Revised Common Lectionary (Semicontinuous)
ರಚನೆಗಾರರು: ಕೋರಹೀಯರು.
46 ದೇವರು ನಮಗೆ ಆಶ್ರಯವೂ ಬಲವೂ ಆಗಿದ್ದಾನೆ.
ಆತನು ಆಪತ್ತಿನಲ್ಲಿ ನಮಗೆ ಸಹಾಯಮಾಡಲು ಸದಾ ಸಿದ್ಧನಾಗಿರುವನು.
2 ಆದ್ದರಿಂದ ಭೂಮಿಯು ನಡುಗಿದರೂ ಬೆಟ್ಟಗಳು
ಸಮುದ್ರದೊಳಗೆ ಮುಳುಗಿಹೋದರೂ ನಮಗೇನೂ ಭಯವಿಲ್ಲ.
3 ಸಮುದ್ರಗಳು ಭೋರ್ಗರೆಯುತ್ತಾ ನೊರೆಕಾರಿದರೂ
ಅವುಗಳ ಅಲ್ಲೋಲಕಲ್ಲೋಲಗಳಿಂದ ಬೆಟ್ಟಗಳು ನಡುಗಿದರೂ ನಮಗೇನೂ ಭಯವಿಲ್ಲ.
4 ಒಂದು ನದಿ ಅದೆ; ಅದರ ಕಾಲುವೆಗಳು ಮಹೋನ್ನತನಾದ ದೇವರ ಪವಿತ್ರ ಪಟ್ಟಣವಾಗಿರುವ
ದೇವನಗರವನ್ನು ಸಂತೋಷಪಡಿಸುತ್ತದೆ.
5 ದೇವರು ಆ ಪಟ್ಟಣದಲ್ಲಿದ್ದಾನೆ, ಆದ್ದರಿಂದ ಅದೆಂದಿಗೂ ನಾಶವಾಗುವುದಿಲ್ಲ.
ಸೂರ್ಯೋದಯಕ್ಕಿಂತ ಮೊದಲೇ ದೇವರು ಅದರ ಸಹಾಯಕ್ಕಾಗಿ ಬರುವನು.
6 ಆತನು ಗರ್ಜಿಸಲು, ಜನಾಂಗಗಳು ಭಯದಿಂದ ನಡುಗುತ್ತವೆ, ರಾಷ್ಟ್ರಗಳು ಬಿದ್ದುಹೋಗುತ್ತವೆ;
ಭೂಮಿಯು ಕರಗಿಹೋಗುವುದು.
7 ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ.
ಯಾಕೋಬನ ದೇವರು ನಮ್ಮ ಆಶ್ರಯದುರ್ಗವಾಗಿದ್ದಾನೆ.
8 ಬನ್ನಿರಿ, ಯೆಹೋವನ ಕಾರ್ಯಗಳನ್ನು ನೋಡಿರಿ;
ಭೂಮಿಯ ಮೇಲೆ ಆತನು ಮಾಡುತ್ತಿರುವ ಭಯಂಕರವಾದ ಕಾರ್ಯಗಳನ್ನು ನೋಡಿರಿ.
9 ಇಡೀ ಪ್ರಪಂಚದಲ್ಲಿ ಆತನು ಯುದ್ಧವನ್ನು ನಿಲ್ಲಿಸುವನು;
ಬಿಲ್ಲುಗಳನ್ನೂ ಗುರಾಣಿಗಳನ್ನೂ[a] ಮುರಿದುಹಾಕುವನು; ಗುರಾಣಿಗಳನ್ನು ಬೆಂಕಿಯಿಂದ ಸುಟ್ಟುಹಾಕುವನು.
10 ದೇವರು ಹೀಗೆನ್ನುವನು: “ಹೋರಾಡುವುದನ್ನು ನಿಲ್ಲಿಸಿ, ನಾನೇ ದೇವರೆಂಬುದನ್ನು ಕಲಿತುಕೊಳ್ಳಿ!
ನಾನು ಜನಾಂಗಗಳನ್ನು ಸೋಲಿಸುವೆನು!
ಇಡೀ ಲೋಕವನ್ನು ಹತೋಟಿಗೆ ತೆಗೆದುಕೊಳ್ಳುವೆನು!”
11 ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ.
ಯಾಕೋಬನ ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ.
25 ಆದ್ದರಿಂದ ಸಹೋದರರು ಈಜಿಪ್ಟನ್ನು ಬಿಟ್ಟು, ತಮ್ಮ ತಂದೆಯಿರುವ ಕಾನಾನ್ ದೇಶಕ್ಕೆ ಹೋದರು. 26 ಸಹೋದರರು ತಮ್ಮ ತಂದೆಗೆ, “ಅಪ್ಪಾ, ಯೋಸೇಫನು ಇನ್ನೂ ಬದುಕಿದ್ದಾನೆ; ಅವನು ಈಜಿಪ್ಟ್ ದೇಶಕ್ಕೆಲ್ಲಾ ರಾಜ್ಯಪಾಲನಾಗಿದ್ದಾನೆ” ಎಂದು ಹೇಳಿದರು.
ಅವರ ತಂದೆಗೆ ಆಶ್ಚರ್ಯವಾಯಿತು. ಆತನು ಅವರನ್ನು ನಂಬಲಿಲ್ಲ. 27 ಆದರೆ ಯೋಸೇಫನು ತಮಗೆ ಹೇಳಿದ್ದೆಲ್ಲವನ್ನು ಸಹೋದರರು ತಮ್ಮ ತಂದೆಗೆ ಹೇಳಿದರು. ಆಮೇಲೆ ತನ್ನನ್ನು ಈಜಿಪ್ಟಿಗೆ ಕರೆದುಕೊಂಡು ಬರಲು ಯೋಸೇಫನು ಕಳುಹಿಸಿದ್ದ ರಥಗಳನ್ನು ಯಾಕೋಬನು ನೋಡಿ ಉಲ್ಲಾಸಪಟ್ಟನು. 28 ಇಸ್ರೇಲನು, “ಈಗ ನಾನು ನಿಮ್ಮನ್ನು ನಂಬುತ್ತೇನೆ. ನನ್ನ ಮಗನಾದ ಯೋಸೇಫನು ಇನ್ನೂ ಬದುಕಿದ್ದಾನೆ. ನಾನು ಸಾಯುವ ಮೊದಲು ಅವನನ್ನು ನೋಡುತ್ತೇನೆ” ಎಂದು ಹೇಳಿದನು.
ದೇವರು ಇಸ್ರೇಲನಿಗೆ ಕೊಟ್ಟ ಭರವಸೆ
46 ಆದ್ದರಿಂದ ಇಸ್ರೇಲನು ಈಜಿಪ್ಟಿಗೆ ಪ್ರಯಾಣ ಬೆಳೆಸಿದನು. ಅವನು ಬೇರ್ಷೆಬಕ್ಕೆ ಹೋಗಿ ತನ್ನ ತಂದೆಯಾದ ಇಸಾಕನ ದೇವರನ್ನು ಆರಾಧಿಸಿ ಯಜ್ಞಗಳನ್ನು ಅರ್ಪಿಸಿದನು. 2 ಆ ರಾತ್ರಿ ದೇವರು ಕನಸಿನಲ್ಲಿ ಅವನೊಂದಿಗೆ ಮಾತನಾಡಿದನು. ದೇವರು ಅವನನ್ನು, “ಯಾಕೋಬನೇ, ಯಾಕೋಬನೇ” ಎಂದು ಕರೆದನು.
ಅದಕ್ಕೆ ಇಸ್ರೇಲನು, “ಇಗೋ, ಇದ್ದೇನೆ” ಎಂದು ಉತ್ತರಕೊಟ್ಟನು.
3 ದೇವರು ಅವನಿಗೆ, “ನಾನೇ ದೇವರು, ನಾನೇ ನಿನ್ನ ತಂದೆಯ ದೇವರು. ನೀನು ಈಜಿಪ್ಟಿಗೆ ಹೋಗಲು ಹೆದರಬೇಡ. ಈಜಿಪ್ಟಿನಲ್ಲಿ ನಿನ್ನನ್ನು ದೊಡ್ಡ ಜನಾಂಗವನ್ನಾಗಿ ಮಾಡುವೆ. 4 ನಾನು ನಿನ್ನೊಂದಿಗೆ ಈಜಿಪ್ಟಿಗೆ ಬರುವೆನು. ಬಳಿಕ ನಾನೇ ನಿನ್ನನ್ನು ಮತ್ತೆ ಈಜಿಪ್ಟಿನಿಂದ ಕರೆದುಕೊಂಡು ಬರುವೆನು. ನೀನು ಈಜಿಪ್ಟಿನಲ್ಲಿ ಮರಣ ಹೊಂದಿದರೂ ಯೋಸೇಫನು ನಿನ್ನ ಸಂಗಡವಿರುವನು. ನೀನು ಸತ್ತಾಗ ಅವನು ತನ್ನ ಕೈಗಳಿಂದ ನಿನ್ನ ಕಣ್ಣುಗಳನ್ನು ಮುಚ್ಚುವನು” ಎಂದು ಹೇಳಿದನು.
ಈಜಿಪ್ಟಿಗೆ ಇಸ್ರೇಲನ ಪ್ರಯಾಣ
5 ಆಮೇಲೆ ಯಾಕೋಬನು ಬೇರ್ಷೆಬವನ್ನು ಬಿಟ್ಟು ಈಜಿಪ್ಟಿಗೆ ಪ್ರಯಾಣ ಮಾಡಿದನು. ಇಸ್ರೇಲನ ಗಂಡುಮಕ್ಕಳು ತಮ್ಮ ತಂದೆಯನ್ನೂ ತಮ್ಮ ಹೆಂಡತಿಯರನ್ನೂ ತಮ್ಮ ಎಲ್ಲಾ ಮಕ್ಕಳನ್ನೂ ಕರೆದುಕೊಂಡು ಹೋದರು. ಫರೋಹನು ಕಳುಹಿಸಿದ್ದ ರಥಗಳಲ್ಲಿ ಅವರು ಪ್ರಯಾಣ ಮಾಡಿದರು. 6 ಇದಲ್ಲದೆ ಅವರು ತಮ್ಮ ದನಕರುಗಳನ್ನೂ ಕಾನಾನ್ ದೇಶದಲ್ಲಿ ತಾವು ಹೊಂದಿದ್ದ ಪ್ರತಿಯೊಂದನ್ನೂ ತೆಗೆದುಕೊಂಡು ಹೋದರು. ಹೀಗೆ ಇಸ್ರೇಲನು ತನ್ನ ಎಲ್ಲಾ ಮಕ್ಕಳೊಂದಿಗೆ ಮತ್ತು ತನ್ನ ಕುಟುಂಬದೊಂದಿಗೆ ಈಜಿಪ್ಟಿಗೆ ಹೋದನು. 7 ಅವನ ಜೊತೆಯಲ್ಲಿ ಅವನ ಗಂಡುಮಕ್ಕಳು, ಹೆಣ್ಣುಮಕ್ಕಳು ಮತ್ತು ಮೊಮ್ಮಕ್ಕಳು ಇದ್ದರು. ಅವನ ಸಂಸಾರದವರೆಲ್ಲ ಅವನ ಜೊತೆ ಈಜಿಪ್ಟಿಗೆ ಹೋದರು.
33 ಯೆಹೂದ್ಯನಾಯಕರು ಈ ಮಾತುಗಳನ್ನು ಕೇಳಿ ಬಹು ಕೋಪಗೊಂಡು, ಅಪೊಸ್ತಲರನ್ನು ಕೊಲ್ಲಬೇಕೆಂದಿದ್ದರು. 34 ಆಗ ಫರಿಸಾಯರಲ್ಲಿ ಒಬ್ಬನು ಸಭೆಯಲ್ಲಿ ಎದ್ದು ನಿಂತುಕೊಂಡನು. ಅವನ ಹೆಸರು ಗಮಲಿಯೇಲ. ಅವನು ಧರ್ಮೋಪದೇಶಕನಾಗಿದ್ದನು ಮತ್ತು ಜನರೆಲ್ಲಾ ಅವನನ್ನು ಗೌರವಿಸುತ್ತಿದ್ದರು. ಕೆಲವು ನಿಮಿಷಗಳವರೆಗೆ ಅಪೊಸ್ತಲರನ್ನು ಸಭೆಯಿಂದ ಹೊರಗೆ ಕಳುಹಿಸಬೇಕೆಂದು ಅವನು ಜನರಿಗೆ ಹೇಳಿದನು. 35 ಬಳಿಕ ಅವನು ಅವರಿಗೆ, “ಇಸ್ರೇಲ್ ಜನರೇ, ನೀವು ಇವರಿಗೆ ಮಾಡಬೇಕೆಂದಿರುವುದರ ಬಗ್ಗೆ ಎಚ್ಚರಿಕೆಯಾಗಿರಿ! 36 ಒಮ್ಮೆ, ತೈದ ಎಂಬುವನು ಬಂದದ್ದು ನಿಮ್ಮ ನೆನಪಿನಲ್ಲಿದೆಯೋ? ಅವನು ತನ್ನನ್ನು ಮಹಾಪುರುಷನೆಂದು ಹೇಳಿಕೊಂಡನು. ಸುಮಾರು ನಾನೂರು ಮಂದಿ ಅವನ ಜೊತೆ ಸೇರಿದರು. ಆದರೆ ಅವನು ಕೊಲ್ಲಲ್ಪಟ್ಟನು. ಅವನನ್ನು ಹಿಂಬಾಲಿಸುತ್ತಿದ್ದವರೆಲ್ಲ ಚದರಿ ಓಡಿಹೋದರು. ಅವರಿಂದ ಏನೂ ಮಾಡಲಾಗಲಿಲ್ಲ. 37 ಬಳಿಕ, ಯೂದ ಎಂಬುವನು ಗಲಿಲಾಯದಿಂದ ಬಂದನು. ಅದು ಜನಗಣತಿಯ ಕಾಲವಾಗಿತ್ತು. ಅವನು ಸಹ ಅನುಯಾಯಿಗಳ ಒಂದು ಗುಂಪನ್ನೇ ಕಟ್ಟಿದ. ಅವನು ಸಹ ಕೊಲ್ಲಲ್ಪಟ್ಟನು. ಅವನ ಅನುಯಾಯಿಗಳೆಲ್ಲಾ ಚದರಿ ಓಡಿಹೋದರು. 38 ಆದ್ದರಿಂದ ಈಗ ನಾನು ನಿಮಗೆ ಹೇಳುವುದೇನೆಂದರೆ, ಈ ಜನರಿಂದ ದೂರವಾಗಿರಿ. ಅವರನ್ನು ಅವರಷ್ಟಕ್ಕೇ ಬಿಟ್ಟುಬಿಡಿರಿ. ಅವರ ಯೋಜನೆಯು ಮನುಷ್ಯರಿಂದ ಬಂದದ್ದಾಗಿದ್ದರೆ, ಅದು ಉರುಳಿಹೋಗುವುದು. 39 ಆದರೆ ಅದು ದೇವರಿಂದ ಬಂದದ್ದಾಗಿದ್ದರೆ, ನೀವು ಅವರನ್ನು ತಡೆಯಲು ಸಾಧ್ಯವಾಗುವುದಿಲ್ಲ. ನೀವು ದೇವರಿಗೇ ವಿರುದ್ಧವಾಗಿ ಹೋರಾಡಿದಂತಾದೀತು!” ಎಂದು ಹೇಳಿದನು.
ಗಮಲಿಯೇಲನ ಸಲಹೆಗೆ ಯೆಹೂದ್ಯ ನಾಯಕರು ಒಪ್ಪಿಕೊಂಡರು. 40 ಅವರು ಅಪೊಸ್ತಲರನ್ನು ಒಳಗೆ ಕರೆಸಿ, ಹೊಡೆಸಿ, ಯೇಸುವಿನ ಬಗ್ಗೆ ಜನರಿಗೆ ಹೇಳಕೂಡದೆಂದು ಎಚ್ಚರಿಸಿ ಕಳುಹಿಸಿ ಬಿಟ್ಟರು. 41 ಅಪೊಸ್ತಲರು ಸಭೆಯಿಂದ ಹೊರಟುಹೋದರು. ಯೇಸುವಿನ ಹೆಸರಿಗಾಗಿ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದುಕೊಂಡೆವೆಂದು ಅವರು ಸಂತೋಷಪಟ್ಟರು. 42 ಅವರು ಜನರಿಗೆ ಉಪದೇಶಿಸುವುದನ್ನು ನಿಲ್ಲಿಸಲಿಲ್ಲ. ಯೇಸುವೇ ಕ್ರಿಸ್ತನೆಂಬ ಶುಭವಾರ್ತೆಯನ್ನು ಜನರಿಗೆ ಹೇಳುವುದನ್ನು ಮುಂದುವರಿಸಿದರು. ಅವರು ಪ್ರತಿದಿನ ದೇವಾಲಯದಲ್ಲಿಯೂ ಜನರ ಮನೆಗಳಲ್ಲಿಯೂ ಉಪದೇಶಿಸುತ್ತಿದ್ದರು.
Kannada Holy Bible: Easy-to-Read Version. All rights reserved. © 1997 Bible League International