್ಲ. ನೋಡಿರಿ, ಆತನ ದೇಹವನ್ನು ಇಟ್ಟಿದ್ದ ಸ್ಥಳ ಇದೇ. ಈಗ ಹೋಗಿ ಆತನ ಶಿಷ್ಯರಿಗೆ ತಿಳಿಸಿರಿ. ಪೇತ್ರನಿಗಂತೂ ಖಂಡಿತವಾಗಿ ತಿಳಿಸಿರಿ. ನೀವು ಅವರಿಗೆ, ‘ಯೇಸು ಗಲಿಲಾಯಕ್ಕೆ ಹೋಗುತ್ತಿದ್ದಾನೆ. ಆತನು ನಿಮಗಿಂತ ಮುಂಚೆ ಅಲ್ಲಿರುತ್ತಾನೆ. ಆತನು ನಿಮಗೆ ಮೊದಲೇ ಹೇಳಿದಂತೆ ನೀವು ಆತನನ್ನು ಅಲ್ಲಿ ನೋಡುವಿರಿ’ ಎಂದು ಹೇಳಿರಿ” ಎಂದನು.

ಆ ಸ್ತ್ರೀಯರು ಬಹಳ ಭಯದಿಂದ ಗಲಿಬಿಲಿಗೊಂಡು, ಸಮಾಧಿಯನ್ನು ಬಿಟ್ಟು ಓಡಿಹೋದರು. ಅವರು ಬಹಳ ಭಯಗೊಂಡಿದ್ದರಿಂದ ಈ ವಿಷಯವನ್ನು ಯಾರಿಗೂ ಹೇಳಲಿಲ್ಲ.[a]

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International