Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 111

111 ಯೆಹೋವನಿಗೆ ಸ್ತೋತ್ರವಾಗಲಿ!
ನೀತಿವಂತರ ಸಭೆಯಲ್ಲಿ ನಾನು ಪೂರ್ಣಹೃದಯದಿಂದ
    ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
ಯೆಹೋವನು ಮಹತ್ಕಾರ್ಯಗಳನ್ನು ಮಾಡುವನು.
    ಜನರು ಅವುಗಳಲ್ಲಿ ಸಂತೋಷಿಸುತ್ತಾ ಅವುಗಳನ್ನೇ ಧ್ಯಾನಿಸುವರು.
ಆತನು ಮಹತ್ವವಾದ ಮತ್ತು ಅದ್ಭುತವಾದ ಕಾರ್ಯಗಳನ್ನು ಮಾಡುವನು.
    ಆತನ ನೀತಿಯು ಶಾಶ್ವತವಾದದ್ದು.
ದೇವರು ಅಮೋಘವಾದ ಕಾರ್ಯಗಳನ್ನು ಮಾಡುವುದರಿಂದ
    ಆತನ ದಯೆಯನ್ನೂ ಕೃಪೆಯನ್ನೂ ಜ್ಞಾಪಿಸಿಕೊಳ್ಳುತ್ತೇವೆ.
ಆತನು ತನ್ನ ಭಕ್ತರಿಗೆ ಆಹಾರವನ್ನು ಒದಗಿಸುವನು;
    ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
ಆತನು ಅನ್ಯಜನಾಂಗಗಳ ದೇಶವನ್ನು
    ತನ್ನ ಜನರಿಗೆ ಕೊಡುವುದರ ಮೂಲಕ ಪ್ರಬಲವಾದ ಕಾರ್ಯಗಳನ್ನು ಮಾಡಿದ್ದಾನೆ.
ಆತನ ಪ್ರತಿಯೊಂದು ಕಾರ್ಯವು ಒಳ್ಳೆಯದೂ ನ್ಯಾಯವಾದದ್ದೂ ಆಗಿದೆ.
    ಆತನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
ದೇವರ ಆಜ್ಞೆಗಳು ಶಾಶ್ವತವಾಗಿವೆ.
    ಅವು ಯಥಾರ್ಥವಾಗಿಯೂ ಮತ್ತು ಶುದ್ಧವಾಗಿಯೂ ಇವೆ.
ಆತನು ತನ್ನ ಜನರನ್ನು ರಕ್ಷಿಸಿ ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆ.
    ಆತನ ಹೆಸರು ಅದ್ಭುತವಾಗಿಯೂ ಪರಿಶುದ್ಧವಾಗಿಯೂ ಇದೆ.
10 ಯೆಹೋವನ ಮೇಲಿರುವ ಭಯಭಕ್ತಿಗಳಿಂದಲೇ ಜ್ಞಾನವು ಆರಂಭವಾಗುತ್ತದೆ.
    ಆತನಲ್ಲಿ ಭಯಭಕ್ತಿಯುಳ್ಳವರು ಜ್ಞಾನಪೂರ್ಣರಾಗಿದ್ದಾರೆ.
ಆತನಿಗೆ ಸದಾಕಾಲ ಸ್ತೋತ್ರವಾಗಲಿ.

ಧರ್ಮೋಪದೇಶಕಾಂಡ 12:28-32

28 ಯೆಹೋವನು ಕೊಡುವ ಕಟ್ಟಳೆಗಳನ್ನು ನೀವು ಅನುಸರಿಸಿರಿ. ನಿಮ್ಮ ದೇವರಾದ ಯೆಹೋವನು ಮೆಚ್ಚುವ ಕಾರ್ಯಗಳನ್ನು ನೀವು ಮಾಡುವಾಗ ನಿಮಗೂ ನಿಮ್ಮ ಸಂತತಿಯವರಿಗೂ ಶುಭ ಉಂಟಾಗುವುದು.

29 “ನೀವು ಬೇರೆಯವರ ದೇಶವನ್ನು ವಶಪಡಿಸಿಕೊಳ್ಳಲು ಹೋಗುತ್ತಿದ್ದೀರಿ. ನಿಮ್ಮ ದೇವರಾದ ಯೆಹೋವನು ಆ ಜನರನ್ನು ನಿಮಗಾಗಿ ನಾಶಮಾಡುವನು. ಆ ಜನರನ್ನು ಅಲ್ಲಿಂದ ಹೊಡೆದೋಡಿಸಿ ಅವರ ಸ್ಥಳದಲ್ಲಿ ನೀವು ವಾಸಿಸುವಿರಿ. 30 ಅಲ್ಲಿ ವಾಸಿಸುವ ಅನ್ಯಜನರನ್ನು ನೀವು ನಾಶಮಾಡಬೇಕು. ಇಲ್ಲದಿದ್ದಲ್ಲಿ ಅವರು ನಿಮಗೆ ಉರುಲಾಗುವರು; ಅವರ ವಿಗ್ರಹಗಳನ್ನು ಪೂಜಿಸದಂತೆ ಎಚ್ಚರಿಕೆಯಿಂದಿರಿ. ಆ ಸುಳ್ಳುದೇವರುಗಳಿಗೆ ಪ್ರಾರ್ಥಿಸಬೇಡಿ. ‘ಆ ಜನರು ಆ ಸುಳ್ಳುದೇವರುಗಳನ್ನು ಪೂಜಿಸಿದ ಹಾಗೆ ನಾನೂ ಪೂಜಿಸುವೆನು’ ಎಂದು ನಿಮ್ಮ ಮನಸ್ಸಿನಲ್ಲಿ ಅಂದುಕೊಳ್ಳಬೇಡಿ! 31 ನಿಮ್ಮ ದೇವರಾದ ಯೆಹೋವನಿಗೆ ನೀವು ಆ ರೀತಿ ಮಾಡಬಾರದು. ಆ ರೀತಿಯಾಗಿ ಆತನನ್ನು ಆರಾಧಿಸಬಾರದು. ಯಾಕೆಂದರೆ ಅವರು ತಮ್ಮ ದೇವರೆದುರಿನಲ್ಲಿ ಅಸಹ್ಯವಾದ ಕಾರ್ಯಗಳನ್ನು ಮಾಡುತ್ತಾರೆ. ಅದನ್ನು ನಮ್ಮ ದೇವರಾದ ಯೆಹೋವನು ದ್ವೇಷಿಸುತ್ತಾನೆ. ಅವರು ತಮ್ಮ ಮಕ್ಕಳನ್ನೇ ದೇವರಿಗೆ ಬಲಿ ಅರ್ಪಿಸುತ್ತಾರೆ.

32 “ನಾನು ಆಜ್ಞಾಪಿಸಿದ ಪ್ರಕಾರವೇ ನೀವು ಮಾಡಿರಿ. ಅದಕ್ಕೆ ಏನೂ ಕೂಡಿಸಬಾರದು; ಅದರಿಂದ ಏನೂ ತೆಗೆಯಬಾರದು.

ಪ್ರಕಟನೆ 2:12-17

ಪೆರ್ಗಮದಲ್ಲಿರುವ ಸಭೆಗೆ ಯೇಸುವಿನ ಪತ್ರ

12 “ಪೆರ್ಗಮದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:

“ಹರಿತವಾದ ಇಬ್ಬಾಯಿಖಡ್ಗವನ್ನು ಹೊಂದಿರುವಾತನು ನಿನಗೆ ಇವುಗಳನ್ನು ಹೇಳುತ್ತಾನೆ.

13 “ನೀನು ಎಲ್ಲಿ ವಾಸಮಾಡುತ್ತಿರುವೆ ಎಂಬುದು ನನಗೆ ತಿಳಿದಿದೆ. ಸೈತಾನನ ಸಿಂಹಾಸನ ವಿರುವ ಕಡೆಯಲ್ಲಿ ನೀನು ವಾಸಿಸುತ್ತಿರುವೆ. ಆದರೆ ನೀನು ನನಗೆ ನಂಬಿಗಸ್ತನಾಗಿರುವೆ. ಅಂತಿಪನ ಕಾಲದಲ್ಲಿಯೂ ನೀನು ನನ್ನಲ್ಲಿಟ್ಟಿರುವ ನಂಬಿಕೆಯನ್ನು ತಿಳಿಸಲು ನಿರಾಕರಿಸಲಿಲ್ಲ. ನಿನ್ನ ಪಟ್ಟಣದಲ್ಲಿ ಕೊಲ್ಲಲ್ಪಟ್ಟ ಅಂತಿಪನು ನನ್ನ ನಂಬಿಗಸ್ತ ಸಾಕ್ಷಿಯಾಗಿದ್ದನು. ನಿನ್ನ ನಗರ ಸೈತಾನನು ವಾಸಿಸುವ ನಗರವಾಗಿದೆ.

14 “ಆದರೆ ನಿನ್ನ ವಿರುದ್ಧವಾಗಿ ಹೇಳಬೇಕಾದ ಕೆಲವು ಸಂಗತಿಗಳಿವೆ. ನಿನ್ನ ಸಭೆಯಲ್ಲಿ ಬಿಳಾಮನ ದುರ್ಬೋಧನೆಗಳನ್ನು ಅನುಸರಿಸುವ ಜನರಿದ್ದಾರೆ. ಇಸ್ರೇಲಿನ ಜನರನ್ನು ಹೇಗೆ ಪಾಪಕ್ಕೆ ಒಳಗಾಗುವಂತೆ ಮಾಡಬೇಕೆಂಬುದನ್ನು ಬಿಳಾಮನು ಬಾಲಾಕನಿಗೆ ದುರ್ಬೋಧನೆ ಮಾಡಿದನು. ಆದ್ದರಿಂದ ಇಸ್ರೇಲರು ವಿಗ್ರಹಗಳಿಗೆ ಅರ್ಪಿತವಾದ ಆಹಾರವನ್ನು ತಿನ್ನುವುದರ ಮೂಲಕವಾಗಿಯೂ ಲೈಂಗಿಕ ಪಾಪಗಳನ್ನು ಮಾಡುವುದರ ಮೂಲಕವಾಗಿಯೂ ಪಾಪ ಮಾಡಿದರು. 15 ನಿನ್ನ ಸಭೆಯಲ್ಲಿಯೂ ಇದೇ ರೀತಿ ನಡೆಯುತ್ತಿದೆ. ನಿಕೊಲಾಯಿತರ ಬೋಧನೆಗಳನ್ನು ಅನುಸರಿಸುವ ಜನರು ನಿನ್ನಲ್ಲಿದ್ದಾರೆ. 16 ಆದ್ದರಿಂದ ನಿನ್ನ ಮನಸ್ಸನ್ನು ಪರಿವರ್ತಿಸಿಕೊ! ಇಲ್ಲವಾದರೆ, ನಾನು ತ್ವರಿತವಾಗಿ ನಿನ್ನಲ್ಲಿಗೆ ಬಂದು, ನನ್ನ ಬಾಯಿಂದ ಹೊರಗೆ ಬರುವ ಖಡ್ಗದಿಂದ ಆ ಜನರ ವಿರುದ್ಧ ಹೋರಾಡುತ್ತೇನೆ.

17 “ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.

“ಜಯಗಳಿಸಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಅಡಗಿಸಿಟ್ಟಿರುವ ಮನ್ನವನ್ನು[a] ಕೊಡುತ್ತೇನೆ. ಅವನಿಗೆ ನಾನು ಬಿಳುಪಾದ ಕಲ್ಲನ್ನು ಕೊಡುತ್ತೇನೆ. ಆ ಕಲ್ಲಿನ ಮೇಲೆ ಹೊಸ ಹೆಸರನ್ನು ಕೆತ್ತಲಾಗಿದೆ. ಈ ಹೊಸ ಹೆಸರು ಯಾರಿಗೂ ತಿಳಿದಿಲ್ಲ. ಈ ಕಲ್ಲನ್ನು ಪಡೆದುಕೊಂಡ ವ್ಯಕ್ತಿಯು ಮಾತ್ರ ಹೊಸ ಹೆಸರನ್ನು ತಿಳಿದುಕೊಳ್ಳುತ್ತಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International