Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 18:15-20

15 ನಿಮ್ಮ ದೇವರು ನಿಮ್ಮ ಬಳಿಗೆ ಪ್ರವಾದಿಯನ್ನು ಕಳುಹಿಸುವನು. ಆ ಪ್ರವಾದಿಯು ನಿಮ್ಮ ಕುಲದವರಲ್ಲಿ ಒಬ್ಬನಾಗಿರುವನು. ಅವನು ನನ್ನ ಹಾಗೆ ಇರುವನು ಮತ್ತು ನೀವು ಅವನ ಮಾತುಗಳನ್ನು ಕೇಳಬೇಕು. 16 ನೀವು ಕೇಳಿದ ಪ್ರಕಾರ ದೇವರು ನಿಮಗೊಬ್ಬ ಪ್ರವಾದಿಯನ್ನು ಕಳುಹಿಸುವನು. ನೀವು ಹೋರೇಬ್ ಎಂಬ ಸೀನಾಯಿ ಪರ್ವತದಲ್ಲಿ ಒಟ್ಟಾಗಿ ಸೇರಿದಾಗ ದೇವರ ಸ್ವರಕ್ಕೆ ಭಯಪಟ್ಟಿರಿ; ಪರ್ವತದಲ್ಲಿದ್ದ ಬೆಂಕಿಯನ್ನು ನೋಡಿಯೂ ತತ್ತರಿಸಿದಿರಿ. ಆಗ ನೀವು, ‘ನಮ್ಮ ದೇವರಾದ ಯೆಹೋವನ ಸ್ವರವನ್ನು ನಾವು ತಿರುಗಿ ಕೇಳದ ಹಾಗೆ ಮಾಡು. ನಾವು ತಿರುಗಿ ಆ ಮಹಾ ಬೆಂಕಿಯ ಜ್ವಾಲೆಯನ್ನು ನೋಡದ ಹಾಗೆ ಮಾಡು; ಇಲ್ಲವಾದರೆ ನಾವು ಸಾಯುತ್ತೇವೆ!’ ಎಂದು ನನ್ನನ್ನು ಕೇಳಿಕೊಂಡಿರಿ.

17 “ಆಗ ಯೆಹೋವನು ನನಗೆ ಹೇಳಿದ್ದೇನೆಂದರೆ: ‘ಅವರು ಕೇಳುವ ವಿಷಯವು ಒಳ್ಳೆಯದೇ. 18 ನಾನು ಅವರಿಗಾಗಿ ನಿನ್ನ ತರಹದ ಒಬ್ಬ ಪ್ರವಾದಿಯನ್ನು ಕಳುಹಿಸುವೆನು. ಅವನು ಅವರ ಜನರಲ್ಲಿ ಒಬ್ಬನಾಗಿರುವನು. ಅವನು ಜನರಿಗೆ ತಿಳಿಸಬೇಕಾದ ವಿಷಯವನ್ನು ನಾನೇ ಅವನಿಗೆ ತಿಳಿಸುವೆನು. ನಾನು ಆಜ್ಞಾಪಿಸುವುದೆಲ್ಲವನ್ನು ಅವನು ಜನರಿಗೆ ತಿಳಿಸುವನು. 19 ಈ ಪ್ರವಾದಿಯು ನನ್ನ ಪ್ರತಿನಿಧಿಯಾಗಿ ಮಾತನಾಡುವನು. ಅವನು ಮಾತಾಡುವಾಗ ಯಾವನಾದರೂ ನನ್ನ ಆಜ್ಞೆಗಳನ್ನು ಕೇಳದೆಹೋದರೆ ನಾನು ಅವನನ್ನು ಶಿಕ್ಷಿಸುವೆನು.’

ಸುಳ್ಳು ಪ್ರವಾದಿಗಳನ್ನು ಕಂಡುಹಿಡಿಯುವ ಬಗ್ಗೆ

20 “ಒಬ್ಬ ಪ್ರವಾದಿಯು ನಾನು ಹೇಳದ ಸಂಗತಿಯನ್ನು ನಿಮಗೆ ಹೇಳಿದರೂ ಹೇಳಬಹುದು. ದೇವರಿಂದ ಬಂದ ಸಂದೇಶವನ್ನು ನಿಮಗೆ ತಿಳಿಸುತ್ತಿರುವೆನು ಎಂದು ಅವನು ಹೇಳಬಹುದು. ಇಂಥಾ ಸಂದರ್ಭಗಳು ಬಂದಲ್ಲಿ ಆ ಪ್ರವಾದಿಯನ್ನು ಸಾಯಿಸಬೇಕು. ಇಷ್ಟು ಮಾತ್ರವಲ್ಲ ಇತರ ದೇವರುಗಳ ಸಂದೇಶವನ್ನು ಕೊಡುವ ಪ್ರವಾದಿಗಳೂ ಬರಬಹುದು. ಅವರನ್ನೂ ನೀವು ಸಾಯಿಸಬೇಕು.

ಕೀರ್ತನೆಗಳು 111

111 ಯೆಹೋವನಿಗೆ ಸ್ತೋತ್ರವಾಗಲಿ!
ನೀತಿವಂತರ ಸಭೆಯಲ್ಲಿ ನಾನು ಪೂರ್ಣಹೃದಯದಿಂದ
    ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
ಯೆಹೋವನು ಮಹತ್ಕಾರ್ಯಗಳನ್ನು ಮಾಡುವನು.
    ಜನರು ಅವುಗಳಲ್ಲಿ ಸಂತೋಷಿಸುತ್ತಾ ಅವುಗಳನ್ನೇ ಧ್ಯಾನಿಸುವರು.
ಆತನು ಮಹತ್ವವಾದ ಮತ್ತು ಅದ್ಭುತವಾದ ಕಾರ್ಯಗಳನ್ನು ಮಾಡುವನು.
    ಆತನ ನೀತಿಯು ಶಾಶ್ವತವಾದದ್ದು.
ದೇವರು ಅಮೋಘವಾದ ಕಾರ್ಯಗಳನ್ನು ಮಾಡುವುದರಿಂದ
    ಆತನ ದಯೆಯನ್ನೂ ಕೃಪೆಯನ್ನೂ ಜ್ಞಾಪಿಸಿಕೊಳ್ಳುತ್ತೇವೆ.
ಆತನು ತನ್ನ ಭಕ್ತರಿಗೆ ಆಹಾರವನ್ನು ಒದಗಿಸುವನು;
    ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
ಆತನು ಅನ್ಯಜನಾಂಗಗಳ ದೇಶವನ್ನು
    ತನ್ನ ಜನರಿಗೆ ಕೊಡುವುದರ ಮೂಲಕ ಪ್ರಬಲವಾದ ಕಾರ್ಯಗಳನ್ನು ಮಾಡಿದ್ದಾನೆ.
ಆತನ ಪ್ರತಿಯೊಂದು ಕಾರ್ಯವು ಒಳ್ಳೆಯದೂ ನ್ಯಾಯವಾದದ್ದೂ ಆಗಿದೆ.
    ಆತನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
ದೇವರ ಆಜ್ಞೆಗಳು ಶಾಶ್ವತವಾಗಿವೆ.
    ಅವು ಯಥಾರ್ಥವಾಗಿಯೂ ಮತ್ತು ಶುದ್ಧವಾಗಿಯೂ ಇವೆ.
ಆತನು ತನ್ನ ಜನರನ್ನು ರಕ್ಷಿಸಿ ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆ.
    ಆತನ ಹೆಸರು ಅದ್ಭುತವಾಗಿಯೂ ಪರಿಶುದ್ಧವಾಗಿಯೂ ಇದೆ.
10 ಯೆಹೋವನ ಮೇಲಿರುವ ಭಯಭಕ್ತಿಗಳಿಂದಲೇ ಜ್ಞಾನವು ಆರಂಭವಾಗುತ್ತದೆ.
    ಆತನಲ್ಲಿ ಭಯಭಕ್ತಿಯುಳ್ಳವರು ಜ್ಞಾನಪೂರ್ಣರಾಗಿದ್ದಾರೆ.
ಆತನಿಗೆ ಸದಾಕಾಲ ಸ್ತೋತ್ರವಾಗಲಿ.

1 ಕೊರಿಂಥದವರಿಗೆ 8

ವಿಗ್ರಹಗಳಿಗೆ ಅರ್ಪಿತವಾದ ಆಹಾರದ ಬಗ್ಗೆ ಚರ್ಚೆ

ವಿಗ್ರಹಗಳಿಗೆ ಯಜ್ಞ ಮಾಡಿದ ಪಶುವಿನ ಮಾಂಸದ ಬಗ್ಗೆ ಈಗ ನಾನು ಬರೆಯುತ್ತೇನೆ. “ನಮಗೆಲ್ಲರಿಗೂ ಜ್ಞಾನವಿದೆ” ಎಂಬುದು ನಮಗೆ ಗೊತ್ತಿದೆ. “ಜ್ಞಾನವು” ನಮ್ಮನ್ನು ಅಹಂಕಾರದಿಂದ ತುಂಬಿಸುತ್ತದೆ. ಆದರೆ ಪ್ರೀತಿಯು ಬೇರೆಯವರಲ್ಲಿ ಭಕ್ತಿವೃದ್ಧಿಯನ್ನು ಮಾಡುತ್ತದೆ. ಇಂಥಿಂಥದ್ದನ್ನು ತಿಳಿದುಕೊಂಡಿದ್ದೇನೆಂದು ಭಾವಿಸುವವನು ತಾನು ತಿಳಿದುಕೊಳ್ಳಬೇಕಾದ ರೀತಿಯಲ್ಲಿ ಇನ್ನೂ ತಿಳಿದುಕೊಂಡಿಲ್ಲ. ಯಾವನು ದೇವರನ್ನು ಪ್ರೀತಿಸುತ್ತಾನೋ ಅವನನ್ನು ದೇವರು ತಿಳಿದುಕೊಂಡಿದ್ದಾನೆ.

ಹೀಗಿರಲಾಗಿ, ವಿಗ್ರಹಗಳಿಗೆ ಅರ್ಪಿಸಿದ ಮಾಂಸವನ್ನು ತಿನ್ನುವುದರ ಬಗ್ಗೆ ನಾನು ಹೇಳುವುದೇನೆಂದರೆ: ಜಗತ್ತಿನಲ್ಲಿ ವಿಗ್ರಹವು ಕ್ಷುಲ್ಲಕವಾದದ್ದೆಂದು ನಮಗೆ ಗೊತ್ತಿದೆ. ಒಬ್ಬನೇ ಒಬ್ಬ ದೇವರಿದ್ದಾನೆ ಎಂಬುದು ನಮಗೆ ಗೊತ್ತಿದೆ. ಆಕಾಶದಲ್ಲಾಗಲಿ ಭೂಮಿಯ ಮೇಲಾಗಲಿ ದೇವರುಗಳೆಂದು ಕರೆಯಲ್ಪಡುವ ವಸ್ತುಗಳಿದ್ದರೆ ಅವು ನಿಜವಾಗಿಯೂ ನಮಗೆ ಮುಖ್ಯವಲ್ಲ. (ಅನೇಕ ವಸ್ತುಗಳನ್ನು ಜನರು “ದೇವರು”ಗಳೆಂತಲೂ “ಪ್ರಭು”ಗಳೆಂತಲೂ ಕರೆಯುತ್ತಾರೆ.) ನಮಗಾದರೋ ಒಬ್ಬನೇ ಒಬ್ಬ ದೇವರಿದ್ದಾನೆ. ಆತನು ನಮ್ಮ ತಂದೆ. ಸಮಸ್ತವನ್ನು ಆತನೇ ಸೃಷ್ಟಿ ಮಾಡಿದನು. ನಾವು ಆತನಿಗೋಸ್ಕರ ಜೀವಿಸುತ್ತೇವೆ. ಒಬ್ಬನೇ ಒಬ್ಬ ಪ್ರಭುವಿದ್ದಾನೆ. ಆತನೇ ಯೇಸು ಕ್ರಿಸ್ತನು. ಆತನ ಮೂಲಕವಾಗಿ ಸಮಸ್ತವು ಉಂಟಾಯಿತು. ಆತನ ಮೂಲಕವಾಗಿ ನಾವು ಜೀವವನ್ನು ಹೊಂದಿದ್ದೇವೆ.

ಆದರೆ ಎಲ್ಲಾ ಜನರಿಗೆ ಇದರ ಬಗ್ಗೆ ತಿಳಿದಿಲ್ಲ. ಕೆಲವು ಜನರು ಇಂದಿನವರೆಗೂ ವಿಗ್ರಹಗಳನ್ನು ಆರಾಧಿಸುವ ರೂಢಿಯಲ್ಲಿದ್ದಾರೆ. ಹೀಗಿರಲಾಗಿ, ಆ ಜನರು ಮಾಂಸವನ್ನು ತಿನ್ನುವಾಗ ಅದು ವಿಗ್ರಹಕ್ಕೆ ಅರ್ಪಿತವಾದದ್ದೆಂದು ಆಲೋಚಿಸುತ್ತಾರೆ. ಆದರೆ ಈ ಮಾಂಸವನ್ನು ತಿನ್ನುವುದು ತಪ್ಪಲ್ಲ ಎಂಬ ದೃಢನಂಬಿಕೆ ಅವರಲ್ಲಿಲ್ಲ. ಆದ್ದರಿಂದ, ಅವರು ಮಾಂಸವನ್ನು ತಿನ್ನುವಾಗ ತಮ್ಮನ್ನು ದೋಷಿಗಳೆಂದು ಭಾವಿಸಿಕೊಳ್ಳುತ್ತಾರೆ. ಆದರೆ ಆಹಾರವು ನಮ್ಮನ್ನು ದೇವರ ಸಮೀಪಕ್ಕೆ ತರಲಾರದು. ನಾವು ಮಾಂಸವನ್ನು ತಿನ್ನದಿದ್ದರೆ, ನಮ್ಮ ಮೇಲೆ ದೇವರಿಗಿರುವ ಮೆಚ್ಚುಗೆಯು ಕಡಿಮೆಯೇನೂ ಆಗುವುದಿಲ್ಲ. ಅದೇ ರೀತಿ, ಮಾಂಸವನ್ನು ತಿಂದರೆ, ನಮ್ಮ ಮೇಲೆ ದೇವರಿಗಿರುವ ಮೆಚ್ಚುಗೆಯು ಹೆಚ್ಚೇನೂ ಆಗುವುದಿಲ್ಲ.

ಆದರೆ ನಿಮ್ಮ ಸ್ವತಂತ್ರದ ಬಗ್ಗೆ ಎಚ್ಚರಿಕೆಯಿಂದಿರಿ. ನಂಬಿಕೆಯಲ್ಲಿ ಬಲಹೀನರಾಗಿರುವ ಜನರನ್ನು ನಿಮ್ಮ ಸ್ವಾತಂತ್ರ್ಯವು ಪಾಪಕ್ಕೆ ಬೀಳಿಸುವ ಸಾಧ್ಯತೆಯಿದೆ. 10 ನಿಮಗೆ ತಿಳುವಳಿಕೆ ಇರುವುದರಿಂದ ನೀವು ವಿಗ್ರಹದ ಗುಡಿಯೊಂದರಲ್ಲಿ ಸಂಕೋಚವಿಲ್ಲದೆ ಊಟ ಮಾಡಬಹುದು. ನೀವು ಅಲ್ಲಿ ಊಟ ಮಾಡುವುದನ್ನು ನಂಬಿಕೆಯಲ್ಲಿ ಬಲಹೀನನಾದ ವ್ಯಕ್ತಿಯೊಬ್ಬನು ನೋಡಿ, ವಿಗ್ರಹಗಳಿಗೆ ಅರ್ಪಿತವಾದ ಮಾಂಸವನ್ನು ತಿನ್ನಲು ಪ್ರೋತ್ಸಾಹಗೊಳ್ಳಬಹುದು. ಆದರೆ ಅದನ್ನು ತಿನ್ನಕೊಡದೆಂಬ ಭಾವನೆ ಅವನಲ್ಲಿ ಆಳವಾಗಿ ಬೇರೂರಿದೆ. 11 ಹೀಗಿರಲಾಗಿ, ಈ ಬಲಹೀನ ಸಹೋದರನು ನಿಮ್ಮ ತಿಳುವಳಿಕೆಯ ದೆಸೆಯಿಂದ ಹಾಳಾದನು. ಕ್ರಿಸ್ತನು ಈ ಸಹೋದರನಿಗೋಸ್ಕರವಾಗಿ ತನ್ನ ಪ್ರಾಣವನ್ನೇ ಕೊಟ್ಟಿದ್ದಾನೆ. 12 ಹೀಗೆ ನಿಮ್ಮ ಸಹೋದರ ಸಹೋದರಿಯರಿಗೆ ವಿರೋಧವಾಗಿ ಪಾಪ ಮಾಡುವಾಗ ಮತ್ತು ಅವರು ತಪ್ಪೆಂದು ಭಾವಿಸುವ ಕಾರ್ಯಗಳನ್ನು ಮಾಡುವಂತೆ ಅವರನ್ನು ಪ್ರೋತ್ಸಾಹಿಸಿ ಅವರಿಗೆ ಕೇಡನ್ನು ಉಂಟುಮಾಡುವಾಗ ನೀವು ಕ್ರಿಸ್ತನಿಗೆ ವಿರೋಧವಾಗಿಯೂ ಪಾಪ ಮಾಡುವವರಾಗಿದ್ದೀರಿ. 13 ಹೀಗಿರಲಾಗಿ, ನಾನು ತಿನ್ನುವ ಆಹಾರವು ನನ್ನ ಸಹೋದರನನ್ನು ಪಾಪಕ್ಕೆ ಬೀಳಿಸುವುದಾಗಿದ್ದರೆ, ನಾನು ಎಂದಿಗೂ ಮಾಂಸವನ್ನು ತಿನ್ನುವುದಿಲ್ಲ. ನನ್ನ ಸಹೋದರನ ಪಾಪಕ್ಕೆ ನಾನು ಕಾರಣನಾಗಬಾರದೆಂದು ನಾನು ಮಾಂಸ ತಿನ್ನುವುದನ್ನು ನಿಲ್ಲಿಸುತ್ತೇನೆ.

ಮಾರ್ಕ 1:21-28

ದೆವ್ವದಿಂದ ಪೀಡಿತನಾಗಿದ್ದವನಿಗೆ ವಿಮೋಚನೆ

(ಲೂಕ 4:31-37)

21 ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮಿಗೆ ಹೋದರು. ಸಬ್ಬತ್‌ದಿನದಂದು ಯೇಸು ಸಭಾಮಂದಿರಕ್ಕೆ ಹೋಗಿ ಜನರಿಗೆ ಉಪದೇಶಮಾಡಿದನು. 22 ಯೇಸುವಿನ ಉಪದೇಶವನ್ನು ಕೇಳಿ ಅಲ್ಲಿದ್ದ ಜನರು ಆಶ್ಚರ್ಯಗೊಂಡರು. ಆತನು ಅವರ ಧರ್ಮೋಪದೇಶಕರಂತೆ ಉಪದೇಶಮಾಡದೆ, ಅಧಿಕಾರವುಳ್ಳವನಂತೆ ಉಪದೇಶ ಮಾಡಿದನು. 23 ಯೇಸು ಸಭಾಮಂದಿರದಲ್ಲಿದ್ದಾಗ, ದೆವ್ವದಿಂದ ಪೀಡಿತನಾಗಿದ್ದ ಒಬ್ಬ ಮನುಷ್ಯನು ಅಲ್ಲಿದ್ದನು. ಅವನು, 24 “ನಜರೇತಿನ ಯೇಸುವೇ! ನಮ್ಮಿಂದ ನಿನಗೆ ಏನಾಗಬೇಕಾಗಿದೆ? ನಮ್ಮನ್ನು ನಾಶಗೊಳಿಸಲು ಬಂದಿರುವೆಯಾ? ನೀನು ದೇವರಿಂದ ಬಂದ ಪರಿಶುದ್ಧನೆಂದು ನನಗೆ ಗೊತ್ತಿದೆ!” ಎಂದು ಕೂಗಿಕೊಂಡನು.

25 ಯೇಸು, “ಸುಮ್ಮನಿರು! ಅವನೊಳಗಿಂದ ಹೊರಗೆ ಬಾ!” ಎಂದು ಆಜ್ಞಾಪಿಸಿದನು. 26 ದೆವ್ವವು ಅವನನ್ನು ಒದ್ದಾಡಿಸಿ ಗಟ್ಟಿಯಾಗಿ ಅರಚುತ್ತಾ ಅವನೊಳಗಿಂದ ಹೊರಬಂದಿತು.

27 ಜನರೆಲ್ಲರೂ ದಿಗ್ಭ್ರಮೆಗೊಂಡು, “ಇದೇನು? ಹೊಸದೊಂದನ್ನು ಈತನು ಅಧಿಕಾರದಿಂದ ಉಪದೇಶಿಸುತ್ತಿದ್ದಾನೆ! ಈತನ ಆಜ್ಞೆಗೆ ದೆವ್ವಗಳೂ ವಿಧೇಯವಾಗುತ್ತಿವೆ” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. 28 ಯೇಸುವಿನ ಸುದ್ದಿಯು ಗಲಿಲಾಯ ಪ್ರದೇಶದ ಎಲ್ಲೆಡೆಯಲ್ಲಿಯೂ ಹರಡಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International