Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 69:1-5

ರಚನೆಗಾರ: ದಾವೀದ.

69 ದೇವರೇ, ನನ್ನನ್ನು ರಕ್ಷಿಸು!
    ನನ್ನ ಕತ್ತಿನವರೆಗೂ ನೀರು ಏರಿಬಂದಿದೆ.
ನಿಂತುಕೊಳ್ಳಲು ನೆಲೆ ಸಿಕ್ಕುತ್ತಿಲ್ಲ;
    ಆಳವಾದ ಮರಳಿನೊಳಕ್ಕೆ ಮುಳುಗಿಹೋಗುತ್ತಿದ್ದೇನೆ.
ನಾನು ಆಳವಾದ ನೀರಿನಲ್ಲಿದ್ದೇನೆ.
    ಅಲೆಗಳು ನನ್ನನ್ನು ಆವರಿಸಿಕೊಳ್ಳುತ್ತಿವೆ.
ಸಹಾಯಕ್ಕಾಗಿ ಕೂಗಿಕೂಗಿ ಬಲಹೀನನಾಗಿರುವೆ.
    ನನ್ನ ಗಂಟಲು ನೋಯುತ್ತಿದೆ.
ನಿನ್ನ ಸಹಾಯಕ್ಕಾಗಿ ಎದುರುನೋಡುತ್ತಾ
    ನನ್ನ ಕಣ್ಣುಗಳು ನೋಯುತ್ತಿವೆ.
ಶತ್ರುಗಳು ನನ್ನ ತಲೆಕೂದಲುಗಳಿಗಿಂತ ಹೆಚ್ಚಾಗಿದ್ದಾರೆ.
    ಅವರು ನಿಷ್ಕಾರಣವಾಗಿ ನನ್ನನ್ನು ದ್ವೇಷಿಸುತ್ತಾರೆ;
    ನನ್ನನ್ನು ನಾಶಮಾಡಲು ಬಹು ಪ್ರಯತ್ನ ಮಾಡುತ್ತಿದ್ದಾರೆ.
ನನ್ನ ಶತ್ರಗಳು ನನ್ನ ಬಗ್ಗೆ ಸುಳ್ಳು ಹೇಳುವರು.
    ನಾನು ಕದ್ದಿಲ್ಲದಿದ್ದರೂ ಸುಳ್ಳು ಅಪವಾದ ಹೊರಿಸಿ
    ನನ್ನಿಂದ ದಂಡ ವಸೂಲಿ ಮಾಡಿದರು.
ದೇವರೇ, ನಾನೇನೂ ತಪ್ಪುಮಾಡಿಲ್ಲವೆಂದು ನಿನಗೆ ಗೊತ್ತಿದೆ.
    ನನ್ನ ಪಾಪಗಳನ್ನು ನಿನಗೆ ಮರೆಮಾಡಲು ನನ್ನಿಂದಾಗದು.

ಕೀರ್ತನೆಗಳು 69:30-36

30 ನಾನು ದೇವರ ಹೆಸರನ್ನು ಹಾಡಿಕೊಂಡಾಡುವೆನು;
    ಕೃತಜ್ಞತಾಗೀತೆಯೊಂದಿಗೆ ಆತನನ್ನು ಸ್ತುತಿಸುವೆನು.
31 ಇದು ಯೆಹೋವನಿಗೆ ಹೋರಿಗಳ ಸರ್ವಾಂಗಹೋಮಕ್ಕಿಂತಲೂ
    ಬಹು ಪ್ರಿಯವಾದದ್ದು.
32 ದೇವರನ್ನು ಆರಾಧಿಸಲು ಬಂದ ಬಡವರೇ,
    ಇದನ್ನು ಕೇಳಿ ಹರ್ಷಿಸಿರಿ.
33 ಯೆಹೋವನು ಬಡವರಿಗೂ ನಿಸ್ಸಹಾಯಕರಿಗೂ ಕಿವಿಗೊಡುತ್ತಾನೆ.
    ಸೆರೆಯಲ್ಲಿರುವ ತನ್ನ ಜನರನ್ನು ಸಹ ಕಡೆಗಣಿಸುವುದಿಲ್ಲ.
34 ಭೂಮ್ಯಾಕಾಶಗಳೇ, ಸಮುದ್ರವೇ,
    ಸಮುದ್ರದಲ್ಲಿರುವ ಸಮಸ್ತವೇ, ಯೆಹೋವನನ್ನು ಸ್ತುತಿಸಿರಿ!
35 ಯೆಹೋವನು ಚೀಯೋನನ್ನು ರಕ್ಷಿಸುವನು!
    ಆತನು ಯೆಹೂದದ ಪಟ್ಟಣಗಳನ್ನು ಮತ್ತೆ ಕಟ್ಟುವನು.
ಆತನ ಜನರು ಅಲ್ಲಿ ವಾಸವಾಗಿದ್ದು ಸ್ವದೇಶವಾಗಿ ಮಾಡಿಕೊಳ್ಳುವರು!
36     ಆತನ ಸೇವಕರ ಸಂತತಿಗಳವರು ಆ ದೇಶವನ್ನು ಪಡೆದುಕೊಳ್ಳುವರು.
    ಆತನ ಹೆಸರನ್ನು ಪ್ರೀತಿಸುವ ಜನರು ಅಲ್ಲಿ ವಾಸಿಸುವರು.

ಆದಿಕಾಂಡ 17:1-14

ಸುನ್ನತಿ—ಒಡಂಬಡಿಕೆ

17 ಅಬ್ರಾಮನಿಗೆ ತೊಂಭತ್ತೊಂಬತ್ತು ವರ್ಷವಾಗಿದ್ದಾಗ ಯೆಹೋವನು ಅವನಿಗೆ ಪ್ರತ್ಯಕ್ಷನಾಗಿ, “ನಾನು ಸರ್ವಶಕ್ತನಾದ ದೇವರು. ನನಗೆ ವಿಧೇಯನಾಗಿದ್ದು ನಿರ್ದೋಷಿಯಾಗಿರು. ನಾನು ನಿನ್ನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ನಿನ್ನನ್ನು ದೊಡ್ಡ ಜನಾಂಗವನ್ನಾಗಿ ಮಾಡುವುದಾಗಿ ವಾಗ್ದಾನ ಮಾಡುತ್ತೇನೆ” ಎಂದು ಹೇಳಿದನು.

ಆ ಕೂಡಲೇ ಅಬ್ರಾಮನು ದೇವರಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. ಆಗ ದೇವರು ಅವನಿಗೆ, “ನಾನು ನಿನಗೆ ಮಾಡುವ ವಾಗ್ದಾನವೇನೆಂದರೆ: ‘ಅಬ್ರಾಮ’ ಎಂಬ ನಿನ್ನ ಹೆಸರನ್ನು ಬದಲಾಯಿಸಿ ನಿನಗೆ ‘ಅಬ್ರಹಾಮ’ ಎಂದು ಹೆಸರಿಡುವೆನು. ನಿನ್ನನ್ನು ಅಬ್ರಹಾಮ ಎಂದೇ ಕರೆಯುವರು; ಯಾಕೆಂದರೆ ನೀನು ಅನೇಕ ಜನಾಂಗಗಳಿಗೆ ಮೂಲಪಿತೃವಾಗುವೆ. ಹೊಸ ಜನಾಂಗಗಳು ನಿನ್ನಿಂದ ಹುಟ್ಟುವವು; ರಾಜರುಗಳು ನಿನ್ನಿಂದ ಬರುವರು. ನಾನು ನಿನ್ನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ಈ ಒಡಂಬಡಿಕೆಯು ನಿನ್ನ ಎಲ್ಲಾ ಸಂತತಿಯವರಿಗೆ ಶಾಶ್ವತವಾಗಿ ಅನ್ವಯಿಸುವುದು. ನಾನೇ ನಿನಗೂ ನಿನ್ನ ಎಲ್ಲಾ ಸಂತತಿಯವರಿಗೂ ದೇವರಾಗಿರುವೆನು. ನೀನು ಪ್ರಯಾಣ ಮಾಡುತ್ತಿರುವ ಈ ಕಾನಾನ್ ದೇಶವನ್ನೆಲ್ಲ ನಿನಗೂ ನಿನ್ನ ಸಂತತಿಯವರಿಗೂ ಶಾಶ್ವತವಾಗಿ ಕೊಡುವೆನು. ನಾನೇ ನಿಮ್ಮ ದೇವರಾಗಿರುವೆನು” ಎಂದು ಹೇಳಿದನು.

ಇದಲ್ಲದೆ ದೇವರು ಅಬ್ರಹಾಮನಿಗೆ, “ನಮ್ಮ ಒಡಂಬಡಿಕೆಯ ಪ್ರಕಾರ ನೀನು ಮತ್ತು ನಿನ್ನ ಸಂತತಿಯವರೆಲ್ಲರೂ ನನ್ನ ಒಡಂಬಡಿಕೆಗೆ ವಿಧೇಯರಾಗಬೇಕು. 10 ನೀನೂ ಮತ್ತು ನಿನ್ನ ಎಲ್ಲಾ ಸಂತತಿಯವರು ಕೈಕೊಳ್ಳಬೇಕಾದ ನಿಬಂಧನೆಯೇನೆಂದರೆ, ನಿಮ್ಮಲ್ಲಿ ಹುಟ್ಟಿದ ಪ್ರತಿಯೊಂದು ಗಂಡುಮಗುವಿಗೂ ಸುನ್ನತಿ ಮಾಡಿಸಬೇಕು. 11-12 ಇಂದಿನಿಂದ ನಿಮ್ಮಲ್ಲಿ ಗಂಡುಮಗು ಹುಟ್ಟಿ ಎಂಟು ದಿನಗಳಾದ ಮೇಲೆ ಆ ಮಗುವಿಗೆ ಸುನ್ನತಿ ಮಾಡಿಸಬೇಕು; ಈ ನಿಯಮವು ನಿಮ್ಮ ಮನೆಯಲ್ಲಿ ಹುಟ್ಟಿದ ಸೇವಕರಿಗೂ, ಪರದೇಶದಿಂದ ಕೊಂಡುತಂದ ಸೇವಕರಿಗೂ ಸಹ ಅನ್ವಯಿಸುತ್ತದೆ. ನನಗೂ ನಿನಗೂ ಆದ ಒಡಂಬಡಿಕೆಗೆ ಇದು ಗುರುತಾಗಿರುವುದು. 13-14 ಹೀಗೆ ಪ್ರತಿಯೊಬ್ಬನಿಗೂ ಸುನ್ನತಿಯಾಗಲೇಬೇಕು. ನಾನು ನಿನ್ನೊಂದಿಗೆ ಮಾಡಿಕೊಂಡ ಒಡಂಬಡಿಕೆಯು ಶಾಶ್ವತವಾದದ್ದು ಎಂಬುದಕ್ಕೆ ಈ ಸುನ್ನತಿಯೇ ದೈಹಿಕ ಗುರುತಾಗಿದೆ. ಸುನ್ನತಿಯಾಗಿಲ್ಲದ ಪುರುಷನು ನನ್ನ ಒಡಂಬಡಿಕೆಗೆ ವಿಧೇಯನಾಗದ ಕಾರಣ ಅವನನ್ನು ಕುಲದಿಂದ ತೆಗೆದುಹಾಕಲ್ಪಡಬೇಕು” ಎಂದು ಹೇಳಿದನು.

ರೋಮ್ನಗರದವರಿಗೆ 4:1-12

ಅಬ್ರಹಾಮನ ಉದಾಹರಣೆ

ಹಾಗಾದರೆ, ನಮ್ಮ ಪಿತೃವಾದ ಅಬ್ರಹಾಮನ ಬಗ್ಗೆ ನಾವು ಏನು ಹೇಳೋಣ? ಅವನು ನಂಬಿಕೆಯ ಬಗ್ಗೆ ಏನು ಕಲಿತುಕೊಂಡನು? ಅವನು ತನ್ನ ಕ್ರಿಯೆಗಳಿಂದ ನೀತಿವಂತನಾಗಿದ್ದರೆ ಹೊಗಳಿಕೊಳ್ಳಲು ಅವನಿಗೆ ಕಾರಣವಿರುತ್ತಿತ್ತು. ಆದರೆ ಅಬ್ರಹಾಮನು ದೇವರ ಮುಂದೆ ಹೊಗಳಿಕೊಳ್ಳಲು ಆಗಲಿಲ್ಲ. “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅಬ್ರಹಾಮನ ನಂಬಿಕೆಯನ್ನು ಸ್ವೀಕರಿಸಿದನು. ಇದು ಅಬ್ರಹಾಮನನ್ನು ನೀತಿವಂತನನ್ನಾಗಿ ಮಾಡಿತು”(A) ಎಂದು ಪವಿತ್ರ ಗ್ರಂಥವು ಹೇಳುತ್ತದೆ.

ದುಡಿದವನಿಗೆ ದೊರೆಯುವ ಸಂಬಳ ಉಡುಗೊರೆಯಲ್ಲ, ಅದು ಅವನಿಗೆ ಸಲ್ಲತಕ್ಕದ್ದೇ ಆಗಿದೆ. ಆದರೆ ಒಬ್ಬನು ತಾನು ಮಾಡುವ ಯಾವುದೇ ಕಾರ್ಯದ ಮೂಲಕವಾಗಲಿ ತನ್ನನ್ನು ನೀತಿವಂತನನ್ನಾಗಿ ಮಾಡಿಕೊಳ್ಳಲಾರನು. ಆದ್ದರಿಂದ ಆ ವ್ಯಕ್ತಿ ದೇವರಲ್ಲಿ ನಂಬಿಕೆ ಇಡಲೇಬೇಕು. ಆಗ ದೇವರು ಆ ವ್ಯಕ್ತಿಯ ನಂಬಿಕೆಯನ್ನು ಸ್ವೀಕರಿಸಿಕೊಂಡು ಅವನನ್ನು ನೀತಿವಂತನನ್ನಾಗಿ ಮಾಡುವನು. ದೇವರು ದುಷ್ಟರನ್ನು ಸಹ ನೀತಿವಂತರನ್ನಾಗಿ ಮಾಡುವನು. ದೇವರು ಒಬ್ಬನ ಒಳ್ಳೆಯ ಕಾರ್ಯಗಳನ್ನು ಲಕ್ಷಿಸದೆ ಅವನನ್ನು ನೀತಿವಂತನೆಂದು ಒಪ್ಪಿಕೊಂಡರೆ ಅವನು ನಿಜವಾಗಿಯೂ ಭಾಗ್ಯವಂತನೆಂದು ದಾವೀದನು ಸಹ ಹೇಳಿದ್ದಾನೆ:

“ಯಾರ ಅಪರಾಧಗಳು ಕ್ಷಮಿಸಲ್ಪಟ್ಟಿವೆಯೋ
    ಯಾರ ಅಪರಾಧಗಳು ಮುಚ್ಚಲ್ಪಟ್ಟಿವೆಯೋ
    ಅವರು ನಿಜವಾಗಿಯೂ ಭಾಗ್ಯವಂತರು!
ಪ್ರಭುವು ಯಾವನ ಪಾಪವನ್ನು ಪರಿಗಣಿಸುವುದಿಲ್ಲವೋ
    ಅವನು ನಿಜವಾಗಿಯೂ ಭಾಗ್ಯವಂತನು!”(B)

ಈ ಭಾಗ್ಯವಿರುವುದು ಸುನ್ನತಿ[a] ಮಾಡಿಸಿಕೊಂಡವರಿಗೆ (ಯೆಹೂದ್ಯರಿಗೆ) ಮಾತ್ರವೋ? ಅಥವಾ ಸುನ್ನತಿ ಮಾಡಿಸಿಕೊಂಡಿಲ್ಲದವರಿಗೂ (ಯೆಹೂದ್ಯರಲ್ಲದವರಿಗೂ) ಸಹ ಈ ಭಾಗ್ಯವಿದೆಯೋ? ದೇವರು ಅಬ್ರಹಾಮನ ನಂಬಿಕೆಯನ್ನು ಸ್ವೀಕರಿಸಿಕೊಂಡನೆಂದು ನಾವು ಆಗಲೇ ಹೇಳಿದ್ದೇವೆ. ಆ ನಂಬಿಕೆಯೇ ಅವನನ್ನು ನೀತಿವಂತನನ್ನಾಗಿ ಮಾಡಿತು. 10 ಆದರೆ ಇದು ಯಾವಾಗ ಆಯಿತು? ದೇವರು ಅಬ್ರಹಾಮನನ್ನು ಸ್ವೀಕರಿಸಿಕೊಂಡದ್ದು ಸುನ್ನತಿಯಾಗುವುದಕ್ಕಿಂತ ಮೊದಲೋ ಅಥವಾ ಸುನ್ನತಿಯಾದಮೇಲೋ? ದೇವರು ಅವನನ್ನು ಸ್ವೀಕರಿಸಿಕೊಂಡದ್ದು ಸುನ್ನತಿಯಾಗುವುದಕ್ಕಿಂತ ಮೊದಲೇ. 11 ದೇವರು ತನ್ನನ್ನು ಸ್ವೀಕರಿಸಿಕೊಂಡಿದ್ದಾನೆಂಬುದನ್ನು ತೋರಿಸುವುದಕ್ಕಾಗಿ ಅಬ್ರಹಾಮನು ಅನಂತರ ಸುನ್ನತಿ ಮಾಡಿಸಿಕೊಂಡನು. ಅಬ್ರಹಾಮನು ಸುನ್ನತಿ ಮಾಡಿಸಿಕೊಳ್ಳುವುದಕ್ಕಿಂತ ಮೊದಲೇ ನಂಬಿಕೆಯ ಮೂಲಕ ನೀತಿವಂತನಾಗಿದ್ದನು ಎಂಬುದಕ್ಕೆ ಅವನ ಸುನ್ನತಿಯೇ ಆಧಾರವಾಗಿದೆ. ಆದಕಾರಣ ನಂಬುವ ಎಲ್ಲಾ ಜನರಿಗೆ, ಅವರು ಸುನ್ನತಿ ಮಾಡಿಸಿಕೊಂಡಿಲ್ಲದಿದ್ದರೂ ಅಬ್ರಹಾಮನು ತಂದೆಯಾಗಿದ್ದಾನೆ. ಏಕೆಂದರೆ ಅವರು ತಮ್ಮ ನಂಬಿಕೆಯ ಮೂಲಕ ನೀತಿವಂತರೆಂದು ಎಣಿಸಲ್ಪಡುವರು. 12 ಅಲ್ಲದೆ ಸುನ್ನತಿ ಮಾಡಿಸಿಕೊಂಡಿರುವ ಜನರಿಗೂ ಸಹ ಅಬ್ರಹಾಮನು ತಂದೆಯಾಗಿದ್ದಾನೆ. ಆದರೆ ಅವನನ್ನು ಅವರ ತಂದೆಯನ್ನಾಗಿ ಮಾಡುವಂಥದ್ದು ಅವರ ಸುನ್ನತಿಯಲ್ಲ. ನಮ್ಮ ತಂದೆಯಾದ ಅಬ್ರಹಾಮನು ಸುನ್ನತಿ ಮಾಡಿಸಿಕೊಳ್ಳುವ ಮೊದಲು ಹೊಂದಿದ್ದ ನಂಬಿಕೆಗನುಸಾರವಾಗಿ ಅವರು ಜೀವಿಸಿದರೆ ಮಾತ್ರ ಅವನು ಅವರ ತಂದೆಯಾಗಿದ್ದಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International