Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 35:1-10

ರಚನೆಗಾರ: ದಾವೀದ.

35 ಯೆಹೋವನೇ, ನನ್ನ ವ್ಯಾಜ್ಯಗಳಲ್ಲಿ ವಾದಿಸು!
    ನನ್ನ ಯುದ್ಧಗಳಲ್ಲಿ ಹೋರಾಡು!
ಯೆಹೋವನೇ, ಗುರಾಣಿಗಳನ್ನು ಹಿಡಿದುಕೊಂಡು
    ನನಗೆ ಸಹಾಯಕನಾಗಿ ನಿಲ್ಲು.
ಈಟಿಯನ್ನೂ ಭಲ್ಲೆಯನ್ನೂ[a] ತೆಗೆದುಕೊ.
    ನನ್ನನ್ನು ಬೆನ್ನಟ್ಟಿಕೊಂಡು ಬರುತ್ತಿರುವ ವೈರಿಗಳೊಡನೆ ಹೋರಾಡು.
“ನಾನು ನಿನ್ನನ್ನು ರಕ್ಷಿಸುತ್ತೇನೆ” ಎಂಬ ಅಭಯವಚನ ನೀಡು.

ನನ್ನನ್ನು ಕೊಲ್ಲಬೇಕೆಂದಿರುವವರು ನಿರಾಶೆಗೊಂಡು ನಾಚಿಕೆಗೀಡಾಗಲಿ.
    ನನಗೆ ಕೇಡುಮಾಡಬೇಕೆಂದಿರುವವರು ಅವಮಾನಗೊಂಡು ಓಡಿಹೋಗಲಿ.
ಅವರು ಗಾಳಿಬಡಿದುಕೊಂಡು ಹೋಗುವ ಹೊಟ್ಟಿನಂತಾಗಲಿ;
    ಯೆಹೋವನ ದೂತನು ಅವರನ್ನು ಹಿಂದಟ್ಟಲಿ.
ಯೆಹೋವನೇ, ಅವರ ರಸ್ತೆಯು ಕತ್ತಲಾಗಿರಲಿ; ಜಾರುತ್ತಿರಲಿ.
    ಯೆಹೋವನ ದೂತನು ಅವರನ್ನು ಹಿಂದಟ್ಟಲಿ.
ನಾನು ನಿರಪರಾಧಿಯಾಗಿದ್ದರೂ ಅವರು ನನಗೆ ಬಲೆಯೊಡ್ಡಿದ್ದಾರೆ.
    ನಿಷ್ಕಾರಣವಾಗಿ ಅವರು ನನಗೆ ಬಲೆಯೊಡ್ಡಿದ್ದಾರೆ.
ಅವರು ತಮ್ಮ ಬಲೆಗಳಿಗೆ ತಾವೇ ಸಿಕ್ಕಿಕೊಳ್ಳಲಿ;
    ತಾವು ತೋಡಿದ ಗುಂಡಿಯೊಳಗೆ ತಾವೇ ಮುಗ್ಗರಿಸಿ ಬೀಳಲಿ.
    ಇದ್ದಕ್ಕಿದಂತೆ ಅಪಾಯವು ಅವರನ್ನು ಹಿಡಿದುಕೊಳ್ಳಲಿ.
ಆಗ ನಾನು ಯೆಹೋವನಲ್ಲಿ ಹರ್ಷಿಸುವೆನು.
    ಆತನು ನನ್ನನ್ನು ರಕ್ಷಿಸಿದ್ದರಿಂದ ಸಂತೋಷಪಡುವೆನು.
10 ಯೆಹೋವನೇ, ಹೃದಯಪೂರ್ವಕವಾಗಿ ಹೇಳುವೆ,
    “ನಿನಗೆ ಸಮಾನರು ಇಲ್ಲವೇ ಇಲ್ಲ.
ಬಡವರನ್ನು ಬಲಿಷ್ಠರಿಂದ ತಪ್ಪಿಸಿ ರಕ್ಷಿಸುವಾತನು ನೀನೇ.
    ಬಲಿಷ್ಠರನ್ನು ಸೂರೆಮಾಡಿ ಬಡವರಿಗೂ ಅಸಹಾಯಕರಿಗೂ ಕೊಡುವಾತನು ನೀನೇ.”

ಅರಣ್ಯಕಾಂಡ 22:1-21

ಬಿಳಾಮನು ಮತ್ತು ಮೋವಾಬ್ಯರ ಅರಸನು

22 ಬಳಿಕ ಇಸ್ರೇಲರು ಹೊರಟು ಜೆರಿಕೊ ಪಟ್ಟಣದ ಎದುರಾಗಿದ್ದ ಯೊರ್ದನ್ ನದಿಯ ಆಚೆ ಕಡೆಯಲ್ಲಿರುವ ಮೋವಾಬ್ಯರ ಬಯಲುಗಳಲ್ಲಿ ಪಾಳೆಯ ಮಾಡಿಕೊಂಡರು.

ಚಿಪ್ಪೋರನ ಮಗನಾದ ಬಾಲಾಕನು ಮೋವಾಬ್ಯರ ಅರಸನಾಗಿದ್ದನು. ಇಸ್ರೇಲರು ಅಮೋರಿಯರಿಗೆ ಮಾಡಿದ್ದೆಲ್ಲವನ್ನು ಅವನು ಕಂಡಿದ್ದನು. ಮೋವಾಬ್ಯರು ನಿಜವಾಗಿಯೂ ಬಹಳ ಭಯಗೊಂಡಿದ್ದರು. ಯಾಕೆಂದರೆ ಇಸ್ರೇಲರು ಬಹುಸಂಖ್ಯಾತರಾಗಿದ್ದರು.

ಮೋವಾಬ್ಯರು ಮಿದ್ಯಾನ್ಯರ ಹಿರಿಯರಿಗೆ, “ಈ ಜನಸಮೂಹವು ನಮ್ಮನ್ನೂ ನಮ್ಮ ಸುತ್ತಲಿರುವ ಎಲ್ಲವನ್ನೂ ಹೋರಿಯಂತೆ ನಾಶಮಾಡುವುದು” ಎಂದು ಹೇಳಿದರು.

ಮೋವಾಬ್ಯರ ಅರಸನೂ ಚಿಪ್ಪೋರನ ಮಗನೂ ಆದ ಬಾಲಾಕನು, ಬೆಯೋರನ ಮಗನಾದ ಬಿಳಾಮನನ್ನು ಕರೆಸುವುದಕ್ಕೆ ಕೆಲವು ಸಂದೇಶಕರನ್ನು ಕಳುಹಿಸಿದನು. ಬಿಳಾಮನು ಯೂಫ್ರೆಟೀಸ್ ನದಿಯ ಬಳಿ “ಪೆತೋರ್” ಎಂಬ ಸ್ಥಳದಲ್ಲಿದ್ದನು. ಬಿಳಾಮನ ಜನರು ಇಲ್ಲಿ ವಾಸಿಸುತ್ತಿದ್ದರು. ಬಾಲಾಕನು ತನ್ನ ಸಂದೇಶಕರನ್ನು ಕಳುಹಿಸಿ ಬಿಳಾಮನಿಗೆ,

“ಒಂದು ಜನಾಂಗವು ಈಜಿಪ್ಟಿನಿಂದ ಬಂದಿದೆ. ಅವರು ದೇಶವನ್ನೆಲ್ಲಾ ಮುಚ್ಚಿಕೊಂಡು ನನ್ನ ಪಕ್ಕದಲ್ಲಿ ನೆಲೆಸಿದ್ದಾರೆ. ಅವರು ನಮಗಿಂತ ಬಲಿಷ್ಠರು. ಆದ್ದರಿಂದ ನೀನು ದಯಮಾಡಿ ಬಂದು ನನಗೋಸ್ಕರ ಈ ಜನಕ್ಕೆ ಶಾಪಕೊಡಬೇಕು, ಯಾಕೆಂದರೆ ಅವರು ನನಗಿಂತ ಬಲಿಷ್ಠರಾಗಿದ್ದಾರೆ. ನೀನು ಶಪಿಸಿದರೆ ಆಗ ನಾನು ಅವರನ್ನು ಸೋಲಿಸಿ ಈ ದೇಶದಿಂದ ಓಡಿಸಲು ನನಗೆ ಸಾಧ್ಯವಾಗುವುದು. ನೀನು ಯಾವನನ್ನು ಆಶೀರ್ವದಿಸುವಿಯೋ ಅವನು ಯಶಸ್ವಿಯಾಗುವನೆಂದೂ ನೀನು ಯಾವನನ್ನು ಶಪಿಸುವೆಯೋ ಅವನಿಗೆ ಸೋಲಾಗುವುದೆಂದೂ ನನಗೆ ಗೊತ್ತಿದೆ” ಎಂದು ಹೇಳಿದನು.

ಮೋವಾಬ್ಯರ ಹಿರಿಯರು ಮತ್ತು ಮಿದ್ಯಾನ್ಯರ ಹಿರಿಯರು ಬಿಳಾಮನ ಸೇವೆಗೋಸ್ಕರ ಹಣ ಕೊಡಲು ಹಣವನ್ನು ತೆಗೆದುಕೊಂಡು ಹೊರಟು ಅವನ ಬಳಿಗೆ ಬಂದು ಬಾಲಾಕನ ಮಾತುಗಳನ್ನು ತಿಳಿಸಿದರು.

ಬಿಳಾಮನು, “ಈ ರಾತ್ರಿ ನೀವು ಇಲ್ಲೇ ಇಳಿದುಕೊಳ್ಳಿರಿ. ಯೆಹೋವನು ನನಗೆ ಹೇಳುವ ಮಾತನ್ನು ಬೆಳಿಗ್ಗೆ ನಿಮಗೆ ತಿಳಿಸುವೆನು” ಎಂದು ಹೇಳಿದನು. ಆದ್ದರಿಂದ ಮೋವಾಬ್ಯರ ಹಿರಿಯರು ಆ ರಾತ್ರಿ ಬಿಳಾಮನ ಮನೆಯಲ್ಲಿ ಇಳಿದುಕೊಂಡರು.

ದೇವರು ಬಿಳಾಮನ ಬಳಿಗೆ ಬಂದು, “ನಿನ್ನ ಬಳಿಯಲ್ಲಿರುವ ಈ ಮನುಷ್ಯರು ಯಾರು?” ಎಂದು ಕೇಳಿದನು.

10 ಬಿಳಾಮನು ದೇವರಿಗೆ, “ಮೋವಾಬ್ಯರ ಅರಸನು ಅಂದರೆ ಚಿಪ್ಪೋರನ ಮಗನಾದ ಬಾಲಾಕನು ನನ್ನ ಬಳಿಗೆ ದೂತರನ್ನು ಕಳುಹಿಸಿ, 11 ಒಂದು ಜನಾಂಗವು ಈಜಿಪ್ಟಿನಿಂದ ಹೊರಟು ಬಂದಿದೆ ಮತ್ತು ಅವರು ದೇಶವನ್ನೆಲ್ಲಾ ಮುಚ್ಚಿಕೊಂಡಿದ್ದಾರೆ. ಈಗ ನೀನು ಬಂದು ನನಗೋಸ್ಕರ ಅವರನ್ನು ಶಪಿಸು. ನೀನು ಶಪಿಸಿದರೆ, ನಾನು ಅವರನ್ನು ಸೋಲಿಸಲು ಮತ್ತು ಓಡಿಸಲು ಸಾಧ್ಯವಾಗುತ್ತದೆ ಎಂಬುದಾಗಿ ಹೇಳಿ ಕಳುಹಿಸಿದ್ದಾನೆ” ಎಂದು ಉತ್ತರಕೊಟ್ಟನು.

12 ಅದಕ್ಕೆ ದೇವರು ಬಿಳಾಮನಿಗೆ, “ನೀನು ಅವರ ಜೊತೆಯಲ್ಲಿ ಹೋಗಬಾರದು, ಆ ಜನರಿಗೆ ಶಾಪಕೊಡಬಾರದು. ನಾನು ಅವರನ್ನು ಆಶೀರ್ವದಿಸಿದ್ದೇನೆ” ಎಂದು ಹೇಳಿದನು.

13 ಮರುದಿನ ಬೆಳಿಗ್ಗೆ ಬಿಳಾಮನು ಎದ್ದು ಬಾಲಾಕನ ಹಿರಿಯರಿಗೆ, “ನಿಮ್ಮ ಸ್ವಂತ ದೇಶಕ್ಕೆ ಹಿಂದಕ್ಕೆ ಹೋಗಿರಿ. ನಿಮ್ಮ ಸಂಗಡ ಬರಲು ಯೆಹೋವನು ನನಗೆ ಅಪ್ಪಣೆ ಕೊಡುತ್ತಿಲ್ಲ” ಎಂದು ಹೇಳಿದನು.

14 ಮೋವಾಬ್ಯರ ನಾಯಕರು ಬಾಲಾಕನ ಬಳಿಗೆ ಹಿಂತಿರುಗಿ, “ಬಿಳಾಮನು ನಮ್ಮೊಡನೆ ಬರಲು ಒಪ್ಪುತ್ತಿಲ್ಲ” ಎಂದು ತಿಳಿಸಿದರು.

15 ಆದ್ದರಿಂದ ಬಾಲಾಕನು ಅವರಿಗಿಂತಲೂ ಶ್ರೇಷ್ಠರಾದ ಅನೇಕ ನಾಯಕರನ್ನು ಕಳುಹಿಸಿದನು. 16 ಇವರು ಬಿಳಾಮನ ಬಳಿಗೆ ಬಂದು ಅವನಿಗೆ, “ಚಿಪ್ಪೋರನ ಮಗನಾದ ಬಾಲಾಕನು ಹೀಗೆನ್ನುತ್ತಾನೆ: ನೀನು ನನ್ನ ಬಳಿಗೆ ಬರಲು ಅಡ್ಡಿಮಾಡುವ ಯಾವುದಕ್ಕೂ ಅವಕಾಶ ಕೊಡಬೇಡ. 17 ನಾನು ಹೇಳುವುದನ್ನು ನೀನು ಮಾಡಿದರೆ, ನಾನು ನಿನಗೆ ಹಣವನ್ನು ಮತ್ತು ಗೌರವವನ್ನು ಬಹಳವಾಗಿ ಕೊಡುವೆನು ಮತ್ತು ನೀನು ಹೇಳಿದ್ದೆಲ್ಲವನ್ನು ಮಾಡುವೆನು. ಬಂದು, ನನಗಾಗಿ ಈ ಜನರನ್ನು ಶಪಿಸು” ಎಂದು ಹೇಳಿಸಿದನು.

18 ಬಿಳಾಮನು ಬಾಲಾಕನ ಅಧಿಕಾರಿಗಳಿಗೆ, “ಬಾಲಾಕನು ನನಗೆ ಬೆಳ್ಳಿಬಂಗಾರಗಳಿಂದ ತುಂಬಿದ ತನ್ನ ಅರಮನೆಯನ್ನು ಕೊಟ್ಟರೂ ನನ್ನ ದೇವರಾದ ಯೆಹೋವನ ಆಜ್ಞೆಗೆ ವಿರೋಧವಾಗಿ ನಾನೇನೂ ಮಾಡಲು ಸಾಧ್ಯವಿಲ್ಲ. ಯೆಹೋವನು ಅಪ್ಪಣೆ ಕೊಡದ ಹೊರತು ನಾನು ಚಿಕ್ಕಕಾರ್ಯವನ್ನಾಗಲಿ ದೊಡ್ಡಕಾರ್ಯವನ್ನಾಗಲಿ ಮಾಡಲಾರೆ. 19 ಆದ್ದರಿಂದ ನೀವೂ ಸಹ ಇತರ ಹಿರಿಯರಂತೆ ಈ ರಾತ್ರಿ ಇಲ್ಲೇ ಇರಬೇಕು. ಯೆಹೋವನು ನನಗೆ ಇನ್ನೂ ಹೇಳಬೇಕಾದದ್ದನ್ನು ಈ ರಾತ್ರಿ ತಿಳಿದುಕೊಳ್ಳುವೆನು” ಎಂದು ಹೇಳಿದನು.

20 ಆ ರಾತ್ರಿ ದೇವರು ಬಿಳಾಮನ ಬಳಿಗೆ ಬಂದು, “ಈ ಜನರು ನಿನ್ನನ್ನು ತಮ್ಮೊಡನೆ ಬರಬೇಕೆಂದು ಆಹ್ವಾನಿಸಲು ಬಂದಿದ್ದಾರೆ. ಆದ್ದರಿಂದ ನೀನು ಅವರೊಂದಿಗೆ ಹೋಗಬಹುದು. ಆದರೆ ನಾನು ಹೇಳುವುದನ್ನು ಮಾತ್ರ ಮಾಡು” ಎಂದು ಹೇಳಿದನು.

ಬಿಳಾಮನು ಮತ್ತು ಅವನ ಕತ್ತೆ

21 ಮರುದಿನ ಬೆಳಿಗ್ಗೆ ಬಿಳಾಮನು ತನ್ನ ಕತ್ತೆಗೆ ತಡಿಹಾಕಿಸಿ ಮೋವಾಬ್ಯರ ಪ್ರಧಾನರ ಜೊತೆಯಲ್ಲಿ ಹೊರಟನು.

ಅಪೊಸ್ತಲರ ಕಾರ್ಯಗಳು 21:17-26

ಪೌಲನು ಯಾಕೋಬನನ್ನು ಸಂದರ್ಶಿಸುವನು

17 ನಾವು ಜೆರುಸಲೇಮನ್ನು ತಲುಪಿದಾಗ ನಮ್ಮನ್ನು ಕಂಡು ವಿಶ್ವಾಸಿಗಳಿಗೆ ಸಂತೋಷವಾಯಿತು. 18 ಮರುದಿನ ಯಾಕೋಬನನ್ನು ಸಂದರ್ಶಿಸಲು ಪೌಲನು ನಮ್ಮನ್ನು ಕರೆದುಕೊಂಡು ಹೋದನು. ಹಿರಿಯರೆಲ್ಲರು ಅಲ್ಲಿದ್ದರು. 19 ಪೌಲನು ಅವರೆಲ್ಲರನ್ನು ವಂದಿಸಿದನು. ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ಅನೇಕ ಕಾರ್ಯಗಳನ್ನು ಮಾಡುವುದಕ್ಕಾಗಿ ದೇವರು ತನ್ನನ್ನು ಉಪಯೋಗಿಸಿಕೊಂಡ ಬಗೆಯನ್ನೂ ತನ್ನ ಮೂಲಕವಾಗಿ ದೇವರು ಮಾಡಿದ ಎಲ್ಲಾ ಕಾರ್ಯಗಳ ಕುರಿತಾಗಿಯೂ ಅವನು ಅವರಿಗೆ ತಿಳಿಸಿದನು.

20 ಈ ಸಂಗತಿಗಳನ್ನು ಕೇಳಿದ ಹಿರಿಯರು ದೇವರನ್ನು ಕೊಂಡಾಡಿದರು. ಬಳಿಕ ಅವರು ಪೌಲನಿಗೆ, “ಸಹೋದರನೇ, ವಿಶ್ವಾಸಿಗಳಿಗಾಗಿ ಪರಿವರ್ತನೆಗೊಂಡಿರುವ ಸಾವಿರಾರು ಮಂದಿ ಯೆಹೂದ್ಯರನ್ನು ನೀನು ಇಲ್ಲಿ ಕಾಣಬಹುದು. ಆದರೆ ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗುವುದು ಬಹಳ ಮುಖ್ಯವೆಂಬುದು ಇವರ ಆಲೋಚನೆ. 21 ಈ ಯೆಹೂದ್ಯರು ನಿನ್ನ ಉಪದೇಶದ ಬಗ್ಗೆ ಕೇಳಿದ್ದಾರೆ. ಬೇರೆ ದೇಶಗಳಲ್ಲಿ ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ವಾಸವಾಗಿರುವ ಯೆಹೂದ್ಯರಿಗೆ, “ನೀವು ಮೋಶೆಯ ಧರ್ಮಶಾಸ್ತ್ರವನ್ನು ತ್ಯಜಿಸಿರಿ; ನಿಮ್ಮ ಮಕ್ಕಳಿಗೆ ಸುನ್ನತಿ ಮಾಡಬೇಡಿರಿ ಯೆಹೂದ್ಯರ ಸಂಪ್ರದಾಯಗಳಿಗೆ ವಿಧೇಯರಾಗಬೇಡಿರಿ ಎಂಬುದಾಗಿ ಹೇಳುತ್ತಿರುವಿಯೆಂದು ಅವರು ಕೇಳಿದ್ದಾರೆ.

22 “ಈಗ ನಾವು ಏನು ಮಾಡೋಣ? ನೀನು ಬಂದಿರುವ ವಿಷಯವು ಇಲ್ಲಿರುವ ಯೆಹೂದ್ಯ ವಿಶ್ವಾಸಿಗಳಿಗೆ ತಿಳಿಯುವುದು. 23 ಆದರೆ ಈಗ ನೀನು ಏನು ಮಾಡಬೇಕೆಂಬುದನ್ನು ನಾವು ನಿನಗೆ ತಿಳಿಸುತ್ತೇವೆ: ನಮ್ಮ ಜನರಲ್ಲಿ ನಾಲ್ಕುಮಂದಿ ದೇವರಿಗೆ ಹರಕೆ ಮಾಡಿಕೊಂಡಿದ್ದಾರೆ. 24 ನೀನು ಅವರನ್ನು ನಿನ್ನೊಂದಿಗೆ ಕರೆದುಕೊಂಡು ಹೋಗಿ ಅವರ ಶುದ್ಧಾಚಾರದ ಸಂಪ್ರದಾಯದಲ್ಲಿ ಭಾಗವಹಿಸು. ಅವರ ಖರ್ಚುವೆಚ್ಚನ್ನೆಲ್ಲ ಕೊಡು. ಬಳಿಕ ಅವರು ತಮ್ಮ ತಲೆಬೋಳಿಸಿಕೊಳ್ಳಲಿ. ನೀನು ಹೀಗೆ ಮಾಡಿದರೆ, ನಿನ್ನ ಬಗ್ಗೆ ಅವರು ಕೇಳಿದ ಸಂಗತಿಗಳು ಸತ್ಯವಲ್ಲವೆಂದು ಅವರೆಲ್ಲರಿಗೂ ಮನದಟ್ಟಾಗುವುದು. ಸ್ವತಃ ನೀನೇ ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯನಾಗುತ್ತಿರುವುದನ್ನು ಅವರೆಲ್ಲರೂ ಕಣ್ಣಾರೆ ಕಾಣುವರು.

25 “ಯೆಹೂದ್ಯರಲ್ಲದ ವಿಶ್ವಾಸಿಗಳಿಗೆ ನಾವು ಒಂದು ಪತ್ರವನ್ನು ಈಗಾಗಲೇ ಕಳುಹಿಸಿದ್ದೇವೆ.

ವಿಗ್ರಹಗಳಿಗೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನಬೇಡಿ.

ರಕ್ತವನ್ನು ತಿನ್ನಬೇಡಿ. ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಗಳ ಮಾಂಸವನ್ನು ತಿನ್ನಬೇಡಿ.

ಯಾವ ಬಗೆಯ ಲೈಂಗಿಕ ಪಾಪವನ್ನು ಮಾಡಬೇಡಿ’

ಎಂದು ಆ ಪತ್ರದಲ್ಲಿ ಬರೆಯಲಾಗಿದೆ” ಎಂದರು.

ಪೌಲನ ಬಂಧನ

26 ಆಗ ಪೌಲನು ಆ ನಾಲ್ಕುಮಂದಿಯನ್ನು ತನ್ನೊಂದಿಗೆ ಕರೆದುಕೊಂಡು ಹೋದನು. ಮರುದಿನ ಪೌಲನು, ಶುದ್ಧಾಚಾರದ ವ್ರತದಲ್ಲಿ ಭಾಗವಹಿಸಿದನು. ಬಳಿಕ ಅವನು ದೇವಾಲಯಕ್ಕೆ ಹೋಗಿ ಶುದ್ಧಾಚಾರದ ಸಂಪ್ರದಾಯ ಮುಗಿಯುವ ದಿನವನ್ನು ಪ್ರಕಟಿಸಿದನು. ಕೊನೆಯ ದಿನದಲ್ಲಿ ಪ್ರತಿಯೊಬ್ಬ ವ್ಯಕ್ತಿಗಾಗಿಯೂ ಯಜ್ಞವನ್ನರ್ಪಿಸಬೇಕಾಗಿತ್ತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International