Revised Common Lectionary (Semicontinuous)
5 ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು.
ನನ್ನ ನಿರೀಕ್ಷೆ ದೇವರಲ್ಲಿಯೇ.
6 ಆತನೇ ನನಗೆ ಬಂಡೆಯೂ
ರಕ್ಷಣೆಯೂ ಆಶ್ರಯದುರ್ಗವೂ ಆಗಿದ್ದಾನೆ.
7 ನನ್ನ ರಕ್ಷಣೆಯೂ ಮಾನವೂ ದೇವರೇ.
ಆತನೇ ನನಗೆ ಭದ್ರವಾದ ದುರ್ಗವೂ ಆಶ್ರಯಸ್ಥಾನವೂ ಆಗಿದ್ದಾನೆ.
8 ಜನರೇ, ಯಾವಾಗಲೂ ದೇವರನ್ನೇ ನಂಬಿಕೊಂಡಿರಿ.
ನಿಮ್ಮ ಕಷ್ಟಗಳನ್ನೆಲ್ಲಾ ಆತನಿಗೆ ಹೇಳಿಕೊಳ್ಳಿರಿ.
ಆತನೇ ನಮ್ಮ ಆಶ್ರಯಸ್ಥಾನ.
9 ಸಾಮಾನ್ಯ ಜನರು ಕೇವಲ ಉಸಿರಷ್ಟೇ.
ಶ್ರೇಷ್ಠರು ಕೇವಲ ಕ್ಷಣಕಾಲವಷ್ಟೇ.
ತೂಗಿನೋಡಿದರೆ ಅವರು ಕೇವಲ ಶೂನ್ಯ;
ಉಸಿರಿಗಿಂತಲೂ ಹಗುರ.
10 ಅನ್ಯಾಯದಿಂದ ಸಂಪಾದಿಸಿದ್ದರಲ್ಲಿ ನಂಬಿಕೆ ಇಡಬೇಡಿ.
ಕದ್ದವಸ್ತುಗಳಲ್ಲಿ ಜಂಬಪಡಬೇಡಿ.
ಐಶ್ವರ್ಯವು ಅಧಿಕವಾಗುತ್ತಿದ್ದರೂ
ಅದರಲ್ಲಿ ಮನಸ್ಸಿಡಬೇಡಿ.
11 “ಶಕ್ತಿಯೂ ದೇವರಿಂದಲೇ”
ಎಂದು ದೇವರು ನುಡಿದಿದ್ದಾನೆ.
12 ನನ್ನ ಒಡೆಯನೇ, ನೀನು ಪ್ರೀತಿಸ್ವರೂಪನಾಗಿರುವೆ.
ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವವನು ನೀನೇ.
ಮುರಿದ ಮಣ್ಣಿನ ಕೊಡ
19 ಯೆಹೋವನು ನನಗೆ ಹೀಗೆ ಹೇಳಿದನು: “ಯೆರೆಮೀಯನೇ, ಒಬ್ಬ ಕುಂಬಾರನ ಹತ್ತಿರ ಹೋಗಿ ಅವನಿಂದ ಒಂದು ಮಣ್ಣಿನ ಕೊಡವನ್ನು ಕೊಂಡುಕೊಂಡು 2 ಬೋಕಿಯ ದ್ವಾರದ[a] ಸಮೀಪದಲ್ಲಿರುವ ಬೆನ್ಹಿನ್ನೊಮ್ ತಗ್ಗಿಗೆ ಹೋಗು. ನಿನ್ನ ಸಂಗಡ ಜನರ ಹಿರಿಯರಲ್ಲಿ ಕೆಲವರನ್ನೂ ಯಾಜಕರ ಹಿರಿಯರಲ್ಲಿ ಕೆಲವರನ್ನೂ ಕರೆದುಕೊಂಡು ಹೋಗು. ನಾನು ನಿನಗೆ ಹೇಳುವುದನ್ನು ನೀನು ಅಲ್ಲಿ ಅವರಿಗೆ ಹೇಳು. 3 ನಿನ್ನ ಜೊತೆಯಲ್ಲಿದ್ದ ಜನರಿಗೆ ಹೇಳು, ‘ಯೆಹೂದದ ರಾಜನೇ, ಜೆರುಸಲೇಮಿನ ಜನರೇ, ಯೆಹೋವನ ಈ ಸಂದೇಶವನ್ನು ಕೇಳಿರಿ. ಇಸ್ರೇಲರ ದೇವರೂ ಸರ್ವಶಕ್ತನಾದ ಯೆಹೋವನೂ ಹೀಗೆ ಹೇಳುತ್ತಾನೆ: ನಾನು ಈ ಸ್ಥಳಕ್ಕೆ ಒಂದು ಭಯಂಕರವಾದ ಕೇಡನ್ನು ಉಂಟುಮಾಡುವೆನು. ಅದರ ಬಗ್ಗೆ ಕೇಳಿದ ಪ್ರತಿಯೊಬ್ಬ ವ್ಯಕ್ತಿಯು ವಿಸ್ಮಯಪಡುವನು ಮತ್ತು ಭಯಪಡುವನು. 4 ಯೆಹೂದದ ಜನರು ನನ್ನ ಅನುಸರಣೆಯನ್ನು ಬಿಟ್ಟಿದ್ದರಿಂದ ನಾನು ಹೀಗೆ ಮಾಡುವೆನು. ಇದನ್ನು ಅವರು ಅನ್ಯದೇವರುಗಳ ಸ್ಥಳವನ್ನಾಗಿ ಮಾಡಿದ್ದಾರೆ. ಯೆಹೂದದ ಜನರು ಈ ಸ್ಥಳದಲ್ಲಿ ಅನ್ಯದೇವರುಗಳಿಗಾಗಿ ಧೂಪವನ್ನು ಹಾಕಿದ್ದಾರೆ. ಬಹಳ ಹಿಂದೆ ಈ ಜನರು ಆ ದೇವರುಗಳನ್ನು ಪೂಜಿಸುತ್ತಿರಲಿಲ್ಲ. ಅವರ ಹಿರಿಯರೂ ಆ ದೇವರುಗಳನ್ನು ಪೂಜಿಸುತ್ತಿರಲಿಲ್ಲ. ಇವುಗಳು ಅನ್ಯದೇಶದ ಹೊಸ ದೇವರುಗಳು. ಯೆಹೂದದ ರಾಜರು ಈ ಸ್ಥಳವನ್ನು ಮುಗ್ಧಮಕ್ಕಳ ರಕ್ತದಿಂದ ತುಂಬಿದರು. 5 ಯೆಹೂದದ ರಾಜರು ಬಾಳ್ ದೇವರಿಗಾಗಿ ಉನ್ನತವಾದ ಸ್ಥಳಗಳನ್ನು ಕಟ್ಟಿಸಿದರು. ಅವರು ಆ ಸ್ಥಳಗಳಲ್ಲಿ ತಮ್ಮ ಗಂಡುಮಕ್ಕಳನ್ನು ಹೋಮಮಾಡಿದರು. ಅವರು ಬಾಳ್ ದೇವರಿಗೆ ತಮ್ಮ ಗಂಡುಮಕ್ಕಳನ್ನು ಆಹುತಿಕೊಟ್ಟರು. ನಾನು ಹಾಗೆ ಮಾಡಲು ಅವರಿಗೆ ಹೇಳಿರಲಿಲ್ಲ. ನಿಮ್ಮ ಗಂಡುಮಕ್ಕಳನ್ನು ಆಹುತಿಯಾಗಿ ಕೊಡಿ ಎಂದು ನಿಮಗೆ ಹೇಳಲಿಲ್ಲ. ಅಂಥ ವಿಚಾರ ನನ್ನ ಮನಸ್ಸಿನಲ್ಲಿ ಬರಲೇ ಇಲ್ಲ. 6 ಈಗ, ಬೆನ್ಹಿನ್ನೊಮೀನ ಕಣಿವೆಯಲ್ಲಿದ್ದ ಈ ಸ್ಥಳವನ್ನು ಜನರು “ತೋಫೆತ್” ಎಂದು ಕರೆಯುತ್ತಾರೆ. ಆದರೆ ಜನರು ಇದನ್ನು “ಕೊಲೆಯ ಕಣಿವೆ” ಎಂದು ಕರೆಯುವ ದಿನಗಳು ಬರುತ್ತಿವೆ ಎಂದು ನಾನು ನಿಮಗೆ ಮುನ್ನೆಚ್ಚರಿಕೆಯನ್ನು ಕೊಡುತ್ತೇನೆ. ಇದು ಯೆಹೋವನ ನುಡಿ. 7 ಈ ಸ್ಥಳದಲ್ಲಿ ನಾನು ಯೆಹೂದದ ಮತ್ತು ಜೆರುಸಲೇಮಿನ ಜನರ ಯೋಜನೆಗಳನ್ನು ಹಾಳು ಮಾಡುತ್ತೇನೆ. ಶತ್ರುವು ಈ ಜನರನ್ನು ಬೆನ್ನಟ್ಟಿ ಬರುವನು. ನಾನು ಈ ಸ್ಥಳದಲ್ಲಿ ಖಡ್ಗದಿಂದ ಯೆಹೂದದ ಜನರ ಕೊಲೆಯಾಗುವಂತೆ ಮಾಡುವೆನು. ಅವರ ಹೆಣಗಳು ಪಕ್ಷಿಗಳಿಗೆ ಮತ್ತು ಕಾಡುಪ್ರಾಣಿಗಳಿಗೆ ಆಹಾರವಾಗುವಂತೆ ಮಾಡುವೆನು. 8 ನಾನು ಈ ನಗರವನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ. ಜೆರುಸಲೇಮಿನಿಂದ ಹಾದುಹೋಗುವಾಗ ಜನರು ಸಿಳ್ಳುಹಾಕಿ ತಲೆಯಾಡಿಸಿ ಹೋಗುವರು. ನಗರವು ಹಾಳಾಗಿರುವುದನ್ನು ಕಂಡು ಅವರು ಬೆರಗಾಗುವರು. 9 ಶತ್ರುವು ನಗರದ ಸುತ್ತಲೂ ತನ್ನ ಸೈನ್ಯವನ್ನು ತರುವನು. ಜನರು ಆಹಾರವನ್ನು ಶೇಖರಿಸಲು ಹೊರಗೆ ಹೋಗದಂತೆ ಆ ಸೈನ್ಯವು ತಡೆಯುವದು. ನಗರದಲ್ಲಿದ್ದ ಜನರು ಉಪವಾಸ ಬೀಳುವರು. ಅವರು ಹಸಿವು ತಾಳಲಾರದೆ ತಮ್ಮ ಮಕ್ಕಳನ್ನೇ ತಿನ್ನುವರು. ಆಮೇಲೆ ಅವರು ಒಬ್ಬರನ್ನೊಬ್ಬರು ತಿನ್ನಲು ಪ್ರಾರಂಭಿಸುವರು.’
10 “ಯೆರೆಮೀಯನೇ, ನೀನು ಜನರಿಗೆ ಆ ವಿಷಯಗಳನ್ನು ಹೇಳು. ಅವರು ಗಮನವಿಟ್ಟು ಕೇಳುತ್ತಿರುವಾಗ ಆ ಮಣ್ಣಿನ ಕೊಡವನ್ನು ಒಡೆದುಹಾಕಿ 11 ಹೀಗೆ ಹೇಳು: ‘ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: ಈ ಮಣ್ಣಿನ ಕೊಡವನ್ನು ಒಡೆದುಹಾಕಿದಂತೆ ನಾನು ಯೆಹೂದ ಜನಾಂಗವನ್ನು ಮತ್ತು ಜೆರುಸಲೇಮ್ ನಗರವನ್ನು ಒಡೆದುಹಾಕುವೆನು. ಈ ಕೊಡವನ್ನು ಪುನಃ ಜೋಡಿಸಲು ಸಾಧ್ಯವಿಲ್ಲ. ಯೆಹೂದ ಜನಾಂಗದ ಸ್ಥಿತಿಯೂ ಹೀಗೆಯೇ ಆಗುವುದು. ತೋಫೆತಿನಲ್ಲಿ ಸ್ಥಳವಿಲ್ಲದಂತಾಗುವವರೆಗೂ ಸತ್ತವರನ್ನು ಅಲ್ಲಿ ಹೂಳಲಾಗುವುದು. 12 ನಾನು ಈ ಜನರಿಗೂ ಮತ್ತು ಈ ಸ್ಥಳಕ್ಕೂ ಹೀಗೆ ಮಾಡುತ್ತೇನೆ. ನಾನು ಈ ನಗರವನ್ನು ತೋಫೆತಿನಂತೆ ಮಾಡುತ್ತೇನೆ’ ಇದು ಯೆಹೋವನ ನುಡಿ. 13 ‘ಜೆರುಸಲೇಮಿನ ಮನೆಗಳು ಈ ತೋಫೆತಿನಷ್ಟೆ “ಹೊಲಸಾಗುವವು.” ಯೆಹೂದದ ರಾಜರ ಅರಮನೆಗಳು ಈ ತೋಫೆತಿನಂತೆ ಹಾಳಾಗುವವು. ಏಕೆಂದರೆ ಜನರು ತಮ್ಮ ಮನೆಯ ಮಾಳಿಗೆಯ ಮೇಲೆ ಸುಳ್ಳುದೇವರುಗಳನ್ನು ಪೂಜಿಸಿದರು. ಅವರು ನಕ್ಷತ್ರಗಳನ್ನು ಪೂಜಿಸಿ ಅವುಗಳ ಗೌರವಾರ್ಥವಾಗಿ ಧೂಪಹಾಕಿದರು. ಅವರು ಸುಳ್ಳುದೇವರುಗಳಿಗೆ ಪಾನನೈವೇದ್ಯಗಳನ್ನು ಅರ್ಪಿಸಿದರು.’”
14 ಯೆರೆಮೀಯನು ಯೆಹೋವನ ಅಪ್ಪಣೆಯಂತೆ ತೋಫೆತಿನಲ್ಲಿ ಪ್ರವಾದಿಸಿದ ಮೇಲೆ ಅಲ್ಲಿಂದ ಬಂದು ಪವಿತ್ರಾಲಯದ ಪ್ರಾಕಾರದಲ್ಲಿ ನಿಂತುಕೊಂಡು, ಎಲ್ಲಾ ಜನರನ್ನುದ್ದೇಶಿಸಿ ಹೀಗೆ ಹೇಳಿದನು: 15 “ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುವನು: ‘ನಾನು ಜೆರುಸಲೇಮಿಗೂ ಅದರ ಸುತ್ತಲಿನ ಹಳ್ಳಿಗಳಿಗೂ ಅನೇಕ ವಿಪತ್ತುಗಳನ್ನು ಬರಮಾಡುವುದಾಗಿ ಹೇಳಿದೆನು. ಅವುಗಳನ್ನು ಬೇಗನೆ ಬರಮಾಡುತ್ತೇನೆ. ಏಕೆಂದರೆ ಜನರು ಬಹಳ ಮೊಂಡರಾಗಿದ್ದಾರೆ. ನಾನು ಹೇಳಿದ್ದನ್ನು ಅವರು ಕೇಳುವುದೂ ಇಲ್ಲ, ಅನುಸರಿಸುವುದೂ ಇಲ್ಲ.’”
11 “ಭೂಲೋಕದ ವರ್ತಕರು ಬಾಬಿಲೋನಿನ ವಿಷಯದಲ್ಲಿ ಗೋಳಾಡುವರು ಮತ್ತು ದುಃಖಿಸುವರು. ಅವರು ಮಾರುವ ವಸ್ತುಗಳನ್ನು ಕೊಂಡುಕೊಳ್ಳಲು ಯಾರೂ ಇಲ್ಲದಿರುವುದರಿಂದ ಅವರು ದುಃಖಿಸುವರು. 12 ಅವರು ಚಿನ್ನ, ಬೆಳ್ಳಿ, ರತ್ನ, ಮುತ್ತು, ನಯವಾದ ನಾರುಮಡಿ, ಧೂಮ್ರ ವರ್ಣದ ವಸ್ತ್ರ, ರೇಷ್ಮೆ, ರಕ್ತಾಂಬರ, ಸಕಲ ವಿಧವಾದ ಅಗಿಲುಮರ, ದಂತದಿಂದ ಮಾಡಿದ ನಾನಾ ಬಗೆಯ ವಸ್ತುಗಳು, ಬಹು ಬೆಲೆಬಾಳುವ ಮರ, ತಾಮ್ರ, ಕಬ್ಬಿಣ ಮತ್ತು ಚಂದ್ರಕಾಂತ ಶಿಲೆ ಇವುಗಳನ್ನು ಮಾರುತ್ತಾರೆ. 13 ಆ ವರ್ತಕರು ದಾಲ್ಚಿನ್ನಿ, ಸಾಂಬಾರ ಪದಾರ್ಥಗಳು, ಧೂಪ, ಪರಿಮಳತೈಲ, ಸಾಂಬ್ರಾಣಿ, ದ್ರಾಕ್ಷಾರಸ ಮತ್ತು ಆಲಿವ್ಎಣ್ಣೆ, ನಯವಾದ ಹಿಟ್ಟು, ಗೋಧಿ, ದನಕರು, ಕುರಿ, ಕುದುರೆಗಳು, ರಥಗಳು, ಗುಲಾಮರು ಮತ್ತು ಮಾನವ ಪ್ರಾಣಗಳನ್ನು ಮಾರುತ್ತಾರೆ. ವರ್ತಕರು ಅಳುತ್ತಾ ಹೀಗೆ ಹೇಳುವರು:
14 ‘ಬಾಬಿಲೋನೇ, ನೀನು ಅಪೇಕ್ಷಿಸಿದ ಉತ್ತಮ ವಸ್ತುಗಳೆಲ್ಲವೂ ನಿನ್ನಿಂದ ಹೋಗಿಬಿಟ್ಟವು.
ನಿನ್ನಲ್ಲಿದ್ದ ಶ್ರೀಮಂತಿಕೆಯ ಮತ್ತು ಅಲಂಕಾರಿಕ ವಸ್ತುಗಳೆಲ್ಲ ಅದೃಶ್ಯವಾಗಿಬಿಟ್ಟವು.
ಅವುಗಳನ್ನು ಮತ್ತೆ ನೀನೆಂದಿಗೂ ಪಡೆಯುವುದಿಲ್ಲ.’
15 “ಆ ವರ್ತಕರು ಅವಳ ಯಾತನೆಯನ್ನು ಕಂಡು ಭಯದಿಂದ ಅವಳಿಂದ ಬಹುದೂರದಲ್ಲಿ ನಿಂತುಕೊಳ್ಳುವರು. ಆ ವಸ್ತುಗಳನ್ನು ಅವಳಿಗೆ ಮಾರಿ ಶ್ರೀಮಂತರಾದ ವರ್ತಕರು ಇವರೇ. 16 ಅವರು ದುಃಖದಿಂದ ಗೋಳಾಡುತ್ತಾ ಹೀಗೆನ್ನುವರು:
‘ಅಯ್ಯೋ, ಅಯ್ಯೋ, ಮಹಾನಗರಿಯೇ!
ಅವಳು ನಯವಾದ ನಾರುಮಡಿಯನ್ನು,
ಧೂಮ್ರವರ್ಣದ ಉಡುಪನ್ನು ಮತ್ತು ರಕ್ತಾಂಬರಗಳನ್ನು ಧರಿಸಿದ್ದಳು.
ಅವಳು ಚಿನ್ನ, ರತ್ನ, ಮುತ್ತುಗಳಿಂದ ಶೋಭಿಸುತ್ತಿದ್ದಳು!
17 ಈ ಶ್ರೀಮಂತಿಕೆಯೆಲ್ಲವೂ ಒಂದೇ ಗಳಿಗೆಯಲ್ಲಿ ನಾಶವಾಯಿತಲ್ಲಾ!’
“ಹಡಗುಗಳ ಒಡೆಯರೂ ಹಡಗುಗಳಲ್ಲಿ ಸಂಚರಿಸುವ ಜನರೆಲ್ಲರೂ ನಾವಿಕರೂ ಸಮುದ್ರದಿಂದ ಹಣವನ್ನು ಗಳಿಸುವ ಜನರೆಲ್ಲರೂ ದೂರದಲ್ಲಿ ನಿಂತುಕೊಂಡು 18 ಬಾಬಿಲೋನಿನ ದಹನದಿಂದೇರುತ್ತಿದ್ದ ಹೊಗೆಯನ್ನು ನೋಡಿ ಅವರು ಗಟ್ಟಿಯಾದ ಧ್ವನಿಯಲ್ಲಿ, ‘ಈ ಮಹಾನಗರಿಯಂತಹ ನಗರವು ಇರಲೇ ಇಲ್ಲ!’ ಎಂದು ಹೇಳಿದರು. 19 ಅವರು ತಮ್ಮ ತಲೆಯ ಮೇಲೆ ಧೂಳನ್ನು ಸುರಿದುಕೊಂಡು, ದುಃಖದಿಂದ ಗೋಳಾಡುತ್ತಾ ಹೀಗೆ ಹೇಳಿದರು:
‘ಅಯ್ಯೋ! ಅಯ್ಯೋ! ಈ ಮಹಾನಗರಿಗೆ ಎಂಥಾ ಗತಿಯಾಯಿತು!
ಸಮುದ್ರದ ಮೇಲೆ ಹಡಗುಗಳನ್ನು ಹೊಂದಿದ್ದ ಜನರೆಲ್ಲರೂ ಅವಳ ಸಂಪತ್ತಿನಿಂದ ಶ್ರೀಮಂತರಾದರು!
ಆದರೆ ಅವಳು ಒಂದೇ ಗಳಿಗೆಯಲ್ಲಿ ನಾಶವಾಗಿಬಿಟ್ಟಳು!
20 ಪರಲೋಕವೇ, ಇದರಿಂದ ನೀನೂ ಸಂತೋಷಪಡು!
ದೇವರ ಪರಿಶುದ್ಧ ಜನರೇ, ಅಪೊಸ್ತಲರೇ, ಪ್ರವಾದಿಗಳೇ, ನೀವೂ ಸಂತೋಷಪಡಿರಿ!
ಅವಳು ನಿಮಗೆ ಮಾಡಿದ ಕೇಡುಗಳಿಗಾಗಿ ದೇವರು ಅವಳನ್ನು ದಂಡಿಸಿದನು.’”
Kannada Holy Bible: Easy-to-Read Version. All rights reserved. © 1997 Bible League International