Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 110

ಸ್ತುತಿಗೀತೆ. ರಚನೆಗಾರ: ದಾವೀದ.

110 ಯೆಹೋವನು ನನ್ನ ಒಡೆಯನಿಗೆ,
    “ನಾನು ನಿನ್ನ ಶತ್ರುಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ
    ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ಹೇಳಿದನು.

ಯೆಹೋವನು ನಿನ್ನ ರಾಜ್ಯವನ್ನು ಅಭಿವೃದ್ಧಿಪಡಿಸುವನು.
    ನಿನ್ನ ರಾಜ್ಯವು ಚೀಯೋನಿನಲ್ಲಿ ಆರಂಭಗೊಂಡು ನಿನ್ನ ಶತ್ರುಗಳ ದೇಶಗಳನ್ನು ಆವರಿಸಿಕೊಳ್ಳುವುದು.
ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ
    ಜನರು ತಾವಾಗಿಯೇ ನಿನ್ನ ಸೈನ್ಯವನ್ನು ಸೇರಿಕೊಳ್ಳುವರು.
ಅವರು ಸಮವಸ್ತ್ರಗಳನ್ನು ಧರಿಸಿಕೊಂಡು ಪ್ರತಿ ಮುಂಜಾನೆ ಸೇರಿಬರುವರು.
    ಆ ಯುವಕರು ನಿನಗೆ ಉದಯಕಾಲದ ಇಬ್ಬನಿಯಂತಿರುವರು.

ಯೆಹೋವನು ನನಗೆ, “ನೀನು ಸದಾಕಾಲ ಮೆಲ್ಕಿಜೆದೇಕನಂತಹ ಯಾಜಕನಾಗಿರುವೆ”
    ಎಂದು ವಾಗ್ದಾನ ಮಾಡಿದ್ದಾನೆ.
    ಆತನು ತನ್ನ ಮನಸ್ಸನ್ನು ಬದಲಾಯಿಸುವುದಿಲ್ಲ.

ನನ್ನ ಯೆಹೋವನು ನಿನ್ನ ಬಲಗಡೆಯಲ್ಲಿದ್ದಾನೆ.
    ಆತನು ಕೋಪಗೊಂಡಾಗ ಇತರ ರಾಜರುಗಳನ್ನು ಸೋಲಿಸಿಬಿಡುವನು.
ಆತನು ಜನಾಂಗಗಳಿಗೆ ತೀರ್ಪು ಮಾಡುವನು.
    ರಣರಂಗವು ಅವರ ಹೆಣಗಳಿಂದ ತುಂಬಿಹೋಗುವುದು.
    ಬಲಿಷ್ಠ ರಾಷ್ಟ್ರಗಳ ನಾಯಕರನ್ನು ಆತನು ದಂಡಿಸುವನು.

ರಾಜನು ಮಾರ್ಗದಲ್ಲಿ
    ತೊರೆಯ ನೀರನ್ನು ಕುಡಿದು ಬಲ ಹೊಂದುವನು.

ಜ್ಞಾನೋಕ್ತಿಗಳು 1:20-33

ಜ್ಞಾನವೆಂಬಾಕೆ

20 ಜ್ಞಾನವು ಬೀದಿಗಳಲ್ಲಿ ಕೂಗುವ ಸ್ತ್ರೀಯಂತಿದೆ. ಆಕೆಯು ಬಹಿರಂಗ ಸ್ಥಳಗಳಲ್ಲಿ ಕೂಗಿ ಕರೆಯುತ್ತಾಳೆ. 21 ಆಕೆಯು ಜನಸಂದಣಿಯ ರಸ್ತೆಚೌಕಗಳಲ್ಲಿ ಕರೆಯುತ್ತಾಳೆ. ಪಟ್ಟಣದ ಬಾಗಿಲುಗಳ ಬಳಿಯಲ್ಲಿ ಆಕೆಯು ಜನರೊಂದಿಗೆ ಮಾತಾಡುತ್ತಾಳೆ:

22 “ನೀವು ಮೂಢಜನರು. ಇನ್ನೆಷ್ಟುಕಾಲ ನೀವು ನಿಮ್ಮ ಮೂಢತನದಲ್ಲಿ ಆನಂದಿಸುವಿರಿ? ಇನ್ನೆಷ್ಟುಕಾಲ ನೀವು ವಿವೇಕವನ್ನು ಹಾಸ್ಯಮಾಡಬೇಕೆಂದಿದ್ದೀರಿ? ಇನ್ನೆಷ್ಟುಕಾಲ ನೀವು ಜ್ಞಾನವನ್ನು ದ್ವೇಷ ಮಾಡಬೇಕೆಂದಿದ್ದೀರಿ? 23 ನೀವು ನನ್ನ ಗದರಿಕೆಗೆ ಕಿವಿಗೊಟ್ಟರೆ, ನನ್ನ ಮನಸ್ಸಿನಲ್ಲಿರುವುದನ್ನೆಲ್ಲ ತಿಳಿಸುವೆನು; ನನ್ನ ಆಲೋಚನೆಗಳನ್ನು ನಿಮಗೆ ಗೊತ್ತುಪಡಿಸುವೆನು.

24 “ಆದರೆ ನೀವು ನನಗೆ ಗಮನಕೊಡಲಿಲ್ಲ. ನಾನು ಸಹಾಯಮಾಡಲು ಪ್ರಯತ್ನಿಸಿದೆ. ನಾನು ಕೈಚಾಚಿದೆ; ಆದರೆ ನೀವು ನನ್ನ ಸಹಾಯವನ್ನು ತೆಗೆದುಕೊಳ್ಳದೆ ತಿರಸ್ಕರಿಸಿದಿರಿ. 25 ನೀವು ನನಗೆ ಮುಖ ತಿರುವಿಕೊಂಡಿರಿ; ನನ್ನ ಸಲಹೆಗಳನ್ನೆಲ್ಲ ಕಡೆಗಣಿಸಿದಿರಿ; ನನ್ನ ತಿದ್ದುಪಾಟನ್ನು ತಿರಸ್ಕರಿಸಿದಿರಿ. 26 ಆದ್ದರಿಂದ ನಿಮ್ಮ ಕಷ್ಟದಲ್ಲಿ ನಾನು ನಗುವೆನು; ಅಪಾಯವು ನಿಮಗೆ ಬಡಿಯುವಾಗ ನಿಮ್ಮನ್ನು ಗೇಲಿ ಮಾಡುವೆನು. 27 ಮಹಾ ಸಂಕಷ್ಟವು ಕೆಟ್ಟ ಬಿರುಗಾಳಿಯಂತೆ ನಿಮಗೆ ಬರುವುದು. ತೊಂದರೆಗಳು ಬಲವಾದ ಗಾಳಿಯಂತೆ ನಿಮಗೆ ಬಡಿಯುವುದು. ನಿಮ್ಮ ಕಷ್ಟಗಳು ಮತ್ತು ದುಃಖಗಳು ನಿಮ್ಮ ಮೇಲೆ ಬಹು ಭಾರವಾಗಿರುತ್ತವೆ.

28 “ಇವೆಲ್ಲಾ ನಿಮಗೆ ಸಂಭವಿಸುವಾಗ ನೀವು ಸಹಾಯಕ್ಕಾಗಿ ನನ್ನನ್ನು ಕೇಳುವಿರಿ; ಆದರೆ ನಾನು ನಿಮಗೆ ಸಹಾಯ ಮಾಡುವುದಿಲ್ಲ. ನೀವು ನನಗಾಗಿ ಹುಡುಕುವಿರಿ. ಆದರೆ ನಾನು ನಿಮಗೆ ಸಿಕ್ಕುವುದಿಲ್ಲ. 29 ನಾನು ನಿಮಗೆ ಸಹಾಯ ಮಾಡುವುದಿಲ್ಲ; ಏಕೆಂದರೆ ನೀವೆಂದೂ ನನ್ನ ಜ್ಞಾನವನ್ನು ಬಯಸಲಿಲ್ಲ. ನೀವು ಯೆಹೋವನಲ್ಲಿ ಭಯಭಕ್ತಿಯಿಂದಿರಲು ನಿರ್ಧರಿಸಲಿಲ್ಲ. 30 ನೀವು ನನ್ನ ಗದರಿಕೆಯ ಮಾತುಗಳನ್ನು ತಿರಸ್ಕರಿಸಿದಿರಿ. ನಾನು ನಿಮಗೆ ಸರಿಯಾದ ದಾರಿಯನ್ನು ತೋರಿಸಿದಾಗ ನೀವು ನನಗೆ ಕಿವಿಗೊಡಲಿಲ್ಲ. 31 ಆದ್ದರಿಂದ ನೀವು ನಿಮ್ಮ ದುರ್ನಡತೆಯ ಫಲಗಳನ್ನು ಅನುಭವಿಸುವಿರಿ. ನೀವು ಬೇರೆಯವರಿಗೆ ಮಾಡಿದ ಕುಯುಕ್ತಿಗಳನ್ನೇ ಹೊಂದುವಿರಿ.

32 “ಮೂಢರು ಜ್ಞಾನವನ್ನು ತಿರಸ್ಕರಿಸುವುದರಿಂದ ಸಾವಿಗೀಡಾಗುವರು; ಅವರ ಉದಾಸೀನತೆಯೇ ಅವರನ್ನು ನಾಶಪಡಿಸುವುದು. 33 ಆದರೆ ನನಗೆ ವಿಧೇಯನಾಗುವವನು ಕ್ಷೇಮವಾಗಿಯೂ ಸುಖವಾಗಿಯೂ ಬದುಕುವನು. ಅವನು ಅಪಾಯಕ್ಕೆ ಭಯಪಡುವ ಅವಶ್ಯವಿಲ್ಲ.”

ಯಾಕೋಬನು 4:1-10

ದೇವರಿಗೆ ನಿಮ್ಮನ್ನು ಒಪ್ಪಿಸಿಕೊಳ್ಳಿ

ನಿಮ್ಮ ಹೋರಾಟಗಳು ಮತ್ತು ವಾದವಿವಾದಗಳು ಎಲ್ಲಿಂದ ಬರುತ್ತವೆಯೆಂಬುದು ನಿಮಗೆ ತಿಳಿದಿದೆಯೋ? ನಿಮ್ಮ ಸ್ವಾರ್ಥಪರ ಆಸೆಗಳಿಂದ ನಿಮ್ಮ ಹೋರಾಟಗಳು ಮತ್ತು ವಾದವಿವಾದಗಳು ಬರುತ್ತವೆ. ಅವು ನಿಮ್ಮ ಅಂತರಂಗದಲ್ಲಿ ಯುದ್ಧ ಮಾಡುತ್ತಿವೆ. ನೀವು ಅನೇಕ ವಸ್ತುಗಳಿಗಾಗಿ ಆಶಿಸುತ್ತೀರಿ. ಆದರೆ ಅವುಗಳನ್ನು ಪಡೆಯುವುದರಲ್ಲಿ ವಿಫಲರಾಗುತ್ತೀರಿ. ಆದ್ದರಿಂದ ನೀವು ಕೊಲೆ ಮಾಡುತ್ತೀರಿ ಮತ್ತು ಇತರರ ಬಗ್ಗೆ ಅಸೂಯೆಪಡುತ್ತೀರಿ. ಆದರೆ ನೀವು ಆಸೆಪಟ್ಟದ್ದನ್ನು ಇನ್ನೂ ಪಡೆಯಲಾರದವರಾಗಿರುವಿರಿ. ಆದ್ದರಿಂದ ನೀವು ವಾದವಿವಾದ ಮಾಡುವಿರಿ ಮತ್ತು ಹೊಡೆದಾಡುವಿರಿ. ನೀವು ದೇವರನ್ನು ಕೇಳಿಕೊಳ್ಳಲಿಲ್ಲ. ಆದ್ದರಿಂದಲೇ, ನೀವು ಆಸೆ ಪಟ್ಟದ್ದು ನಿಮಗೆ ದೊರೆಯಲಿಲ್ಲ. ಮತ್ತು ನೀವು ಕೇಳಿಕೊಂಡಾಗ ನಿಮಗೆ ಅವು ಸಿಗಲಿಲ್ಲ. ಏಕೆಂದರೆ ನಿಮ್ಮ ಉದ್ದೇಶವು ಸರಿಯಾಗಿರಲಿಲ್ಲ. ನೀವು ಅವುಗಳನ್ನು ಕೇವಲ ನಿಮ್ಮ ಸ್ವಂತ ಸುಖಕ್ಕಾಗಿ ಕೇಳಿಕೊಂಡಿರಿ.

ಆದ್ದರಿಂದ ನೀವು ದೇವರಿಗೆ ನಂಬಿಗಸ್ತರಾಗಿಲ್ಲ! ಇಹಲೋಕದ ಮೇಲಿರುವ ವ್ಯಾಮೋಹ ದೇವರ ಮೇಲಿರುವ ದ್ವೇಷಕ್ಕೆ ಸಮಾನವಾಗಿದೆ. ಆದ್ದರಿಂದ ಈ ಲೋಕವನ್ನು ಪ್ರೀತಿಸುವವನು ತನ್ನನ್ನು ದೇವರಿಗೆ ಶತ್ರುವನ್ನಾಗಿ ಮಾಡಿಕೊಳ್ಳುತ್ತಾನೆ. ಪವಿತ್ರ ಗ್ರಂಥವು ಅರ್ಥವಿಲ್ಲದ್ದೆಂದು ಯೋಚಿಸುವಿರಾ? “ದೇವರು ನಮ್ಮಲ್ಲಿ ಇರಿಸಿರುವ ಆತ್ಮದ ಅಪೇಕ್ಷೆಯೇನೆಂದರೆ, ನಾವು ಆತನಿಗೋಸ್ಕರ ಮಾತ್ರ ಇರಬೇಕೆಂದಷ್ಟೆ”[a] ಎಂದು ಪವಿತ್ರ ಗ್ರಂಥವು ಹೇಳುತ್ತದೆ. ಆದರೆ ದೇವರು ದಯಪಾಲಿಸಿದ ಕೃಪೆಯು ಅದಕ್ಕಿಂತಲೂ ಹೆಚ್ಚಿನದು. ಪವಿತ್ರ ಗ್ರಂಥವು ಹೇಳುವಂತೆ, “ದೇವರು ಅಹಂಕಾರಿಗಳಿಗೆ ವಿರುದ್ಧವಾಗಿರುತ್ತಾನೆ, ದೀನರಿಗಾದರೆ ಕೃಪೆಯನ್ನು ದಯಪಾಲಿಸುತ್ತಾನೆ.”(A)

ಆದ್ದರಿಂದ ದೇವರಿಗೆ ನಿಮ್ಮನ್ನು ಒಪ್ಪಿಸಿಕೊಂಡು ಸೈತಾನನನ್ನು ಎದುರಿಸಿರಿ. ಆಗ ಅವನು ನಿಮ್ಮಿಂದ ದೂರ ಓಡಿಹೋಗುತ್ತಾನೆ. ದೇವರ ಸಮೀಪಕ್ಕೆ ಬನ್ನಿ, ಆಗ ದೇವರು ನಿಮ್ಮ ಸಮೀಪಕ್ಕೆ ಬರುತ್ತಾನೆ. ನೀವು ಪಾಪಿಗಳು, ಆದ್ದರಿಂದ ನಿಮ್ಮ ಜೀವಿತಗಳಿಂದ ಪಾಪಗಳನ್ನು ತೊಳೆದು ಹಾಕಿರಿ. ನೀವು ದೇವರನ್ನು ಮತ್ತು ಈ ಲೋಕವನ್ನು ಏಕಕಾಲದಲ್ಲಿ ಅನುಸರಿಸಲು ಪ್ರಯತ್ನಿಸುತ್ತಿರುವಿರಿ. ನಿಮ್ಮ ಆಲೋಚನೆಗಳನ್ನು ಪರಿಶುದ್ಧಗೊಳಿಸಿರಿ. ದುಃಖಪಡಿರಿ, ಗೋಳಾಡಿರಿ, ಕಣ್ಣೀರಿಡಿರಿ! ನಗುವುದನ್ನು ಬಿಟ್ಟು ಗೋಳಾಡಿರಿ. ಸಂತೋಷಿಸುವುದನ್ನು ಬಿಟ್ಟು ವ್ಯಸನಪಡಿರಿ. 10 ಪ್ರಭುವಿನ ಎದುರಿನಲ್ಲಿ ದೀನರಾಗಿರಿ, ಆತನು ನಿಮ್ಮನ್ನು ಉನ್ನತ ಮಟ್ಟಕ್ಕೆ ತರುತ್ತಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International