Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಯೋನ 3:1-5

ದೇವರ ಕರೆಗೆ ಯೋನನ ವಿಧೇಯತೆ

ಯೆಹೋವನು ಯೋನನ ಸಂಗಡ ತಿರುಗಿ ಮಾತನಾಡಿದನು. ಆತನು ಹೇಳಿದ್ದೇನೆಂದರೆ, “ಮಹಾನಗರವಾದ ನಿನೆವೆಗೆ ನೀನು ಎದ್ದುಹೋಗಿ ಅಲ್ಲಿ ನಾನು ಹೇಳಿದ್ದನ್ನು ಅವರಿಗೆ ಸಾರು.”

ಯೋನನು ಯೆಹೋವನ ಆಜ್ಞೆಗೆ ವಿಧೇಯನಾಗಿ ನಿನೆವೆಗೆ ಬಂದನು. ನಿನೆವೆಯು ಬಹು ವಿಶಾಲವಾದ ಪಟ್ಟಣ. ಅದು ಮೂರು ದಿನಗಳ ಪ್ರಯಾಣದಷ್ಟು ದೊಡ್ಡದಿತ್ತು.

ಯೋನನು ನಗರದ ಮಧ್ಯಕ್ಕೆ ಹೋಗಿ ಜನರಿಗೆ ಸಾರಲಿಕ್ಕೆ ಪ್ರಾರಂಭಿಸಿದನು. “ನಲವತ್ತು ದಿನಗಳು ಕಳೆದ ಬಳಿಕ ನಿನೆವೆಯು ನಾಶವಾಗುವದು” ಎಂದು ಜನರಿಗೆ ಸಾರಿದನು.

ನಿನೆವೆಯ ಜನರು ದೇವರಿಂದ ಬಂದ ಸಂದೇಶವನ್ನು ನಂಬಿದರು. ಆ ಜನರು ತಮ್ಮ ಪಾಪಗಳ ಕುರಿತು ಯೋಚಿಸಲು ಉಪವಾಸ ಮಾಡಿದರು. ತಮ್ಮ ಪಶ್ಚಾತ್ತಾಪಕ್ಕೆ ಗುರುತಾಗಿ ಶೋಕವಸ್ತ್ರವನ್ನು ಧರಿಸಿದರು. ನಗರದ ಎಲ್ಲಾ ಜನರು ಹೀಗೆ ಮಾಡಿದರು. ಉನ್ನತ ಅಧಿಕಾರಿಗಳಿಂದ ಹಿಡಿದು ಕೀಳು ಜನರ ತನಕ ಹಾಗೆ ಮಾಡಿದರು.

ಯೋನ 3:10

10 ಜನರು ಮಾಡಿದವುಗಳನ್ನು ದೇವರು ನೋಡಿದನು; ಅವರು ದುಷ್ಟತನ ಮಾಡುವದನ್ನು ನಿಲ್ಲಿಸಿದ್ದನ್ನು ಗಮನಿಸಿದನು. ಆತನು ಅವರನ್ನು ದಂಡಿಸಲಿಲ್ಲ.

ಕೀರ್ತನೆಗಳು 62:5-12

ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು.
    ನನ್ನ ನಿರೀಕ್ಷೆ ದೇವರಲ್ಲಿಯೇ.
ಆತನೇ ನನಗೆ ಬಂಡೆಯೂ
    ರಕ್ಷಣೆಯೂ ಆಶ್ರಯದುರ್ಗವೂ ಆಗಿದ್ದಾನೆ.
ನನ್ನ ರಕ್ಷಣೆಯೂ ಮಾನವೂ ದೇವರೇ.
    ಆತನೇ ನನಗೆ ಭದ್ರವಾದ ದುರ್ಗವೂ ಆಶ್ರಯಸ್ಥಾನವೂ ಆಗಿದ್ದಾನೆ.
ಜನರೇ, ಯಾವಾಗಲೂ ದೇವರನ್ನೇ ನಂಬಿಕೊಂಡಿರಿ.
    ನಿಮ್ಮ ಕಷ್ಟಗಳನ್ನೆಲ್ಲಾ ಆತನಿಗೆ ಹೇಳಿಕೊಳ್ಳಿರಿ.
    ಆತನೇ ನಮ್ಮ ಆಶ್ರಯಸ್ಥಾನ.

ಸಾಮಾನ್ಯ ಜನರು ಕೇವಲ ಉಸಿರಷ್ಟೇ.
    ಶ್ರೇಷ್ಠರು ಕೇವಲ ಕ್ಷಣಕಾಲವಷ್ಟೇ.
ತೂಗಿನೋಡಿದರೆ ಅವರು ಕೇವಲ ಶೂನ್ಯ;
    ಉಸಿರಿಗಿಂತಲೂ ಹಗುರ.
10 ಅನ್ಯಾಯದಿಂದ ಸಂಪಾದಿಸಿದ್ದರಲ್ಲಿ ನಂಬಿಕೆ ಇಡಬೇಡಿ.
    ಕದ್ದವಸ್ತುಗಳಲ್ಲಿ ಜಂಬಪಡಬೇಡಿ.
ಐಶ್ವರ್ಯವು ಅಧಿಕವಾಗುತ್ತಿದ್ದರೂ
    ಅದರಲ್ಲಿ ಮನಸ್ಸಿಡಬೇಡಿ.
11 “ಶಕ್ತಿಯೂ ದೇವರಿಂದಲೇ”
    ಎಂದು ದೇವರು ನುಡಿದಿದ್ದಾನೆ.

12 ನನ್ನ ಒಡೆಯನೇ, ನೀನು ಪ್ರೀತಿಸ್ವರೂಪನಾಗಿರುವೆ.
    ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವವನು ನೀನೇ.

1 ಕೊರಿಂಥದವರಿಗೆ 7:29-31

29 ಸಹೋದರ ಸಹೋದರಿಯರೇ, ನನ್ನ ಅಭಿಪ್ರಾಯ ಇದು: ನಮಗೆ ಹೆಚ್ಚು ಸಮಯ ಉಳಿದಿಲ್ಲ. ಆದ್ದರಿಂದ, ಹೆಂಡತಿಯರನ್ನು ಹೊಂದಿರುವ ಜನರು ಹೆಂಡತಿಯರಿಲ್ಲದವರಂತೆ ಪ್ರಭುವಿನ ಸೇವೆಗಾಗಿ ತಮ್ಮ ಸಮಯವನ್ನು ಉಪಯೋಗಿಸಬೇಕು. 30 ದುಃಖದಿಂದಿರುವ ಜನರು ದುಃಖವಿಲ್ಲದವರಂತೆ ಜೀವಿಸಬೇಕು. ಸಂತೋಷದಿಂದ ಇರುವ ಜನರು ಸಂತೋಷವಿಲ್ಲದ ಜನರಂತೆ ಜೀವಿಸಬೇಕು. ವಸ್ತುಗಳನ್ನು ಕೊಂಡುಕೊಳ್ಳುವ ಜನರು ಏನೂ ಇಲ್ಲದವರಂತೆ ಜೀವಿಸಬೇಕು. 31 ಈ ಲೋಕದ ವಸ್ತುಗಳನ್ನು ಉಪಯೋಗಿಸುವ ಜನರು ತಮಗೆ ಆ ವಸ್ತುಗಳು ಮುಖ್ಯವಲ್ಲವೆಂಬಂತೆ ಜೀವಿಸಬೇಕು. ಏಕೆಂದರೆ, ಈ ಲೋಕದ ಇಂದಿನ ಸ್ಥಿತಿಯು ಬಹು ಬೇಗನೆ ಗತಿಸಿಹೋಗುವುದು.

ಮಾರ್ಕ 1:14-20

ಗಲಿಲಾಯದಲ್ಲಿ ಯೇಸುವಿನ ಸೇವೆಯ ಆರಂಭ

(ಮತ್ತಾಯ 4:12-17; ಲೂಕ 4:14-15)

14 ಯೋಹಾನನನ್ನು ಸೆರೆಮನೆಗೆ ಹಾಕಿದ ಮೇಲೆ, ಯೇಸು ಗಲಿಲಾಯಕ್ಕೆ ಹೋಗಿ ಜನರಿಗೆ, 15 “ಕಾಲ ಪರಿಪೂರ್ಣವಾಯಿತು. ದೇವರ ರಾಜ್ಯ ಸಮೀಪಿಸಿತು. ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ” ಎಂಬ ದೇವರ ಸುವಾರ್ತೆಯನ್ನು ಉಪದೇಶಿಸಿದನು.

ಯೇಸುವಿನ ಪ್ರಥಮ ಶಿಷ್ಯರು

(ಮತ್ತಾಯ 4:18-22; ಲೂಕ 5:1-11)

16 ಯೇಸು ಗಲಿಲಾಯ ಸರೋವರದ ಬಳಿ ನಡೆದುಹೋಗುತ್ತಿದ್ದಾಗ ಸೀಮೋನನನ್ನು ಮತ್ತು ಸೀಮೋನನ ಸಹೋದರನಾದ ಅಂದ್ರೆಯನನ್ನು ಕಂಡನು. ಇವರಿಬ್ಬರೂ ಬೆಸ್ತರಾಗಿದ್ದರು. ಇವರು ಮೀನುಗಳನ್ನು ಹಿಡಿಯಲು ಸರೋವರದೊಳಕ್ಕೆ ಬಲೆಯನ್ನು ಬೀಸುತ್ತಿದ್ದರು. 17 ಯೇಸು, “ಬನ್ನಿರಿ, ನನ್ನನ್ನು ಹಿಂಬಾಲಿಸಿರಿ, ನಾನು ನಿಮ್ಮನ್ನು ಬೇರೆ ವಿಧದ ಬೆಸ್ತರನ್ನಾಗಿ ಮಾಡುವೆನು. ಇನ್ನು ಮೇಲೆ ನೀವು ಒಂದುಗೂಡಿಸುವುದು ಜನರನ್ನೇ, ಮೀನುಗಳನ್ನಲ್ಲ” ಎಂದು ಅವರಿಗೆ ಹೇಳಿದನು. 18 ಆಗ ಅವರು ತಮ್ಮ ಬಲೆಗಳನ್ನು ಅಲ್ಲಿಯೇ ಬಿಟ್ಟು ಆತನನ್ನು ಹಿಂಬಾಲಿಸಿದರು.

19 ಯೇಸು ಗಲಿಲಾಯ ಸರೋವರದ ಬಳಿಯಲ್ಲಿ ಇನ್ನೂ ತಿರುಗಾಡುತ್ತಲೇ ಇದ್ದಾಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೆಂಬ ಇಬ್ಬರು ಸಹೋದರರನ್ನು ಕಂಡನು. ಅವರು ಮೀನುಗಳನ್ನು ಹಿಡಿಯಲು ಬಲೆಯನ್ನು ಸಿದ್ಧಪಡಿಸುತ್ತಾ ತಮ್ಮ ದೋಣಿಯಲ್ಲಿದ್ದರು. 20 ಅವರ ತಂದೆಯಾದ ಜೆಬೆದಾಯನೂ ಅವನ ಕೆಲಸಗಾರರೂ ಸಹೋದರರೊಂದಿಗೆ ದೋಣಿಯಲ್ಲಿದ್ದರು. ಯೇಸು ಅವರನ್ನು ಕರೆದನು. ಕೂಡಲೇ ಅವರು ತಮ್ಮ ತಂದೆಯನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International