Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 111

111 ಯೆಹೋವನಿಗೆ ಸ್ತೋತ್ರವಾಗಲಿ!
ನೀತಿವಂತರ ಸಭೆಯಲ್ಲಿ ನಾನು ಪೂರ್ಣಹೃದಯದಿಂದ
    ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
ಯೆಹೋವನು ಮಹತ್ಕಾರ್ಯಗಳನ್ನು ಮಾಡುವನು.
    ಜನರು ಅವುಗಳಲ್ಲಿ ಸಂತೋಷಿಸುತ್ತಾ ಅವುಗಳನ್ನೇ ಧ್ಯಾನಿಸುವರು.
ಆತನು ಮಹತ್ವವಾದ ಮತ್ತು ಅದ್ಭುತವಾದ ಕಾರ್ಯಗಳನ್ನು ಮಾಡುವನು.
    ಆತನ ನೀತಿಯು ಶಾಶ್ವತವಾದದ್ದು.
ದೇವರು ಅಮೋಘವಾದ ಕಾರ್ಯಗಳನ್ನು ಮಾಡುವುದರಿಂದ
    ಆತನ ದಯೆಯನ್ನೂ ಕೃಪೆಯನ್ನೂ ಜ್ಞಾಪಿಸಿಕೊಳ್ಳುತ್ತೇವೆ.
ಆತನು ತನ್ನ ಭಕ್ತರಿಗೆ ಆಹಾರವನ್ನು ಒದಗಿಸುವನು;
    ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
ಆತನು ಅನ್ಯಜನಾಂಗಗಳ ದೇಶವನ್ನು
    ತನ್ನ ಜನರಿಗೆ ಕೊಡುವುದರ ಮೂಲಕ ಪ್ರಬಲವಾದ ಕಾರ್ಯಗಳನ್ನು ಮಾಡಿದ್ದಾನೆ.
ಆತನ ಪ್ರತಿಯೊಂದು ಕಾರ್ಯವು ಒಳ್ಳೆಯದೂ ನ್ಯಾಯವಾದದ್ದೂ ಆಗಿದೆ.
    ಆತನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
ದೇವರ ಆಜ್ಞೆಗಳು ಶಾಶ್ವತವಾಗಿವೆ.
    ಅವು ಯಥಾರ್ಥವಾಗಿಯೂ ಮತ್ತು ಶುದ್ಧವಾಗಿಯೂ ಇವೆ.
ಆತನು ತನ್ನ ಜನರನ್ನು ರಕ್ಷಿಸಿ ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆ.
    ಆತನ ಹೆಸರು ಅದ್ಭುತವಾಗಿಯೂ ಪರಿಶುದ್ಧವಾಗಿಯೂ ಇದೆ.
10 ಯೆಹೋವನ ಮೇಲಿರುವ ಭಯಭಕ್ತಿಗಳಿಂದಲೇ ಜ್ಞಾನವು ಆರಂಭವಾಗುತ್ತದೆ.
    ಆತನಲ್ಲಿ ಭಯಭಕ್ತಿಯುಳ್ಳವರು ಜ್ಞಾನಪೂರ್ಣರಾಗಿದ್ದಾರೆ.
ಆತನಿಗೆ ಸದಾಕಾಲ ಸ್ತೋತ್ರವಾಗಲಿ.

ಧರ್ಮೋಪದೇಶಕಾಂಡ 3:23-29

ಕಾನಾನ್ ದೇಶದೊಳಗೆ ಮೋಶೆಗೆ ಪ್ರವೇಶವಿಲ್ಲ

23 “ನಾನು ನನ್ನ ಮನವಿಯನ್ನು ನೆರವೇರಿಸಲು ಯೆಹೋವನನ್ನು ಬೇಡಿಕೊಂಡೆನು. 24 ನಾನು, ‘ಯೆಹೋವನೇ, ನನ್ನ ಒಡೆಯನೇ, ನಾನು ನಿನ್ನ ಸೇವಕ. ನಿನ್ನ ತ್ರಾಣವುಳ್ಳ ಹಸ್ತದಿಂದ ಮಾಡಿದ ಪರಾಕ್ರಮದ ಕಾರ್ಯಗಳನ್ನು ನೀನು ನನಗೆ ಸ್ವಲ್ಪ ಮಟ್ಟಿಗೆ ತೋರಿಸಿರುವೆ. ನೀನು ಮಾಡಿದ ಮಹಾಕೃತ್ಯಗಳನ್ನು ಮಾಡಲು ಪರಲೋಕದ ಅಥವಾ ಭೂಲೋಕದ ಯಾವ ದೇವರುಗಳಿಗೂ ಸಾಧ್ಯವಿಲ್ಲ. 25 ನಾನು ಜೋರ್ಡನ್ ನದಿ ದಾಟಿ, ನೀನು ನಮಗೆ ಕೊಡುವ ಉತ್ತಮವಾದ ದೇಶವನ್ನು ನಾನು ನೋಡುವಂತೆ ಮಾಡು. ಅದರ ಮನೋಹರವಾದ ಬೆಟ್ಟಪ್ರದೇಶಗಳನ್ನೂ ಲೆಬನೋನ್ ಪ್ರಾಂತ್ಯಗಳನ್ನೂ ನೋಡುವಂತೆ ಮಾಡು’ ಎಂದು ಬೇಡಿದೆನು.

26 “ಆದರೆ ನಿಮ್ಮ ಕಾರಣದಿಂದ ಯೆಹೋವನು ನನ್ನ ಮೇಲೆ ಕೋಪಗೊಂಡಿದ್ದನು. ಆತನು ನನಗೆ ಕಿವಿಗೊಡಲಿಲ್ಲ. ಆತನು ನನಗೆ ಹೇಳಿದ್ದೇನೆಂದರೆ: ‘ಅಷ್ಟೇ ಸಾಕು! ಇನ್ನು ಈ ವಿಷಯವನ್ನು ನೀನು ಎತ್ತಬಾರದು. 27 ನೀನು ಪಿಸ್ಗಾ ಬೆಟ್ಟವನ್ನು ಹತ್ತಿ ಉತ್ತರ, ಪಶ್ಚಿಮ, ಪೂರ್ವ, ದಕ್ಷಿಣ ದಿಕ್ಕುಗಳ ಕಡೆಗೆ ನೋಡು ಮತ್ತು ಆನಂದಿಸು. ಆದರೆ ನೀನು ಜೋರ್ಡನ್ ನದಿ ದಾಟಿ ಆ ಪ್ರದೇಶಗಳನ್ನು ಪ್ರವೇಶಿಸುವುದಿಲ್ಲ. 28 ನೀನು ಯೆಹೋಶುವನನ್ನು ಪ್ರೋತ್ಸಾಹಿಸು. ಅವನಿಗೆ ವಿಷಯಗಳನ್ನೆಲ್ಲಾ ತಿಳಿಯಪಡಿಸು. ಅವನು ಜನರನ್ನು ಜೋರ್ಡನ್ ನದಿಯಾಚೆ ನಡೆಸಬೇಕು. ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳಲು ಅವನು ಅವರಿಗೆ ಸಹಾಯ ಮಾಡುವನು. ಆದ್ದರಿಂದ ಅವನನ್ನು ಬಲಪಡಿಸು’ ಎಂದು ಹೇಳಿದನು.

29 “ಅಂತೆಯೇ ನಾವು ಬೇತ್‌ಪೆಗೋರಿನ ಎದುರಿಗಿರುವ ಕಣಿವೆಯಲ್ಲಿ ಇಳಿದುಕೊಂಡೆವು.”

ರೋಮ್ನಗರದವರಿಗೆ 9:6-18

ಹೌದು, ನಾನು ಯೆಹೂದ್ಯರ ವಿಷಯದಲ್ಲಿ ದುಃಖಿಸುತ್ತೇನೆ. ದೇವರು ತನ್ನ ವಾಗ್ದಾನವನ್ನು ನೆರವೇರಿಸುವುದರಲ್ಲಿ ವಿಫಲನಾದನೆಂದು ನಾನು ಹೇಳುತ್ತಿಲ್ಲ. ಏಕೆಂದರೆ ಇಸ್ರೇಲ್ ವಂಶದಲ್ಲಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. ಅಬ್ರಹಾಮನ ಸಂತತಿಗಳವರಲ್ಲಿ ಕೆಲವರು ಮಾತ್ರ ಅಬ್ರಹಾಮನ ನಿಜವಾದ ಮಕ್ಕಳಾಗಿದ್ದಾರೆ. ದೇವರು ಅವನಿಗೆ, “ಇಸಾಕನು ಮಾತ್ರ ನಿಮಗೆ ನ್ಯಾಯಬದ್ಧವಾದ ಮಗನು”(A) ಎಂದು ಹೇಳಿದನು. ಇದರರ್ಥವೇನೆಂದರೆ, ಶರೀರ ಸಂಬಂಧವಾಗಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. ವಾಗ್ದಾನ ಸಂಬಂಧವಾಗಿ ಹುಟ್ಟಿದವರೇ ದೇವರ (ನಿಜ) ಮಕ್ಕಳಾಗಿದ್ದಾರೆ. ದೇವರು ಅವನಿಗೆ, “ನೇಮಿತ ಕಾಲದಲ್ಲಿ ನಾನು ಹಿಂತಿರುಗಿಬರುವೆನು, ಆಗ ಸಾರಳಿಗೆ ಒಬ್ಬ ಮಗನಿರುವನು”(B) ಎಂಬ ವಾಗ್ದಾನ ಮಾಡಿದ್ದನು.

10 ಅದಷ್ಟೇ ಅಲ್ಲ, ರೆಬೆಕ್ಕಳಿಗೂ ಇಬ್ಬರು ಗಂಡುಮಕ್ಕಳಿದ್ದರು. ಅವರಿಬ್ಬರಿಗೂ ಒಬ್ಬನೇ ತಂದೆ. ಅವನೇ ನಮ್ಮ ಪಿತೃವಾದ ಇಸಾಕನು. 11-12 ಆದರೆ ಆ ಇಬ್ಬರು ಗಂಡುಮಕ್ಕಳು ಹುಟ್ಟುವ ಮೊದಲೇ, ದೇವರು ರೆಬೆಕ್ಕಳಿಗೆ, “ಹಿರಿಯವನು ಕಿರಿಯವನ ಸೇವೆ ಮಾಡುವನು”(C) ಎಂದು ಹೇಳಿದನು. ಆ ಬಾಲಕರು ಯಾವ ಒಳ್ಳೆಯದಾಗಲಿ ಕೆಟ್ಟದ್ದಾಗಲಿ ಮಾಡುವ ಮೊದಲೇ ಇದಾಯಿತು. ದೇವರು ಆ ಬಾಲಕನನ್ನು ತನ್ನ ಸ್ವಂತ ಯೋಜನೆಗನುಸಾರವಾಗಿ ಆರಿಸಿಕೊಂಡಿದ್ದರಿಂದ ಆ ಬಾಲಕರು ಹುಟ್ಟುವದಕ್ಕಿಂತ ಮೊದಲೇ ಹೀಗೆ ಹೇಳಿದನು. ದೇವರು ಅವನನ್ನು ಆರಿಸಿಕೊಂಡಿದ್ದರಿಂದ ಅವನನ್ನೇ ಕರೆಯಬೇಕೆಂದಿದ್ದನು. ಆದರೆ ಅದು ಆ ಬಾಲಕರ ಯಾವುದೇ ಕಾರ್ಯಗಳ ಮೇಲೆ ಆಧಾರಗೊಂಡಿರಲಿಲ್ಲ. 13 ಅಂತೆಯೇ, “ನಾನು ಯಾಕೋಬನನ್ನು ಪ್ರೀತಿಸಿದೆನು, ಆದರೆ ಏಸಾವನನ್ನು ದ್ವೇಷಿಸಿದೆನು”(D) ಎಂದು ಪವಿತ್ರ ಗ್ರಂಥವು ಹೇಳುತ್ತದೆ.

14 ಹಾಗಾದರೆ, ಇದರ ಬಗ್ಗೆ ಏನು ಹೇಳೋಣ? ದೇವರು ಅನ್ಯಾಯಗಾರನೇ? ಎಂದಿಗೂ, ಇಲ್ಲ. 15 ದೇವರು ಮೋಶೆಗೆ, “ನಾನು ಯಾರಿಗೆ ಕರುಣೆ ತೋರಬಯಸುತ್ತೇನೋ ಅವನಿಗೆ ಕರುಣೆ ತೋರುವೆನು. ನಾನು ಯಾರಿಗೆ ಕನಿಕರ ತೋರಬಯಸುತ್ತೇನೋ ಅವರಿಗೆ ಕನಿಕರ ತೋರುವೆನು”(E) ಎಂದು ಹೇಳಿದ್ದಾನೆ. 16 ಆದ್ದರಿಂದ ದೇವರು ತಾನು ಯಾರಿಗೆ ಕರುಣೆ ತೋರಬಯಸುತ್ತಾನೊ ಅವನನ್ನೇ ಆರಿಸಿಕೊಳ್ಳುತ್ತಾನೆ. ಆತನ ಆಯ್ಕೆಯು ಜನರು ಏನು ಮಾಡಬಯಸುತ್ತಾರೆ ಅಥವಾ ಏನು ಮಾಡಲು ಪ್ರಯತ್ನಿಸುತ್ತಾರೆಂಬುದರ ಮೇಲೆ ಆಧಾರಗೊಂಡಿಲ್ಲ. 17 ಪವಿತ್ರ ಗ್ರಂಥದಲ್ಲಿ ದೇವರು ಫರೋಹನಿಗೆ, “ನಾನು ನಿನಗೆ ನನ್ನ ಶಕ್ತಿಯನ್ನು ತೋರಿಸಬೇಕೆಂತಲೂ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಖ್ಯಾತಿಪಡಿಸಬೇಕೆಂತಲೂ ನಿನ್ನನ್ನು ರಾಜನನ್ನಾಗಿ ಮಾಡಿದೆನು”(F) ಎಂದು ಹೇಳಿದ್ದಾನೆ. 18 ಆದ್ದರಿಂದ ದೇವರು ತಾನು ಯಾರಿಗೆ ಕರುಣೆಯನ್ನು ತೋರಬಯಸುತ್ತಾನೋ ಅವರಿಗೆ ಕರುಣೆಯನ್ನು ತೋರಿಸುತ್ತಾನೆ. ದೇವರು ಯಾರನ್ನು ಮೊಂಡರನ್ನಾಗಿ ಮಾಡಬಯಸುತ್ತಾನೋ ಅವರನ್ನು ಮೊಂಡರನ್ನಾಗಿ ಮಾಡುತ್ತಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International