Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಆದಿಕಾಂಡ 1:1-5

ಭೂಲೋಕದ ಸೃಷ್ಟಿ

ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದನು. ಭೂಮಿಯು ಅಸ್ತವ್ಯಸ್ತವಾಗಿಯೂ ಬರಿದಾಗಿಯೂ ಇತ್ತು. ಭೂಮಿಯ ಮೇಲೆ ಏನೂ ಇರಲಿಲ್ಲ. ಸಾಗರದ ಮೇಲೆ ಕತ್ತಲು ಕವಿದಿತ್ತು. ದೇವರಾತ್ಮನು ಜಲಸಮೂಹಗಳ ಮೇಲೆ ಚಲಿಸುತ್ತಿದ್ದನು.[a]

ಮೊದಲನೆ ದಿನ—ಬೆಳಕು

ಆಗ ದೇವರು, “ಬೆಳಕಾಗಲಿ” ಅನ್ನಲು ಬೆಳಕಾಯಿತು. ದೇವರಿಗೆ ಬೆಳಕು ಒಳ್ಳೆಯದಾಗಿ ಕಂಡಿತು. ಬಳಿಕ ದೇವರು ಕತ್ತಲೆಯಿಂದ ಬೆಳಕನ್ನು ಬೇರ್ಪಡಿಸಿದನು. ದೇವರು ಬೆಳಕಿಗೆ ಹಗಲೆಂದೂ ಕತ್ತಲೆಗೆ ರಾತ್ರಿಯೆಂದೂ ಹೆಸರಿಟ್ಟನು.

ಹೀಗೆ ಸಾಯಂಕಾಲವೂ ಮುಂಜಾನೆಯೂ ಆಗಿ ಮೊದಲನೆ ದಿನವಾಯಿತು.

ಕೀರ್ತನೆಗಳು 29

ರಚನೆಗಾರ: ದಾವೀದ.

29 ದೇವಪುತ್ರರೇ,[a] ಯೆಹೋವನನ್ನು ಸ್ತುತಿಸಿರಿ!
    ಆತನ ಮಹಿಮೆಯನ್ನೂ ಶಕ್ತಿಯನ್ನೂ ಸ್ತುತಿಸಿರಿ.
ಯೆಹೋವನನ್ನು ಸ್ತುತಿಸುತ್ತಾ ಆತನ ಹೆಸರನ್ನು ಘನಪಡಿಸಿರಿ.
    ಪರಿಶುದ್ಧ ವಸ್ತ್ರಗಳನ್ನು ಧರಿಸಿಕೊಂಡು ಆತನನ್ನು ಆರಾಧಿಸಿರಿ.[b]
ಯೆಹೋವನ ಸ್ವರವು ಸಮುದ್ರದ ಮೇಲೆ ಕೇಳಿ ಬರುವುದು.
    ಮಹಾಸಾಗರದ ಮೇಲಿನ ಗುಡುಗಿನಂತೆ ಮಹಿಮಾಸ್ವರೂಪನಾದ ದೇವರ ಸ್ವರವು ಕೇಳಿಬರುವುದು.
ಯೆಹೋವನ ಸ್ವರವು
    ಆತನ ಶಕ್ತಿಯನ್ನೂ ಮಹಿಮೆಯನ್ನೂ ತೋರ್ಪಡಿಸುವುದು.
ಯೆಹೋವನ ಸ್ವರವು ದೇವದಾರು ವೃಕ್ಷಗಳನ್ನು ತುಂಡುತುಂಡು ಮಾಡುತ್ತದೆ.
    ಯೆಹೋವನು ಲೆಬನೋನಿನ ದೇವದಾರು ವೃಕ್ಷಗಳನ್ನೂ ಮುರಿದುಹಾಕುವನು.
ಯೆಹೋವನು ಲೆಬನೋನನ್ನು ನಡುಗಿಸಲು ಅದು ನರ್ತಿಸುತ್ತಿರುವ ಎಳೆಕರುವಿನಂತೆ ಕಾಣುತ್ತದೆ;
    ಸಿರ್ಯೋನ್ ಪರ್ವತವು ಕಂಪಿಸುವಾಗ ಕುಣಿದಾಡುವ ಎಳೆ ಹೋರಿಯಂತೆ ಕಾಣುತ್ತದೆ.
ಯೆಹೋವನ ಗರ್ಜನಕ್ಕೆ ಮಿಂಚುಗಳು ಥಳಥಳನೆ ಹೊಳೆಯುತ್ತವೆ.
ಯೆಹೋವನ ಗರ್ಜನದಿಂದ ಅರಣ್ಯವು ಕಂಪಿಸುವುದು.
    ಆತನ ಗರ್ಜನಕ್ಕೆ ಕಾದೇಶ್ ಅರಣ್ಯವು ನಡುಗುವುದು.
ಯೆಹೋವನ ಗರ್ಜನಕ್ಕೆ ಜಿಂಕೆಗಳು ಹೆದರಿಕೊಳ್ಳುತ್ತವೆ;
    ಕಾಡಿನ ಮರಗಳು ಬರಿದಾಗುತ್ತವೆ;
    ಆದರೆ ಆತನ ಆಲಯದಲ್ಲಿ ಜನರು ಆತನ ಮಹಿಮೆಯನ್ನು ಹಾಡಿಕೊಂಡಾಡುವರು.

10 ಜಲಪ್ರಳಯದ ಕಾಲದಲ್ಲೂ ಯೆಹೋವನು ರಾಜನಾಗಿದ್ದನು.
    ಯೆಹೋವನು ಸದಾಕಾಲ ರಾಜನಾಗಿರುವನು.
11 ಯೆಹೋವನು ತನ್ನ ಜನರಿಗೆ ಬಲವನ್ನು ದಯಪಾಲಿಸಲಿ.
    ಆತನು ತನ್ನ ಜನರಿಗೆ ಶಾಂತಿಯನ್ನು ಸ್ಥಾಪಿಸಲಿ.

ಅಪೊಸ್ತಲರ ಕಾರ್ಯಗಳು 19:1-7

ಪೌಲ ಎಫೆಸದಲ್ಲಿ

19 ಅಪೊಲ್ಲೋಸನು ಕೊರಿಂಥ ಪಟ್ಟಣದಲ್ಲಿದ್ದಾಗ ಪೌಲನು ಎಫೆಸ ಪಟ್ಟಣಕ್ಕೆ ಪ್ರಯಾಣ ಮಾಡುತ್ತಾ ದಾರಿಯಲ್ಲಿ ಸಿಕ್ಕಿದ ಕೆಲವು ಊರುಗಳನ್ನು ಸಂದರ್ಶಿಸಿದನು. ಅವನು ಎಫೆಸ ಪಟ್ಟಣವನ್ನು ತಲುಪಿದಾಗ, ಕೆಲವು ಮಂದಿ ಶಿಷ್ಯರನ್ನು ಕಂಡು, “ನೀವು ನಂಬಿಕೊಂಡಾಗ ಪವಿತ್ರಾತ್ಮನನ್ನು ಹೊಂದಿಕೊಂಡಿರಾ?” ಎಂದು ಕೇಳಿದನು.

ಆ ಶಿಷ್ಯರು ಅವನಿಗೆ, “ಪವಿತ್ರಾತ್ಮನು ಇದ್ದಾನೆ ಎಂಬುದನ್ನು ನಾವು ಇದುವರೆಗೆ ಕೇಳಿಯೂ ಇಲ್ಲ!” ಎಂದರು.

ಪೌಲನು ಅವರಿಗೆ, “ನೀವು ಯಾವ ಬಗೆಯ ದೀಕ್ಷಾಸ್ನಾನ ಪಡೆದಿರಿ?” ಎಂದು ಕೇಳಿದನು.

ಅವರು, “ಯೋಹಾನನು ಬೋಧಿಸಿದ ದೀಕ್ಷಾಸ್ನಾನವನ್ನು ನಾವು ಮಾಡಿಸಿಕೊಂಡೆವು” ಎಂದು ಹೇಳಿದರು.

ಅದಕ್ಕೆ ಪೌಲನು, “ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡವರಿಗೆ ಯೋಹಾನನು ದೀಕ್ಷಾಸ್ನಾನ ಮಾಡಿಸಿದನು. ಅಲ್ಲದೆ ತನ್ನ ತರುವಾಯ ಬರುವಾತನಲ್ಲಿ ನಂಬಿಕೆ ಇಡಬೇಕೆಂದು ಅವರಿಗೆ ಹೇಳಿದನು. ಆ ವ್ಯಕ್ತಿಯೇ ಯೇಸು” ಎಂದನು.

ಇದನ್ನು ಕೇಳಿದಾಗ ಆ ಶಿಷ್ಯರು ಪ್ರಭುವಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡರು. ಬಳಿಕ ಪೌಲನು ಅವರ ಮೇಲೆ ತನ್ನ ಕೈಗಳನ್ನಿಟ್ಟಾಗ ಅವರು ಪವಿತ್ರಾತ್ಮಭರಿತರಾದರು. ಅವರು ವಿವಿಧ ಭಾಷೆಗಳಲ್ಲಿ ಮಾತಾಡಿದರು ಮತ್ತು ಪ್ರವಾದನೆ ಮಾಡಿದರು. ಈ ಗುಂಪಿನಲ್ಲಿ ಸುಮಾರು ಹನ್ನೆರಡು ಮಂದಿ ಇದ್ದರು.

ಮಾರ್ಕ 1:4-11

ಅಂತೆಯೇ ಸ್ನಾನಿಕ ಯೋಹಾನನು ಬಂದು, ಅಡವಿಯಲ್ಲಿ ಜನರಿಗೆ, “ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ. ಆಗ ನಿಮಗೆ ಪಾಪಕ್ಷಮೆ ಆಗುವುದು” ಎಂದು ಉಪದೇಶಿಸುತ್ತಿದ್ದನು ಮತ್ತು ದೀಕ್ಷಾಸ್ನಾನ ಕೊಡುತ್ತಾ ಇದ್ದನು. ಜುದೇಯ ಮತ್ತು ಜೆರುಸಲೇಮಿನ ಜನರೆಲ್ಲರೂ ಯೋಹಾನನ ಬಳಿಗೆ ಬಂದು ತಮ್ಮ ಪಾಪಗಳನ್ನು ಅರಿಕೆಮಾಡಿಕೊಂಡರು. ಆಗ ಯೋಹಾನನು ಅವರಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಕೊಟ್ಟನು.

ಯೋಹಾನನು ಒಂಟೆಯ ತುಪ್ಪಟದಿಂದ ಮಾಡಿದ ಹೊದಿಕೆಯನ್ನು ಹೊದ್ದುಕೊಂಡು ಸೊಂಟಕ್ಕೆ ತೊಗಲಿನ ನಡುಪಟ್ಟಿಯನ್ನು ಕಟ್ಟಿಕೊಳ್ಳುತ್ತಿದ್ದನು. ಅವನು ಮಿಡತೆಗಳನ್ನು ಮತ್ತು ಕಾಡುಜೇನನ್ನು ತಿನ್ನುತ್ತಿದ್ದನು.

ಯೋಹಾನನು ಜನರಿಗೆ, “ನನ್ನ ತರುವಾಯ ಬರುವಾತನು ನನಗಿಂತಲೂ ಶಕ್ತನಾಗಿದ್ದಾನೆ. ನಾನು ಮೊಣಕಾಲೂರಿ, ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ಯೋಗ್ಯನಲ್ಲ. ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ, ಆದರೆ ಆತನು ನಿಮಗೆ ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ ಮಾಡಿಸುತ್ತಾನೆ” ಎಂದು ಬೋಧಿಸಿದನು.

ಯೇಸುವಿಗೆ ದೀಕ್ಷಾಸ್ನಾನ

(ಮತ್ತಾಯ 3:13-17; ಲೂಕ 3:21-22)

ಆ ದಿನಗಳಲ್ಲಿ ಯೇಸು ಗಲಿಲಾಯದ ನಜರೇತಿನಿಂದ ಯೋಹಾನನಿದ್ದ ಸ್ಥಳಕ್ಕೆ ಬಂದನು. ಯೋಹಾನನು ಯೇಸುವಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಮಾಡಿಸಿದನು. 10 ಯೇಸು ನೀರಿನಿಂದ ಮೇಲಕ್ಕೆ ಬರುತ್ತಿದ್ದಾಗ, ಆಕಾಶವು ತೆರೆಯಂತೆ ಹರಿದುಹೋಯಿತು; ಮತ್ತು ಪವಿತ್ರಾತ್ಮನು ತನ್ನ ಮೇಲೆ ಪಾರಿವಾಳದ ರೂಪದಲ್ಲಿ ಇಳಿದುಬರುತ್ತಿರುವುದನ್ನು ಕಂಡನು. 11 ಆಗ ಪರಲೋಕದಿಂದ ಧ್ವನಿಯೊಂದು ಹೊರಟು, “ನೀನೇ ನನ್ನ ಪ್ರಿಯ ಮಗನು. ನಾನು ನಿನ್ನನ್ನು ಮೆಚ್ಚಿಕೊಂಡಿದ್ದೇನೆ” ಎಂದು ಹೇಳಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International