Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 22:25-31

25 ಯೆಹೋವನೇ, ನಿನ್ನ ಕಾರ್ಯಗಳಿಗಾಗಿ ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು;
    ನನ್ನ ಹರಕೆಗಳನ್ನು ನಿನ್ನ ಭಕ್ತರ ಮುಂದೆ ಸಲ್ಲಿಸುವೆನು.
26 ಬಡವರು ತಿಂದು ತೃಪ್ತರಾಗುವರು.
    ಯೆಹೋವನಿಗಾಗಿ ಹುಡುಕುತ್ತಾ ಬಂದವರೇ, ಆತನಿಗೆ ಸ್ತೋತ್ರಮಾಡಿರಿ!
    ನಿಮ್ಮ ಹೃದಯವು ಯಾವಾಗಲೂ ಸಂತೋಷವಾಗಿರಲಿ.[a]
27 ದೂರದೇಶಗಳಲ್ಲಿರುವ ಜನರೆಲ್ಲರೂ ಯೆಹೋವನನ್ನು ಜ್ಞಾಪಿಸಿಕೊಂಡು ಆತನ ಬಳಿಗೆ ಹಿಂತಿರುಗಲಿ.
    ವಿದೇಶಗಳಿಲ್ಲಿರುವ ಜನರೆಲ್ಲರೂ ಆತನನ್ನು ಆರಾಧಿಸಲಿ.
28 ಯಾಕೆಂದರೆ ಯೆಹೋವನೇ ರಾಜನು!
    ಆತನು ಜನಾಂಗಗಳನ್ನೆಲ್ಲಾ ಆಳುವನು.
29 ಬಲಿಷ್ಠರೂ ದೃಢಕಾಯರೂ ತಿಂದು ದೇವರಮುಂದೆ ಅಡ್ಡಬೀಳುವರು.
    ಸಾಯುವವರೂ ಸತ್ತುಹೋಗಿರುವವರೂ ಆತನ ಮುಂದೆ ಅಡ್ಡಬೀಳುವರು.
30 ಮುಂದಿನ ಕಾಲದಲ್ಲಿ ನಮ್ಮ ಸಂತತಿಗಳವರು ಯೆಹೋವನ ಸೇವೆಮಾಡುವರು.
    ಆತನ ಕುರಿತಾಗಿ ಯಾವಾಗಲೂ ಹೇಳುತ್ತಿರುವರು.
31 ಪ್ರತಿಯೊಂದು ತಲೆಮಾರಿನವರೂ ತಮ್ಮ ಮಕ್ಕಳಿಗೆ
    ಆತನ ಒಳ್ಳೆಯ ಕಾರ್ಯಗಳ ಬಗ್ಗೆ ಹೇಳುವರು.[b]

ಆಮೋಸ 8:1-7

ಮಾಗಿದ ಹಣ್ಣಿನ ದರ್ಶನ

ಯೆಹೋವನು ನನಗೆ ಇದನ್ನು ತೋರಿಸಿದನು: ನಾನು ಒಂದು ಪುಟ್ಟಿ ಬೇಸಿಗೆಯ ಹಣ್ಣುಗಳನ್ನು ಕಂಡೆನು. ಯೆಹೋವನು ನನಗೆ, “ಆಮೋಸನೇ, ನೀನು ಏನನ್ನು ನೋಡುತ್ತೀ?” ಎಂದು ಕೇಳಿದನು.

ಅದಕ್ಕೆ ನಾನು, “ಒಂದು ಪುಟ್ಟಿ ಬೇಸಿಗೆಯ ಹಣ್ಣುಗಳು” ಎಂದು ಹೇಳಿದೆನು.

ಆಗ ಯೆಹೋವನು ನನಗೆ, “ನನ್ನ ಜನರಾದ ಇಸ್ರೇಲರಿಗೆ ಅಂತ್ಯಕಾಲವು ಬಂದಿದೆ. ಇನ್ನು ಮೇಲೆ ನಾನು ಅವರನ್ನು ಸುಮ್ಮನೆ ಬಿಡುವುದಿಲ್ಲ. ನನ್ನ ಆಲಯದಲ್ಲಿ ಹಾಡುವ ಹಾಡುಗಳು ಮರಣದ ಶೋಕಗೀತೆಗಳಾಗುವವು. ಇವು ಕರ್ತನಾದ ಯೆಹೋವನ ನುಡಿಗಳು. ಸತ್ತಹೆಣಗಳು ಎಲ್ಲೆಲ್ಲಿಯೂ ಬಿದ್ದುಕೊಂಡಿರುವವು. ಜನರು ಮೌನದಿಂದಿದ್ದು ಸತ್ತವರನ್ನು ಎತ್ತಿ ರಾಶಿಗೆ ಬಿಸಾಡುವರು.”

ಇಸ್ರೇಲಿನ ವರ್ತಕರಿಗೆ ಹಣ ಸಂಪಾದಿಸುವದೇ ಗುರಿ

ನನ್ನ ಮಾತುಗಳನ್ನು ಕೇಳಿರಿ! ಜನರೇ, ನೀವು ಬಡವರ ಮೇಲೆ ನಡೆದಾಡುತ್ತೀರಿ.
    ಈ ದೇಶದ ಬಡಜನರನ್ನು ನಾಶಮಾಡುತ್ತೀರಿ.
ವರ್ತಕರಾದ ನೀವು ಹೇಳುವುದೇನೆಂದರೆ,
    “ಅಮಾವಾಸ್ಯೆ ಯಾವಾಗ ಮುಗಿಯುವುದು?
    ಆಗ ನಾವು ಧಾನ್ಯವನ್ನು ಮಾರಾಟ ಮಾಡುವೆವು.
ಸಬ್ಬತ್ ಯಾವಾಗ ಮುಗಿಯುವುದು?
    ಆಗ ನಾವು ನಮ್ಮ ಗೋದಿಯನ್ನು ಮಾರಾಟ ಮಾಡಲು ತರುವೆವು.
ಅದರ ಬೆಲೆಯನ್ನು ಅಧಿಕಗೊಳಿಸಿ
    ಅಳತೆಯನ್ನು ಕಡಿಮೆ ಮಾಡುವೆವು.
ತ್ರಾಸನ್ನು ಕಡಿಮೆ ಮಾಡಿ
    ಜನರಿಗೆ ಮೋಸ ಮಾಡುವೆವು.
ಬಡಜನರಿಗೆ ಸಾಲ ಸಂದಾಯ ಮಾಡಲು ಸಾಧ್ಯವಾಗದಿರುವದರಿಂದ
    ಅವರನ್ನು ನಾವು ಗುಲಾಮರನ್ನಾಗಿ ತೆಗೆದುಕೊಳ್ಳೋಣ.
ಒಂದು ಜೊತೆ ಚಪ್ಪಲಿಯ ಕ್ರಯಕೊಟ್ಟು
    ಅವರನ್ನು ಖರೀದಿಸೋಣ.
ಮತ್ತು ನೆಲದಲ್ಲಿ ಬಿದ್ದ ಗೋದಿಯನ್ನು
    ಒಟ್ಟುಗೂಡಿಸಿ ಮಾರೋಣ.”

ಯೆಹೋವನು “ಯಾಕೋಬನ ಮಹಿಮೆ” ಎಂಬ ತನ್ನ ಹೆಸರಿನ ಮೇಲೆ ಆಣೆಯಿಟ್ಟು ವಾಗ್ದಾನ ಮಾಡಿದ್ದಾನೆ.

“ಆ ಜನರು ಮಾಡಿದ ಕೃತ್ಯಗಳನ್ನು ನಾನು ಎಂದಿಗೂ ಮರೆಯುವುದಿಲ್ಲ.

ಅಪೊಸ್ತಲರ ಕಾರ್ಯಗಳು 8:1-8

1-3 ಸ್ತೆಫನನ ಕೊಲೆಗೆ ಸೌಲನ ಸಮ್ಮತಿಯಿತ್ತು. ಕೆಲವು ಭಕ್ತರು ಸ್ತೆಫನನನ್ನು ಸಮಾಧಿ ಮಾಡಿದರು. ಅವರು ಅವನಿಗೋಸ್ಕರ ಬಹಳವಾಗಿ ಗೋಳಾಡಿದರು.

ವಿಶ್ವಾಸಿಗಳಿಗೆ ಹಿಂಸೆ

ಜೆರುಸಲೇಮಿನಲ್ಲಿದ್ದ ವಿಶ್ವಾಸಿಗಳ ಸಮುದಾಯವನ್ನು ಹಿಂಸಿಸಲು ಯೆಹೂದ್ಯರು ಅಂದೇ ಆರಂಭಿಸಿ ಅವರನ್ನು ಬಹಳವಾಗಿ ಸಂಕಟಪಡಿಸಿದರು. ಆ ಸಭೆಯನ್ನು ನಾಶಮಾಡಲು ಸೌಲನು ಮನೆಗಳಿಗೆ ನುಗ್ಗಿ ಗಂಡಸರನ್ನೂ ಹೆಂಗಸರನ್ನೂ ಎಳೆದೊಯ್ದು ಸೆರೆಮನೆಗೆ ಹಾಕಿದನು. ವಿಶ್ವಾಸಿಗಳೆಲ್ಲಾ ಜೆರುಸಲೇಮನ್ನು ಬಿಟ್ಟುಹೋದರು. ಅಪೊಸ್ತಲರು ಮಾತ್ರ ಅಲ್ಲೇ ಇದ್ದರು. ವಿಶ್ವಾಸಿಗಳು ಜುದೇಯ ಮತ್ತು ಸಮಾರ್ಯದ ಬೇರೆಬೇರೆ ಸ್ಥಳಗಳಿಗೆ ಹೊರಟುಹೋದರು. ವಿಶ್ವಾಸಿಗಳು ಎಲ್ಲೆಲ್ಲಿಯೂ ಚದರಿಹೋದರು. ವಿಶ್ವಾಸಿಗಳು ತಾವು ಹೋದ ಪ್ರತಿಯೊಂದು ಸ್ಥಳದಲ್ಲಿಯೂ ಜನರಿಗೆ ಸುವಾರ್ತೆಯನ್ನು ತಿಳಿಸಿದರು.

ಸಮಾರ್ಯದಲ್ಲಿ ಫಿಲಿಪ್ಪನ ಉಪದೇಶ

ಫಿಲಿಪ್ಪನು ಸಮಾರ್ಯ ಪಟ್ಟಣಕ್ಕೆ ಹೋಗಿ ಕ್ರಿಸ್ತನ ಬಗ್ಗೆ ಉಪದೇಶಿಸಿದನು. ಫಿಲಿಪ್ಪನು ಹೇಳುವುದನ್ನು ಅಲ್ಲಿನ ಜನರು ಕೇಳಿದರು. ಅವನು ಮಾಡುತ್ತಿದ್ದ ಅದ್ಭುತಕಾರ್ಯಗಳನ್ನು ನೋಡಿದರು. ಅವನು ಹೇಳಿದ ಸಂಗತಿಗಳನ್ನು ಗಮನವಿಟ್ಟು ಕೇಳಿದರು. ಈ ಜನರಲ್ಲಿ ಅನೇಕರು ದೆವ್ವಗಳಿಂದ ಪೀಡಿತರಾಗಿದ್ದರು. ಫಿಲಿಪ್ಪನು ಆ ದೆವ್ವಗಳನ್ನು ಅವರೊಳಗಿಂದ ಹೊರಡಿಸಿದಾಗ ಅವು ಅಬ್ಬರಿಸುತ್ತಾ ಹೊರಬಂದವು. ಅಲ್ಲಿದ್ದ ಅನೇಕ ಬಲಹೀನರನ್ನು, ಕುಂಟರನ್ನು ಸಹ ಫಿಲಿಪ್ಪನು ಗುಣಪಡಿಸಿದನು. ಇದರಿಂದಾಗಿ ಆ ಪಟ್ಟಣದಲ್ಲಿದ್ದ ಜನರು ಬಹು ಸಂತೋಷಗೊಂಡರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International